ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಪಾಲ್ ಹಲ್ಲೆ : ಅದಲು ಬದಲು ಕಂಚೀಕದಲು

By Prasad
|
Google Oneindia Kannada News

Tapal Ganesh
ಬಳ್ಳಾರಿ, ಮಾ. 30 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ಅಧಿಪತ್ಯ ಸ್ಥಾಪಿಸಿರುವ ರೆಡ್ಡಿ ಸಹೋದರರ ಪಾಲಿನ ಮಗ್ಗಲ ಮುಳ್ಳಾಗಿರುವ ಟಪಾಲ್ ಗಣೇಶ್ ಮೇಲಿನ ಮಾರಣಾಂತಿಕ ಹಲ್ಲೆ ರಾಜಕೀಯ ತಿರುವನ್ನು ಪಡೆಯುತ್ತಿದೆ.

ಈ ಹಗರಣದ ಬಗ್ಗೆ ಮಾಹಿತಿ ದಕ್ಕಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ ಕೈತೊಳೆದುಕೊಂಡಿದ್ದರು. ಬಿಜೆಪಿಯ ರೆಡ್ಡಿ ಬ್ರದರ್ಸ್ ಮತ್ತು ಕಾಂಗ್ರೆಸ್ ಸೇರಿರುವ ದಿವಾಕರ್ ಬಾಬು ಈ ದಾಳಿಗೆ ಸಂಬಂಧಿಸಿದಂತೆ ಪರಸ್ಪರ ಕೆಸರೆರಚಿಕೊಂಡಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವವರ ಮೇಲೆ ಹಲ್ಲೆ ನಡೆಸಿ ರಾಜ್ಯವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಎಂಪಿ ಪ್ರಕಾಶ್ ಕಿಡಿ ಕಾರಿದ್ದಾರೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ರೆಡ್ಡಿ ಸಹೋದರರನ್ನು ಸಚಿವ ಸ್ಥಾನದಿಂದಲೇ ವಜಾಗೊಳಿಸಬೇಕೆಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಟ್ಟುಹಿಡಿದಿದ್ದಾರೆ.

ಈ ಹಲ್ಲೆಗೆ ಜನಾರ್ಧನ ರೆಡ್ಡಿಯೇ ಕಾರಣ ಎಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಣಿ ಉದ್ಯಮಿ ಟಪಾಲ್ ಗಣೇಶ್ ಆರೋಪಿಸಿದ್ದಾರೆ. ರಾಜ್ಯದಲ್ಲಿ 2005ರಲ್ಲಿ ಗಣಿ ಉದ್ಯಮಕ್ಕೆ ರೆಡ್ಡಿ ಸಹೋದರರು ಕಾಲಿಟ್ಟಂದಿನಿಂದ ತುಮಟಿ ಮೈನ್ಸ್ ಕಂಪನಿಯ ಒಡೆಯ ಟಪಾಲ್ ಗಣೇಶ್ ಅವರು ರೆಡ್ಡಿಗಳ ವಿರುದ್ಧ ಯುದ್ಧ ಸಾರಿದ್ದಾರೆ. ಜನಾರ್ಧನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿಯಿಂದ ರಾಜ್ಯದ ಗಣಿ ಮತ್ತು ಗಡಿ ಒತ್ತುವರಿಯಾಗುತ್ತಿದೆ ಎಂದು ಸುಪ್ರೀಂ ಕೋರ್ಟಿನಲ್ಲಿ ಟಪಾಲ್ ಗಣೇಶ್ ದಾವೆ ಹೂಡಿದ್ದಾರೆ.

ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರೆಡ್ಡಿ ಸಹೋದರರಿಗೆ ಮತ್ತು ಗಣಿಗಾರಿಕೆಗೆ ಭಾರೀ ಬೆಂಬಲ ದೊರೆತ ನಂತರ ಟಪಾಲ್ ಕುಟುಂಬದ ಗಣಿಗಾರಿಕೆ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳುತ್ತ ಬಂತು. ಕಳೆದ ಶತಮಾನದ ಮಧ್ಯದಿಂದಲೂ ಬಳ್ಳಾರಿ ಜಿಲ್ಲೆಯಲ್ಲಿ ಟಪಾಲ್ ಕುಟುಂಬ ಗಣಿಗಾರಿಕೆ ನಡೆಸಿಕೊಂಡು ಬಂದಿದೆ. ಕೊನೆಗೆ ತುಮಟಿ ಮೈನ್ಸ್ ಕಂಪನಿ ಮುಚ್ಚಬೇಕಾಗಿ ಬಂತು.

ಈಗ ಸುಪ್ರೀಂ ಕೋರ್ಟಿನ ಆದೇಶದಂತೆ ಕರ್ನಾಟಕ - ಆಂಧ್ರದ ಗಡಿ - ಗಣಿ ಸರ್ವೇಗಾಗಿ ಡೆಹ್ರಾಡೂನ್‌ನ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು, ಆಂಧ್ರ - ಕರ್ನಾಟಕದ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಮಾರ್ಚ್ 26ರಿಂದಲೇ ಬಳ್ಳಾರಿಯಲ್ಲೇ ಮೊಕ್ಕಾಂ ಹೂಡಿದ್ದಾರೆ. ಸೋಮವಾರ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳಿಗೆ ಟಪಾಲ್ ಗಣೇಶ್ ಅಕ್ರಮ ಗಣಿಗಾರಿಕೆಯ ವಿರುದ್ಧ ವಿವರ ನೀಡುವವರಿದ್ದರು. ಈ ಸಂದರ್ಭದಲ್ಲಿಯೇ ಅವರ ಮೇಲೆ ಹಲ್ಲೆಯಾಗಿದೆ.

ಪತ್ರಕರ್ತರು, ಟಪಾಲ್ ಗಣೇಶ್ ಒಟ್ಟಾಗಿ ಟಿಫನ್‌ಗೆ ಹೋದಾಗ 7-8 ಜನ ದುಷ್ಕರ್ಮಿಗಳು ಕಟ್ಟಿಗೆ, ಮಚ್ಚುಗಳಿಂದ ಏಕಾಏಕಿ ದಾಳಿ ನಡೆಸಿದರು. ಈ ಘಟನೆಯಲ್ಲಿ ಒಂದು ಇನ್ನೋವಾ ಕಾರ್ ಅನ್ನು ಬಳಕೆ ಮಾಡಲಾಗಿದೆ. ಸಚಿವರು ಮತ್ತು ಬಿಜೆಪಿ ಹೆಸರು ಬಳಸಿ ನಕಲಿ ಪರ್ಮಿಟ್‌ಗಳ ಮೂಲಕ ಮತ್ತು ಕಳ್ಳತನದಿಂದ ಕೋಟ್ಯಾಂತರ ರುಪಾಯಿ ಮೌಲ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಹೊಸಪೇಟೆ - ಸಂಡೂರುನ ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್ ಘಟನೆಯ ರೂವಾರಿಗಳು ಎನ್ನಲಾಗಿದೆ.

ವಾಹನ ಸಂಖ್ಯೆ ಅದಲು ಬದಲು : ಆಶ್ಚರ್ಯದ ಸಂಗತಿಯೆಂದರೆ, ಹಲ್ಲೆಗೆ ಬಳಸಿದ ಕೆಎ 35, ಎಂ 8577 ಸಂಖ್ಯೆಯ ಇನ್ನೋವಾ ಹೊಸಪೇಟೆ ಆರ್ ಟಿ ಓದಲ್ಲಿ ಆ ಸಂಖ್ಯೆಯಿಂದ ನೊಂದಣಿಯಾಗೇ ಇಲ್ಲ. ಈ ನೊಂದಣಿ ಸಂಖ್ಯೆ ಇರುವ ವಾಹನ ಸ್ಕಾರ್ಪಿಯೋ! ಈ ಸ್ಕಾರ್ಪಿಯೋ ವೆಂಕಣ್ಣಶೆಟ್ಟಿ ಎನ್ನುವವರ ಕಬ್ಬಿಣದ ಅದಿರನ್ನು ಖರೀದಿ - ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿರುವ ದೊಡ್ಡ ವ್ಯಾಪಾರಿ, ಶ್ರೀ ಬಾಲಾಜಿ ಟ್ರೇಡಿಂಗ್ ಕಂಪನಿಗೆ ಸೇರಿದ್ದು. ಈ ಘಟನೆಯಲ್ಲಿ ದುಷ್ಕರ್ಮಿಗಳು ವಾಹನದ ಸಂಖ್ಯೆಯನ್ನೇ ಅದಲುಬದಲು ಮಾಡಿದ್ದಾರೆ. ವ್ಯವಸ್ಥಿತ ಸಂಚು ರೂಪಿಸಿಯೇ ದಾಳಿ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ವಿಷ್ಣು ರೆಡ್ಡಿ ವಶಕ್ಕೆ : ಸ್ವಸ್ತಿಕ್ ನಾಗರಾಜ್ ಅವರ ಹತ್ತಿರ ಕೆಲಸ ಮಾಡುತ್ತಿದ್ದ, ಬಳ್ಳಾರಿ ನಿವಾಸಿ ವಿಷ್ಣು ರೆಡ್ಡಿ (25) ಎನ್ನುವ ಯುವಕನನ್ನು ಟಪಾಲ್ ಗಣೇಶ್‌ನ ಬಂಧುಗಳು ಹಿಡಿದು, ಮಾಧ್ಯಮಗಳ ಸಮ್ಮುಖದಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ವಿಷ್ಣುರೆಡ್ಡಿ ನಾನು ಸ್ವಸ್ತಿಕ್ ನಾಗರಾಜ್ ಅವರ ಬಳಿ ಕೆಲಸ ಮಾಡುತ್ತಿರುವುದು ನಿಜ. ಈ ಘಟನೆಗೂ ನನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾನೆ. ಈ ಯುವಕನ ಮನೆ ಟಪಾಲ್ ಗಣೇಶ್‌ನ ಮನೆಯ ಎದುರಲ್ಲೇ ಇದೆ ಎನ್ನುವುದು ವಿಶೇಷ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X