ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಮುಖ ಪ್ರತಿಭೆಯ ಕೆಎಸ್ ಈಶ್ವರಪ್ಪ

By * ಶಿ.ಜು. ಪಾಶಾ, ಶಿವಮೊಗ್ಗ
|
Google Oneindia Kannada News

KS Eshwarappa
1948ರ ಜುಲೈ 10ರಂದು ಬಳ್ಳಾರಿಯಲ್ಲಿ ಜನಿಸಿದ ಕೆ.ಎಸ್.ಈಶ್ವರಪ್ಪ ಈಗ ಭಾರತೀಯ ಜನತಾ ಪಕ್ಷದ ಮುಂಚೂಣಿ ನಾಯಕರು. ಇವರ ತಂದೆ ಶರಣಪ್ಪ 1950ರ ಹೊತ್ತಿನಲ್ಲಿ ಭೂಪಾಳಂ ಅಡಿಕೆ ಮಂಡಿಯಲ್ಲಿ ಕೆಲಸ ಮಾಡಲೆಂದು ಬಂದವರು. ಇವರ ತಾಯಿಯೂ ಸಹ ಇದೇ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈಶ್ವರಪ್ಪ ಸಹ ಇದೇ ಮಂಡಿಗೆ ಕೆಲಸ ಮಾಡಲೆಂದು ಹೊರಟಾಗ ಸಿಕ್ಕಿದ್ದು ಬುದ್ದಿವಾದ- ನೀನು ನಮ್ಮಂತೆ ಕೂಲಿಯವನು ಆಗುವುದು ಬೇಡ. ಓದಿ ದೊಡ್ಡ ಮನುಷ್ಯನಾಗು. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆ.

ಈಶ್ವರಪ್ಪ ತಾಯಿಯ ಬುದ್ದಿವಾದಕ್ಕೆ ಮನ್ನಣೆ ನೀಡಿ, ತಮ್ಮದೇ ರೀತಿಯಲ್ಲಿ ಬೆಳೆಯುತ್ತಾ ಬಂದರು. ನ್ಯಾಷನಲ್ ಕಾಮರ್ಸ್ ಕಾಲೇಜಿನಲ್ಲಿ ಪದವಿ ಪಡೆದರು. ಅಲ್ಲಿಯೇ ವಿದ್ಯಾರ್ಥಿ ನಾಯಕರಾಗಿ ರೂಪುಗೊಂಡರು. ಅದು ಅವರ ಜೀವನದ ಮೊದಲ ವಿದ್ಯಾರ್ಥಿ ಚುನಾವಣೆಯಾಗಿತ್ತು. ಅಲ್ಲಿಂದ ಅವರು ಓರ್ವ ಅತ್ಯುತ್ತಮ ರಾಜಕಾರಣಿಯಾಗುವ ಲಕ್ಷಣಗಳನ್ನು ತೋರಿಸುತ್ತಲೇ ಬಂದರು. ಶಾಲೆಯ ದಿನಗಳಲ್ಲಿ ಖೋ-ಖೋ ಮತ್ತು ಫುಟ್‌ಬಾಲ್ ಆಡುವುದೆಂದರೆ ವಿಶೇಷ ಪ್ರೀತಿ. ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ಅವರೊಬ್ಬ ಹಾಡುಗಾರರಾಗಿದ್ದರು. ತಮ್ಮ ಸಹಪಾಠಿಗಳ ವಲಯದಲ್ಲಿ ಅತ್ಯುತ್ತಮ ಸ್ನೇಹಿತರಾಗಿದ್ದರು. ಹೀಗೆ ವಿದ್ಯಾರ್ಥಿಯಾಗಿದ್ದಾಗಲೇ ಪರಿಚಯವಾಗಿದ್ದು ಆರ್‌ಎಸ್‌ಎಸ್‌ನ ಪ್ರಾಂತ್ಯ ಪ್ರಚಾರಕ ದಾ.ಮಾ. ರವೀಂದ್ರ.

ದಿವಂಗತ ನರಸಿಂಹಮೂರ್ತಿ ಅಯ್ಯಂಗಾರ್‌ರವರ ಸಂಪರ್ಕಕ್ಕೆ ಬಂದ ಕೆ.ಎಸ್.ಈಶ್ವರಪ್ಪ ವಿಶ್ವ ಹಿಂದೂ ಪರಿಷತ್ ವ್ಯಾಪ್ತಿಗೆ ಬರುವಂತಾಯಿತು. ಅಲ್ಲಿಂದ ಸಮಾಜ ಸೇವೆಯ ಗುಣಗಳನ್ನು ಹೊಂದಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವಿದ್ಯಾರ್ಥಿ ಘಟಕದ ನಾಯಕರಾದರು. ತಮ್ಮ ಓದು ಮುಗಿದ ಮೇಲೆ ತಮ್ಮದೇ ಆದ ಸ್ವಂತ ವ್ಯವಹಾರವನ್ನು ಶಿವಮೊಗ್ಗದಲ್ಲಿ ಆರಂಭಿಸಿದರು. ಅಲ್ಲಿಂದ ಭಾರತೀಯ ಜನಸಂಘದಲ್ಲಿ ಗುರುತಿಸಿಕೊಂಡರು. 1975-77ರ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ದೇಶದ ಮೇಲೆ ಹೇರಲ್ಪಟ್ಟಿತ್ತು. ಅದನ್ನು ವಿರೋಧಿಸಿ ಬಂಧನಕ್ಕೊಳಗಾದರು. ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುವಂತಾದರು. ತುರ್ತು ಪರಿಸ್ಥಿತಿಯ ನಂತರದಲ್ಲಿ ಕೆ.ಎಸ್.ಈಶ್ವರಪ್ಪ ಫುಲ್‌ಟೈಮ್ ರಾಜಕಾರಣಿಯಾಗಿ ಗುರುತಿಸಿಕೊಂಡರು. ಬಿಜೆಪಿಯ ನಗರ ಘಟಕಕ್ಕೆ 1982ರಲ್ಲಿ ಅಧ್ಯಕ್ಷರಾದರು. ತಮ್ಮ ಸ್ವಂತಿಕೆಯ ಮೂಲಕ ಸಂಪೂರ್ಣ ಶ್ರಮ ಹಾಕಿ ಶಿವಮೊಗ್ಗದಲ್ಲಿ ಬಿಜೆಪಿಯಿಂದ ಎಂ.ಆನಂದರಾವ್‌ರವರನ್ನು ಗೆಲ್ಲಿಸಿಕೊಂಡರು. ಎಂ.ಆನಂದರಾವ್ ಬಿಜೆಪಿಯ ಮೂಲಕ ಶಿವಮೊಗ್ಗದಲ್ಲಿ ಗೆದ್ದ ಮೊತ್ತಮೊದಲ ವ್ಯಕ್ತಿ.

1989ರಲ್ಲಿ ಸಂಘಟನೆಯ ಒತ್ತಡದ ಮೇಲೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. ಆಗ ಇವರ ವಿರುದ್ಧ ಸ್ಪರ್ಧಿಸಿದ್ದವರು ಆರೋಗ್ಯ ಸಚಿವರಾಗಿದ್ದ ಕೆ.ಹೆಚ್.ಶ್ರೀನಿವಾಸ್. 1304 ಮತಗಳಿಂದ ಗೆದ್ದುಬಂದಿದ್ದ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದ ಮಟ್ಟಿಗೆ ಬಿಜೆಪಿಯ ಕೋಟೆಯನ್ನು ಕಟ್ಟಿದರು. 1999ರಲ್ಲಿ ಹೆಚ್.ಎಂ.ಚಂದ್ರಶೇಖರಪ್ಪರವರ ವಿರುದ್ಧ ಸೋತಿದ್ದ ಕೆ.ಎಸ್.ಈಶ್ವರಪ್ಪ ಮತ್ತೆ ಗೆದ್ದುಬಂದಿದ್ದು ವಿಶೇಷವಾಗಿತ್ತು. 1992ರಲ್ಲಿ ಬಿಜೆಪಿಯ ರಾಜ್ಯ ಯುವಮೋರ್ಚಾ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. 1993ರಲ್ಲಿ ಹಾಗೂ 1995ರಲ್ಲಿ ಎರಡು ಬಾರಿ ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿದ್ದ ಕೆ.ಎಸ್.ಈಶ್ವರಪ್ಪ ಈಗ ಮತ್ತೆ ಅಧ್ಯಕ್ಷರಾಗಿದ್ದಾರೆ. ಈ ನಡುವೆ ಜಾತ್ಯಾತೀತ ಜನತಾದಳ ಮತ್ತು ಬಿಜೆಪಿಯ ಸಂಯುಕ್ತ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿತ್ವದ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದವರು. ಈ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈಗ ಮತ್ತೆ ಬಿಜೆಪಿಯ ರಾಜ್ಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರೊಂದಿಗೆ ಮುಕ್ತವಾಗಿ ಕುಳಿತು ಮಾತನಾಡಿದಾಗ, ಅಷ್ಟೇ ಮುಕ್ತವಾಗಿ ಕೆ.ಎಸ್.ಈಶ್ವರಪ್ಪ ತಮ್ಮ ಒಳಗಿನ ಮಾತುಗಳನ್ನು ಹೊರಚೆಲ್ಲಿದ್ದಾರೆ. ಅಂತಹ ಒಂದಿಷ್ಟು ಮಾತುಗಳು ಇಲ್ಲಿವೆ;

« ಸಂದರ್ಶನ : ಸಿಎಂ ಸ್ಥಾನ ಅಪೇಕ್ಷೆಪಟ್ರೆ ದೇವ್ರು ಮೆಚ್ತಾನಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X