ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಿವೇಕಿ ಪ್ರೇಮಿಗಳಿಗೆ ಕೋರ್ಟ್ ಎಚ್ಚರ

By * ಶಾಮ್
|
Google Oneindia Kannada News

Justice VK Jain, Delhi HC
ನವದೆಹಲಿ, ಫೆ. 2 : ಯೌವನದ ಹೊಳೆಯಲ್ಲಿ ಈಜಾಟ ಆಡಿದರೆ ಓ ಹೆಣ್ಣೇ.. ಸೋಲು ನಿನಗೇ... ಎಂಬ ಸಿನಿಮಾ ಗೀತಸಾಹಿತ್ಯವನ್ನು ನೀವು ಆಲಿಸಿರಬಹುದು. ಈ ಕಿವಿವಾತುಗಳನ್ನು ಗೀತರಚನಕಾರರು ಹೆಣ್ಣಿನ ಪಾತ್ರವನ್ನು ಗಮನದಲ್ಲಿ ಇಟ್ಟುಕೊಂಡು ಬರೆದಿದ್ದರು. ಒಂದೊಮ್ಮೆ ಗಂಡನ್ನು ಕುರಿತು ಬರೆದಿದ್ದರೆ 'ಓ ಗಂಡೇ ಜೈಲು ನಿನಗೆ ಬಾಳೆಲ್ಲ ಗೋಳು ನಿನಗೆ' ಎಂದಿರುತ್ತಿತ್ತೋ ಏನೋ.

ಮದುವೆ ಆಗುವುದಾಗಿ ಭಾಷೆಕೊಟ್ಟು ಆನಂತರ ಪ್ರಿಯತಮೆಗೆ ಅಥವಾ ಪ್ರಿಯಕರನಿಗೆ ಕೈಕೊಡುವ ಅಮರ ಪ್ರೇಮಿಗಳ ಉದಾಹರಣೆಗಳು ನಮ್ಮ ಸಮಾಜದಲ್ಲಿ ಬೇಜಾನ್ ಕಾಣಸಿಗುತ್ತವೆ. ಕಿತ್ತುಹೋದ ಸಂಬಂಧಗಳಿಗೆ ಸಂಬಂಧಿಸಿದ ವಾರ್ತೆಗಳಲ್ಲಿ ಎಷ್ಟೋ ಸಲ ಯಾರಿಗೆ ಯಾರು ಕೈ ಕೊಟ್ಟರು ಎನ್ನುವ ಸತ್ಯ ಚಿತ್ತಾದ ಹೃದಯಕ್ಕೆ ಗೊತ್ತಾದೀತೇ ಹೊರತು ಅನ್ಯರಿಗೆ ಗೊತ್ತಾಗುವುದಿಲ್ಲ.

ಈ ಬಗೆಯ ಕೆಲವು ಪ್ರಕರಣಗಳಲ್ಲಿ ಸತ್ಯಾಸತ್ಯತೆ ನ್ಯಾಯಾಲಯಕ್ಕೆ ಗೊತ್ತಾಗಿಬಿಡುತ್ತದೆ. ಹೇಗೆಂದರೆ ಒಬ್ಬ ಹುಡುಗ ತನ್ನ ಗರ್ಲ್ ಫ್ರೆಂಡ್ ಪಕ್ಕ ಮಲಗಿರುತ್ತಾನೆ. ನಿನ್ನನ್ನೇ ಮದುವೆ ಆಗುತ್ತೇನೆ ಎಂದು ಮಧುರ ಗಳಿಗೆಯಲ್ಲಿ ಅವಳ ಕಿವಿಯಲ್ಲಿ ಉಸುರಿರುತ್ತಾನೆ. ಆನಂತರದ ದಿನಗಳಲ್ಲಿ ಏನೋ ಒಂದು ಸಬೂಬು ಹೇಳಿ ನಿನ್ನನ್ನು ಮದುವೆ ಆಗುವುದಕ್ಕೆ ಸಾಧ್ಯವಿಲ್ಲ, ನಾನು ನಿಸ್ಸಹಾಯಕ ಎಂದು ಹೇಳಿ ಕೈತೊಳೆದುಕೊಳ್ಳಲು ಪ್ರಯತ್ನಿಸುತ್ತಾನೆ.

ಆದರೆ ಅವನು ಅವಳ ಪಕ್ಕದಲ್ಲಿ ಮಲಗಿದುದಕ್ಕೆ ಪುರಾವೆಗಳು ಹೆಣ್ಣಿನ ಬಳಿ ಇರುತ್ತವೆ. ಪರಿತ್ಯಕ್ತಳಾದ ಅವಳು ಕೋಪೋದ್ರೇಕಳಾಗಿ ಪೊಲೀಸು ಠಾಣೆಗೆ ಹೋಗುತ್ತಾಳೆ, ಅಲ್ಲಿಂದ ಎಫ್ಐಆರ್ ಕೋರ್ಟಿಗೆ ಹೋಗಿ ಕೇಸಾಗುತ್ತದೆ. ಗಂಡು ಅಪರಾಧಿ ಸ್ಥಾನದಲ್ಲಿ ನಿಲ್ಲಲೇಬೇಕಾಗುತ್ತದೆ. ಶಿಕ್ಷೆ ಕಟ್ಟಿಟ್ಟ ಬುತ್ತಿ ಆಗಿ ಆತನ ಬದುಕೆಲ್ಲ ಹುಳಿಯಾಗುತ್ತದೆ.

ಇತ್ತೀಚೆಗೆ ಕರ್ನಾಟಕದಲ್ಲಿ ಇಂಥ ಒಂದು ಪ್ರಕರಣ ನಡೆದುದನ್ನು ನೀವು ನಮ್ಮ ಪತ್ರಿಕೆಯಲ್ಲೂ ಓದಿರಬಹುದು. ಬೆಂಗಳೂರಿನ ಪ್ರಿಯಾಂಕ ಎಂಬಾಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಬಸಿರು ತುಂಬಿ ಆಮೇಲೆ ಬೇರೊಬ್ಬ ಹುಡುಗಿಯ ಕುತ್ತಿಗೆಗೆ ತಾಳಿ ಬಿಗಿಯಲು ಹೋದ ಆನಂದ ಎಂಬ ಹುಡುಗ ಕೊನೆಗೆ ತಾಪತ್ರಯಕ್ಕೆ ಸಿಕ್ಕಿಕೊಂಡ. ಪ್ರಿಯಾಂಕ ಪೊಲೀಸರಿಗೆ ದೂರು ಕೊಟ್ಟದ್ದು ಮಾತ್ರವಲ್ಲ ನ್ಯಾಯಭಿಕ್ಷೆ ಕೋರಿ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ಹೂಡಿದ್ದಳು ಸಹ.

ಸ್ವಲ್ಪ ಹೆಚ್ಚೂಕಡಿಮೆ ಇಂಥದೇ ಒಂದು ಪ್ರಕರಣ ಮುಂಬೈನಲ್ಲಿ ನಡೆದಿದೆ. ಆ ಹುಡುಗನ ಹೆಸರು ನಿಖಿಲ್ ಪ್ರಸಾರ್. ಹುಡುಗಿಯ ಹೆಸರು ಬೇಡ. 'ನಿನ್ನನ್ನೇ ಮದುವೆ ಆಗುವೆ' ಎಂದು ಹೇಳಿ ನಿಖಿಲ್ ಆಕೆಯನ್ನು ಮುಂಬೈಯಿಂದ ದೆಹಲಿ ಕರೆದುಕೊಂಡುಹೋಗಿ ಸಪ್ತಪದಿ ತುಳಿಯುವ ಮುಂಚೆಯೇ ಪ್ರಸ್ತದ ಶಾಸ್ತ್ರ ಮುಗಿಸಿದ್ದ. ಒನ್ ಫೈನ್ ಡೇ, ಜಾತಿ ಕಾರಣ ಮುಂದಿಟ್ಟು ನಮ್ಮ ಮದುವೆ ಆಗುವುದು ಅಸಾಧ್ಯ ಎಂದು ಆಕೆಗೆ ಹೇಳಿಬಿಟ್ಟ.

ಆಕೆ ನ್ಯಾಯಾಲಯದ ಮೊರೆಹೊಕ್ಕಳು. ದೀರ್ಘ ವಿಚಾರಣೆ ನಂತರ ದೆಹಲಿ ಉಚ್ಚ ನ್ಯಾಯಾಲಯ ಇವತ್ತು ತನ್ನ ತೀರ್ಪನ್ನು ಹೊರಹಾಕಿತು. ನ್ಯಾಯಮೂರ್ತಿಗಳ ಪ್ರಕಾರ ಮದುವೆ ಆಗುವುದಾಗಿ ನಂಬಿಸಿ, ದೈಹಿಕ ಸುಖ ಅನುಭವಿಸಿ ಆಮೇಲೆ ನಿರಾಕರಿಸಿದರೆ ಅಂಥ ಪ್ರಕರಣಗಳನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಿನಗೆ ಜಾಮೀನು ಕೊಡಲಾಗುವುದಿಲ್ಲ, ಹೋಗಯ್ಯ ಎಂದು ನ್ಯಾಯಾಲಯ ನಿಖಿಲ್ ಗೆ ಹೇಳಿತು.

ಹುಡುಗನೊಂದಿಗೆ ಓರ್ವ ಹುಡುಗಿ ಪರಿಚಯ ಮಾಡಿಕೊಳ್ಳುತ್ತಾಳೆ. ಕ್ರಮೇಣ ಅವಳು ಪ್ರೀತಿ ಪ್ರೇಮದ ಕೊಳಕ್ಕೆ ಜಿಗಿಯುತ್ತಾಳೆ. ಹೀಗೆ ಸುಮ್ಮನೆ ಸ್ನೇಹ ಪರಿಚಯವಾದುದು ಪ್ರೇಮಕ್ಕೆ ತಿರುಗಿ ಒನ್ ಫೈನ್ ಮೊಮೆಂಟ್ ಆತನಿಗೆ ಆಕೆ ಶರಣಾಗುತ್ತಾಳೆ. ಏಕೆಂದರೆ, ಸುಖ ಅನುಭವಿಸುವ ಏಕೈಕ ಉದ್ದೇಶ ಅವಳಿಗೆ ಇರುವುದಿಲ್ಲ, ಆದರೆ ಮುಂದೊಂದು ದಿನ ಹುಡುಗ ತನ್ನ ಗಂಡನಾಗುತ್ತಾನೆ, ಆದ್ದರಿಂದ ಭಾವಿ ಪತಿಗೆ ನಿರಾಸೆ ಆಗಬಾರದು ಎಂಬ ಮನೋಭಾವ ಆಕೆಯಲ್ಲಿರುತ್ತದೆ ಎಂದು ದೆಹಲಿ ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಹುಡುಗನಿಗೆ ಅಂದರೆ ನಿಖಿಲ್ ಪ್ರಸಾರನಿಗೆ ಅಸಲು ಅವಳನ್ನು ಮದುವೆ ಆಗುವ ಉದ್ದೇಶವೇ ಇರಲಿಲ್ಲ ಎಂದು ನ್ಯಾಯದರ್ಶಿ ವಿಕೆ ಜೈನ್ ಅಭಿಪ್ರಾಯಪಟ್ಟರು. ಅವನು ಆಪಾಟಿ ಸಂಪ್ರದಾಯವಾದಿ ಆಗಿದ್ದಿದ್ದರೆ, ಪರಸ್ಪರ ಬೇರೆ ಜಾತಿ ಎಂದು ಗೊತ್ತಿದ್ದಾಗ್ಯೂ ಅವಳ ಜತೆ ದೈಹಿಕ ಸುಖಕ್ಕಾಗಿ ಯಾಕೆ ಹಾತೊರೆಯಬೇಕಾಗಿತ್ತು? ಎಂದು ಅವರು ಪ್ರಶ್ನಿಸಿದರು. ನಿಖಿಲನನ್ನು ಕೋರ್ಟು ಈಗ ರೇಪಿಸ್ಟ್ ಅಂದರೆ ಅತ್ಯಾಚಾರಿ ಎಂದು ಪರಿಗಣಿಸಿದೆ. ಇದು ಇವತ್ತಿನ ದೆಹಲಿ ಕೋರ್ಟು ವಾರ್ತೆಯ ಸಾರಾಂಶ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X