ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಸ್ಥಾನ ಅಪೇಕ್ಷೆಪಟ್ರೆ ದೇವ್ರು ಮೆಚ್ತಾನಾ?

By Prasad
|
Google Oneindia Kannada News

KS Eshwarappa
ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಕೆಎಸ್ ಈಶ್ವರಪ್ಪ ಅವರು ನೈಸ್ ಯೋಜನೆ, ಗಣಿಗಾರಿಕೆ ಮತ್ತಿತರ ಸರಕಾರಿ ಯೋಜನೆಗಳ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

* ಶಿಜು ಪಾಶಾ

* ಭೂಮಿ ಇಲ್ಲದೆ ಅಭಿವೃದ್ಧಿ ಹೇಗೆ ಸಾಧ್ಯ? ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸುವ ಪ್ರತಿಪಕ್ಷದವರು ಇದನ್ನು ಮೊದಲು ತಿಳಿಯಬೇಕು. ಯಾರ ಕಾಲದಲ್ಲಿ ಭೂಮಿಯನ್ನು ವಶಪಡಿಸಿಕೊಂಡಿಲ್ಲ. ಭಾರತರತ್ನ ವಿಶ್ವೇಶ್ವರಯ್ಯನವರಿಗೆ ಭೂಮಿ ಸಿಗದಿದ್ದರೆ ಕನ್ನಂಬಾಡಿ ಕಟ್ಟುತ್ತಿದ್ದರೆ, ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ಯೋಜನೆ ಸಾಧ್ಯವಿತ್ತೆ, ರಾಜ್ಯದಲ್ಲಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದವೇ. ನೀರಾವರಿ ಯೋಜನೆಗಳು, ವಿದ್ಯುತ್ ಯೋಜನೆಗಳು, ಅಭಿವೃದ್ಧಿಗೆ ಸಹಾಯಕವಾಗುತ್ತಿದ್ದವೇ. ಪ್ರತಿಪಕ್ಷಗಳು ಯಾವ ಕಾಲದಲ್ಲಿ ಇದ್ದಾರೆ ಎಂದೇ ಗೊತ್ತಾಗುತ್ತಿಲ್ಲ. ರೈತರಿಗೆ ಅನ್ಯಾಯವಾಗಲು ನಮ್ಮ ಸರ್ಕಾರ ಎಂದಿಗೂ ಬಿಡುವುದಿಲ್ಲ. ಇದಕ್ಕೆ ಬಹಳ ಮುಖ್ಯ ಉದಾಹರಣೆ ಎಂದರೆ ಶಿವಮೊಗ್ಗ ವಿಮಾನ ನಿಲ್ದಾಣ ಸಂತ್ರಸ್ತರಿಗೆ ನಾವು ಪರಿಹಾರ ಕೊಟ್ಟಿದ್ದು, ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ ಹಾಗೆಯೇ, ರೈತರ ಹೆಸರಿನಲ್ಲಿ ವಿನಾ ಕಾರಣ ತೊಂದರೆ ಕೊಡುವುದನ್ನು ನಾವು ಸಹಿಸುವುದಿಲ್ಲ.

* ದೇವೇಗೌಡರು ನೈಸ್ ನೈಸ್ ಎಂದು ಕೂಗಾಡುತ್ತಿದ್ದಾರೆ. ನೈಸ್‌ಗೆ ಭೂಮಿಯನ್ನು ವಶಪಡಿಸಿಕೊಂಡವರು ನಾವೆ? ಅವರು ಅಂದು ಹೇಳಿದ್ದಕ್ಕಿಂತ ಒಂದು ಗೇಣು ಸಹ ಹೆಚ್ಚಿಗೆ ವಶಪಡಿಸಿಕೊಂಡಿಲ್ಲ. ಹೆಚ್ಚಿಗೆ ವಶಪಡಿಸಿಕೊಂಡಿದ್ದರೆ ತಾನೇ ಹಿಂತಿರುಗಿ ಕೊಡುವ ಮಾತು. ಅದನ್ನು ಅವರು ಅರಿತುಕೊಳ್ಳಬೇಕು. ಅಭಿವೃದ್ಧಿ ಸಹಿಸದವರು ಈ ರೀತಿ ಮಾತನಾಡುತ್ತಿದ್ದಾರೆ. ಇದೊಂದು ರಾಜಕೀಯ ಅಷ್ಟೇ. ಇಂತಹ ಮೊಸಳೆ ಕಣ್ಣೀರು ಸುರಿಸುವುದು ತರವಲ್ಲ.

* ಗಣಿಗಾರಿಕೆ ಕುರಿತಂತೆ ಅನಂತಮೂರ್ತಿಯಂತಹ ದೊಡ್ಡ ಲೇಖಕರು ಕೂಡ ಮಾತನಾಡುವುದು ನೋಡಿದರೆ ವಿಷಾದವಾಗುತ್ತದೆ. ಸಾಹಿತಿಗಳು ರಾಜಕಾರಣಿಗಳ ಹಾಗೆ ಮಾತಾಡಬಾರದು. ಗಣಿಗಾರಿಕೆಗೆ ಯಾವ ಸರ್ಕಾರ ಇದುವರೆಗೂ ಅವಕಾಶ ಮಾಡಿಕೊಟ್ಟಿಲ್ಲ. ನಮ್ಮ ಸರ್ಕಾರ ಮಾತ್ರವೇ? ಹಿಂದಿನ ಎಲ್ಲಾ ಸರ್ಕಾರಗಳು ಗಣಿಗಾರಿಕೆಗೆ ಅವಕಾಶ ನೀಡಿವೆ. ಅಷ್ಟಕ್ಕೂ ಈಗ ಗಣಿಗಾರಿಕೆಗೆ ಅವಕಾಶ ಕೊಟ್ಟಿರುವುದು ನಿಯಮಗಳ ಅಡಿಯಲ್ಲಿ ಇದರ ಪೂರ್ತಿ ಪ್ರಯೋಜನವನ್ನು ನಮ್ಮ ಕನ್ನಡಿಗರೇ ಪಡಯುತ್ತಾರೆ. ಇದರಿಂದ ಉದ್ಯೋಗ ಅವಕಾಶಗಳು ಹೆಚ್ಚಾಗುತ್ತವೆ. ಪರಿಸರಕ್ಕೆ ಹಾನಿಯಾಗದಂತೆಯೇ ಎಚ್ಚರಿಕೆ ವಹಿಸಿ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ ಎಂಬುದನ್ನು ಪರಿಸರವಾದಿಗಳು ಮರೆಯಬಾರದು. ರಾಜ್ಯದ ಸಂಪನ್ಮೂಲ ಕ್ರೋಢಿಕರಣಕ್ಕೆ ಇದೆಲ್ಲ ಬೇಕೇ ಬೇಕು.

* ಪಕ್ಷದ ಅಧ್ಯಕ್ಷನಾಗಿ ನನ್ನ ಜವಾಬ್ದಾರಿ ತುಂಬಾ ಇದೆ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಮತ್ತು ಈ ಹುದ್ದೆಯನ್ನು ಜಾಲೆಂಜ್ ಆಗಿ ತೆಗೆದುಕೊಂಡಿದ್ದೇನೆ. ಬಿಜೆಪಿಯಲ್ಲಿ ಎಲ್ಲಾ ತರದವರಿದ್ದಾರೆ. ವೈಯಕ್ತಿಕ ವರ್ಚಸ್ಸಿನಿಂದ ಗೆದ್ದವರು, ಪಕ್ಷದ ವರ್ಚಸ್ಸಿನಿಂದ ಗೆದ್ದವರು, ವಿವಿಧ ಪಕ್ಷದಲ್ಲಿದ್ದು ಮನನೊಂದು ನಮ್ಮ ಪಕ್ಷಕ್ಕೆ ಬಂದವರೂ ಇದ್ದಾರೆ. ಇವರೆಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಒಂದು ಸಾಹಸವೇ ಸರಿ. ಅಂತಹ ಸಾಹಸವನ್ನೇ ನಾನು ಇಷ್ಟಪಟ್ಟಿದ್ದೇನೆ. ಶಾಸಕರ ಅಸಮಾಧಾನಗಳನ್ನು, ಭಿನ್ನಮತಗಳನ್ನು, ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ ಅವರೆಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಭರವಸೆ ನನಗಿದೆ. ಇನ್ನು ಮುಂದೆ ಪಕ್ಷದಲ್ಲಿ ಭಿನ್ನಾಭಿಪ್ರಾಯದ ಮಾತೇ ಉದ್ಭವಿಸುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು, ಸರ್ವತಂತ್ರ ಸ್ವಾತಂತ್ರ್ಯವಾಗಿ ರಾಜ್ಯಭಾರ ಮಾಡಲಿದೆ ಎಂಬ ವಿಶ್ವಾಸ ನಮಗಿದೆ. ಅಧ್ಯಕ್ಷನಾಗಿ ಮುಂದಿನ ದಿನಗಳಲ್ಲಿ ಆ ಗುರಿಯನ್ನು ನಾನು ಸಾಧಿಸಿಯೇ ತೀರುತ್ತೇನೆ.

* ಅಲ್ಪಸಂಖ್ಯಾತರನ್ನು, ದಲಿತರನ್ನು, ಹಿಂದುಳಿದವರನ್ನು ನಮ್ಮ ಸರ್ಕಾರ ಕಡೆಗಾಣಿಸುತ್ತದೆ ಎಂಬ ವಿರೋಧ ಪಕ್ಷದವರ ಟೀಕೆ ಅರ್ಥವಿಲ್ಲದ್ದು, ಈ ಎಲ್ಲಾ ವರ್ಗದವರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬಿಡುಗಡೆ ಮಾಡಿದಷ್ಟು ಹಣವನ್ನು, ನೆರವನ್ನು ಯಾವ ಸರ್ಕಾರಗಳೂ ಇದುವರೆಗೂ ಮಾಡಿಲ್ಲ. ಹಾಗೆನಾದರೂ ಮಾಡಿದ ಉದಾಹರಣೆ ಇದ್ದರೆ ನಾನು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ.

* ಮಠಗಳಿಗೆ, ದೇವಸ್ಥಾನಗಳಿಗೆ ಹಣವನ್ನು ಕೊಡುವುದರಿಂದ ತಪ್ಪೇನೂ ಆಗದು. ಎಲ್ಲಾ ಜಾತಿಯವರಿಗೂ ನಾವು ಸಮಾನವಾಗಿ ಕಾಣುತ್ತೇವೆ. ಉತ್ತರ ಕರ್ನಾಟಕದ ಸಂತ್ರಸ್ತರ ನೆರವಿಗೆ ಮಠಗಳು ಧಾವಿಸಿ ಬಂದಿರುವುದನ್ನು ನೋಡಿದರೆ ನಮಗೆ ಆಶ್ಚರ್ಯವಾಗುತ್ತದೆ. ಸರ್ಕಾರವೇ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ :............. ಅವರು ಸಂತ್ರಸ್ತರಿಗಾಗಿ ನೂರಾರು ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರಿಗೆ ಸರ್ಕಾರ ಒಂದಿಷ್ಟು ಭೂಮಿ ಮತ್ತು ಹಣವನ್ನು ನೀಡಿದೆ ನಿಜ. ಅದು ಪ್ರೋತ್ಸಾಹಕ್ಕೆ ಮಾತ್ರ. ಈ ರೀತಿಯ ನೆರವು ನೀಡಲು ಬಂದವರಿಗೆ ಸರ್ಕಾರ ಬೆನ್ನುತಟ್ಟುವುದರಲ್ಲಿ ಯಾವ ತಪ್ಪೂ ಇಲ್ಲ. ಇದನ್ನೇ ಬಹುದೊಡ್ಡ ವಿಷಯ ಎಂದು ರಾಮಾಯಣ ಮಾಡುವುದೂ ಕೂಡ ಸರಿಯಲ್ಲ. ದಾನ ಮಾಡಿದವರನ್ನು ಗೌರವಿಸುವುದು ನಮ್ಮ ಸಂಸ್ಕೃತಿ.

* ದಂಡಾವತಿ ಯೋಜನೆಯನ್ನು ವಿರೋಧಿಸುವ ಬಂಗಾರಪ್ಪ, ದೇವೇಗೌಡರು ಹಿಂದಿನ ದಿನಗಳನ್ನು ನೆನಪು ಮಾಡಿಕೊಳ್ಳಬೇಕು. ಯೋಜನೆಗೆ ಒತ್ತಾಯಿಸಿದವರೆ ಅವರು. ಕುಮಾರಸ್ವಾಮಿಯವರ ಕಾಲದಲ್ಲಿ ಹಣ ಬಿಡುಗಡೆಯಾಗಿತ್ತೂ ಕೂಡ. ಜಿಲ್ಲೆಯ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರುಗಳು ಅಂದು ಯೋಜನೆ ಜಾರಿಗಾಗಿಯೇ ಒಂದು ಪುಸ್ತಕವನ್ನೂ ಕೂಡ ಬಿಡುಗಡೆ ಮಾಡಿದ್ದು ನನಗೆ ನೆನಪಿದೆ. ಈಗ ಯೋಜನೆಯನ್ನು ವಿರೋಧಿಸುತ್ತಾರೆ ಎಂದರೆ ಇವರೆಷ್ಟು ರಾಜಕೀಯ ಮಾಡುತ್ತಾರೆ ಎಂಬುದು ಅರ್ಥವಾಗುತ್ತದೆ. ಬಂಗಾರಪ್ಪ, ದೇವೇಗೌಡರಂತಹವರು ಇಂತಹ ಕ್ಷುಲ್ಲಕ ರಾಜಕಾರಣ ಬಿಟ್ಟು ಅಭಿವೃದ್ಧಿಗೆ ಸಹಕರಿಸಲಿ.

* ಬಜೆಟ್ ನಂತರ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಸಣ್ಣಪುಟ್ಟ ಬದಲಾವಣೆಗಳು ಆಗಬಹುದು. ಶೋಭಾಕರಂದ್ಲಾಜೆಯವರಿಗೆ ಸಚಿವ ಸ್ಥಾನ ಕೊಡುವುದು ಬಿಡುವುದು ನಂತರದ ಪ್ರಶ್ನೆ. ಆದರೆ ಮಹಿಳೆಗೆ ಆದ್ಯತೆ ನೀಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗಾಗಿ ಈ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.

* ವಿಐಎಸ್‌ಎಲ್ ಮತ್ತು ಎಂಪಿಎಂನ್ನು ಮುಚ್ಚಲು ನಾವೆಂದೂ ಬಿಡುವುದಿಲ್ಲ. ಈಗಾಗಲೇ ಎಂಪಿಎಂ ಅಭಿವೃದ್ಧಿಗಾಗಿ ೨೫ಕೋಟಿ ನೆರವು ನೀಡಲಾಗಿದೆ. ಮುಂದೆಯೂ ಕೂಡ ನೂರಾರು ಕೋಟಿ ರೂ.ಗಳನ್ನು ನಾವು ನೀಡುತ್ತೇವೆ. ವಿಐಎಸ್‌ಎಲ್‌ಗೆ ಸ್ವಂತ ಗಣಿಯನ್ನು ಪ್ರಾರಂಭಿಸಲು ನಮ್ಮ ಸರ್ಕಾರವೇ ಮುಂದೆ ಬಂದಿದೆ. ಈಗ ಅವಕಾಶ ಮಾಡಿಕೊಟ್ಟ ಗಣಿಗಾರಿಕೆಯಲ್ಲಿಯೂ ಕೂಡ ವಿಐಎಸ್‌ಎಲ್‌ಗೆ ನೀಡುವಂತೆ ಸೂಚನೆ ನೀಡಲಾಗಿದೆ. ಈ ಎರಡೂ ಕಾರ್ಖಾನೆಗಳಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಅವೆಲ್ಲವನ್ನೂ ನಿವಾರಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಒಟ್ಟಿನಲ್ಲಿ ಕಾರ್ಖಾನೆಗಳನ್ನು ಮುಚ್ಚಲು ಬಿಡುವುದಿಲ್ಲ ಅಷ್ಟೆ.

* ಇಂದಿನ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣ. ಏರುತ್ತಿರುವ ಬೆಲೆಯನ್ನು ಇಳಿಯಲು ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ. ಬಡವರು ಅಗತ್ಯ ವಸ್ತುಗಳನ್ನು ಕೊಳ್ಳುವುದೇ ಕಷ್ಟವಾಗುತ್ತಿದೆ. ನಮ್ಮ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅಡಿಗೆ ಅನಿಲವನ್ನು ಬೀದಿಯಲ್ಲಿ ಮಾರಾಟ ಮಾಡುತ್ತಿತ್ತು. ಈಗ ಏನಾಗಿದೆ. ಬ್ಲಾಕ್‌ನಲ್ಲಿ ಅಡಿಗೆ ಅನಿಲ ಮಾರಾಟವಾಗುತ್ತಿದೆ.

* ಬಿಜೆಪಿ ಶಾಸಕರಿಗೆ ಆಡಳಿತದಲ್ಲಿ ಮತ್ತಷ್ಟು ಜವಾಬ್ದಾರಿ ಬರುವಂತೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಶಾಸಕರಿಗೆ ತರಬೇತಿಯ ಅವಶ್ಯಕತೆ ಇದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹಾಗಾಗಿಯೇ ಈ ಬಗ್ಗೆ ದೊಡ್ಡ ಮಟ್ಟದ ಚಿಂತನೆ ನಡೆಸಲಾಗಿದೆ. ಈಗಾಗಲೇ ಹಲವು ಬಾರಿ ಶಿಬಿರಗಳನ್ನು ಏರ್ಪಡಿಸಲಾಗಿದೆ. ಇದು ಒಂದು ರೀತಿಯ ಶಿಸ್ತನ್ನು ಬೆಳೆಸುತ್ತದೆ.

* ರಾಜ್ಯದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ನಾವು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಅನೇಕ ಕಡೆ ಕಳಪೆಯಾಗುತ್ತಿವೆ ಎಂಬ ದೂರುಗಳೂ ಕೂಡ ಕೇಳಿಬರುತ್ತಿರುವುದು ನಿಜ. ನಮ್ಮ ದುರಾದೃಷ್ಟಕ್ಕೆ ಅನೇಕ ಕಡೆ ಕೆಟ್ಟ ಗುತ್ತಿಗೆದಾರರಿದ್ದಾರೆ. ಎಲ್ಲಾ ಕಳಪೆ ಕಾಮಗಾರಿಗಳನ್ನು ತನಿಖೆಗೆ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು.

* ಸದ್ಯಕ್ಕೆ ಮುಖ್ಯಮಂತ್ರಿಯಾಗುವ ಬಯಕೆ ನನಗೇನೂ ಇಲ್ಲ. ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಮುಂದಿನ ದಿನದಲ್ಲಿ ಬಿಜೆಪಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಬೇಕು ಎಂಬುದೇ ನನ್ನ ಆಸೆ.

ಬಹುಮುಖ ಪ್ರತಿಭೆಯ ರಾಜಕಾರಣಿ ಕೆಎಸ್ ಈಶ್ವರಪ್ಪ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X