ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್ ದಾಳಿ ಖಂಡಿಸಿ ಅಲ್ಪಸಂಖ್ಯಾತರ ಪ್ರತಿಭಟನೆ

By * ಶಿಜು ಪಾಶಾ, ಶಿವಮೊಗ್ಗ
|
Google Oneindia Kannada News

Church attack (file photo)
ಶಿವಮೊಗ್ಗ, ಫೆ.2 : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಯುತ್ತಿದ್ದು, ಇದರಿಂದಾಗಿ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿಯವರಿಗೆ ಶಿಫಾರಸ್ಸು ಮಾಡುವಂತೆ ಶಿವಮೊಗ್ಗ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯಕರ್ತರು ಸೋಮವಾರ ಮಿನಿ ವಿಧಾನಸೌಧದಲ್ಲಿ ನೂತನವಾಗಿ ಆರಂಭವಾದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ಬಟ್ಕಳ, ಮೈಸೂರು, ಮೊಣಕಾಲ್ಮೂರು ಇನ್ನೂ ಮುಂತಾದೆಡೆ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಪ್ರಾರ್ಥನಾ ಮಂದಿರಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ, ಪ್ರತಿಮೆಗಳನ್ನು ಧ್ವಂಸ ಮಾಡಿ, ಪ್ರಾರ್ಥನಾ ಮಂದಿರಗಳಿಗೂ ಮತ್ತು ಬೈಬಲ್ ಗ್ರಂಥಗಳಿಗೆ ಬೆಂಕಿ ಹಚ್ಚಿ ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸುವ ವಾತಾವರಣ ರಾಜ್ಯದಲ್ಲಿ ನಿರ್ಮಿಸುತ್ತಿದ್ದಾರೆ. ಈ ಎಲ್ಲಾ ಸಂದರ್ಭಗಳಲ್ಲೂ ಅಲ್ಪಸಂಖ್ಯಾತರ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿ ಪದೇ ಪದೇ ದಾಳಿ ನಡೆಸುತ್ತಿರುವುದರಿಂದ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ ಸಮುದಾಯದವರು ನೆಮ್ಮದಿಯಿಂದ ಜೀವನ ನಡೆಸಲು ತೊಂದರೆಯುಂಟಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಮಾಜದಲ್ಲಿ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಜೊತೆಗೆ, ಸಮಾಜ ಸೇವೆಯಲ್ಲಿ ಶಾಂತರೀತಿಯಿಂದ ಸೇವೆ ಸಲ್ಲಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಚರ್ಚ್‌ಗಳ ಮೇಲೆ ನಿರಂತರವಾಗಿ ಕಿಡಿಗೇಡಿಗಳು ದಾಳಿ ನಡೆಸಿ, ಪ್ರಾರ್ಥನಾ ಮಂದಿರಗಳನ್ನು ಹಾಡುಗೆಡವುತ್ತಿದ್ದು, ರಾಜ್ಯ ಸರ್ಕಾರ ತನ್ನ ಅಸಮರ್ಥತತೆಯನ್ನು ತೋರಿಸುತ್ತಿದ್ದು, ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳು ಜವಾಬ್ದಾರಿವಹಿಸಿಕೊಂಡು ರಾಜ್ಯದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು. ಇದೇ ರೀತಿ ದಾಳಿ ಮುಂದುವರೆದಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸಲು ಅಸಮರ್ಥವಾಗಿರುವ ರಾಜ್ಯಸರ್ಕಾರವನ್ನು ವಜಾಗೊಳಿಸುವಂತೆ ನಗರ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ಕಾರ್ಯಕರ್ತರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಿವಮೊಗ್ಗ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಮರಿಯಪ್ಪ, ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ, ಮಾರ್ಟೀಸ್ ಕಿರಣ್ ಫರ್ನಾಂಡೀಸ್, ಸಯ್ಯದ್ ಅಡ್ಡು, ಯೇಸುದಾಸ್, ಜಮೀಲಾ ಖಾನಂ, ಎಸ್.ರವಿಕುಮಾರ್, ಇಕ್ಕೇರಿ ರಮೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X