ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ರುಪಾಯಿ ಜಾತ್ರೆಯ ಮಜಾ

By Shami
|
Google Oneindia Kannada News

Chidambar Baikampady, Mangaluru
ನಮ್ಮ ಕಾಲದಲ್ಲಿ ಒಂದು ರುಪಾಯಿಗೆ ಅಥವಾ ಹದಿನಾರಾಣೆಗೆ ಏನೇನೆಲ್ಲಾ ಕೊಂಡ್ಕೋಬಹುದಾಗಿತ್ತು ಗೊತ್ತಾ? ಅಂತ ಯಾರಾದರೂ ಹೇಳಿದರೆ ಅಂದಿನ ಸೋವಿ ದಿನಗಳನ್ನು ನೋಡಿದ ಕಣ್ಣುಗಳಲ್ಲಿ ಫಳ್ಳನೆ ಮಿಂಚು ಹರಿದಾಡುತ್ತದೆ. ಅದೇ ಹದಿನಾರಾಣೆ ಜೋಬಲ್ಲಿಟ್ಟುಕೊಂಡು ಪಣಂಬೂರು ಮತ್ತು ಚಿತ್ರಾಪುರ ಜಾತ್ರೆಯಲ್ಲಿ ಮಜಾ ಉಡಾಯಿಸಿದ ಹಚ್ಚಹಸಿರು ಅನುಭವವನ್ನು ಲೇಖಕರು ಇಲ್ಲಿ ನೆನಪಿಸಿಕೊಂಡಿದ್ದಾರೆ. ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಈ ಜಾತ್ರೆ ನಡೆಯುತ್ತದೆ. ಅಂದಿನ ಹದಿನಾರಾಣೆ ಸಂತಸವನ್ನು ಇಂದಿನ ದಿನಗಳಲ್ಲಿ ಪಡೆಯಲು ಎಷ್ಟು ಆಣೆಗಳನ್ನು ವ್ಯಯಿಸಬೇಕು?

* ಚಿದಂಬರ ಬೈಕಂಪಾಡಿ, ಮಂಗಳೂರು

ಮಂಗಳೂರಿನಿಂದ ಹದಿನೈದು ಕಿ.ಮೀ ದೂರದಲ್ಲಿರುವ ಬೈಕಂಪಾಡಿ ಈಗ ನವಮಂಗಳೂರು ಬಂದರಿನ ತೆಕ್ಕೆಯಲ್ಲಿದೆ. ಪಣಂಬೂರು ಸರ್ವಋತು ಬಂದರು ನಿರ್ಮಾಣವಾದ ಮೇಲೆ ನವಮಂಗಳೂರು ಎಂದೇ ಕರೆಸಿಕೊಳ್ಳುತ್ತಿದೆ. ಬೈಕಂಪಾಡಿ, ಅಂಗಾರಗುಂಡಿ, ಜೋಕಟ್ಟೆ, ಚಿತ್ರಾಪುರ, ಕುಳಾಯಿ ಗ್ರಾಮಗಳಿಗೆ ಪಣಂಬೂರು ನಂದನೇಶ್ವರ ದೇವರು ಗ್ರಾಮ ದೇವರು. ಈ ಭಾಗದ ಏನೇ ಆಗುಹೋಗುಗಳಿಗೂ ಭಕ್ತರು ನೆನಪಿಸಿಕೊಳ್ಳುವುದು, ಹರಕೆ ಹೇಳುವುದು ನಂದನೇಶ್ವರನಿಗೆ.

ಚಿತ್ರಾಪುರಕ್ಕೆ ಬಂದರೆ ಅಲ್ಲಿ ದುರ್ಗಾಪರಮೇಶ್ವರಿ ದೇವಾಲಯವಿದೆ. ಸಮುದ್ರ ಮಾರ್ಗವಾಗಿ ಬಂದ ಸಪ್ತದುರ್ಗೆಯರಲ್ಲಿ ಚಿತ್ರಾಪುರದಲ್ಲಿ ನೆಲೆನಿಂತಿರುವ ದುರ್ಗೆಯೂ ಒಬ್ಬಳು. ಕಟೀಲು, ಬಪ್ಪನಾಡು, ಪೊಳಲಿ, ಚಿತ್ರಾಪುರ ದೇವಿಯರು ಅಕ್ಕತಂಗಿಯರು ಎನ್ನುವ ನಂಬಿಕೆ ಇದೆ. ಆದ್ದರಿಂದಲೇ ಈ ದುರ್ಗೆಯರಿಗೆ ವಿಶೇಷ ಮನ್ನಣೆ, ಪೂಜೆ ಪುನಸ್ಕಾರ ಸೇವೆ.

ನನ್ನ ಬಾಲ್ಯದಲ್ಲಿ ಪಣಂಬೂರು ಮತ್ತು ಚಿತ್ರಾಪುರ ಜಾತ್ರೆಗಳು ಅದೆಷ್ಟು ಗೌಜಿ, ಸಂತಸಕ್ಕೆ ಕಾರಣವಾಗುತ್ತಿದ್ದವು ಅಂದರೆ ಈ ಜಾತ್ರೆಗಳು ಬರುವ ದಿನಗಳನ್ನೇ ಕಾಯುತ್ತಿರುತ್ತಿದ್ದೆವು. ಯಾಕೆಂದರೆ ನನಗೆ ಜಾತ್ರೆಗೆ ಹೋಗಲು ಒಂದು ರುಪಾಯಿ ಕೊಡುತ್ತಿದ್ದರು. ಆದರೆ ಈ ಒಂದು ರುಪಾಯಿ ಸಿಗುವ ದಿನವನ್ನು ಅದೆಷ್ಟು ಸಂಭ್ರಮದಿಂದ ಸ್ವಾಗತಿಸುತ್ತಿದ್ದೆ ಅಂದರೆ ಮಾತುಗಳಲ್ಲಿ ಈಗ ಹೇಳಲು ಅಸಾಧ್ಯ. ಆರು ಪೈಸೆ ಒಂದಾಣೆ ಎನ್ನುವ ಕಾಲದಲ್ಲಿ ನೋಟುಗಳನ್ನು ನೋಡುವುದೇ ಒಂದು ಸೋಜಿಗ. ಅದರಲ್ಲೂ ನೂರು ರುಪಾಯಿ ನೋಟನ್ನು ಕಂಡಾಗಲಂತೂ ನನ್ನ ಮುಖ ಅಗಲವಾಗಿರುತ್ತಿದ್ದ ನೋಟಿನ ಗಾತ್ರ ಅರಳುತ್ತಿತ್ತು. ಶಾಲೆಯಲ್ಲಿ ಟೀಚರ್ ಸಂಬಳದ ದಿನ ನೂರು ರುಪಾಯಿಯ ನಾಲ್ಕು ನೋಟುಗಳನ್ನು ಎಣಿಸುತ್ತಿದಾಗ ಮುಂದೊಂದು ದಿನ ನಾನೂ ಇಂಥ ನೋಟುಗಳನ್ನು ಕೈಯಲ್ಲಿ ಹಿಡಿಯುತ್ತೇನೆ ಅಲ್ಲವೇ ಅಂದುಕೊಳ್ಳುತಿದ್ದೆ. ಈ ಎಲ್ಲ ಕಾರಣಗಳಿಂದಾಗಿ ನನಗೆ ಜಾತ್ರೆಗೆ ಒಂದು ರುಪಾಯಿ ಸಿಗುತ್ತಿದ್ದುದು ಎಲ್ಲಿಲ್ಲದ ಸಂತಸಕ್ಕೆ ಕಾರಣವಾಗಿತ್ತು.

ನನ್ನ ಓರಗೆಯ ಹಲವು ಮಕ್ಕಳಿಗೆ ಅವರ ಮನೆಯವರು ಪಣಂಬೂರು, ಚಿತ್ರಾಪುರ ಜಾತ್ರೆಗೆ ಹೊಸ ಬಟ್ಟೆ ಹೊಲಿಸಿಕೊಡುತ್ತಿದ್ದರು. ಆ ಬಟ್ಟೆಗಳನ್ನು ಹಾಕಿಕೊಂಡು ಮಧ್ಯಾಹ್ನದ ತೇರು ನೋಡಲು ಮಕ್ಕಳು ಕುಣಿದಾಡಿಕೊಂಡು ಹೋಗುವುದನ್ನು ಕಂಡು ನನಗೆ ಆ ಭಾಗ್ಯ ಇಲ್ಲದ ಕಾರಣ ಬೇಸರವಾಗುತ್ತಿತ್ತು, ಆದರೂ ಜಾತ್ರೆಗೆ ಒಂದು ರುಪಾಯಿ ಕೊಡುತ್ತಿದ್ದರಲ್ಲ ಅದರಿಂದಾಗಿ ಹೊಸಬಟ್ಟೆ ಇಲ್ಲದ ನೋವನ್ನು ಮರೆಯುತ್ತಿದ್ದೆ. ಅಂದಹಾಗೆ ಮನೆಯವರು ಕೊಡುತ್ತಿದ್ದ ಒಂದು ರುಪಾಯಿಯಿಂದ ಅದೆಂಥ ಮಜಾ ಮಾಡುತ್ತಿದೆ ಸ್ನೇಹಿತರೊಂದಿಗೆ ಅಂತ ಕುತೂಹಲವೇ?. ಖಂಡಿತಕ್ಕೂ ಅದೊಂದು ಥ್ರಿಲ್ ಈಗಲೂ.

ಮಧ್ಯಾಹ್ನದ ತೇರಿನ ಮರುದಿನ ರಾತ್ರಿ ಹಾರಡ. ರಾತ್ರಿಯೆಲ್ಲ ಗೌಜಿ. ದೇವರ ಬಲಿ ಉತ್ಸವ ರಾತ್ರಿ ನಡೆಯುತ್ತಿತ್ತು. ರಾತ್ರಿಯೆಲ್ಲಾ ದೇವಸ್ಥಾನದ ಪರಿಸರದಲ್ಲಿ ತಿರುಗಾಡುವುದು ಮಾತ್ರವೇ ಮಜಾ ಅಂದುಕೊಳ್ಬೇಡಿ. ತಿರುಗುವ ತೊಟ್ಟಿಲಲ್ಲಿ ಕುಳಿತುಕೊಳ್ಳುವುದು, ಗೋಲಿ ಸೋಡಾ ಕುಡಿಯುವುದು, ಕರ್ಜೂರದ ಹಣ್ಣು ತಿನ್ನುವುದು, ಸೋಜಿ ಕುಡಿಯುವುದು, ಹೌಝಿ ಹೌಝಿ ಆಡುವುದು, ಪೆಟ್ಟಿಗೆಯೊಳಕ್ಕೆ ಮುಖತೂರಿಸಿ ಕಲ್ಕತ್ತಾ, ತಾಜ್ ಮಹಲ್, ಬೊಂಬಾಯಿ ನೋಡುವುದು, ಗಿರಗಿಟ್ಟೆ ತಟ್ಟೆಗೆ ಹಣಕಟ್ಟಿ ಗೆಲ್ಲುವುದು ಇತ್ಯಾದಿ...ಇತ್ಯಾದಿಗಳಲ್ಲಿ ಆಸಕ್ತಿ.

ಜಾತ್ರೆ ದಿನ ಸೇಮಿಗೆ, ಮೂಡೆ, ಗುಂಡ, ಇಡ್ಲಿ ಮುಂತಾದ ತಿನಿಸು, ಜೊತೆಗೆ ಪಾಯಸ, ಮಾಂಸಾಹಾರಿಗಳಾಗಿದ್ದರೆ ಕೋಳಿ ಪದಾರ್ಥ ತಪ್ಪದು. ಯಾಕೆಂದರೆ ದೂರದೂರದಿಂದ ನೆಂಟರು ಜಾತ್ರೆಗೆ ಬರುತ್ತಿದ್ದರು. ಆದ್ದರಿಂದ ಜಾತ್ರೆ ಎನ್ನುವುದು ವರ್ಷದಲ್ಲಿ ಬಹುಮುಖ್ಯವಾಗಿತ್ತು. ರಾತ್ರಿ ಎಂಟು ಗಂಟೆ ಹೊತ್ತಿಗೆ ಊಟ ಮುಗಿಸಿ ಗೆಳೆಯರ ಜೊತೆ ಜಾತ್ರೆಗೆ ಹೊರಡುವ ತಯಾರಿ. ನನ್ನಂತೆಯೇ ಒಂದೊಂದು ರುಪಾಯಿ ಹಣದೊಂದಿಗೆ ಜಾತ್ರೆಗೆ ಬರುವವರು ಜೊತೆಯಾಗುತ್ತಿದ್ದೆವು.ದೇವಸ್ಥಾನಕ್ಕೆ ಹೋಗಿ ಮೊದಲು ದೇವರಿಗೆ ಕೈಮುಗಿಯಬೇಕೆಂದು ಮನೆಯವರು ತಾಕೀತು ಮಾಡುತ್ತಿದ್ದರು, ಹಾಗಾಗಿ ಮೊದಲ ಕೆಲಸ ದೇವರ ಮುಂದೆ ಹಾಜರಿ ಹಾಕುವುದು.

ನೀರವ ರಾತ್ರಿಯಲ್ಲಿ ದೇವಸ್ಥಾನದ ತುಂಬೆಲ್ಲ ಝಗಮಗಿಸುವ ವಿದ್ಯುತ್ ಬೆಳಕಿನ ಚಿತ್ತಾರ. ಮಿನುಗುವ ಮಿನಿಚರ್ ಬಲ್ಪುಗಳು. ದಾರಿಯುದ್ದಕ್ಕೂ ಟ್ಯೂಬ್ ಲೈಟ್‌ಗಳು. ಈ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಂಡು ನಾವು ಗೆಳೆಯರು ಮಾಡುತ್ತಿದ್ದ ಮೊದಲ ಕೆಲಸವೆಂದರೆ ತೊಟ್ಟಿಲಲ್ಲಿ ಕುಳಿತುಕೊಳ್ಳುವುದು. ಒಂದೊಂದು ತೊಟ್ಟಿಲೊಳಗೆ ಇಬ್ಬರು ಕುಳಿತುಕೊಳ್ಳುತ್ತಿದ್ದೆವು. ಒಬ್ಬಾತ ಕೈಯಿಂದ ಜೋರಾಗಿ ಚಕ್ರತಿರುಗಿಸುತ್ತಿದ್ದ. ನಾವು ತೊಟ್ಟಿಲೊಳಗೆ ಕುಳಿತು ಸುತ್ತುಹೊಡೆಯುತ್ತಿದ್ದೆವು. ನನಗೆ ನೆನಪಿರುವಂತೆ ಒಂದುಸಲಕ್ಕೆ ಹತ್ತು ಸುತ್ತು ತಿರುಗಿಸುತ್ತಿದ್ದರು, ನಂತರ ಇಳಿಸುತ್ತಿದ್ದರು. ಒಬ್ಬರು ಒಂದಾಣೆ ಕೊಡಬೇಕಿತ್ತು.

ಕೊನೆಯ ಸುತ್ತು ಮುಗಿಸಿ ಇಳಿಯುವಾಗ ಹಣಕೊಡುವುದು ವಾಡಿಕೆ. ಕೊನೆಯ ಸುತ್ತಿನಲ್ಲಿ ಒಂದೊಂದೇ ತೊಟ್ಟಿಲಿನಿಂದ ಹುಡುಗರನ್ನು ಇಳಿಸಿ ಹಣಪಡೆಯುತ್ತಿರುವಾಗ ಕಿಲಾಡಿಗಳಾದ ನಾನು ಮತ್ತು ನನ್ನ ಸ್ನೇಹಿತರು ತೊಟ್ಟಿಲಿನಿಂದ ಜಿಗಿದು ಜನಜಂಗುಳಿಯಲ್ಲಿ ಮಾಯವಾಗುತ್ತಿದ್ದೆವು. ಇದರಿಂದಾಗಿ ಒಂದಾಣೆ ಉಳಿತಾಯವಾಗುತ್ತಿತ್ತು. ತೊಟ್ಟಿಲಿನಿಂದ ಜಿಗಿದು ಓಡಿ ಹೋಗಿ ಆಯಾಸಗೊಳ್ಳುತ್ತಿದ್ದ ಕಾರಣಕ್ಕೆ ಪರಿಹಾರ ಕಂಡುಕೊಳ್ಳಲು ಸಜ್ಜಿಗೆಯಿಂದ ಮಾಡಿದ ಸೋಜಿ ಕುಡಿಯುತ್ತಿದ್ದೆವು. ಪಾಯಸಕ್ಕಿಂತಲೂ ರುಚಿಯಾಗಿರುತ್ತಿತ್ತು ಸೋಜಿ.

ಕರ್ಜೂರದ ಅಂಗಡಿಗೆ ಕಪಿಸೈನ್ಯ ಲಗ್ಗೆ ಹಾಕಿ ಒಂದು ಪ್ಯಾಕೇಟ್ ಕರ್ಜೂರ ಖರೀದಿಸಿ ಬೀಚ್ ರಸ್ತೆಯಲ್ಲಿ ಕುಳಿತು ಹಂಚಿ ತಿನ್ನುತ್ತಿದ್ದೆವು. ಮುಂದೆ ಸೋರ್ತಿ(ಲಾಟರಿ) ಹಾಕುವುದು. ಎಳ್ಳುಂಡೆ, ಚಕ್ಕುಲಿ, ಮಿಠಾಯಿ ದಕ್ಕಿಸಿಕೊಳ್ಳಲು ಲಾಟರಿಗೆ ಹಣ ಹಾಕಿ ಸಿಕ್ಕಿದರೆ ಖುಷಿ, ಸಿಗದಿದ್ದರೆ ಲಾಟರಿ ಡೋಂಗಿ ಅಂತ ಬೊಬ್ಬೆ ಹಾಕಿ ಅಲ್ಲಿಂದ ಕಾಲುಕೀಳುತ್ತಿದ್ದೆವು.

ಜಿಂಜರ್, ವಿಮ್ಟೋ, ಆರೆಂಜ್ ಮುಂತಾದ ಬಣ್ಣ ಬಣ್ಣದ ಗೋಲಿ ಸೋಡಾ ಕುಡಿಯುವ ಆಸೆ. ಒಂದು ಸೋಡಾವನ್ನು ಇಬ್ಬರು ಪಾಲು ಮಾಡಿ ಕುಡಿದು ಖುಷಿಪಡುತ್ತಿದ್ದೆವು. ಇಷ್ಟೆಲ್ಲಾ ಕಸರತ್ತು ಮುಗಿಯುವಷ್ಟರಲ್ಲಿ ಮಧ್ಯರಾತ್ರಿಯಾಗುತ್ತಿತ್ತು. ದೇವರ ಬಲಿ ಉತ್ಸವ ಆರಂಭವಾಗುತ್ತಿತ್ತು. ಚೆಂಡೆ, ನಗಾರಿ, ಕೊಂಬು,ಕಹಳೆ, ತಾಸೆ, ವಾದ್ಯ-ಬ್ಯಾಂಡ್ ಮೊಳಗುತ್ತಿತ್ತು. ದೇವರನ್ನು ಹೊತ್ತು ಪಾತ್ರಿ ನರ್ತಿಸುತ್ತ ದೇವಸ್ಥಾನಕ್ಕೆ ಸುತ್ತು ಬರುವ ಸಂಪ್ರದಾಯ. ಮಧ್ಯರಾತ್ರಿ ಕಳೆದು ಬೆಳಗಿನಜಾವ ಸಮೀಪಿಸುತ್ತಿದ್ದಂತೆಯೇ ನಿದ್ದೆಯ ಮಂಪರು ಆವರಿಸುತ್ತಿತ್ತು. ಜಾತ್ರೆ ಸಾಕು ಮನೆಗೆ ಹೋಗೋಣ ಎನ್ನುವ ಸಾಮೂಹಿಕ ತೀರ್ಮಾನ ತೆಗೆದುಕೊಳ್ಳುತ್ತಿದ್ದೆವು.ಅಂತೂ ಜಾತ್ರೆ ಮುಗಿಸಿ ಮನೆ ತಲಪುವಷ್ಟರಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ.

ಆ ರಾತ್ರಿ ಮನೆಯ ದಾರಿ ತುಳಿಯುವಾಗ ಕಿಸೆಯಲ್ಲಿ ಉಳಿದ ಹಣದ ಲೆಕ್ಕಾಚಾರ ಮಾಡುತ್ತಿದ್ದೆವು. ಪ್ರತಿಯೊಬ್ಬರ ಕಿಸೆಯಲ್ಲಿ 50 ಪೈಸೆ ಉಳಿದಿರುತ್ತಿತ್ತು. ಈ ಹಣವನ್ನು ಮರುದಿನ ಶಾಲೆ ಗೇಟಿನ ಹೊರಗೆ ಗೆಣಸು ಬೇಯಿಸಿಕೊಂಡು ಸಂಜೆ ಶಾಲೆ ಬಿಡುವ ಹೊತ್ತಿಗೆ ಸಜ್ಜಾಗಿರುತ್ತಿದ್ದ ಬಾಯಮ್ಮಳ ಪ್ರತೀಕ್ಷೆಯಲ್ಲಿರುತ್ತಿದ್ದೆವು. ಏನಿಲ್ಲವೆಂದರೂ ಜಾತ್ರೆಯಲ್ಲಿ ಉಳಿಸಿದ ಹಣದಿಂದ ಒಂದು ವಾರ ಕಾಲ ಪ್ರತೀ ದಿನ ಗೆಣಸು ತಿನ್ನಲು ಸಾಕಾಗುತ್ತಿತ್ತು. ಇಂಥಾ ಮಜಾ ಈಗಿನ ಜಾತ್ರೆಗಳಲ್ಲಿ ಸಿಗುವುದಿಲ್ಲ. ಕಳೆದು ಹೋದ ಬಾಲ್ಯದ ದಿನಗಳ ಜಾತ್ರೆಯನ್ನು ನೀವೂ ಹಾಗೇ ಸುಮ್ಮನೆ ಮೆಲುಕು ಹಾಕಿ, ಅದೆಂಥಾ ಸುಖವಿತ್ತು ಅನ್ನಿಸಿದರೆ ಎಂಜಾಯ್ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X