ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗಕ್ಕೆ ಬಂಪರ್ ಆಫರ್

By * ಕಾಂತರಾಜ ಅರಸ್
|
Google Oneindia Kannada News

Janardhana Swamy, Chitradurga MP
ಹಿಂದುಳಿದ ಪ್ರದೇಶ ಅಷ್ಟೇ ಅಲ್ಲ,ಮುಂದುವರೆಯಲು ಇಷ್ಟವೇ ಇಲ್ಲದಂಥ ಒಂದು ಜಿಲ್ಲೆಯನ್ನು ಪ್ರಗತಿಯ ಗಾಡಿಗೆ ಕಟ್ಟುವುದು ಸವಾಲಿನ ಕೆಲಸ. ಈ ಪ್ರಯತ್ನಕ್ಕೆ ಅಧಿಕಾರಿಗಳು, ಶಾಸಕರು, ಸಂಸದರು ಮತ್ತು ವಿವಿಧ ಯೋಜನೆಗಳ ಜವಾಬ್ದಾರಿ ಹೊತ್ತವರು ಟೊಂಕ ಕಟ್ಟಿ ದುಡಿದರೆ ಮಾತ್ರ ಯಶಸ್ಸು ಸಾಧ್ಯ. ಅಂಥ ಒಂದು ಪ್ರಗತಿಯತ್ತ ಹೆಜ್ಜೆ ಇಡಲು ಆರಂಭಿಸಿರುವ ಚಿತ್ರದುರ್ಗದ ಜಿಲ್ಲಾವರದಿಯನ್ನು ಇಲ್ಲಿ ನೀಡಲಾಗಿದೆ. ಈ ಪ್ರದೇಶದ ಅದೃಷ್ಟ ಖುಲಾಯಿಸುವುದಕ್ಕೆ ಶುರುವಾಗಿದೆ ಎನ್ನುತ್ತಾರೆ ವರದಿಗಾರರು - ಸಂಪಾದಕ.

ಚಿತ್ರದುರ್ಗದ ನಸೀಬು ಏಕ್ದಂ ಬದಲಾಗಿ ಹೋಗಿದೆ. ದೇಶದಲ್ಲೇ ಹೆಸರಾದ ಮೂರು ಸಂಸ್ಥೆಗಳು ಜಿಲ್ಲೆಯಲ್ಲಿ ತನ್ನ ಕೇಂದ್ರಗಳನ್ನು ಆರಂಭಿಸಿವೆ. ಅದರ ಜೊತೆಗೆ ದಾವಣಗೆರೆ - ತುಮಕೂರು ರೇಲ್ವೆ ಮಾರ್ಗಕ್ಕೆ ಕೇಂದ್ರ ಸರಕಾರ ಅಸ್ತು ಎಂದಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲು ಹಾಕಿ ಒಂದು ವರ್ಷವಾಗಿದೆ. ಮೂರು ಕೇಂದ್ರ ಸರಕಾರದ ಸಂಸ್ಥೆಗಳು, ರೇಲ್ವೆ ಯೋಜನೆ, ಭದ್ರಾ ಯೋಜನೆ ಇವೆಲ್ಲಾ ಸೇರಿ ಚಿತ್ರದುರ್ಗಕ್ಕೆ ಹರಿದು ಬರಲಿರುವ ಹಣ ಹದಿನೈದು ಸಾವಿರ ಕೋಟಿಯಷ್ಟು.

ಕರ್ನಾಟಕಕ್ಕೆ ಹೆಮ್ಮೆ ತರುವಂಥ ಈ ಪ್ರಾಜೆಕ್ಟ್ ಗಳನ್ನು ಜಿಲ್ಲೆಗೆ ತರಲು ಸಂಸದ ಜನಾರ್ಧನ ಸ್ವಾಮಿ, ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಸಾಕಷ್ಟು ಶ್ರಮ ವಹಿಸಿದ್ದಾರೆ. ಇವಕ್ಕೆಲ್ಲಾ ದಾರಿ ಹಾಕಿಕೊಟ್ಟ ದುರ್ಗದ ಹಿಂದಿನ ಜಿಲ್ಲಾಧಿಕಾರಿ ಕೆ.ಅಮರ ನಾರಾಯಣ ಅವರನ್ನೂ ಈ ಸಮಯದಲ್ಲಿ ನೆನೆಯಬೇಕಿದೆ.

ಇದೆಲ್ಲಾ ಆರಂಭವಾಗಿದ್ದು 2007ರ ಜುಲೈನಲ್ಲಿ. ಆದಿತ್ಯ ಜಿಲ್ಲಾಧಿಕಾರಿಯಾಗಿ ಬಂದು ಕುಳಿತ ನಂತರ. ಇವರ ಜೊತೆಯಾಗಿ ನಿಂತವರು ಜನಾರ್ಧನ ಸ್ವಾಮಿ. ಕಳೆದ ವರ್ಷ DRDO (Defence Research and Development Organization)ನ ಮತ್ತೊಂದು ಕೇಂದ್ರವನ್ನು ಕರ್ನಾಟಕದಲ್ಲಿ ಸ್ಥಾಪನೆ ಮಾಡಲು ಭೂಮಿ ಖರೀದಿಗೆಂದು ಕೇಂದ್ರ ಸರಕಾರ ಹನ್ನೆರಡೂಮುಕ್ಕಾಲು ಕೋಟಿ ರುಪಾಯಿಯನ್ನು ಮೊದಲ ಕಂತಾಗಿ ನೀಡಿತ್ತು. ಅಷ್ಟರಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಸದ ಜನಾರ್ಧನ ಸ್ವಾಮಿ ಕೇಂದ್ರ ಸರಕಾರಕ್ಕೆ ಖುದ್ದು ಮನವಿ ಸಲ್ಲಿಸಿ IISc (Indian Institute of Science) ಮತ್ತು BARC (Bhabha Atomic Research Centre)ಗಳ ಸ್ಥಾಪನೆಗೆ ಒಪ್ಪಿಗೆ ಪಡೆದರು. ಅಲ್ಲಿಗೆ ದೇಶದ ಹೆಮ್ಮೆಯ ಸಂಸ್ಥೆಗಳು ಚಿತ್ರದುರ್ಗಕ್ಕೆ ಬಂದಂತಾಯಿತು.

ಈ ಮೂರೂ ಸಂಸ್ಥೆಯ ಸ್ಥಾಪನೆಗೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದಲ್ಲಿ ಒಂಬತ್ತು ಸಾವಿರದ ಎಂಟನೂರು ಎಕರೆ ಜಾಗವನ್ನು ಮೀಸಲಿರಿಸಲಾಗಿದೆ. ಇದು ಒಂದೇ ಕಡೆ ಸಿಕ್ಕ ಕೃಷಿಯೇತರ ಸರಕಾರಿ ಭೂಮಿ. ಚಿತ್ರದುರ್ಗದ ಚಳ್ಳಕೆರೆಯಿಂದ ನಾಯ್ಕನಹಟ್ಟಿಗೆ ಹೋಗುವ ಮಾರ್ಗದಲ್ಲಿ ಈ ಗ್ರಾಮವಿದೆ. ಡಿಆರ್ ಡಿಓಗೆ ಐದು ಸಾವಿರ ಎಕರೆ, ಐಐಎಸ್ ಸಿಗೆ ಸುಮಾರು ಒಂದು ಸಾವಿರ ಎಕರೆ, ಬಾರ್ಕ್ ಗೆ ಒಂದು ಸಾವಿರ ಎಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ.

ಈ ವರ್ಷದಿಂದಲೇ ಡಿಆರ್ ಡಿಓ ಕೆಲಸ ಆರಂಭಿಸಲಿದ್ದು, ಸುಮಾರು ತೊಂಬತ್ತು ಕೋಟಿಗೆ ಕಂಪೋಂಡ್ ನಿರ್ಮಾಣದ ಟೆಂಡರ್ ಆಗಿದೆ. ಆರು ಸಾವಿರ ಕೋಟಿ ವೆಚ್ಚದ ಡಿಆರ್ ಡಿಓ ಪ್ರಾಜೆಕ್ಟ್ ಗೆ 2008ರಲ್ಲಿ ಚಳ್ಳಕೆರೆ-ಹಿರಿಯೂರು ಮಧ್ಯೆ ಬರುವ ಸಾಣೆಕೆರೆ, ವದ್ದಿಕೆರೆ, ಬೆಳಗೆರೆ, ಕಲಮರಹಳ್ಳಿ ಹಾಗೂ ರಂಗೇನಹಳ್ಳಿ ಜಮೀನು ನೋಡಲಾಗಿತ್ತು. ಎರಡು ಸಾವಿರದ ಎಂಟು ನೂರು ಎಕರೆ ಜಾಗ ನೀಡುವುದಕ್ಕೆ ಈ ಭಾಗದ ರೈತರೂ ಒಪ್ಪಿದ್ದರು. ಕೊನೇ ಕ್ಷಣದಲ್ಲಿ ಅಂದಿನ ಸಂಸದ ಹನುಮಂತಪ್ಪನವರು ಕುದಾಪುರದಲ್ಲಿ ಆರಂಭವಾಗಲಿ ಅಂತ ಪಟ್ಟುಹಿಡಿದು ಸ್ಥಳ ಬದಲಾಯಿಸಿದ್ದರು.

ಇದೆಲ್ಲದರ ಮಧ್ಯೆ ಒಂದು ವರ್ಷದ ಹಿಂದೆಯೇ ಭದ್ರಾ ಮೇಲ್ದಂಡೆ ಯೋಜನೆಗೆ ಯಡಿಯೂರಪ್ಪನವರು ಅಡಿಗಲ್ಲು ಹಾಕಿದ್ದರು. ಇದರಿಂದಾಗಿ ಸಮಾರು ನಲವತ್ತು ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದಂತಾಗಿದ್ದು ಅದರ ಕಾಮಗಾರಿ ಆರಂಭವಾಗಿದೆ. ದಾವಣಗೆರೆ-ತುಮಕೂರು ರೇಲ್ವೆ ಮಾರ್ಗಕ್ಕೆ ಹೋರಾಟ ನಡೆಯುತ್ತಲೇ ಬಂದಿತ್ತು. ಹೋರಾಟ ಸಮಿತಿಯವರ ಧ್ವನಿ ಚಿತ್ರದುರ್ಗವನ್ನೂ ದಾಟಿರಲಿಲ್ಲ. ಈ ಬಗ್ಗೆ ಗಂಭೀರವಾಗಿ ಪ್ರಯತ್ನಿಸಿದ ಜನಾರ್ಧನ ಸ್ವಾಮಿಯವರು ಕಡೆಗೂ ಯಶ ಸಾಧಿಸಿದ್ದಾರೆ.

ಅದುವರೆಗೂ ಇದ್ದ ತಾಂತ್ರಿಕ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರವಿದ್ದ ಪತ್ರಗಳನ್ನು ರೇಲ್ವೆ ಸಚಿವ ಮುನಿಯಪ್ಪನವರಿಗೆ ಕಳಿಸಿ, ಈ ಮಾರ್ಗಕ್ಕೆ ರೇಲ್ವೆ ಲೇನಿನ ಅಗತ್ಯವನ್ನು ಮನದಟ್ಟು ಮಾಡಿಸುವಲ್ಲಿ ಡಿಸಿ ಆದಿತ್ಯ ಬಿಸ್ವಾಸ್ ಯಶಸ್ವಿಯಾಗಿದ್ದಾರೆ. ರೇಲ್ವೆ ಯೋಜನೆಗೆ ಶೇಕಡಾ ಐವತ್ತರಷ್ಟು ಹಣ ಒದಗಿಸುವುದಕ್ಕೆ ರಾಜ್ಯ ಸರಕಾರ ಒಪ್ಪಿದೆ. ಅಗತ್ಯ ಬೀಳುವ ಭೂಮಿ ಖರೀದಿ ವೆಚ್ಚವನ್ನು ಸಹ ರಾಜ್ಯ ಸರಕಾರವೇ ಭರಿಸಲಿದೆ.

ಆರಂಭವಾಗಲಿರುವ ಸಂಸ್ಥೆಗಳಲ್ಲಿ ದೇಶದ ನಾನಾ ಭಾಗದವರು ಕೆಲಸ ನಿರ್ವಹಿಸುತ್ತಾರಾದರೂ, ಸ್ಥಳೀಯರಿಗೂ ದೊಡ್ಡಮಟ್ಟದ ಉದ್ಯೋಗಾವಕಾಶಗಳು ದೊರೆಯಲಿವೆ. ಅದರಲ್ಲೂ ಆರಂಭಿಕ ಹಂತದಲ್ಲಿ ನಿರ್ಮಾಣ ಕಾರ್ಯಗಳಿಂದ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ಸದ್ಯಕ್ಕಂತೂ ಚಳ್ಳಕೆರೆ ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆ ಜೋರಾಗಿ ನಡೆಯುತ್ತಿದೆ. ಸ್ಕಾರ್ಪಿಯೋ, ಇನೋವಾಗಳಲ್ಲಿ ಧಾವಿಸುತ್ತಿರುವ ಬೆಂಗಳೂರಿನ ಭೂ ವ್ಯಾಪಾರಿಗಳು ಹಳ್ಳಿಗರಿಗೆ ದುಡ್ಡಿನ ಆಸೆ ತೋರಿಸಿ ಜಮೀನು ಖರೀದಿಸಲು ಮುಂದಾಗುತ್ತಿದ್ದಾರೆ. ಒಟ್ಟಿನಲ್ಲಿ ಚಿತ್ರದುರ್ಗಕ್ಕೆ ರಾಜ್ಯದೆಲ್ಲೆಡೆಯಿಂದ ಸಖತ್ ಡಿಮ್ಯಾಂಡ್ ಶುರುವಾಗಿದೆ. (ಸ್ನೇಹಸೇತು : ಹಾಯ್ ಬೆಂಗಳೂರ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X