ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಂಗಿಸೇವೆಗೆ ಒಲಿಯುವ ಬೋರೇದೇವರು

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

ಆಸ್ತಿಕರು ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ಹರಕೆ ಸಲ್ಲಿಸಿ ಪೂಜೆ ಸಲ್ಲಿಸುವ ವಿಧಾನದಲ್ಲೂ ನಾನಾ ಆಚರಣೆಗಳು ಚಾಲ್ತಿಯಲ್ಲಿವೆ. ಸಾಮಾನ್ಯವಾಗಿ ನಗ ನಾಣ್ಯ ಆಭರಣಗಳನ್ನು ದೇವರಿಗೆ ಹರಕೆಯಾಗಿ ನೀಡಿ ಕೃತಾರ್ಥರಾಗುತ್ತಾರೆ. ಆದರೆ ರಾಮನಗರ ಜಿಲ್ಲೆ ಚನ್ನಪಟ್ಟಣದ ನೀಲಸಂದ್ರದ ಬೋರೇದೇವರಿಗೆ ಮಾತ್ರ ಭಂಗಿಸೊಪ್ಪಿನ ಉಂಡೆಯನ್ನು ಭಕ್ತಾದಿಗಳಿಗೆ ನೀಡಿ ಭಂಗೀಸೇವೆ, ನೀರಿನ ಸೇವೆ, ಉರುಳುಸೇವೆ ಮಾಡಿ ಹರಕೆ ತೀರಿಸುವುದು ವಿಶಿಷ್ಟವಾಗಿದೆ.

ಸುತ್ತಮುತ್ತಲಿನ ಹತ್ತಾರು ಗ್ರಾಮದ ಜನತೆ ಜಾತಿ ಧರ್ಮ ಭೇದವಿಲ್ಲದೆ ದೇಗುಲದ ಸನ್ನಿಧಿಯಲ್ಲೇ ಒಲೆ ಉರಿಸಿ ಅಡುಗೆ ಮಾಡಿ ಭಕ್ತರಿಗೆ ಅನ್ನದಾಸೋಹ ನಡೆಸುತ್ತಾರೆ. ಇದರಿಂದ ಬೋರೇದೇವರ ಜಾತ್ರೆ ವಿಶಿಷ್ಟ ಆಚರಣೆ ನಡೆಸುವುದರೊಂದಿಗೆ ಭಾವೈಕ್ಯತೆ ಸಾರುವಂತಹ ಸಾಮೂಹಿಕ ಹಬ್ಬವಾಗಿದೆ. ಬೆಲ್ಲ, ಬೇವಿನಸೊಪ್ಪು, ಕಡಲೇಹಿಟ್ಟಿನೊಂದಿಗೆ ಪ್ರಮುಖವಾಗಿ ಭಂಗೀಸೊಪ್ಪನ್ನು ಮಿಶ್ರಣ ಮಾಡಿರುವ ಉಂಡೆಯನ್ನು ದೇವರ ಪ್ರತಿರೂಪವೆಂದೇ ಭಾವಿಸುವ ಜೋಗಿಗಳ ಬಾಯಿಗೆ ತಿನ್ನಿಸುವ ಮೂಲಕ ಹರಕೆ ತೀರಿಸುತ್ತಾರೆ. ಕಿವಿಗೆ ಕೊಂಡಲಿ ಇಟ್ಟಿರುವ ಜೋಗಿಗಳು ಬೋರೇದೇವರ ಪ್ರತಿ ಜಾತ್ರೆಯಲ್ಲೂ ಅರೆಬೆತ್ತಲೆಯಾಗಿ ಜೋಗಿಕುಣಿತ ನಡೆಸುತ್ತಾರೆ.

ಬೆಳಿಗ್ಗೆಯಿಂದಲೇ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ಸೇರಿ ಭಂಗಿ ತಿಂದು ನಶೆಯೇರಿಸಿಕೊಂಡು ಜೋಗಿ ಕುಣಿತ ಮಾಡಿ ಬೋರೇದೇವರಿಗೆ ಭಕ್ತಿ ಸಮರ್ಪಿಸುತ್ತಾರೆ. ಮಹಿಳೆಯರು ಕೂಡ ಸೋಬಾನೆಪದ ಹಾಡುತ್ತಾ ಭಂಗೀಸೇವೆ ಮಾಡುವ ಪ್ರತೀತಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ ಎಂದು ಹಿರಿಯಜ್ಜಿ ತಗಚಕೆರೆ ನಿಂಗಮ್ಮ ಹೇಳುತ್ತಾರೆ.

ಜೋಗಿಗಳಿಗೆ ಭಂಗೀಸೇವೆ ಮಾಡುವುದರೊಂದಿಗೆ ಮಹಿಳೆಯರು ಸಂತಾನಪ್ರಾಪ್ತಿ, ವಿವಾಹಯೋಗಪ್ರಾಪ್ತಿ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಪಕ್ಕದಲ್ಲೇ ಇರುವ ಕಲ್ಯಾಣಿಯಿಂದ ನೀರು ತಂದು ಬೋರೇದೇವರ ದೇಗುಲದ ಎದುರು ಸುರಿದು ನೀರಿನ ಸೇವೆ ಮಾಡುತ್ತಾರೆ. ನೀರಿನ ಸೇವೆ ಮಾಡಿ ಜೋಗಿಗಳ ಕುಣಿತವಾಗಿ ಪಾನಕದ ಬಂಡಿಗಳು ದೇಗುಲವನ್ನು ಸುತ್ತುಹಾಕಿದ ನಂತರ ಮಹಿಳೆಯರು ಕೂಡ ನೀರಿನಸೇವೆ ಮಾಡಿದ ಸ್ಥಳದಲ್ಲಿ ಉರುಳುಸೇವೆ ಮಾಡಿ ದೇವರಿಗೆ ಭಕ್ತಿ ಸಮರ್ಪಿಸುವುದು ವಿಶೇಷವಾಗಿದೆ.

ಭಂಗೀಸೇವೆ ನೀರುಸೇವೆ ಮಾಡಿದ ನಂತರ ಜೋಗಿಕುಣಿತದ ಮುಖಂಡನೊಬ್ಬನಿಗೆ ಪೂಜೆ ಸಲ್ಲಿಸಿ ಬೇವಿನಸೊಪ್ಪನ್ನು ಹೊದಿಕೆಯಾಗಿ ಹೊದಿಸಿ ದೇಗುಲದ ಸನ್ನಿಧಿಯಲ್ಲಿರುವ ಕಲ್ಯಾಣಿಯ ನೀರಿನಲ್ಲಿ ಸಾಮೂಹಿಕವಾಗಿ ಜೋಗಿಗಳೆಲ್ಲರೂ ಮಿಂದೇಳುವುದು ಪೂರ್ವಿಕರ ಕಾಲದಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ದೇಗುಲದ ಸುತ್ತಮುತ್ತ ಇರುವ ಹತ್ತಾರು ಹಳ್ಳಿಗಳಿಂದ ಮಜ್ಜಿಗೆ ಪಾನಕದ ಬಂಡಿಗಳನ್ನು ತಂದು ಭಕ್ತರಿಗೆ ನೀಡಿ ಬಿಸಿಲ ಬೇಗೆಯನ್ನ ತಣಿಸುವ ಕಾರ್ಯವೂ ನಡೆಯುತ್ತದೆ.

ದೇವರ ಸನ್ನಿಧಿಗೆ ಬರುವ ಸುತ್ತಮುತ್ತಲಿನ ಸಾವಿರಾರು ಮಂದಿ ದೇಗುಲದ ಸನ್ನಿಧಿಯಲ್ಲೇ ಒಲೆಗಳನ್ನ ಹೊತ್ತಿಸಿ ಅಡುಗೆ ಮಾಡಿ ಬರುವಂತಹ ಭಕ್ತರಿಗೆ ಸನ್ನಿಧಿಯಲ್ಲೇ ಅನ್ನ ಸಂತರ್ಪಣೆ ಮಾಡುತ್ತಾರೆ. ದೇವರ ಸನ್ನಿಧಿಯಲ್ಲಿ ಜಾತಿ ಧರ್ಮ ಬೇಧವಿಲ್ಲದೇ ಎಲ್ಲಾ ಸಮುದಾಯದ ಮಂದಿಯೂ ಸೇರಿ ಸಾಮೂಹಿಕ ಅಡುಗೆ ಮಾಡಿ ಸಹಪಂಕ್ತಿ ಭೋಜನ ಮಾಡುತ್ತಾರೆ. ಅಡುಗೆ ಕಾರ್ಯ ಮುಗಿದ ನಂತರ ಕುದುರೆ ಏರಿ ಬರುವ ಅನ್ನದಾನಿ ಬೋರೇಶ್ವರ ಅಡುಗೆ ಒಲೆಗಳನ್ನ ಲೆಕ್ಕ ಹಾಕಿ ಭಕ್ತರಿಗೆ ಆಶೀರ್ವದಿಸಿ ಹರಸುತ್ತಾನೆಂಬುದು ಇಂದಿಗೂ ನಂಬಿಕೆಯಾಗಿದೆ.

ಭಂಗೀಸೇವೆ, ನೀರಿನಸೇವೆ, ಉರುಳುಸೇವೆ, ಸಾಮೂಹಿಕ ಸಹಪಂಕ್ತಿ ಭೋಜನದಂತಹ ವಿಶಿಷ್ಟ ಆಚರಣೆಗಳನ್ನ ನಡೆಸುವ ಬೋರೇದೇವರ ಜಾತ್ರೆ ವೈಶಿಷ್ಟ್ಯತೆಗಳ ಆಗರವಾಗಿದೆ. ಬೋರೇದೇವರ ಜಾತ್ರೆಯಲ್ಲಿ ದೂರದೂರಗಳಿಂದ ಸಾವಿರಾರು ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಒಟ್ಟಾರೆ ಭಕ್ತಿಗೆ ಒಲಿಯುವ ಬೋರೇದೇವ ಭಂಗೀಸೇವೆಗೂ ಒಲಿಯುತ್ತಾನೆಂಬುದು ಆಸ್ತಿಕರ ನಂಬಿಕೆಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X