ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಮೂ, ನಾಡಿಗ, ಎನ್ನೆಸ್ಸೆಲ್ ಭಟ್ಟ ನಾಮರ್ದರು

By *ವಿಕ ಸುದ್ದಿಲೋಕ
|
Google Oneindia Kannada News

M Chidananda Murthy
ಬೆಂಗಳೂರು, ಮಾ.19: 'ಸಾಹಿತಿಗಳಾದ ಸುಮತೀಂದ್ರ ನಾಡಿಗ, ಲಕ್ಷ್ಮೀನಾರಾಯಣಭಟ್ಟ ಮತ್ತು ಡಾ.ಎಂ. ಚಿದಾನಂದಮೂರ್ತಿ ಕನ್ನಡ ಚಳವಳಿಯ ನಾಮರ್ದರು' ಎಂದು ಕಸಾಪ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯು ಕಸಾಪದಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ಚಳವಳಿ ಚೇತನ ಜಿ. ನಾರಾಯಣಕುಮಾರ್ ಕುರಿತ ಕೃತಿ 'ಕನ್ನಡ ಕೇಸರಿ' ಮತ್ತು 'ಕನ್ನಡ ಕಹಳೆ' ಸಿ.ಡಿ. ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಈ ಗುಂಪಿನ ಸಾಹಿತಿಗಳು ಕನ್ನಡ ಚಳವಳಿಯ ನಾಮರ್ದರು ಎಂದು ಲೇವಡಿ ಮಾಡಿದರು.

ಇಂತಹವರ ಸಂಖ್ಯೆ ಹೆಚ್ಚಾಗಿರುವುದರಿಂದಲೇ ಕನ್ನಡ ಪ್ರೀತಿಯ ಅಂತರ್ಜಲ ಬತ್ತುತ್ತಿದೆ. ಚಳವಳಿ ಅಂತಃಸತ್ವ ಕಳೆದುಕೊಳ್ಳುತ್ತಿದೆ. ಚಳವಳಿ ಯಾವಾಗಲೂ ನಿರಂತರ ಸ್ವರೂಪದ್ದಾಗಿರಬೇಕು. ಆಗ ಮಾತ್ರ ಅದಕ್ಕೊಂದು ಬೆಲೆ. ಎಲ್ಲರೂ ತಮ್ಮ ತಮ್ಮ ನೆಲೆಯೊಳಗೆ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಕನ್ನಡ ಸೇವೆಗೆ ಮುಂದಾಗಬೇಕು. ಜತೆಗೆ ಹೋರಾಟದ ಮನೋಭಾವ ಬೆಳಸಿಕೊಳ್ಳಬೇಕು. ಚಳವಳಿಯನ್ನು ಪ್ರಚಾರ, ಲೆಕ್ಕಾಚಾರ ಮತ್ತು ರಾಜಕಾರಣ ಹಿನ್ನೆಲೆಯಲ್ಲಿ ಬಳಸಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

ಠಾಕ್ರೆ ಕೋಮುವಾದಿ: ಮುಂಬಯಿಯ ಬಾಳಾ ಠಾಕ್ರೆ ಕೋಮುವಾದದ ಆಶ್ರಯ ಪಡೆಯದಿದ್ದರೆ ರಾಷ್ಟ್ರದಲ್ಲೇ ಬಹುದೊಡ್ಡ ಚಳವಳಿಗಾರರಾಗುತ್ತಿದ್ದರು. ಆದರೆ, ಅವರಿಗಿದ್ದ 'ಚಡ್ಡಿ'ಯ ನಂಟು ಅವರ ಮರಾಠಿ ಚಳವಳಿಯನ್ನು ಕಳಂಕಕ್ಕೀಡು ಮಾಡಿತು. ಮರಾಠಿ ಪ್ರಜ್ಞೆಯ ಜತೆಗೆ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಾಗಿ ಸ್ಪಂದಿಸುತ್ತಿದ್ದರು. ಜಾತ್ಯತೀತ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದರೆ ಠಾಕ್ರೆ ಬಹು ದೊಡ್ಡ ಶಕ್ತಿಯಾಗುತ್ತಿದ್ದರು. ಇಂತಹ ಚಳವಳಿಗಾರರು ನಮ್ಮಲ್ಲೂ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡ ಉಳಿದಿರುವುದು ಚಿಕ್ಕ-ಪುಟ್ಟ ಸಂಘಟನೆಗಳಿಂದ. ಕನ್ನಡಕ್ಕೆ ಎಲ್ಲಿಯಾದರೂ ಅನ್ಯಾಯವಾದಾಗ ತಕ್ಷಣ ಸ್ಪಂದಿಸಿ, ಪ್ರತಿಭಟಿಸುವವರು ಇವರೇ. ಇಂತಹ ಗುಣ ಇತರರಿಗೂ ಬರಬೇಕು ಎಂದ ಅವರು, ಜಿ. ನಾರಾಯಣಕುಮಾರ್ ಕನ್ನಡ ಚಳವಳಿಯ ಧೀರ ಹನುಮ ಎಂದು ಬಣ್ಣಿಸಿದರು. ಸಮಿತಿಯ ಅಧ್ಯಕ್ಷ ಗುರುದೇವ ನಾರಾಯಣಕುಮಾರ್, ಕರ್ನಾಟಕ ವಿಚಾರ ವೇದಿಕೆಯ ಪಾಲನೇತ್ರ, ನಟಿ ತಾರಾ ಮತ್ತು ಲಹರಿ ಸಂಸ್ಥೆಯ ಮಾಲೀಕ ವೇಲು
ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X