ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚಾವತಾರಿ ಅಧಿಕಾರಿಗೆ ಸಾರ್ವಜನಿಕರ ಗೂಸಾ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Shirastedar Prasanna Kumar
ರಾಮನಗರ, ಫೆ. 15 : ಸರ್ಕಾರಿ ಕೆಲಸ ದೇವರ ಕೆಲಸವೆಂದು ಹೇಳುತ್ತಾರೆ, ಕೆಲವರು ಈ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ ಮತ್ತೆ ಕೆಲವರು ಕಾಂಚಾಣಂ ಕಾರ್ಯಸಿದ್ದಿ ಎಂಬಂತೆ ಹಣ ನೀಡಿದರೆ ಮಾತ್ರ ಸರ್ಕಾರಿ ಕೆಲಸ ಎನ್ನುವಂತೆ ಕಾರ್ಯನಿರ್ವಹಿಸುತ್ತಾರೆ. ಈ ಮಾತಿಗೆ ನಿದರ್ಶನವೆಂಬಂತೆ ರಾಮನಗರ ಜಿಲ್ಲೆ ಮಾಗಡಿಯ ಶಿರಸ್ತೇದಾರ್ ಪ್ರಸನ್ನಕುಮಾರ್ ಲಂಚಾವತಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಗ್ರಾ.ಪಂ. ಚುನಾವಣೆ ಮೀಸಲು ಪಟ್ಟಿಯನ್ನ ತಮಗಿಷ್ಟ ಬಂದ ರೀತಿಯಲ್ಲಿ ತಿದ್ದಿದ್ದಾರೆಂದು ಆರೋಪಿಸಿ ಸಾರ್ವಜನಿಕರೇ ಸರ್ಕಾರಿ ಕಛೇರಿಗೆ ತೆರಳಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಕರ್ತವ್ಯ ಲೋಪದ ಮೇಲೆ ಜಿಲ್ಲಾಧಿಕಾರಿ ಚಂದ್ರಶೇಖರಯ್ಯ ಈಗಾಗಲೇ ಶಿರಸ್ತೇದಾರ್ ಅಮಾನತ್ತಿಗೆ ಶಿಫಾರಸ್ಸು ಮಾಡಿದ್ದರೂ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದುದನ್ನು ಕಂಡ ಸಾರ್ವಜನಿಕರು ಲಂಚಾವತಾರಿ ಅಧಿಕಾರಿಗೆ ಧರ್ಮದೇಟು ನೀಡಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿಯ ತಾಲ್ಲೂಕ್ ಕಛೇರಿಯಲ್ಲಿ ಕಳೆದ 2 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಕ್ಕುದಾಖಲೆ ಶಿರಸ್ತೇದಾರ್ ಪ್ರಸನ್ನಕುಮಾರ್ ಮೊದಲಿನಿಂದಲೂ ಒಂದಲ್ಲಾ ಒಂದು ವಿವಾದದ ಕೇಂದ್ರ ಬಿಂದುವಾಗಿದ್ದವರೆ. ಗ್ರಾಮಪಂಚಾಯಿತಿ ಮೀಸಲು ಪಟ್ಟಿಯನ್ನು ಗೆಜೆಟ್ ಪ್ರಕಟಿಸುವ ಮುನ್ನವೇ ತಮಗಿಷ್ಟ ಬಂದವರಿಗೆ ನೀಡಿದ್ದಾರೆಂಬುದು ಅವರು ವಿರುದ್ಧದ ದೂರು.

ಕಂದಾಯ ಇಲಾಖಾ ನೌಕರರಾಗಿರುವ ಈಪ್ರಸನ್ನಕುಮಾರ್ ಹಕ್ಕು ಮತ್ತು ದಾಖಲೆ ಪತ್ರಗಳನ್ನು ನೀಡಲು ಮೊದಲಿನಿಂದಲೂ ಸಾರ್ವಜನಿಕರನ್ನ ಸತಾಯಿಸುತ್ತಲೇ ಇರುತ್ತಿದ್ದರು. ಟೇಬಲ್ ಕೆಳಗಿನ ವ್ಯವಹಾರವನ್ನೇ ಹೆಚ್ಚಾಗಿ ಮಾಡುತ್ತಿದ್ದ ಈ ಪ್ರಸನ್ನಕುಮಾರ್ ಬಗ್ಗೆ ಆಕ್ರೋಶ ಮನೆಮಾಡಿತ್ತು. ಗ್ರಾ.ಪಂ. ಮೀಸಲು ಪಟ್ಟಿಯಲ್ಲು ಹಣ ಪಡೆದು ವೈಟ್ನರ್ ಬಳಸಿ ತಮಗಿಷ್ಟ ಬಂದ ರೀತಿಯಲ್ಲಿ ಮೀಸಲು ಪಟ್ಟಿಯನ್ನೇ ತಿರುಚಿದ್ದಾರೆಂದು ಸ್ಥಳೀಯ ಮುಖಂಡ ಹುಲಿಕಟ್ಟೆ ಅಶೋಕ್ ಆರೋಪಿಸಿದ್ದಾರೆ.

ಈ ಶಿರಸ್ತೇದಾರ್‌ರ ಹಣದ ಹಪಾಹಪಿಯಿಂದ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೇ ಇಂದಿಗೂ ತಾಲ್ಲೂಕ್ ಕಛೇರಿಯಲ್ಲಿ ಹಾಗೆ ಉಳಿದಿವೆ. ಲಂಚಾವತಾರಿ ಅಧಿಕಾರಿಯ ಬಗ್ಗೆ ಮನೆ ಮಾಡಿದ್ದ ಆಕ್ರೋಶ ಸ್ಪೋಟಗೊಂಡಿದ್ದರಿಂದ ಸಾರ್ವಜನಿಕರೆಲ್ಲರು ಸೇರಿ ಕಛೇರಿ ಆವರಣದಲ್ಲೇ ಗೂಸಾ ನೀಡಿದರು.

ಈತನ ಲಂಚಗುಳಿತನದ ಬಗ್ಗೆ ದೂರುಗಳು ಹೆಚ್ಚಾಗುತ್ತಿದ್ದಂತೆ ಆರ್.ಆರ್.ಟಿ ವಿಭಾಗದಿಂದ ಚುನಾವಣೆ ವಿಭಾಗಕ್ಕೆ ಎತ್ತಂಗಡಿ ಮಾಡಲಾಯಿತು. ಅಲ್ಲಿಯೂ ತನ್ನ ಹಳೆಯ ಚಾಳಿ ಮುಂದುವರೆಸಿದ ಪ್ರಸನ್ನಕುಮಾರ್ ಲಕ್ಷ್ಮೀ ಕಟಾಕ್ಷ ಮಾಡಿಸಿಕೊಂಡು ಮೀಸಲು ಪಟ್ಟಿಯನ್ನೇ ತನಗಿಷ್ಟ ಬಂದ ರೀತಿಯಲ್ಲಿ ತಿರುಚಿದ್ದಾರೆಂದು ಕಲ್ಕರೆ ಶಿವಣ್ಣ ಆರೋಪಿಸಿದರು. ಯಾವ ಇಲಾಖೆಗೆ ಈ ಪ್ರಸನ್ನಕುಮಾರ್ ವಕ್ಕರಿಸಿದರು ಹಣದ ಜೋಳಿಗೆ ಹಿಡಿದುಕೊಂಡು ಕೈಒಡ್ಡುತ್ತಿದ್ದರೆಂಬುದು ಸಾರ್ವಜನಿಕರ ಆರೋಪ.

ಪ್ರತಿಭಟನೆ : ಕರ್ತವ್ಯ ನಿರತ ಅಧಿಕಾರಿ ಪ್ರಸನ್ನಕುಮಾರ್ ಮೇಲೆ ಹಲ್ಲೆ ಖಂಡಿಸಿ ಜಿಲ್ಲಾ ಕಂದಾಯ ನೌಕರರು ಸಾಮೂಹಿಕವಾಗಿ ರಜೆ ಹಾಕಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮರಿದೇವರು, ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಗುರುಲಿಂಗಯ್ಯ, ಉಪಾಧ್ಯಕ್ಷ ಹರ್ಷ, ಮಾಗಡಿ ತಾ. ಅಧ್ಯಕ್ಷ ಮಹಾಲಿಂಗಯ್ಯ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X