ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆವ್ವದ ಕಾಟಕ್ಕೆ ಶಿವಮೊಗ್ಗ ಡಿಸಿ ಗಡಗಡ

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

Chandika homa at Mini Vidhana soudha in Shivamogga
ಶಿವಮೊಗ್ಗ, ಜ. 22 : ಮೊನ್ನೆ ಮೊನ್ನೆಯಷ್ಟೇ ಮುಖ್ಯಮಂತ್ರಿಗಳ ಅಮೃತಹಸ್ತದಿಂದ ಉದ್ಘಾಟನೆಗೊಂಡ ಮಿನಿವಿಧಾನಸೌಧದಲ್ಲಿ ದೆವ್ವಗಳ ಕಾಟ ಆರಂಭವಾಗಿದೆ. ಇಡೀ ಮಿನಿ ವಿಧಾನಸೌಧ ಕಟ್ಟಡದ ವಾಸ್ತು ಸರಿಯಿಲ್ಲ ಎಂಬ ಚರ್ಚೆಗಳು ಅಧಿಕಾರಿಗಳ ವಲಯದಲ್ಲಿ ಗಂಭೀರವಾಗಿ ನಡೆಯುತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆ ತಮ್ಮ ಸ್ವಂತ ಖರ್ಚಿನಲ್ಲಿ ಹೊಸ ಮಿನಿ ವಿಧಾನಸೌಧದಲ್ಲಿ ಗುರುವಾರ ರಾತ್ರಿ ಗುಪ್ತವಾಗಿ ಚಂಡಿಕಾಹೋಮ ಕೈಗೊಂಡ ಘಟನೆಯೂ ನಡೆದಿದೆ.

ಈಗ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ಕಟ್ಟಲು ಆಸಕ್ತಿ ತೋರಿಸಿದ್ದರು. ಅಲ್ಲಿಂದ ಆರಂಭವಾದ ಮಿನಿ ವಿಧಾನಸೌಧದ ಕಲ್ಪನೆ ಇದೀಗ ಅತ್ಯಾಕರ್ಷಕ ಕಟ್ಟಡವಾಗಿ ಶಿವಮೊಗ್ಗ ಜನರ ಮುಂದಿದೆ. ಈ ಕಟ್ಟಡದಲ್ಲಿ ಮೊದಲಿಗೆ ಜಿಲ್ಲಾಧಿಕಾರಿಗಳ ಕಛೇರಿಯನ್ನು ಸ್ಥಳಾಂತರಗೊಳಿಸಲಾಗುತ್ತಿದ್ದು, ಜ.25ರ ಸೋಮವಾರದಿಂದ ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆ ಈ ನೂತನ ಮಿನಿ ವಿಧಾನಸೌಧಕ್ಕೆ ಕಾಲಿಡಲಿದ್ದಾರೆ. ಆದರೆ, ಈ ಮಿನಿ ವಿಧಾನಸೌಧಕ್ಕೆ ವಾಸ್ತು ಸಮಸ್ಯೆಯಿದೆ ಎಂಬ ತಜ್ಞರ ಮಾಹಿತಿ ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆಯವರಿಗೆ ಸಾಕಷ್ಟು ತಲ್ಲಣಗೊಳಿಸಿದೆ.

ಕಳೆದ ಜ.8ರಂದು ಬಹಳ ವಿಜೃಂಭಣೆಯಿಂದ ಉದ್ಘಾಟನೆಗೊಂಡ ಶಿವಮೊಗ್ಗದ ನೂತನ ಮಿನಿ ವಿಧಾನಸೌಧ ತನ್ನ ವಾಸ್ತುವಿನ ಸಮಸ್ಯೆಯಿಂದಾಗಿ ಅಧಿಕಾರಿಗಳ ವಲಯದಲ್ಲಿ ಸಾಕಷ್ಟು ಗಾಸಿಪ್‌ಗಳನ್ನು ಹುಟ್ಟುಹಾಕಿವೆ. ಮಿನಿ ವಿಧಾನಸೌಧದಲ್ಲಿ ವಾಸ್ತುವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ. ಹಾಗಾಗಿ, ಮಿನಿ ವಿಧಾನಸೌಧದಲ್ಲಿ ಆರಂಭವಾಗುವ ಯಾವುದೇ ಅಭಿವೃದ್ಧಿ ಕೆಲಸಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಲಿವೆ. ವಾಸ್ತು ಸಮಸ್ಯೆಯನ್ನು ಬಗೆಹರಿಸಿಕೊಳ್ಳದಿದ್ದ ಪಕ್ಷದಲ್ಲಿ ಜಿಲ್ಲಾಧಿಕಾರಿಯಾದಿಯಾಗಿ ಈ ಮಿನಿ ವಿಧಾನಸೌಧದಲ್ಲಿ ಕೆಲಸ ಮಾಡುವ ಎಲ್ಲಾ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ ಒಂದಲ್ಲಾ ಒಂದು ಸಮಸ್ಯೆಯಲ್ಲಿ ಸಿಲುಕಿಕೊಳ್ಳಲಿದ್ದಾರೆ ಎಂದು ವಾಸ್ತು ತಜ್ಞರೊಬ್ಬರು ಹೇಳಿರುವುದು ಅಕ್ಷರಶಃ ಜೇನುಗೂಡಿಗೆ ಕಲ್ಲೆಸೆದಂತಾಗಿದೆ.

ಈ ಚರ್ಚೆಗಳನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆ ಕೆಲ ಅಧಿಕಾರಿಗಳ ಸಹಕಾರದೊಂದಿಗೆ ತಾವೇ ಹಣವನ್ನು ಖರ್ಚು ಮಾಡಿ ಮಿನಿ ವಿಧಾನಸೌಧದ ಒಳಗೆ ಗುಪ್ತವಾಗಿ ಗುರುವಾರ ರಾತ್ರಿ ಚಂಡಿಕಾಹೋಮ ಸೇರಿದಂತೆ ಹಲವು ಹೋಮಗಳನ್ನು ಮಾಡಿಸಿದ್ದು ಬಹಿರಂಗಗೊಂಡಿದೆ. ಈ ಹೋಮಗಳನ್ನೆಲ್ಲಾ ವಾಸ್ತುದೋಷವನ್ನು ನಿವಾರಿಸಲು ಮಾಡಲಾಗಿದೆ ಎಂಬ ಸುದ್ದಿಗಳು ಹೊರಬಿದ್ದಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಪಂಕಜ್‌ಕುಮಾರ್ ಪಾಂಡೆ ಯಾವುದೇ ಸಮಜಾಯಿಷಿಯನ್ನು ಕೊಡಲು ತಯಾರಿಲ್ಲ.

ಈಗ ಮಿನಿ ವಿಧಾನಸೌಧ ನಿರ್ಮಾಣಗೊಂಡಿರುವ ಸ್ಥಳದಲ್ಲಿ ಬ್ರಿಟೀಷರ ಕಾಲದಿಂದಲೂ ಜಿಲ್ಲಾಧಿಕಾರಿ ಕಛೇರಿ ಸೇರಿದಂತೆ ಹಲವು ಕಛೇರಿಗಳಿದ್ದವು. ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಕೆಂಪು ಹೆಂಚಿನ ಸಿಮೆಂಟ್ ಕಟ್ಟಡವನ್ನು ಕೆಡವಿ, ಅಲ್ಲಿ ಮಿನಿ ವಿಧಾನಸೌಧವನ್ನು ನಿರ್ಮಿಸುವ ಯೋಜನೆ ರೂಪಿಸಲಾಯಿತು. ಹಳೇ ಜಿಲ್ಲಾಧಿಕಾರಿಗಳ ಕಟ್ಟಡ ವಾಸ್ತುವಿನ ವಿಷಯದಲ್ಲಿ ಬಲವಾಗಿತ್ತು. ಆದರೆ, ಮಿನಿ ವಿಧಾನಸೌಧವನ್ನು ಈ ಹಳೇ ಜಿಲ್ಲಾಧಿಕಾರಿಗಳ ಕಟ್ಟಡಕ್ಕೆ ವಿರುದ್ಧ ದಿಕ್ಕಿನಲ್ಲಿ ನಿರ್ಮಿಸಲಾಗಿರುವುದು ಸಮಸ್ಯೆಗಳಿಗೆ ಕಾರಣವೆಂದು ಹೇಳಲಾಗುತ್ತಿದೆ. ಹಳೇ ಜಿಲ್ಲಾಧಿಕಾರಿಗಳ ಕಟ್ಟಡದಿಂದ ಮೊತ್ತಮೊದಲಿಗೆ ಜಿಲ್ಲಾಧಿಕಾರಿಗಳ ಕಛೇರಿ ಹೊರಕ್ಕೆ ಬಂತು. ಈ ಡಿಸಿ ಕಛೇರಿಯನ್ನು ಬಾಲರಾಜ್ ಅರಸ್ ರಸ್ತೆಯಲ್ಲಿ ನ್ಯಾಯಾಲಯದ ಪಕ್ಕದಲ್ಲಿ ನಿರ್ಮಿಸಲಾಯಿತು. ಆದರೆ, ಹಳೇ ಜಿಲ್ಲಾಧಿಕಾರಿಗಳ ಕಟ್ಟಡದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಕಛೇರಿ, ಆಹಾರ ಮತ್ತು ನಾಗರೀಕ ಇಲಾಖೆಯ ಕಛೇರಿ, ಗ್ರಾಹಕರ ಕಛೇರಿ, ಸರ್ವಶಿಕ್ಷಣ ಅಭಿಯಾನ ಕಛೇರಿ ಸೇರಿದಂತೆ ಹಲವು ಕಛೇರಿಗಳಿದ್ದವು. ಆದರೆ, ನಂತರದ ದಿನಗಳಲ್ಲಿ ಈ ಕಟ್ಟಡವನ್ನು ಬಳಸಲು ಸಾಧ್ಯವೇ ಇಲ್ಲವೆಂದಾದಾಗ ನೆಲಕ್ಕುರುಳಿಸಲಾಯಿತು. ಮಿನಿ ವಿಧಾನಸೌಧದ ಕಲ್ಪನೆ ಸುಮಾರು ವರ್ಷಗಳಷ್ಟು ಹಳೆಯದು. ಆದರೆ, ಅದು ಸಾಕಾರಕ್ಕೆ ಬರಲು ಹತ್ತು ಹಲವು ವರ್ಷಗಳೇ ಹಿಡಿದವು. ಆರಂಭದಲ್ಲಿ 5 ಕೋಟಿ ರೂ.ಗಳ ಕಾಮಗಾರಿ ವೆಚ್ಚವನ್ನು ಅಂದಾಜಿಸಲಾಗಿತ್ತು. ಆದರೆ, ಮಿನಿ ವಿಧಾನಸೌಧದ ಸಂಪೂರ್ಣ ಕಾಮಗಾರಿ ಮುಗಿದಾಗ ಅದರ ಅಂದಾಜು ವೆಚ್ಚ 6.5 ಕೋಟಿ ರೂ. ಆಗಿತ್ತು.

ಹೀಗೆ, ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ರಾಜ್ಯ ಸರ್ಕಾರ ಮಿನಿ ವಿಧಾನಸೌಧ ನಿರ್ಮಿಸಿದೆ. ಮಿನಿ ವಿಧಾನಸೌಧದಲ್ಲಿ ವಾಸ್ತು ಸರಿಯಿಲ್ಲ. ಅಲ್ಲಿ ದೆವ್ವಗಳ ಕಾಟವಿದೆ ಎಂಬ ಯಾರೋ ಹೇಳಿದ ಮಾತನ್ನು ಕೇಳಿ, ಓರ್ವ ಜಿಲ್ಲಾಧಿಕಾರಿ ಇಂಥದ್ದೊಂದು ಅಂಧಶ್ರದ್ಧೆಗೆ ಬೀಳಬಾರದಿತ್ತು. ಜಿಲ್ಲಾಧಿಕಾರಿಯಂತಹ ಐಎಎಸ್ ಓದಿರುವ ವ್ಯಕ್ತಿಯೇ ಹೀಗೆ ಅಂಧಶ್ರದ್ಧೆಯಲ್ಲಿ ಮುಳುಗಿ ಕುಳಿತಿರುವಾಗ ಸಾಮಾನ್ಯ ಜನರ ಪರಿಸ್ಥಿತಿ ಅರ್ಥಮಾಡಿಕೊಳ್ಳಬಹುದೇನೋ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X