ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಜಗೌ, ಹೆಗ್ಗಡೆಗೆ ಕರ್ನಾಟಕ ರತ್ನ

|
Google Oneindia Kannada News

Veerendra Heggade
ಬೆಂಗಳೂರು, ಜ.14:ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ದೇ.ಜವರೇಗೌಡ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ.

ನಾಡು, ನುಡಿ, ಜಾನಪದ, ಅನುವಾದ ಸಾಹಿತ್ಯ ಸೇರಿದಂತೆ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ವಿಶಿಷ್ಟ ಕೊಡುಗೆ ಪರಿಗಣಿಸಿ, 2008ನೇ ಸಾಲಿನ ಪ್ರಶಸ್ತಿಗೆ ದೇಜಗೌ ಅವರನ್ನು ಆಯ್ಕೆ ಮಾಡಲಾಗಿದೆ. ಸಮಾಜ ಸೇವೆ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆ ಪರಿಗಣಿಸಿ, 2009ನೇ ಸಾಲಿನ ಪ್ರಶಸ್ತಿಗೆ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ.

ಸರಕಾರ 1992ರಿಂದ ಈ ಪ್ರಶಸ್ತಿ ನೀಡುತ್ತಿದೆ. ನ್ಯಾ.ಡಾ. ವಿ.ಎಸ್. ಮಳೀಮಠ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ವೀರೇಂದ್ರ ಹೆಗ್ಗಡೆ ಹಾಗೂ ದೇಜಗೌಗೆ ಸರಕಾರ ಪ್ರಶಸ್ತಿ ಘೋಷಿಸಿದೆ. ದೇ.ಜವರೇಗೌಡ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ದೇ. ಜವರೇಗೌಡ, ಸಾಹಿತಿ, ಶಿಕ್ಷಣ ತಜ್ಞ ಹಾಗೂ ಕನ್ನಡ ಪರ ಹೋರಾಟಗಾರ. ಟಾಲ್‌ಸ್ಟಾಯ್ ಸೇರಿದಂತೆ ಹಲವು ಜಗದ್ವಿಖ್ಯಾತ ಸಾಹಿತಿಗಳ ಕೃತಿಗಳನ್ನು ಅನುವಾದದ ಮೂಲಕ ಕನ್ನಡಿಗರಿಗೆ ಪರಿಚಯಿಸಿದರು. ಮೈಸೂರು ವಿವಿ ಕನ್ನಡ ವಿಶ್ವಕೋಶಕ್ಕೆ ಇವರ ಕೊಡುಗೆ ಗಮನಾರ್ಹ.

ವಿವಿಯ ಜಾನಪದ ವಿಭಾಗಕ್ಕೆ ರೂಪುರೇಷೆ ನೀಡಿದ ದೇಜಗೌ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಕನ್ನಡ ವಿವಿಯ ನಾಡೋಜ ಮತ್ತಿತರ ಗೌರವ ಸಂದಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದು ವಿವಿಯ ಅತ್ಯುನ್ನತ ಸ್ಥಾನ ಅಲಂಕರಿಸಿದ ಅಪರೂಪದ ವ್ಯಕ್ತಿ.

ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಗ್ರಾಮೀಣಾಭಿವೃದ್ಧಿ ಯೋಜನೆ, ಸ್ವಉದ್ಯೋಗ ತರಬೇತಿ ನೀಡುವ ರುಡ್‌ಸೆಟ್‌ನ ರೂವಾರಿ ಮತ್ತು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ಡಾ.ವೀರೇಂದ್ರ ಹೆಗ್ಗಡೆ ಮನೆಮಾತಾಗಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಅವರು, ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನತೆಯ ಮರುವಸತಿಗೂ ನೆರವಾಗಿದ್ದಾರೆ. ಪದ್ಮಭೂಷಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X