ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತರಲ್ಲಿ ಹನ್ನೊಂದಾಗಲಿದೆಯೇ ಕರವೇ..?

|
Google Oneindia Kannada News

Karave contest from BBMP polls
ಕರ್ನಾಟಕ ರಕ್ಷಣಾ ವೇದಿಕೆ ಎಂಬ ಕನ್ನಡದ ದನಿಯೊಂದು ಅಧಿಕೃತವಾಗಿ ರಾಜಕೀಯ ಪಕ್ಷವಾಗಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಅಖಾಡಕ್ಕಿಳಿಯಲಿದೆ. ಒಂದು ದಶಕಗಳ ಕಾಲ ಕನ್ನಡ ನಾಡು ನುಡಿಗೆ ಹೋರಾಟ ನಡೆಸಿದ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಕನ್ನಡದ ನಾಡು, ನುಡಿ, ಭಾಷೆಗೆ ಅವಮಾನವಾದಾಗ, ಅನ್ಯಾಯವಾಗುತ್ತಿದೆ ಎಂದು ಕಂಡು ಬಂದಾಗ ಘನ ಸರಕಾರಕ್ಕಿಂತ ಮೊದಲು ಏರು ದನಿ ಹೋರಾಟ ನಡೆಸುತ್ತಿದ್ದ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಒಂದು ಪ್ರಾದೇಶಿಕ ಪಕ್ಷವಾಗಿ ರೂಪಾಂತರಗೊಂಡ ನಂತರ ಹಿಂದಿನ ಹೋರಾಟ ಮುಂದುವರೆಸುವುದೇ ? ಪ್ರಸ್ತುತ ರಾಜಕೀಯ ಸನ್ನಿವೇಶ ಎಷ್ಟು ಹದಗೆಟ್ಟು ಹೋಗಿದೆ ಎಂಬುದನ್ನು ಕರವೇ ನಾಯಕರಿಗೆ ವಿವರಿಸಬೇಕಿಲ್ಲ. ರಾಜಕಾರಣಿ ಮತ್ತು ರಾಜಕಾರಣ ಎಂದರೆ ಸ್ವಾರ್ಥಿಗಳು ? ಕೆಟ್ಟವರು ? ಸುಳ್ಳರು ? ಮೋಸಗಾರರು ? ಲಂಚಕೋರರು ? ಇವಿಷ್ಟು ಹಳೆಯ ನಾಮಧೇಯಗಳು. ಇತ್ತೀಚೆಗೆ ಈ ಪಟ್ಟಿಗೆ ಸೇರ್ಪಡೆಯಾಗಿರುವ ವಿಶೇಷ ಪದಗಳೆಂದರೆ, ಬ್ಲಡೀ ಬಾಸ್ಟರ್ಡ್, ಈಡಿಯಟ್ಸ್, ಲಂಪಟ ಇತ್ಯಾದಿ ಹಾಗೂ ಇತ್ಯಾದಿತ್ಯಾದಿ.

ಇಂತಹ ಕಲುಷಿತ ರಾಜಕೀಯದಲ್ಲಿ ಕನ್ನಡಕ್ಕಾಗಿಯೇ ಹುಟ್ಟಿ, ಆರಂಭದಿಂದ ಇಲ್ಲಿಯವರೆಗೂ ಕನ್ನಡಕ್ಕಾಗಿಯೇ ಹೋರಾಟ ನಡೆಸಿದ ಕರ್ನಾಟಕದ ರಕ್ಷಣಾ ವೇದಿಕೆ ಎಂಬ ಅಪ್ಪಟ ಕನ್ನಡಪರ ಸಂಘಟನೆ ರಾಜಕೀಯ ಪಕ್ಷವಾಗಿ ಪರಿವರ್ತನೆ ನಂತರವೂ ಎಂದಿನ ಕರವೇ ಆಗಿವೆ ಮುಂದುವರೆಯಲಿದೆಯಾ ? ಹೇಳಿ ಕೇಳಿ ರಾಜಕೀಯ, ಅಲ್ಲಿನ ಒತ್ತಡಗಳು, ತಂತ್ರಗಾರಿಕೆಗಳು, ಮತ ಪಡೆಯುವ ಗಿಮಿಕ್ ಗಳು, ಹುಸಿ ಭರವಸೆಗಳದ್ದೇ ದರ್ಬಾರು. ಹಾಗೆ ಹೇಳಿದರೆ ಮಾತ್ರ ಒಂದು ವ್ಯಕ್ತಿ, ಒಂದು ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ ಎನ್ನುವುದು ಕಾಲಕಾಲಕ್ಕೂ ಸಾಬೀತಾಗುತ್ತಲೇ ಬಂದಿದೆ ?

ಉದಾಹರಣೆ ತೆಗೆದುಕೊಂಡರೆ, ರೈತರ ಸಾಲ ಮನ್ನಾ ಮಾಡುವೆ ಎಂದು ಮತ ಪಡೆದುಕೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇತ್ತೀಚೆಗೆ ವಿಧಾನ ಪರಿಷತ್ ನಲ್ಲಿ ಏನು ಹೇಳಿದ್ರು ಎನ್ನುವುದು ಗೊತ್ತಿರುವ ಸಂಗತಿ. ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ವ್ಯಕ್ತಿ, ರೈತರ ಸಾಲ ಮನ್ನಾ ಮಾಡಲು ರೊಕ್ಕ ಎಲ್ಲಿಂದ ತರ್ಲಿ ಎಂದು ರಾಜಾರೋಷವಾಗಿ ಹೇಳಿದ ರೀತಿಯಿತ್ತಲ್ಲ ಅದು ಅತ್ಯಂತ ಖಂಡನೀಯ. ಯಾವ ರೈತರು ಸಾಲ ಮನ್ನಾ ಮಾಡಿ ಎಂದು ಕೇಳಿರಲಿಲ್ಲ. ಸಾಲ ಮನ್ನಾ ಮಾಡುವೆ ಎಂದು ಹೇಳಿದ ಮನುಷ್ಯನೇ, ಅದು ಆಗದು ಮಾತು ಎಂದು ನಾಚಿಕೆಬಿಟ್ಟು ಹೇಳುತ್ತಾನೆ ಎನ್ನುವುದಾದರೆ ರಾಜಕಾರಣಿ ಮಾತುಗಳನ್ನು ನಂಬುವುದಾದರೆ ಹೇಗೆ ಹೇಳಿ.

ರಾಜ್ಯದ ಜ್ವಲಂತ ಸಮಸ್ಯೆಗಳಾಗಿರುವ ಮಾರ್ಪಟ್ಟಿರುವ ಕಾವೇರಿ ನೀರು ವಿವಾದ, ಹೊಗೇನಕಲ್ ವಿವಾದ, ಬೆಳಗಾವಿ ಗಡಿ ಸಮಸ್ಯೆ, ಕಾಸರಗೋಡು ಗಡಿ ವಿವಾದ, ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಅದ್ಯತೆ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದವರಲ್ಲಿ ಕರವೇ ಪಾತ್ರವನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಕನ್ನಡಕ್ಕೆ ಅನ್ಯಾಯವಾಗಲು ನಮ್ಮ ಕನ್ನಡಪರ ಸಂಘಟನೆಳಲು ಬಿಡಲ್ಲ ಬಿಡಿ ಎನ್ನುವ ಹುಂಬ ಧೈರ್ಯ ನಮ್ಮಲ್ಲಿ ಕೂಡ ಮನೆ ಮಾಡಿತ್ತು. ಅನ್ಯ ಭಾಷಿಕರಿಂದ ಕೂಡಿರುವ ಬೆಂಗಳೂರಿನಲ್ಲಿ ಕರವೇ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಉಹಿಸಿಕೊಳ್ಳೋದು ಕಷ್ಟದ ಕೆಲಸ. ಕನ್ನಡೇತರರು ಇವತ್ತು ತಾವಾಯಿತು ತಮ್ಮ ಕೆಲಸವಾಯಿತು ಎಂದು ತೆಪ್ಪಗೆ ಇರುವುದೇ ಈ ಕನ್ನಡಪರ ಸಂಘಟನೆಗಳಿಂದ ಎನ್ನುವುದರಲ್ಲಿ ಸಂಶಯವಿಲ್ಲ.

ಕರವೇ ಅಧಿಕೃತವಾಗಿ ರಾಜಕೀಯ ಪಕ್ಷವಾಗಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಗಳಿಯಲಿದೆ ಎಂಬ ಸುದ್ದಿ ಲಕ್ಷಾಂತರ ಕನ್ನಡಿಗರಲ್ಲಿ ಕಳವಳ ಉಂಟು ಮಾಡಿದೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಕನ್ನಡಪರ ಕರವೇ ನೈಜ ಕರವೇ ಆಗಿ ಉಳಿಯಲಿದೆಯೇ ? ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹಾಗೂ ಅವರ ಕಾರ್ಯಕರ್ತರು ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವುದು ತಪ್ಪಲ್ಲ. ಅಧಿಕಾರದ ಲಾಲಸೆಗಾಗಿ ವೃತ್ತಿನಿರತ ರಾಜಕಾರಣಿಗಳಂತೆ ಹುಸಿ ಮಾತು, ತಂತ್ರಗಾರಿಕೆ, ಗಿಮಿಕ್ ಗಳು ಮಾಡಬಾರದು ಎನ್ನುವುದು ಕರವೇಯನ್ನು ಪ್ರೀತಿಸುವ ಅನೇಕ ಕನ್ನಡಿಗರ ಅಭಿಲಾಷೆಯಾಗಿದೆ.

ಆದರೆ, ಸುಳ್ಳು ಹೇಳುವವನಿಗೆ ಕಾಲ, ಭರವಸೆ ನೀಡುವವನೆ ಜಾಣ, ನಾನು ಆಯ್ಕೆಯಾದರೆ ನಿಮ್ಮಲ್ಲ ಕಷ್ಟ ನಷ್ಟಗಳನ್ನು ಬಗೆಹರಿಸುವೆ ಎಂದು ನಂಬಿಕೆ ಮೂಡಿಸಿ ಗೆದ್ದು ಬರುವುದು ಜನನಾಯಕನ ತಂತ್ರ. ಇಂತಹ ಚಕ್ರವ್ಯೋಹವನ್ನು ಬೇಧಿಸಲು ಕರವೇ ಶಕ್ತಿಯಿದೆಯೇ ? ಹೀಗೆ ಭರವಸೆ ನೀಡಿ ಗೆದ್ದು ಬಂದ ಕರವೇ ನಾಯಕರು ಕಷ್ಟಕಾರ್ಪಣ್ಯಕ್ಕೆ ದನಿಯಾಗಲಿದ್ದಾರೆಯೇ ? ಕರವೇ ಕೂಡ ಹತ್ತರಲ್ಲಿ ಹನ್ನೊಂದನೇ ಪಕ್ಷ ಆಗುವುದೆ ? ಆನೆಯಂತಿರುವ ಕರವೇ ಮಾನ ಅಡಿಕೆಗೆ ಹೋಗಬಾರದು ಅಲ್ಲವೇ. ಛೇ ಛೇ ಹಾಗಾಗದಿರಲಿ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X