ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎತ್ತಿಗೆ ಜ್ವರ, ಎಮ್ಮೆಗೆ ಬರೆ ಹಾಕಿದ ಗೌಡರು!

By Prasad
|
Google Oneindia Kannada News

PSI Nagesh, Channapattana
ಚನ್ನಪಟ್ಟಣ, ಫೆ. 10 : ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬ ಮಾತಿದೆ. ಈ ಮಾತಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ಟೌನ್ ಪಿ.ಎಸ್.ಐ ನಾಗೇಶ್ ಅಮಾನತ್ತು ಪ್ರಕರಣ ಸಾಕ್ಷಿಯಾಗಿದೆ. ಬೆಳಗಾವಿ ಎಂ.ಇ.ಎಸ್ ಸಮಾವೇಶದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯವಾಗಿರುವುದನ್ನ ಖಂಡಿಸಿ ಕ.ರ.ವೇ ಕಾರ್ಯಕರ್ತರು ಬಿಜೆಪಿ ಸಚಿವ ರಾಮಚಂದ್ರೇಗೌಡರ ಕಾರಿನೆದುರು ಕಪ್ಪುಬಾವುಟ ಪ್ರದರ್ಶನ ಮಾಡಿದ್ದರೆಂಬ ಕಾರಣಕ್ಕೆ ಪಿ.ಎಸ್.ಐ ನಾಗೇಶ್‌ರವರ ತಲೆದಂಡವಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ಪ್ರತಿಭಟನಾಕಾರರ ಮೇಲಿನ ಕೋಪವನ್ನ ಎಸ್ಕಾರ್ಟ್ ಮಾಡುತ್ತಿದ್ದ ಪಿ.ಎಸ್.ಐ ನಾಗೇಶ್‌ರವರ ಸಸ್ಪೆಂಡ್ ಮಾಡುವಂತೆ ಹಿರಿಯಾಧಿಕಾರಿಗಳ ಮೇಲೆ ಒತ್ತಡ ತಂದು ಯಶಸ್ವಿಯಾಗಿದ್ದಾರೆ. ಬಿಜೆಪಿ ಸರ್ಕಾರದ ಸಚಿವ ರಾಮಚಂದ್ರೇಗೌಡರು ಹೋರಾಟಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಿಷ್ಠಾವಂತ ಪೋಲೀಸ್ ಅಧಿಕಾರಿಗಳನ್ನ ತಲೆದಂಡ ಮಾಡುವ ಮೂಲಕ ಅಪ್ರಜ್ಞಾವಂತಿಕೆ ಪ್ರದರ್ಶನ ಮಾಡುತ್ತಿದ್ದಾರೆಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ರೀ.. ರಾಮಚಂದ್ರೇಗೌಡರು ಕರೆಂಟ್ ಇದ್ದಾಗೆ ಮುಟ್ಟುದ್ರೆ ಕರೆಂಟ್ ಹೋಡೀತಾರೆ ಹುಷಾರಪ್ಪ ಅಂತ ಹೇಳಿದ್ದೇ ಆದ್ರೂ ಎಡವಟ್ಟಾಗೋಯ್ತು, ಆಗಿದ್ದಾಗೋಯ್ತು ಪಿ.ಎಸ್.ಐ ನಾಗೇಶ್‌ರವರ ಸಸ್ಪೆನ್ಶನ್ ಬೇಡ ಸರ್ ಅಂತ ಹೇಳಿದೆ... ಹೇಳಿದಾಕ್ಷಣ ಕೆಂಡಾಮಂಡಲರಾದ ಸಚಿವ ರಾಮಚಂದ್ರೇಗೌಡರು ಏಯ್....ಇಡೋ ಫೋನ್ ಅಂತ ಹೇಳಿ ಫೋನ್ ಕಟ್ ಮಾಡುದ್ರು" ಅಂತ ಬಿಜೆಪಿ ಮುಖಂಡ ಕೆ.ಎಸ್.ಐ.ಸಿ ಅಧ್ಯಕ್ಷ ಸಿ.ಪಿ.ಯೋಗೀಶ್ವರ್ ಅವರು ರಾಮಚಂದ್ರೇಗೌಡರ ರೌದ್ರಾವತಾರದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಂಗ್ಯವಾಗಿ ವರ್ಣಿಸಿದರು.

ನಿನ್ನೆ ನಡೆದ ಸರ್ಕಾರಿ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಚಿವರ ಕಾರಿನೆದುರು ಕ.ರ.ವೇ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶನ ನಡೆಸಿದ್ದಕ್ಕೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಾಗೇಶ್ ತಲೆದಂಡವಾಗಿದ್ದರ ಬಗ್ಗೆ ಮಾತನಾಡುತ್ತಾ ಸಚಿವರ ಮನೋಭಾವವನ್ನು ಪತ್ರಕರ್ತರಿಗೆ ಯೋಗೀಶ್ವರ್ ತಿಳಿಸಿದ್ದ ಪರಿ ಈ ರೀತಿಯಲ್ಲಿತ್ತು. ಸ್ವತಃ ಬಿಜೆಪಿ ಮುಖಂಡರಾದ ಯೋಗೀಶ್ವರ್‌ರವರೇ ಸಚಿವ ರಾಮಚಂದ್ರೇಗೌಡರ ನಡವಳಿಕೆಯನ್ನ ವ್ಯಂಗ್ಯವಾಗಿ ವ್ಯಾಖ್ಯಾನಿಸಿದರು. ಸಚಿವರ ಕೋಪ ಒಂದೆಡೆ ಮುಖಂಡರ ವ್ಯಂಗ್ಯ ಇನ್ನೊಂದೆಡೆ ಆದರೆ ಸಾಮಾನ್ಯ ಅಧಿಕಾರಿಗಳು ಮಾತ್ರ ಬಲಿಪಶುವಾಗುತ್ತಿರುವುದರಿಂದ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಎನ್ನುವಂತಾಗಿದೆ.

ಈ ನಡುವೆ ರಾಮನಗರ ಕಾರಾಗೃಹದಲ್ಲಿರುವ ಕ.ರ.ವೇ ಕಾರ್ಯಕರ್ತರನ್ನ ಕ.ರ.ವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಪರ ಹೋರಾಟಗಾರರನ್ನ ನಿರ್ಲಕ್ಷ್ಯ ಮಾಡಿದ ಗುಂಡೂರಾವ್ ಮತ್ತು ರಾಮಕೃಷ್ಣ ಹೆಗಡೆ ಸರ್ಕಾರ ಪತನವಾಯಿತು. ಈಗಲೂ ಕನ್ನಡಪರ ಹೋರಾಟಗಾರರನ್ನ ವಿರೋಧಿಸುತ್ತಿರುವ ಕೂಡ ಯಡಿಯೂರಪ್ಪನವರ ಸರ್ಕಾರ ಕೂಡ ಪತನವಾಗುವುದು ನಿಶ್ಚಿತವಾಗಿದೆ ಎಂದು ನಾರಾಯಣಗೌಡ ಹೇಳಿದರು.

ಚನ್ನಪಟ್ಟಣದ ಪಿ.ಎಸ್.ಐ ನಾಗೇಶ್‌ರವರ ಅಮಾನತಿಗೆ ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಇದೇ ರೀತಿ ಬಿಜೆಪಿ ಸರ್ಕಾರದ ಸಚಿವರುಗಳು ದಬ್ಬಾಳಿಕೆ ಪ್ರದರ್ಶಿಸುವುದನ್ನು ಬಿಡಬೇಕು. ಇಲ್ಲದಿದ್ದರೆ ಜಯಕರ್ನಾಟಕ ಸಂಘಟನೆ ಕೂಡ ಸರ್ಕಾರದ ವಿರುದ್ದ ಹೋರಾಟ ಮಾಡುವುದೆಂದು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಕಳೆದ ತಿಂಗಳಷ್ಟೆ ಅತ್ಯುತ್ತಮ ಪೋಲೀಸ್ ಅಧಿಕಾರಿ ಎಂದು ಜಿಲ್ಲಾಡಳಿತ ಪಿ.ಎಸ್.ಐ ನಾಗೇಶ್‌ರವರನ್ನ ಗುರುತಿಸಿತ್ತು. ಆದರೆ ಸರ್ಕಾರದ ಸಚಿವರ ಕೆಂಗಣ್ಣಿಗೆ ಗುರಿಯಾದ ಪಿ.ಎಸ್.ಐ ಅನಗತ್ಯವಾಗಿ ಮಾಡದ ತಪ್ಪಿಗೆ ಕರ್ತವ್ಯ ಲೋಪವೆಂಬ ಆರೋಪ ಹೊತ್ತಿಕೊಂಡು ಅಮಾನತ್ತು ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X