ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗಾಯಿತರ ಮೇಲೆ ಗೌಡರಿಗೇಕಷ್ಟು ಪ್ರೀತಿ!

|
Google Oneindia Kannada News

ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಅವರ ಹೋರಾಟ ಮುಗಿಲು ಮುಟ್ಟಿದೆ. ಅವರ ಹೋರಾಟ ರಾಜ್ಯದ ಮನೆಮನೆಗೂ ತಲುಪಿದೆ ! ರಾಜ್ಯದ ಮುಖ್ಯಮಂತ್ರಿಯಾಗಿರುವ ವ್ಯಕ್ತಿಯೊಬ್ಬರಿಗೆ ಬ್ಲಡಿ ಬಾಸ್ಟರ್ಡ್, ನಾನ್ಸೆನ್ಸ್, ಬೋ....ಮಗ ಹೀಗೆ ಅನೇಕ ಪದ ಪ್ರಯೋಗಗಳನ್ನು ಮಾಡಿದ್ದಾರೆ. ಇರಲಿ, ಅವರು ದೇಶದ ಉನ್ನತ ಹುದ್ದೆ ಪ್ರಧಾನಮಂತ್ರಿ ಪೀಠ ಅಲಂಕರಿಸಿದವರು. ಯಡಿಯೂರಪ್ಪ ಅವರಿಗಿಂತ ವಯಸ್ಸಿನಲ್ಲಿ ಹಿರಿಯರಲ್ಲವೇ ?

ಆದರೆ, ಒಂದು ವಿಶೇಷ ಸಂಗತಿಯೆಂದರೆ, ಭಾನುವಾರ ನೈಸ್ ಕಚೇರಿ ಎದುರು ನಂತರ, ಸುವರ್ಣ ವಾಹಿನಿಯ ಸಂದರ್ಶನದಲ್ಲಿ ಮತ್ತು ನವದೆಹಲಿಯಲ್ಲಿ ಸೋಮವಾರ ಅವರು ಮಾತನಾಡಿದ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದ ಎಲ್ಲರಿಗೂ ಇದು ಪ್ರಶ್ನೆಯಾಗಿ ಕಾಡತೊಡಗಿದೆ ಎಂದು ಭಾವಿಸಿದ್ದೇನೆ. ಅದೆನೆಂದರೆ, ಇತ್ತೀಚೆಗೆ ಗೌಡರಿಗೆ ಲಿಂಗಾಯಿತರ ಬಗ್ಗೆ ವಿಶೇಷ ಕಾಳಜಿ ಉಂಟಾಗಿದೆ.

ಮಾತೆತ್ತಿದರೆ, ನೈಸ್ ವಶಪಡಿಸಿಕೊಳ್ಳುತ್ತಿರುವ ಭೂಮಿಯಲ್ಲಿ ಅನೇಕ ಲಿಂಗಾಯಿತರು ಇದ್ದಾರೆ. ಲಿಂಗಾಯಿತ ಮಹಿಳೆಯೊಬ್ಬಳು ನನ್ನ ಹತ್ತಿರ ಬಂದು ಗೊಳೋ ಅಂತ ಅತ್ತು ಕರೆದದ್ದು ನೋಡಿದ್ರೆ, ಕರುಳು ಕಿತ್ತು ಬರುತ್ತೆ. ಆ ಮಹಿಳೆ ವಿಧವೆ ಬೇರೆ, ಆಕೆ ಏನ್ಮಾಡಬೇಕು. ಮುಂದಿನ ಜೀವನ ಹೇಗೆ... ಹೀಗೆ ಮುಂದುವರೆಯುತ್ತೆ ಗೌಡರ ಲಿಂಗಾಯಿತರ ಮೇಲಿನ ಪ್ರೀತಿ. ಈ ದಿಢೀರ್ ಪ್ರೀತಿಗೇನು ಕಾರಣ ? ಬಿಬಿಎಂಪಿ ಚುನಾವಣೆಯೂ ಕಾರಣ ಇರಬಹುದಾ ?

ಚುನಾವಣೆ ಬಂದಾಗೆಲ್ಲ ದೇವೇಗೌಡರು ಹೀಗೆ ಹೋರಾಟಕ್ಕಿಳಿಯುವುದು ಸರ್ವೆ ಸಾಮಾನ್ಯ. ಅವರೊಬ್ಬ ಸಾಂದರ್ಭಿಕ ಸಮರವೀರ. ಹೀಗಾಗಿ ನೈಸ್ ವಿಷಯದಲ್ಲಿ ಅವರ ಹೋರಾಟ ಬಿಬಿಎಂಪಿ ಚುನಾವಣೆ ಎನ್ನುವುದು ಮೈಸೂರು ಸಂಸದ ಎಚ್ ವಿಶ್ವನಾಥ್ ಸ್ಪಷ್ಟ ಅಭಿಮತ. ಮಡಿಕೇರಿಯಲ್ಲಿ ಸೋಮವಾರ ಮಾತನಾಡಿದ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಗೌಡರು ಪಕ್ಷಕ್ಕೆ ಮೊದಲನೇ ಏಟು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಬಿಬಿಎಂಪಿ ಚುನಾವಣೆಯಲ್ಲಿ ಮೈತ್ರಿ ಅಸಾಧ್ಯ ಎಂದಿದ್ದು ಜೆಡಿಎಸ್ ಮುಖಂಡರಿಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲದಾಯಿತು. ಕೊನೆಯ ಹಂತದವರೆಗೂ ಕುಮಾರಸ್ವಾಮಿ ಅವರನ್ನು ಸಂಧಾನ ಕಳುಹಿಸಿದ ಗೌಡರಿಗೆ ಸಾರಿ ಎಂಬ ಉತ್ತರ ಸಿಕ್ಕಿತು. ಮುಂದೇನು ಎಂಬ ಚಿಂತೆ ಶುರುವಾಯಿತು.

ಇದರ ಜೊತೆಗೆ ನೈಸ್ ವಶಪಡಿಸಿಕೊಳ್ಳುತ್ತಿರುವ ಭೂಮಿಯ ಪಟ್ಟಿಯಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ಆದರೆ, ಗೌಡರು ನಿರ್ಧಿಷ್ಟವಾಗಿ ಲಿಂಗಾಯಿತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿರುವ ಮರ್ಮವಾದರೂ ಏನು ? ಒಂದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಿಂಗಾಯಿತ ಸಮುದಾಯಕ್ಕೆ ಸೇರಿದವರು, ಇದೀಗ ನಾನು ಮಾಡಿರುವ ಗುರುತರವಾದ ಆರೋಪ ಮುಂದೆ ಬರಲಿರುವ ಬಿಬಿಎಂಪಿ ಚುನಾವಣೆಗೆ ಹೊಡೆತಕೊಡಬಾರದು. ಆ ಕಾರಣಕ್ಕೆ ಲಿಂಗಾಯಿತರ ಹೆಸರು ಹೇಳುತ್ತಿರುಬಹುದು (ನೈಸ್ ವಶಪಡಿಸಿಕೊಳ್ಳುತ್ತಿರುವ ಭೂಮಿಯಲ್ಲಿ ಲಿಂಗಾಯಿತರು ಇರಬಹುದು) ಎನ್ನುವುದು ಒಂದೆಡೆಯಾದರೆ, ಲಿಂಗಾಯಿತ ರೈತರ ಹೆಸರಿನಲ್ಲಿ ಆ ಸಮುದಾಯ ಅನುಕಂಪ ಗಳಿಸುವುದು ಗೌಡರ ತಂತ್ರವಾಗಿರಬಹುದು. ಗೌಡರ ರಾಜಕೀಯ ಇತಿಹಾಸ ಗಮನಿಸಿದರೆ, ಅವರಾಡುವ ಯಾವ ಮಾತೂ ಕೂಡಾ ಹಗುರುವಾಗಿ ಪರಿಗಣಿಸುವಂತಿಲ್ಲ. ಅತ್ಯಂತ ಲೆಕ್ಕಾಚಾರದ ರಾಜಕಾರಣಿ ಆಗಿರುವ ಗೌಡರು, ಪ್ರತಿಭಾನ್ವಿತ ರಾಜಕಾರಣ ಎಂಬುದನ್ನು ಕೂಡಾ ಕಾಲಕಾಲಕ್ಕೆ ನಿರೂಪಿಸುತ್ತಾ ಬಂದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಾಸ್ಟರ್ಡ್ ಎಂಬ ಪದ ಬಳಿಕೆ ಮಾಡಿದ ಕೂಡಲೇ ಇಡೀ ಉತ್ತರ ಕರ್ನಾಟಕವೇ ಎದ್ದು ಕುಂತಿದೆ. ಸೋಮವಾರ ಇಡೀ ದಿನ ಉತ್ತರ ಕರ್ನಾಟಕ ಪ್ರತಿ ಜಿಲ್ಲೆಯಲ್ಲೂ ಗೌಡರ ವಿರುದ್ಧ ಪ್ರತಿಭಟನೆ, ಪ್ರತಿಕೃತಿ ದಹನ, ಧಿಕ್ಕಾರದ ಘೋಷಣೆಗಳು ನಡೆದವು. ದೇವೇಗೌಡರು ಉತ್ತರ ಕರ್ನಾಟಕಕ್ಕೆ ಕಾಲಿಡಲು ಬಿಡುವುದಿಲ್ಲ ಎಂಬ ಆಕ್ರೋಶ ಭರಿತ ಮಾತುಗಳು ಕೇಳಿ ಬಂದವು. ಇದರಿಂದ ಒಂದಂತೂ ಸ್ಪಷ್ಟ, ಗೌಡರು ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟು ಉತ್ತರ ಕರ್ನಾಟಕದಲ್ಲಿದ್ದ ಅಷ್ಟೂ ಇಷ್ಟೂ ವರ್ಚಸ್ಸನ್ನು ಕಳೆದುಕೊಂಡಿದ್ದಂತೂ ಅಲ್ಲಗಳೆಯಲು ಸಾಧ್ಯವಿಲ್ಲ. ಬಿಬಿಎಂಪಿ ಚುನಾವಣೆ ಬಗ್ಗೆ ಹೇಳುವುದಾದರೆ, ನಗರ ಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಹೋರಾಟ ನಡೆದರೆ, ಒಕ್ಕಲಿಗರು ಹೆಚ್ಚಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯುವುದು ದಿಟ.

ಅದು ಲೋಕಸಭೆ ಪ್ರಚಾರ ಕಾರ್ಯ ತಾರಕಕ್ಕೇರಿದ ಸಮಯ. ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಹಾಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಅಸಮರ್ಥ ಪ್ರಧಾನಿ ಎಂದು ನಿಂದಿಸಿದ್ದಲ್ಲದೇ ವೈಯಕ್ತಿಕ ದಾಳಿ ನಡೆಸಿದ ಪರಿಣಾಮ ಫಲಿತಾಂಶ ಏನಾಯಿತು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. 24/7 ರಾಜಕಾರಣಿ ಎಂದೇ ಕರೆಸಿಕೊಂಡಿರುವ ಗೌಡರಿಗೆ ಇಂಥ ಅನೇಕ ಸಂಗತಿಗಳ ಬಗ್ಗೆ ಅರಿವಿದೆ. ಆದರೆ, ಇತ್ತೀಚಿನ ಬೆಳವಣಿಗೆ ಎಂದರೆ ಮತದಾರರೂ ಕೂಡ ಜನಪ್ರತಿನಿಧಿಗಳ ವರ್ತನೆ ಬಗ್ಗೆ ತಿಳಿದುಕೊಂಡಿದ್ದಾರೆ, ತಿಳಿದುಕೊಳ್ಳುತ್ತಿದ್ದಾರೆ. ಒಂದು ಸರ್ವೆ ಪ್ರಕಾರ, ದೇವೇಗೌಡರ ರಾಜಕೀಯವನ್ನೇ ವಿರೋಧಿಸುವ ವಿದ್ಯಾವಂತ ಮತದಾರರ ಪಡೆ ಬೆಂಗಳೂರಿನಲ್ಲಿದೆ. ಇದೀಗ ಇಂತಹ ವೈಯಕ್ತಿಕ ದಾಳಿ ನಡೆಸಿರುವ ಗೌಡರು ಬಿಬಿಎಂಪಿ ಚುನಾವಣೆಯಲ್ಲಿ ಇದನ್ನು ಹೇಗೆ ಜೀರ್ಣಿಸಿಕೊಳ್ಳುತ್ತಾರೆ ಎಂಬುದು ಕುತೂಹಲ ಸಂಗತಿ.

ಜವಾಹರ್ ಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ಅಟಲ್ ಬಿಹಾರ್ ವಾಜಪೇಯಿರಂಥಹ ಮುತ್ಸದ್ಧಿ ರಾಜಕಾರಣಿಗಳು ಅಲಂಕರಿಸಿದ್ದ ಸ್ಥಾನವನ್ನು ಅಲಂಕರಿಸಿದ್ದ ಗೌಡರು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಹೇಗಿದ್ದರೂ ಕೂಡ ಸ್ಥಾನಕ್ಕಾದರೂ ಬೆಲೆ ಕೊಡಬೇಕಿತ್ತು. ಯಡಿಯೂರಪ್ಪ ಇರಲಿ ಮತ್ತೊಬ್ಬ ಇರಲಿ. ಆತ ರಾಜ್ಯ ಆರು ಕೋಟಿ ಜನರ ಲೀಡರ್. ಅದಕ್ಕಾದರೂ ಅಸಂವಿಧಾನಿಕ ಪದಗಳ ಬಳಕೆ ಸಲ್ಲ. ಇದು ಖಂಡನಾರ್ಹ ಹೇಳಿಕೆ ಕೂಡ. ಹೇಳಿಕೆಗೆ ಕ್ಷಮೆ ಕೇಳಿದ್ದು ಮುಖ್ಯ ಅಲ್ಲ ಎನ್ನುವುದು ನನ್ನ ಭಾವನೆ.

ರೈತರ ಪರ ಹೋರಾಟ ಮಾಡುತ್ತಿರುವ ಗೌಡರಿಗೆ ಎಲ್ಲರ ಬೆಂಬಲವಿದೆ. ನೈಸ್ ಕಂಪನಿ ಬಿಎಂಐಸಿ ಯೋಜನೆ ರೈತರಿಂದ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲಿದೆ ಎನ್ನುವುದಾದರೆ ಹೋರಾಟ ಮುಂದುವರೆಯಲಿ. ಮಾಜಿ ಪ್ರಧಾನಿಯಂತಹ ವ್ಯಕ್ತಿ ರೈತರ ಪರ ನಿಂತರೆ ರೈತರಿಗೆ ಮಾನಸಿಕ ಶಕ್ತಿ ತುಂಬಿದಂತಾಗುತ್ತದೆ. ಇದರ ಜೊತೆಗೆ ಬಳ್ಳಾರಿ ವಿಮಾನ ನಿಲ್ದಾಣ, ದಾವಣಗೆರೆ, ಕೊಪ್ಪಳ, ಚಾಮರಾಜನಗರ ಸೇರಿ ಅನೇಕ ಕಡೆಗಳಲ್ಲಿ ರೈತರ ಮೇಲೆ ದೌರ್ಜನ್ಯಗಳು ನಿತ್ಯ ನಡೆಯುತ್ತಿವೆ. ಇಲ್ಲಿ ಹೋಗಿ ರೈತರಿಗೆ ಬೆಂಬಲಕ್ಕೆ ನಿಲ್ಲಲಿ. ರಾಜ್ಯದ ನಾಲ್ಕು ಕೋಟಿ ಜನರು ಅವರ ಹಿಂದೆ ಇದೆ ಅಲ್ವೇ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X