ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ಹರಿದ ರಕ್ತ ಕೆಂಪು, ಕೇಸರಿಯಲ್ಲ!

By * ಕೆಆರ್ ಸೋಮನಾಥ್, ಶಿವಮೊಗ್ಗ
|
Google Oneindia Kannada News

ಶಿವಮೊಗ್ಗ, ಮಾ. 5 : ಕಳೆದ ಸೋಮವಾರ ಶಿವಮೊಗ್ಗದಲ್ಲಿ ಹತ್ತಿಕೊಂಡು ಉರಿದ ಕೋಮುದಳ್ಳುರಿಗೆ ಇಬ್ಬರು ಅಮಾಯಕರು ಬಲಿಯಾದರು. ಒಬ್ಬ ಮುಗ್ಧ ಯುವಕ ಮದುವೆಯಾಗಿ ಕೆಲವೇ ತಿಂಗಳು ಕಳೆದಿತ್ತು. ಮತ್ತೊಬ್ಬ ಕೈಗಾಡಿಯಲ್ಲಿ ಮಂಡಕ್ಕಿ ಮಾರುವ ಶ್ರಮಿಕ. ಇಬ್ಬರೂ ಮುಸ್ಲಿಂ ಬಾಂಧವರು. ಈ ಇಬ್ಬರ ರಕ್ತದ ಬಣ್ಣ ಕೆಂಪು.

ರಕ್ತದ ಬಣ್ಣವನ್ನು ಹಸಿರಾಗಿಸುವ, ಕೇಸರಿಯಾಗಿಸುವ, ಧರ್ಮಾಂಧರು ಇರುವ ತನಕ ಇಂತಹ ಅಮಾಯಕರು ಜೀವತ್ಯಾಗ ಮಾಡುತ್ತಲೇ ಇರುತ್ತಾರೆ. ಕರ್ನಾಟಕದಲ್ಲಿ ಕೋಮುಗಲಭೆಗಳು, ಗಾಬರಿ ಹುಟ್ಟಿಸುವ ಮಟ್ಟಕ್ಕೆ ಸಾಗುತ್ತಿವೆ. ಕೋಮು ಎಂಬ ರೋಗ ಉಲ್ಭಣಾವಸ್ಥೆಗೆ ಬಂದು ತಲುಪಿದೆ. ಜನರ ಧಾರ್ಮಿಕ ಭಾವನೆಗಳು, ಸಾಮರಸ್ಯ ಭಾವನೆಗಳಿಗೆ ಅಡ್ಡಿಯಾಗಿ ವಿಚಿತ್ರವಾಗಿ, ವಿಕೃತವಾಗಿ ಸಾಗಿ, ಬೆಂಕಿಯಾಗಿ ದಹಿಸತೊಡಗಿವೆ. ಸೌಹಾರ್ದತೆಯ ದೀಪ ಹಣತೆಯಾಗಿ ಬೆಳಗುವುದು ಬಿಟ್ಟು ಹೀಗೆ ಬೆಂಕಿಯಾಗಿ ಉರಿಯುವುದು ವಿಷಾದವೇ ಸರಿ. ಚಾರಿತ್ರಿಕ ಪ್ರಸ್ತುತ ಘಟನೆಗಳು ಏನೇ ಇರಲಿ, ಅದನ್ನು ವರ್ತಮಾನಕ್ಕೆ ತಂದು ತಪ್ಪು ಅರ್ಥಗಳನ್ನು ಹುಡುಕಿ ಶಾಂತಿ ಕದಡುವ ಯತ್ನಗಳನ್ನು ಕಿಡಿಗೇಡಿಗಳು ಮಾಡುತ್ತಲೇ ಇದ್ದಾರೆ.

ದಶಕಗಳ ಮೇಲೆ ಕೋಮುದಳ್ಳುರಿಗೆ ಶಿವಮೊಗ್ಗ ಮತ್ತೆ ತತ್ತರಿಸಿದೆ. ಜೀವದ ಜೊತೆಗೆ ಆಸ್ತಿ-ಪಾಸ್ತಿ ಕೂಡ ನಷ್ಟವಾಗಿದೆ. ಕರ್ಫ್ಯೂ ಎಂಬ ಕಪ್ಪು ನೆರಳಿಗೆ ಸಿಕ್ಕಿ, ಜನ ನರಳುತ್ತಿದ್ದಾರೆ. ಕರ್ಫ್ಯೂ ಹಿಂದೆ ಕೂಡ ಹೇರಲಾಗಿತ್ತಾದರು ಅದರಿಂದ ಜನ ಪಾಠ ಕಲಿತಿಲ್ಲ ಎನ್ನುವುದು ಮಾತ್ರ ಸತ್ಯ. ಕಂಡಲ್ಲಿ ಗುಂಡು ಎಂಬ ಆಜ್ಞೆ ಜನರನ್ನು ಗೃಹಬಂಧನದಲ್ಲಿ ಇಟ್ಟು ಸ್ವಾತಂತ್ರ್ಯದ ಮಹತ್ವವನ್ನು ತೋರಿಸಿಕೊಟ್ಟಿದೆ. ಜನರು ಕಳೆದ 4 ದಿನಗಳಿಂದ ಅಕ್ಷರಶಃ ಪರದಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಹುಡುಕುತ್ತಾ ಹೊರಟಾಗ ಮತ್ತೆ ಧರ್ಮಾಂಧರು ಕಾಣಿಸಿಕೊಳ್ಳುತ್ತಾರೆ.

ಶಿವಮೊಗ್ಗದ ಆರ್ಥಿಕ ಚಟುವಟಿಕೆಗಳು ಸ್ತಬ್ದವಾಗಿದೆ. ಕೂಲಿ ಮಾಡುವವರು 4 ದಿನಗಳಿಂದ ಊಟಮಾಡದೇ ಉಪವಾಸ ಕೂತಿದ್ದಾರೆ. ದುಡ್ಡಿದ್ದರೂ ಹಾಲು ಸಿಗದೇ ಮಕ್ಕಳು ಪರಿತಪಿಸುತ್ತಿದ್ದಾರೆ. ರೋಗಿಗಳು ಆಸ್ಪತ್ರೆಗೆ ಹೋಗಲು ಆಗದೇ ಪರಿತಪಿಸುತ್ತಿದ್ದಾರೆ. ಬಡವರ ಕಷ್ಟಗಳು ಕೋಮುವಾದಿಗಳಿಗೆ ಅರ್ಥವಾಗುವುದಾದರೂ ಹೇಗೆ? ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಾಗ ಬೆಂಕಿ ಹಚ್ಚುವುದೇ ಉತ್ತರವಲ್ಲ. ಆ ಉತ್ತರಗಳಿಗೆ ಮತ್ತೆ ಬೆಂಕಿ ಹಚ್ಚುವುದು ಕೂಡ ಪ್ರತ್ಯುತ್ತರವಲ್ಲ. ಯಾವುದೋ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದು ಧರ್ಮವನ್ನೇ ಅಲುಗಾಡಿಸುವಂತಾಗಬಾರದು. ಧರ್ಮಗಳು ಕೂಡ ಅಷ್ಟು ಟೊಳ್ಳಲ್ಲ. ಗಟ್ಟಿಗೊಂಡ ಯಾವುದೇ ಧರ್ಮ ಇಂತಹ ನೂರಾರು ವಿರೋಧಗಳನ್ನು ತಡೆಯುವ ಶಕ್ತಿ ಪಡೆದಿರುತ್ತದೆ.

ಹಿಂದೂ ಮುಸ್ಲಿಮರು ಸಹೋದರತೆಯಿಂದಲೇ ಬಾಳುತ್ತಾ ಬಂದಿದ್ದಾರೆ. ಶಾಂತಿ ಕದಡುವ ಯತ್ನ ಮತ್ತೆ ಮತ್ತೆ ಕೋಮುವಾದಿಗಳಿಂದ ನಡೆಯುತ್ತಲೇ ಬಂದಿದೆ. ಪತ್ರಿಕೆಯ ಘಟನೆ ಮಾತ್ರ ಇದಕ್ಕೆ ಕಾರಣವಾಗುವುದಿಲ್ಲ. ಇದರ ಹಿಂದೆ ಅನೇಕ ತಪ್ಪುಗಳು ಕೂಡ ವಕ್ರವಾಗಿ ಕಾಣಿಸತೊಡಗುತ್ತವೆ. ಕೋಮುಸೌಹಾರ್ದತೆಯನ್ನು ಕದಡುವ ಕೆಲವು ಕಿಡಿಗೇಡಿಗಳು ಸೌಹಾರ್ದತೆಯನ್ನು ಕದಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಆಗಿದ್ದೂ ಹೀಗೆ... ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನವು ಇಡೀ ಮಾಧ್ಯಮದ ಮೇಲಿನ ಹಲ್ಲೆಯಾಗಿ ತಿರುಗಿದ್ದು ತೀರಾ ಖಂಡನೀಯ. ಕಾನೂನಿಗೆ ಮೊರೆ ಹೋಗಬೇಕಾದ ಘಟನೆಯೊಂದು ಕಾನೂನನ್ನೇ ಕೈಗೆತೆಗೆದುಕೊಳ್ಳುವಂತಾಗಿದ್ದು ವಿಷಾಧನೀಯ.

ಈ ಎಲ್ಲದರ ಜೊತೆಗೆ ಶಿವಮೊಗ್ಗದಲ್ಲಿ ಧಾರ್ಮಿಕ ನಾಯಕರ ಕೊರತೆ ಖಂಡಿತಾ ಇದೆ. ಧರ್ಮ ಗುರುಗಳ, ಧಾರ್ಮಿಕ ನಾಯಕರ, ರಾಜಕಾರಣಿಗಳ ಮಾತುಗಳನ್ನೇ ಕೇಳುವುದಿಲ್ಲ ಎಂದರೆ ಹೇಗೆ? ಅಥವಾ ಧಾರ್ಮಿಕ ನಾಯಕರುಗಳೇ ಇಂತಹ ಘಟನೆಗಳಿಗೆ ಕಾರಣವಾಗುತ್ತಾರೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಧಾರ್ಮಿಕ ಮುಖಂಡರು ತಮ್ಮ ಇರುವಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇಂತಹ ಘಟನೆಗಳು ಸಾಕ್ಷಿಯಾಗುತ್ತವೆ. ಪೊಲೀಸ್ ಇಲಾಖೆ ವೈಫಲ್ಯ ಕೂಡ ಇದಕ್ಕೆ ಕಾರಣ. ಘಟನೆಯ ವಾಸನೆ ಗೊತ್ತಿದ್ದರೂ ಕೂಡ ಗಲಾಟೆಯನ್ನು ತಪ್ಪಿಸಲು ಆಗಲಿಲ್ಲ. ಆದರೆ ಪೊಲೀಸ್ ಮತ್ತು ಜಿಲ್ಲಾಡಳಿತ ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ ಎನ್ನುವುದು ಸಮಾಧಾನದ ವಿಷಯ. ಘಟನೆಗೆ ಸಂಬಂಧಿಸಿದಂತೆ ನೂರಾರು ಜನರನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಶಿವಮೊಗ್ಗ ಸಹಜಸ್ಥಿತಿಗೆ ಮರಳುತ್ತಿದೆ. ಇಂತಹ ಸಂದರ್ಭದಲ್ಲಿ ಗಾಳಿ ಸುದ್ದಿಗಳು ಹಬ್ಬುವುದು ಸಹಜ. ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು. ಕಿಡಿಗೇಡಿಗಳು ಇದನ್ನು ನಂಬಿ, ಮತ್ತೆ ತಮ್ಮ ಅಟ್ಟಹಾಸಗಳನ್ನು ಮೆರೆಯಬಾರದು. ಶಿವಮೊಗ್ಗದಲ್ಲಿ ಹಿಂದೂ-ಮುಸ್ಲಿಂ ಒಟ್ಟಾಗಿ ಬಾಳುತ್ತಿದ್ದಾರೆ. ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಮೊನ್ನೆ ನಡೆದ ಕೋಮುದಳ್ಳುರಿಯಲ್ಲಿ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಛಾಯಾಚಿತ್ರಗಾರನಿಗೆ ಕಲ್ಲಿನಿಂದ ಏಟುಬಿದ್ದಾಗ ಆತನನ್ನು ಆಸ್ಪತ್ರೆಗೆ ಸಾಗಿಸಲು ನೆರವಾದವರು ನಮ್ಮ ಮುಸ್ಲಿಂ ಯುವಕರು ಅನ್ನುವುದನ್ನು ಮರೆಯಬಾರದು. ಮಾನವೀಯತೆಗೆ, ಧರ್ಮ ಪ್ರೇಮಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

ಅದಕ್ಕೆ ಹೇಳಿದ್ದು, ಮೊನ್ನೆ ಕೋಮುಗಲಭೆಗೆ ಬಲಿಯಾದ ಮುಗ್ಧರ ಬಣ್ಣ ಕೆಂಪು. ಗಲಾಟೆಯಲ್ಲಿ ಗಾಯಗೊಂಡವರ ತಲೆಯಿಂದ ಸುರಿದ ರಕ್ತ ಕೂಡ ಕೆಂಪು. ಅದು ಹಸಿರಲ್ಲ. ಕೇಸರಿಯೂ ಅಲ್ಲ. ಹಾಗಾಗಲು ಬಿಡಬಾರದು ಕೂಡ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X