ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆತ್ತ ಮಗನಿಗೆ ಪುನರ್ಜನ್ಮ ನೀಡಿದ ಮಹಾತಾಯಿ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Mother Parvathamma donates kidney to son Ramesh
ರಾಮನಗರ, ಮಾ.18 : ತನ್ನ ಮಕ್ಕಳಿಗೆ ಏನೇ ಸಮಸ್ಯೆ ಎದುರಾದರೂ ತಾಯಿ ಹೃದಯ ತೀರಾ ನೊಂದುಕೊಳ್ಳುತ್ತದೆ ಮತ್ತು ಎಂಥ ತ್ಯಾಗಕ್ಕೂ ಸಿದ್ಧವಾಗಿರುತ್ತದೆ ಎನ್ನುವುದಕ್ಕೆ ನಿದರ್ಶನ ಇಲ್ಲಿದೆ. ರಾಮನಗರ ಚನ್ನಪಟ್ಟಣ ಬೈರಾಪಟ್ಟಣದಲ್ಲಿನ ಬಡಮಾಸ್ತರೊಬ್ಬರಿಗೆ ಎರಡೂ ಮೂತ್ರಪಿಂಡಗಳು ವಿಫಲವಾದವು. ಸಾವಿನ ಸುಳಿಯಲ್ಲಿರುವ ವ್ಯಕ್ತಿಗೆ ತನ್ನ ತಾಯಿಯೇ ಒಂದು ಮೂತ್ರಪಿಂಡವನ್ನು ದಾನ ಮಾಡಿ ತನ್ನ ಮಗನಿಗೆ ಪುನರ್ಜನ್ಮ ನೀಡಲು ಸಿದ್ದಳಾಗಿದ್ದಾಳೆ.

ಮಾತೃಪ್ರೇಮವನ್ನು ಗೆದ್ದಿರುವ ಬಡಶಿಕ್ಷಕ ರಮೇಶ್‌ರ ಆಸ್ಪತ್ರೆಯ ಚಿಕಿತ್ಸೆ ಭರಿಸಲು ಶಿಕ್ಷಕ ಮಿತ್ರರು ಕೂಡ ಲಕ್ಷಾಂತರ ರೂಪಾಯಿಯ ಆರ್ಥಿಕ ಸಹಾಯವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದಲ್ಲಿ ಜಿ.ಕೆ.ರಮೇಶ್ ಬಡತನದಲ್ಲೇ ಬೆಳೆದು ಬದುಕಿನ ಬಂಡಿ ತಳ್ಳಲು ಶಾಲಾ ಶಿಕ್ಷಕ ವೃತ್ತಿಯನ್ನ ಆರಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಡಮಾಸ್ತರು ರಮೇಶ್ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣಮುಖವಾಗಲಿಲ್ಲ.

ಅಂತಿಮವಾಗಿ ಬೆಂಗಳೂರಿನ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಮೇಶ್‌ಗೆ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದರಿಂದ ಪ್ರಾಥಮಿಕ ಚಿಕಿತ್ಸೆಯನ್ನು ಮಾತ್ರ ನೀಡಿದ್ದಾರೆ. ಆದರೆ ಮೂತ್ರಪಿಂಡವನ್ನು ದಾನ ಮಾಡಲು ಯಾರೂ ಮುಂದೆ ಬರದ ವಿಷಯ ತಿಳಿದ ರಮೇಶ್‌ರ ತಾಯಿ ಪಾರ್ವತಮ್ಮನವರು ತನ್ನ ಮಗನಿಗೆ ತಾವೇ ಒಂದು ಮೂತ್ರಪಿಂಡ ದಾನ ಮಾಡುವ ತೀರ್ಮಾನ ಮಾಡಿದ್ದಾರೆ.

ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲುಹಿದ ಮಗ ಸಾವನ್ನು ಗೆದ್ದು ಮೊದಲಿನಂತಾಗಲಿ ಎಂಬ ಮಾತೃಹೃದಯ ತನಗೆ ಮೂತ್ರಪಿಂಡ ಕಸಿ ಮಾಡಲು ಮೂತ್ರಪಿಂಡ ದಾನ ಮಾಡಲು ಮುಂದಾಗಿರುವುದು ಪುನರ್‌ಜನ್ಮ ನೀಡಿದಂತಾಗಿದೆ ಎಂಬುದು ರಮೇಶ್ ಭಾವುಕರಾಗಿ ತಾಯಿಯ ಔದಾರ್ಯತೆ ಬಗ್ಗೆ ಹೇಳಿಕೊಂಡರು.

ರಮೇಶ್‌ರಿಗೆ ತಾಯಿ ಪಾರ್ವತಮ್ಮನವರು ಮೂತ್ರಪಿಂಡ ದಾನಮಾಡುತ್ತಿರುವುದನ್ನು ಬಡಮೇಷ್ಟ್ರು ರಮೇಶ್‌ರ ಸಹೋದ್ಯೋಗಿಗಳು ಕೂಡ ಶ್ಲಾಘಿಸಿದ್ದಾರೆ. ರಮೇಶ್‌ರ ಮೂತ್ರಪಿಂಡ ಕಸಿಮಾಡಲು ಸುಮಾರು 5 ಲಕ್ಷಕ್ಕೂ ಹೆಚ್ಚು ಹಣ ಹೊಂದಿಸಬೇಕಾದ ಅವಶ್ಯಕತೆಯಿರುವುದರಿಂದ ಸಾಧ್ಯವಾಗುವಷ್ಟು ಹಣವನ್ನು ನೌಕರರಿಂದ ಸಂಗ್ರಹಿಸಿ ಕೊಡಲಾಗುವುದೆಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮರಿದೇವರು ಹೇಳಿದ್ದಾರೆ.

ಬಡಶಿಕ್ಷಕ ರಮೇಶ್ ಅಷ್ಟೇನೂ ಸ್ಥಿತಿವಂತನಾಗಿರದೆ ತಿಂಗಳ ಸಂಬಳವನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಶಿಕ್ಷಕ ರಮೇಶ್‌ರ ಸಹೋದ್ಯೋಗಿಗಳು, ಪ್ರೌಢಶಾಲಾ ಶಿಕ್ಷಕರ ಸಂಘ ಮತ್ತು ಸರ್ಕಾರಿ ನೌಕರರ ಸಂಘದವರು ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ ಮಾಡಿ ರಮೇಶ್‌ರ ಶಸ್ತ್ರಚಿಕಿತ್ಸೆಗೆ ಉದಾರವಾಗಿ ನೀಡಿದ್ದಾರೆ. ರಮೇಶ್ ಮತ್ತು ತಾಯಿ ಪಾರ್ವತಮ್ಮನವರ ಮಾತೃವಾತ್ಸಲ್ಯದ ಅಂತಃಕರಣ ಮಿಡಿಯುವ ಮಾನವೀಯ ಕ್ಷಣಕ್ಕೆ ಸಹೋದ್ಯೋಗಿಗಳಾಗಿರುವ ನಾವುಗಳು ಭಾಗಿಯಾಗುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಪ್ರೌಢಶಾಲಾಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್ ಹೇಳಿದ್ದಾರೆ.

ಸಂಕಷ್ಟದಲ್ಲಿರುವ ಬಡಮೇಷ್ಟ್ರು ರಮೇಶ್ ಮಾತೃವಾತ್ಸಲ್ಯದಿಂದ ಮತ್ತೆ ಗುಣಮುಖರಾಗಿ ಮೊದಲಿನಂತಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ. ಸಂಕಷ್ಟದಲ್ಲಿರುವ ಬಡಮೇಷ್ಟ್ರು ರಮೇಶ್‌ರ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಸಹಾಯ ಹಸ್ತ ಚಾಚುವವರು 99644 74189 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X