ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಗಿ ಜಿಗಿಯುತ ನಲಿ ಗಗನದ ಬಯಲಲಿ

By * ಚಿದಂಬರ ಬೈಕಂಪಾಡಿ, ಮಂಗಳೂರು
|
Google Oneindia Kannada News

International kite competion in Mangaluru
ಮಂಗಳೂರು ಹೊರವಲಯದ ಪಣಂಬೂರು ಸಮುದ್ರಕಿನಾರೆಯಲ್ಲಿ ಭಾನುವಾರ ಲಕ್ಷೋಪ ಲಕ್ಷ ಜನಜಾತ್ರೆ. ಬಾನಂಗಳದಲ್ಲಿ ಬಣ್ಣಬಣ್ಣದ ಗಾಳಿಪಟಗಳ ಚಿತ್ತಾರ. ಇದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಒಂದು ಝಲಕ್. ಜಗತ್ತಿನ ಹಲವು ದೇಶಗಳನ್ನು ಪ್ರತಿನಿಧಿಸುತ್ತಿದ್ದ ಗಾಳಿಪಟ ಹಾರಾಟದ ಪರಿಣತರು ತಮ್ಮ ತಮ್ಮ ದೇಶಗಳ ಗಾಳಿಪಟಗಳನ್ನು ಬಾನಂಗಳಕ್ಕೆ ಹಾರಿಬಿಟ್ಟರೆ ಭಾರತೀಯರೂ ತಾವೇನೂ ಕಡಿಮೆಯಿಲ್ಲ ಎನ್ನುವಂತೆ ಟೀಂ ಮಂಗಳೂರು ತಂಡದ ಸಾರಥ್ಯದಲ್ಲಿ ಬಗೆಬಗೆಯ ಗಾಳಿಪಟಗಳನ್ನು ಹಾರಿಬಿಟ್ಟರು.

ತುಳು ನಾಡಿನ ಭೂತಾರಾಧನೆಯನ್ನು ಹೋಲುವ ಬೃಹತ್ ಗಾಳಿಪಟ ಬಾನಂಗಳದಲ್ಲಿ ಮೋಡಿಮಾಡಿದ್ದಂತು ನಿಜ. ಪಣಂಬೂರು ಬೀಚ್ ಪ್ರವಾಸೊದ್ಯಮ ಅಭಿವೃದ್ದಿ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ಆಹಾರೋತ್ಸವ ಕೂಡಾ ಗಾಳಿಪಟ ಉತ್ಸವಕ್ಕೆ ಪೂರಕವಾಗಿತ್ತು. ಮೀನಿನ ಸುಮಾರು ಐವತ್ತಕ್ಕೂ ಹೆಚ್ಚು ವಿವಿಧ ಖಾದ್ಯಗಳನ್ನು ಸವಿಯುವ ಅವಕಾಶವಿತ್ತು. ಸಿಗಡಿ, ಬೊಂಡಾಸ್, ಮಾಂಜಿ ಮುಂತಾದ ಮೀನುಗಳಲ್ಲದೆ ಕರಾವಳಿಯ ತಿನಿಸುಗಳಾದ ಮೂಡೆ, ಪತ್ರೊಡೆ ಕೂಡಾ ಲಭ್ಯವಿತ್ತು.

ಸಾಮಾನ್ಯವಾಗಿ ಪಣಂಬೂರು ಸಮುದ್ರಕಿನಾರೆ ಶನಿವಾರ ಮತ್ತು ಭಾನುವಾರ ಜನಜಾತ್ರೆಯಿಂದ ತುಂಬಿ ತುಳುಕುತ್ತಿರುತ್ತದೆ. ಗಾಳಿಪಟ ಉತ್ಸವದ ಪ್ರಯುಕ್ತ ಸಮುದ್ರಕಿನಾರೆಯಲ್ಲಿ ಸೇರಿದ್ದ ಜನಸಂಖ್ಯೆ ಸುಮಾರು ಒಂದು ಲಕ್ಷಕ್ಕೂ ಅಧಿಕವಾಗಿತ್ತು. ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗುವ ಬೀಚ್ ಉತ್ಸಕ್ಕೆ ಇಷ್ಟು ಪ್ರಮಾಣದಲ್ಲಿ ಬೀಚ್‌ನಲ್ಲಿ ಜನ ಸೇರುತ್ತಿದ್ದರು. ಆದರೆ ಈಬಾರಿ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದು ಜಮಾಯಿಸಿತ್ತು ಜನಜಂಗುಳಿ. ಎರಡು ಕಿ.ಮೀ ಉದ್ದಕ್ಕೂ ವಾಹನಗಳ ಸಾಲು.

ನಿಜಕ್ಕೂ ಗಾಳಿಪಟಗಳನ್ನು ಹಾರಿಸುವ ಪರಿಪಾಟ ಹಳ್ಳಿಗಳಿಂದಲೂ ಮಾಯವಾಗುತ್ತಿದೆ. ಯಾಂತ್ರಿಕ ಬದುಕಿಗೆ ಒಗ್ಗಿಕೊಂಡಿರುವ ನಾವು ನಿಧಾನವಾಗಿ ನಮ್ಮ ಮೂಲತನವನ್ನೇ ಕಳೆದುಕೊಳ್ಳುತ್ತಿದ್ದೇವೆ. ಆದರೆ ಹಳ್ಳಿಗಾಡಿನ ಮಕ್ಕಳ ಆಟವೆಂದೇ ಕರೆಯಲಾಗುತ್ತಿದ್ದ ಗಾಳಿಪಟ ತಯಾರಿ ಹಾಗು ಅದನ್ನು ಆಗಸಕ್ಕೆ ಹಾರಿಬಿಟ್ಟು ಅದು ಬಾನಂಗಳದಲ್ಲಿ ಹಾರಾಡುವುದನ್ನು ನೋಡಿ ಮಜಾ ತೆಗೆದುಕೊಳ್ಳುತಿದ್ದ ದಿನಗಳು ಮರೆಯಾಗುತ್ತಿವೆ. ಈಗ ಗಾಳಿಪಟಕ್ಕೂ ಅಂತಾರಾಷ್ಟ್ರೀಯ ಮನ್ನಣೆ, ಜಾಗತಿಕಮಟ್ಟದಲ್ಲಿ ಗಾಳಿಪಟಗಳನ್ನು ಹಾರಿಸುವ ಕಲೆಗಾರಿಕೆ ಜನಪ್ರಿಯವಾಗುತ್ತಿದೆ. ಇದಕ್ಕೆ ಸಾಕ್ಷಿಯಾಯಿತು ಪಣಂಬೂರು ಸಮುದ್ರ ಕಿನಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X