ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರಂತರ ವಿದ್ಯುತ್ ಎಂಬ ಸರಕಾರದ ಬೊಗಳೆ

By * ಡಿ.ಟಿ. ತಿಲಕ್‌ರಾಜ್
|
Google Oneindia Kannada News

Continuous electricity and false assurance
ಗ್ರಾಮೀಣ ಪ್ರದೇಶದ ರೈತರಿಗೆ ನಿರಂತರ ವಿದ್ಯುತ್ ಪೂರೈಕೆ, ಲೋಡ್‌ಶೆಡ್ಡಿಂಗ್ ರದ್ದು, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸುವುದಿಲ್ಲ, ಗ್ರಾಮೀಣ ಪ್ರದೇಶಕ್ಕೆ ನಿರಂತರ ಜ್ಯೋತಿ, ಕೈಗಾರಿಕೆಗಳಿಗೆ ಪವರ್ ಕಟ್ ಇಲ್ಲ...!

ಅರೆರೆ ಸ್ವಲ್ಪ ತಾಳಿ, ಇವೆಲ್ಲಾ ಭರವಸೆಗಳು ಮಾತ್ರ. ಈ ಭರವಸೆಗಳು ಈ ಜನ್ಮದಲ್ಲಿ ಈಡೇರುವ ಲಕ್ಷಣಗಳಂತೂ ಕಾಣುತ್ತಿಲ್ಲ. ಹಾಗಾಗಿ ನೀವು ಇವೆಲ್ಲಾ ಯೋಜನೆಗಳು ಜಾರಿಯಾಗುತ್ತವೆಂಬುದನ್ನು ಕನಸಿನಲ್ಲಿಯೂ ಊಹಿಸಿಕೊಳ್ಳಬೇಡಿ.

ಅಧಿಕಾರಕ್ಕೆ ಬಂದ ಕೂಡಲೇ ಸ್ವಾರ್ಥ ರಾಜಕಾರಣ, ಒಳಜಗಳ, ವರ್ಗಾವಣೆ ದಂಧೆ, ಸ್ವಅಭಿವೃದ್ದಿ ಹೊಂದಲು ಏನು ಬೇಕೋ ಅವೆಲ್ಲವನ್ನೂ ಪಡೆದುಕೊಳ್ಳಲು ಮುಂದಾಗುವ ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ಯಾವ ಪಕ್ಷದ ಸರ್ಕಾರದಲ್ಲಿದ್ದರೂ, ಯಾವ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಜನಹಿತ ಕಾಯುವ ಇಚ್ಚಾಶಕ್ತಿ ಇಲ್ಲ.

ಕೇವಲ ಪೊಳ್ಳು ಭರವಸೆಗಳನ್ನು ನೀಡುತ್ತಾ, ರೈತರನ್ನು ವಂಚನೆ ಮಾಡುತ್ತಾ, ಮತಗಳಿಗೆ ಮಾತ್ರ ಮತದಾರರನ್ನು ಮೀಸಲಾಗಿಟ್ಟುಕೊಂಡಿರುವ ಇಂಥಾ ರಾಜಕಾರಣಿಗಳು ಕೇವಲ ಅಧಿಕಾರ, ಪ್ರತಿಷ್ಠೆಗೋಸ್ಕರ ಸರ್ಕಾರ ನಡೆಸುತ್ತಾರೆಯೇ ವಿನಾ ಜನಸೇವೆಗಲ್ಲ ಎಂಬುದನ್ನು ನಾವು ಇಂದು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿರುವುದು ನಮ್ಮ ದುರ್ದೈವ.

ರೈತಪರ ಎಂಬ ಸಕ್ಕರೆಕಡ್ಡಿ : ರೈತನಿಗೆ ನಿರಂತರ ವಿದ್ಯುತ್ ಪೂರೈಸಿ ಅವನನ್ನು ಅಭಿವೃದ್ದಿ ಮಾಡುತ್ತೇನೆಂದು ಬಿಜೆಪಿ ಪಕ್ಷ ಚುನಾವಣೆ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಮುಖ್ಯ ಅಂಶವನ್ನಾಗಿ ಸೇರಿಸಿಕೊಂಡಿತ್ತು. ಆದರೆ ಆ ಭರವಸೆ ಏನಾಯ್ತು? ಇಂದು ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟು ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂಬುದು ನಿಮಗೆ ತಿಳಿದಿದೆಯೇ. ಬಹುಷಃ ಇದು ಗ್ರಾಮೀಣ ಪ್ರದೇಶದವರಿಗೆ ಮಾತ್ರ ತಿಳಿದಿದೆ. ಪ್ರತಿದಿನ ಕೇವಲ 3ರಿಂದ 4 ಗಂಟೆಗಳು ಮಾತ್ರ 'ತ್ರಿ ಫೇಸ್' ವಿದ್ಯುತ್ ಸರಬರಾಜಾಗುತ್ತಿದೆ ಎಂದರೆ ನಿಮಗೆ ಶಾಕ್' ಹೊಡೆಯಬಹುದು.

ಇದು ಭಗವಂತನ ಸಾಕ್ಷಿಯಾಗಿಯೂ ನಿಜ. ರೈತ ಬೆಳೆದ ಬಾಳೆ ಒಣಗುತ್ತಿದೆ, ಕಬ್ಬು ಬಾಡುತ್ತಿದೆ, ರಾಗಿ, ತರಕಾರಿ, ಸೊಪ್ಪುಗಳು ನೀರಿಲ್ಲದೆ ಸೊರಗುತ್ತಿವೆ. ರೈತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಇಂದಿಗೋ ನಾಳೆಯೋ ಕರೆಂಟ್ ಕೊಟ್ಟೇ ಕೊಡುತ್ತಾರೆಂಬ ಹುಸಿ ಭರವಸೆಯನ್ನು ತನ್ನ ಮನದಲ್ಲಿ ಇಂದಿಗೂ ಗಟ್ಟಿಯಾಗಿ ಇರಿಸಿಕೊಂಡಿದ್ದಾನೆ. ಈ ಭರವಸೆ ನಿಜವಾಗಿಯೂ ಈಡೇರುತ್ತದೆಯೇ? ರೈತ ಸರ್ಕಾರ ನಮ್ಮದೆಂದು ಹೇಳಿಕೊಳ್ಳುವವರು ನಿಜಕ್ಕೂ ರೈತರ ಬಗ್ಗೆ ಯೋಚಿಸಿದ್ದಾರೆಯೇ ಸ್ವಲ್ಪ ಯೋಚಿಸಿ.

ಇನ್ನು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಈ ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದಾಗಿ ತಾತ್ವಾರ ಎದುರಾಗಿದ್ದು, ಕಿಲೋ ಮೀಟರ್ ಗಟ್ಟಲೆ ದೂರದಿಂದ ನೀರು ತರಬೇಕಾದ ಪರಿಸ್ಥಿತಿ ಬೇಸಿಗೆಗೆ ಮುನ್ನವೇ ಬಂದಿರುವುದು ನಿಜಕ್ಕೂ ದುರದೃಷ್ಟದ ಸಂಗತಿ. ಮುಂಬರುವ ಬೇಸಿಗೆಯನ್ನು ಗ್ರಾಮೀಣ ಪ್ರದೇಶದವರು ಹೇಗೆ ಎದುರಿಸಬೇಕು ಎಂಬುದನ್ನು ಸರ್ಕಾರವೇ ತಿಳಿಸಬೇಕು.

ನೆಪಮಾತ್ರಕ್ಕೆ ಪಾಳಿ ವ್ಯವಸ್ಥೆ : ಗ್ರಾಮೀಣ ಪ್ರದೇಶಗಳಿಗೆ ಪಾಳಿ ವ್ಯವಸ್ಥೆಯಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂಬುದು ಸರ್ಕಾರದ ಫಾರ್ಮಾನು. ಆದರೆ ಈ ಫಾರ್ಮಾನು ಹೇಗೆ ಕೆಲಸ ಮಾಡುತ್ತಿದೆ? ಒಂದು ದಿನ ಬೆಳಿಗ್ಗೆ 6 ಗಂಟೆಯಿಂದ 9, ಮಾರನೆಯ ದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 12, ಇನ್ನೊಂದು ದಿನ ಮಧ್ಯಾಹ್ನ 12ರಿಂದ 3, ಮಗದೊಂದು ದಿನ ಮಧ್ಯಾಹ್ನ 3ರಿಂದ ಸಂಜೆ 6....! ಇದ್ಯಾವ ಪಾಳಿ ಸ್ವಾಮಿ? ಗ್ರಾಮಾಂತರ ಪ್ರದೇಶದವರು ಪಾಳಿ ವ್ಯವಸ್ಥೆ ಎಂದರೆ 15 ದಿನಕ್ಕೊಮ್ಮೆ ಬದಲಾಗುವುದು ಎಂದು ತಿಳಿದುಕೊಂಡಿದ್ದರು. ಇದ್ಯಾವ ಬಗೆಯ ಪಾಳಿ ವ್ಯವಸ್ಥೆ ಎಂಬುದನ್ನು ನೀವೇ ಹೇಳಬೇಕು.

ವಿದ್ಯಾರ್ಥಿಗಳ ಗೋಳು : ಅದೇನೋ ವಿದ್ಯಾರ್ಥಿಗಳಿಗೋಸ್ಕರ ಪರೀಕ್ಷಾ ಸಮಯದಲ್ಲಿ ತೊಂದರೆಯಾಗುತ್ತದೆಂಬ ಕಾರಣಕ್ಕೆ ಸಂಜೆ 6ರಿಂದ ಬೆಳಿಗ್ಗೆ 9ರವರೆಗೆ ವಿದ್ಯುತ್ ಕಡಿತಗೊಳಿಸುವುದಿಲ್ಲ ಎಂಬ ಹೇಳಿಕೆಯನ್ನು ಇತ್ತೀಚೆಗೆ ಮುಖ್ಯಮಂತ್ರಿಗಳು ತಿಳಿಸಿದ್ದಾರಲ್ಲಾ? ಅದು ಹೇಗಿದೆ ಅಂತೀರಾ?

ಈಗಾಗಲೇ ವಿದ್ಯಾರ್ಥಿಗಳಿಗೆ ಪೂರ್ವಸಿದ್ದತಾ ಪರೀಕ್ಷೆಗಳು ನಡೆಯುತ್ತಿವೆ. ಹಾಗೆಯೇ ಈ ತಿಂಗಳ ಅಂತ್ಯದಿಂದ ಪ್ರಥಮ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಎಸ್.ಎಸ್.ಎಲ್.ಸಿ., ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಇನ್ನೇನು ಶುರುವಾಗಲಿವೆ. ಹೀಗಿರುವ ಅವಧಿಯಲ್ಲಿ ವಿತರಣೆಯಾಗುತ್ತಿರುವ ವಿದ್ಯುತ್‌ಗೆ ನಮ್ಮ ದೀಪದ ಬುಡ್ಡಿಗಳೇ ಸಡ್ಡೊಡೆಯುತ್ತಿವೆ. ಏಕೆಂದರೆ ಈ ವಿದ್ಯುತ್ ಕೇವಲ 80-90 ವೋಲ್ಟೇಜ್ ಹೊಂದಿದೆ. ಈ ವಿದ್ಯುತ್ ಏಕೆ ಪೂರೈಕೆ ಮಾಡಬೇಕು? ಬರೀ ನೆಪಮಾತ್ರಕ್ಕೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದೆಯೇ ವಿನಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲ್ಲ. ಹಾಗಾಗಿ ವಿದ್ಯಾರ್ಥಿಗಳು ಈ ವಿದ್ಯುತ್ ನಂಬಿಕೊಳ್ಳದೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು.

ನಿರಂತರ ಜ್ಯೋತಿ ಎಂಬ ಕಡೇ ನಾಟಕ : ಕಡೆಯದಾಗಿ ಸರ್ಕಾರ ನಿರಂತರ ಜ್ಯೋತಿ ಎಂಬ ಬೆಳಕು ನೀಡಲು ಮುಂದಾಗಿರುವುದನ್ನು ನೀವು ನಂಬುತ್ತೀರೋ ಬಿಡುತ್ತೀರೋ ನಿಮಗೇ ಬಿಟ್ಟಿದ್ದು. ದಿನಕ್ಕೆ ಕೇವಲ 3 ಗಂಟೆಗಳ ಕಾಲ ವಿದ್ಯುತ್ ನೀಡುವ ಇವರು ನಿರಂತರವಾಗಿ ವಿದ್ಯುತ್ ಹೇಗೆ ನೀಡುತ್ತಾರೆಂಬುದನ್ನು ನೀವೇ ಊಹಿಸಿಕೊಳ್ಳಿ.

ನಮ್ಮ ಸರ್ಕಾರದ ಇಂಧನ ಸಚಿವರು ಇನ್ನೈದು ವರ್ಷಗಳಲ್ಲಿ ವಿದ್ಯುತ್ ಸಮಸ್ಯೆ ಸರಿಮಾಡುತ್ತೇವೆಂದು ಸಹ ಇತ್ತೀಚೆಗೆ ಹೇಳಿಕೆಯನ್ನೂ ಸಹ ನೀಡಿದ್ದರು. ನಮ್ಮ ಸರ್ಕಾರ ಅದೆಲ್ಲೆಲ್ಲೋ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುತ್ತಿದೆ, ಎಷ್ಟೋ ವಿದ್ಯುತ್ ಖರೀದಿ ಮಾಡಿದೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದರು. ಆದರೆ ಈಗ ಇಂಥಹಾ ವಿದ್ಯುತ್ ಸಂಬಂಧಿತ ಹೇಳಿಕೆಗಳಿಗೆ ಈಗ ಸ್ವಲ್ಪ ವಿರಾಮ ಸಿಕ್ಕಿದೆ. ಏಕೆಂದರೆ ಅವರು ರಾಜೀನಾಮೆ ನೀಡಿದ್ದಾರಲ್ಲಾ. ಮಂತ್ರಿಯಾಗಿಯೇ ಮುಂದುವರೆದಿದ್ದರೆ ಇನ್ಯಾವ ಪುಕ್ಕಟೆ ಭರವಸೆಗಳನ್ನು ನೀಡುತ್ತಿದ್ದರೋ ನಮಗಂತೂ ತಿಳಿದಿಲ್ಲ.

ಕಂಕ್ಲೂಷನ್ : ಸ್ವಾಮಿ ನಮಗೆ ನೀವು ನಿರಂತರವಾಗಿ ವಿದ್ಯುತ್ ನೀಡದಿದ್ದರೂ ಪರವಾಗಿಲ್ಲ, ನಿಯಮಿತವಾಗಿ ನೀಡಿ, ತಮ್ಮಿಚ್ಚೆ ಬಂದಂತೆ ವಿದ್ಯುತ್ ಕಡಿತಗೊಳಿಸದೆ ರಾಜ್ಯದ ರೈತರ, ಕಾರ್ಮಿಕರ, ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪೂರೈಕೆ ಮಾಡಿ. ಸುಮ್ಮನೆ ನಿಮಗಿಷ್ಟ ಬಂದಂತೆ ಪೊಳ್ಳು ಭರವಸೆಗಳನ್ನು ನೀಡದೆ, ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವುದನ್ನು ಮನದಲ್ಲಿಟ್ಟುಕೊಂಡು ನಿರಂತರವಾಗಿ ಬೊಗಳೆ ಬಿಡದೆ ಇದ್ದದ್ದನ್ನು ಪೂರೈಕೆ ಮಾಡಿ ಎಂಬುದು ಜನತೆಯ ಆಶಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X