ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗಾಗಿ ಸಾಯಲೂ ಸಿದ್ಧ : ರಸ್ತೆಗಿಳಿದ ದೇವೇಗೌಡ

By Staff
|
Google Oneindia Kannada News

HD Devegowda
ಬೆಂಗಳೂರು, ಜ. 9 : ನೈಸ್ ಭೂಕಬಳಿಕೆಯಿಂದ ಅನ್ಯಾಯಕ್ಕೊಳಗಾಗಿರುವ ರೈತರಿಗಾಗಿ ಜೈಲಿಗೆ ಹೋಗಲೂ ಸಿದ್ಧ, ಅವರಿಗಾಗಿ ಸಾಯಲೂ ಸಿದ್ಧ ಎಂದು ಗುಡುಗಿರುವ ಮಾಜಿ ಪ್ರದಾನಿ, ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರು ರೈತರ ಹೋರಾಟಕ್ಕೆ ಮತ್ತಷ್ಟು ಜೀವ ತಂದಿದ್ದಾರೆ.

ವಿವಾದಿತ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಕಾರಿಡಾರ್ ರಸ್ತೆ ನಿರ್ಮಾಣ ಯೋಜನೆಯಿಂದ ಸಿಡಿದೆದ್ದಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ರೈತರ ಪರವಾಗಿ ದೇವೇಗೌಡರು ಸ್ವತಃ ರಸ್ತೆಗಿಳಿದಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಕುಂಬಳಗೋಡುನಲ್ಲಿ ಜಮಾಯಿಸಿದ್ದ ಸಾವಿರಾರು ರೈತರ ಅಹವಾಲುಗಳನ್ನು ಗೌಡರು ಆಲಿಸಿದರು.

ಕುಂಬಳಗೋಡಿನಲ್ಲಿ ತಿಪ್ಪೂರು, ಎಮ್ಮಿಗೆಪುರ, ಗೋಣಿಪುರದ ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಸರಕಾರ ನೀಡಿರುವ ಸುತ್ತೋಲೆಯ ಪ್ರಕಾರ ಭೂಮಿ ಕಳೆದುಕೊಂಡ ರೈತರಿಗೆ ಒಂದು ಎಕರೆಗೆ 86 ಸಾವಿರ ರು. ಮಾತ್ರ ಬಿಜೆಪಿ ಸರಕಾರ ನೀಡುತ್ತಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕರೆಗೆ ಒಂದು ಕೋಟಿ ರು. ಮತ್ತು ಒಂದು ಸೈಟನ್ನು ನೀಡಿದರೆ ಮಾತ್ರ ಸ್ವಾಧೀನಪಡಿಸಿಕೊಳ್ಳಲು ಭೂಮಿ ನೀಡುವುದಾಗಿ ರೈತರು ಹೇಳುತ್ತಿದ್ದಾರೆ.

ರೈತರ ಪರವಾಗಿ ಸ್ವತಃ ರಸ್ತೆಯ ಮೇಲೆ ಧರಣಿ ಕುಳಿತ ದೇವೇಗೌಡರು ಬಿಜೆಪಿ ಸರಕಾರ, ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ, ನೈಸ್ ಸಂಸ್ಥೆ, ಗಣಿಧಣಿಗಳ ವಿರುದ್ಧ ಹರಿಹಾಯ್ದರು. ಒಂದು ಕಡೆಯಿಂದ ಅಶೋಕ್ ಖೇಣಿ ಮತ್ತೊಂದು ಕಡೆಯಿಂದ ಗಣಿಧಣಿಗಳು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೌಡರು ನುಡಿದರು. ಬಿಜೆಪಿ ಸರಕಾರದಿಂದ ದೇವೇಗೌಡನ ಪಕ್ಷವನ್ನು ಸರ್ವನಾಶ ಮಾಡಲು ಬಿಡುವುದಿಲ್ಲ. ಜನರೇ ಬಿಜೆಪಿಗೆ ಬುದ್ಧಿ ಕಲಿಸುವಂತೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ರೈತರಲ್ಲ : ಭೂಸ್ವಾಧೀನದ ವಿರುದ್ಧ ರಸ್ತೆಗಿಳಿದಿರುವ ಪ್ರತಿಭಟನಾಕಾರರು ರೈತರಲ್ಲವೇ ಅಲ್ಲ. ನಿಜವಾದ ರೈತರು ಭೂಮಿ ನೀಡಲು ಸಿದ್ಧರಿದ್ದಾರೆ. ಆದರೆ, ರೈತರು ಸಮ್ಮತಿಸಿದರೆ ಮಾತ್ರ ಭೂಸ್ವಾಧೀನ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ಚಿತ್ರದುರ್ಗದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಂಧಿತ ರೈತರ ಬಿಡುಗಡೆ : ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಹೋರಾಟಕ್ಕಿಳಿದು ಬಂಧಿತರಾಗಿದ್ದ ರೈತರನ್ನು ಹದಿನೈದು ದಿನಗಳ ನಂತರ ಬಿಡುಗಡೆ ಮಾಡಲಾಗಿದೆ. ಬಂಧಿತರ ರೈತರನ್ನು ಧಾರವಾಡ ಜೈಲಿನಲ್ಲಿ ಇಡಲಾಗಿತ್ತು. ಇತರ ಕೈದಿಗಳೊಂದಿಗೆ ಕೈಗೊಳ ತೊಡಿಸಿದ್ದನ್ನು ವಿರೋಧಿಸಿ ಬಂಧಿತ ರೈತರು ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಹೂಡಿದ್ದರು.

ಬಂಧಿತ ರೈತರ ಬಿಡುಗಡೆಯನ್ನು ದಾವಣಗೆರೆ ರೈತರು ಪಟಾಕಿ ಸಿಡಿಸುವ ಮೂಲಕ ಮತ್ತು ಸಿಹಿ ಹಂಚುವ ಮೂಲಕ ಆಚರಿಸಿಕೊಂಡಿದ್ದಾರೆ. ರೈತರ ಹೋರಾಟವನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧಿಗೆ ಅರ್ಪಿಸುವುದಾಗಿ ರೈತರು ಹೇಳಿದ್ದಾರೆ.

ಈ ನಡುವೆ, ರೈತರ ಪ್ರತಿಭಟನೆಗೆ ಮಣಿದಿರುವ ಬಿಜೆಪಿ ಸರಕಾರ ದಾವಣಗೆರೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಿದೆ. ಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕೆಂದು ಜಿಲ್ಲಾಧಿಕಾರಿಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಿಳಿದಿದ್ದ ದಾವಣಗೆರೆ ರೈತರು ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X