ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಮ್ಮಕ್ಕನಿಗೆ ನಾಡೋಜ : ಮಾಗಡಿಯಲ್ಲಿ ಸಂತಸದ ಹೊನಲು

|
Google Oneindia Kannada News

Salumarada Thimmakka felicitated in Magadi
ಮಾಗಡಿ, ಜ. 9 : ಅನಕ್ಷರಸ್ಥೆಯಾದರು ಪರಿಸರ ಕಾಳಜಿಯಿಟ್ಟುಕೊಂಡು ಸಾಲುಸಾಲು ಮರಗಳನ್ನು ಮಕ್ಕಳಂತೆ ಬೆಳೆಸಿ ಪೋಷಿಸಿದ ಸಾಲುಮರದ ತಿಮ್ಮಕ್ಕ ಅವರಿಗೆ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿ ಲಭಿಸಿರುವುದು ಅವರ ತವರು ಮಾಗಡಿಯಲ್ಲಿ ಸಂಸತದ ನೆರಳನ್ನು ಹರಡಿದೆ. 82ರ ಇಳಿವಯಸ್ಸಿನಲ್ಲೂ ಪರಿಸರ ಸಂರಕ್ಷಣೆ ಕುರಿತಂತೆ ನಾಡಿನ ಜನತೆಗೆ ತಿಮ್ಮಕ್ಕ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಗಡಿಗ್ರಾಮ ಹುಲಿಕಲ್ಲು ಕುದೂರು ರಸ್ತೆಯಲ್ಲಿ ಹಾದುಹೋದರೆ ರಸ್ತೆಯ ಎರಡು ಬದಿಗಳಲ್ಲಿರುವ ನೂರಾರು ಮರಗಳ ತಣ್ಣನೆಯ ಗಾಳಿ ನೆರಳು ಸ್ವಾಗತ ನೀಡುತ್ತವೆ. ಇಷ್ಟೆಲ್ಲಾ ಮರಗಳನ್ನ ಸಾಲುಮರದ ತಿಮ್ಮಕ್ಕ ತನ್ನ ಪತಿ ಬಿಕ್ಕಲುತಿಮ್ಮಯ್ಯನೊಂದಿಗೆ ಕೈಜೋಡಿಸಿ ನೀರೆರೆದು ಪೋಷಿಸಿ ಹೆಮ್ಮರವನ್ನಾಗಿಸಿದ್ದಾರೆ. ತಿಮ್ಮಕ್ಕ ದಂಪತಿಗಳಿಗೆ ಮಕ್ಕಳಿಲ್ಲದಿದ್ದರೂ ಗಿಡ ನೆಟ್ಟು ನೀರೆರೆದು ಮರಬೆಳೆಸಿ ಮಕ್ಕಳಿಲ್ಲವೆಂಬ ಕೊರಗನ್ನ ದೂರಮಾಡಿಕೊಂಡು ಸಾರ್ಥಕ ಜೀವನ ನಡೆಸಿದರು.

ಸಾಲುಮರದ ತಿಮ್ಮಕ್ಕನವರ ಮನೆಗೆ ಹಲವಾರು ಸಂಘಸಂಸ್ಥೆಗಳ ಪದಾಧಿಕಾರಿಗಳು ತೆರಳಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಿಮ್ಮಕ್ಕ ಮುಂದಿನ ಜನ್ಮವಂತಿದ್ದರೆ ಮನುಷ್ಯನಾಗಿ ಹುಟ್ಟುವುದಕ್ಕಿಂತ ಫಲಬಿಡುವ ಮರವಾರಿ ಹುಟ್ಟಲು ಇಷ್ಟವೆಂದು ಹೇಳಿದರು. ಎಲ್ಲಾ ಶಾಲೆಗಳ ಪ್ರತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದೊಂದು ಮರವನ್ನ ಬೆಳೆಸಿದರೆ ಸಾರ್ಥಕವಾಗುತ್ತದೆ ಎಂದು ತಿಮ್ಮಕ್ಕ ಹೇಳಿದರು. ತನ್ನ ಸಾಧನೆ ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿದವರೆಲ್ಲರು ತಣ್ಣಗಿರಲಿ ಎಂದು ಹಾರೈಸಿದರು. ನನ್ನಂತಹ ಹಲವಾರು ಎಲೆಮರೆಯ ಕಾಯಿಗಳಿಂತಿರುವ ಸಾಧಕರನ್ನ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಿ ಎಂದು ತಿಮ್ಮಕ್ಕ ಆಗ್ರಹಿಸಿದರು.

ಸಾಲುಮರದ ತಿಮ್ಮಕ್ಕನವರ ಸಾಧನೆಯನ್ನ ಗುರುತಿಸಿ ಪ್ರಥಮ ಬಾರಿಗೆ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ 1995ರ ಸಾಲಿನ "ನ್ಯಾಷನಲ್ ಸಿಟಿಜನ್ ಅವಾರ್ಡ್"ನ್ನು 1996ರ ಡಿಸೆಂಬರ್‌ನಲ್ಲಿ ಪುರಸ್ಕರಿಸಿದರು. ನಂತರ 1997ರಲ್ಲಿ "ಇಂದಿರಾಪ್ರಿಯದರ್ಶಿನಿ ವೃಕ್ಷಮಿತ್ರ ಪುರಸ್ಕಾರ" ದೊರೆಯಿತು. ನಂತರ ರಾಜ್ಯ ಸರ್ಕಾರ 2007-08ರ ಅವಧಿಯ ರಾಜ್ಯ ಪರಿಸರ ಪ್ರಶಸ್ತಿ, ಪಂಪಾಪತಿ ಪ್ರಶಸ್ತಿ ಸೇರಿದಂತೆ ಸಾವಿರಾರು ಪ್ರಶಸ್ತಿ ಪುರಸ್ಕಾರಗಳು ಸಾಲುಮರದ ತಿಮ್ಮಕ್ಕನವರಿಗೆ ಸಂದಿವೆ.

ನಾಡಿನ ಜನತೆಗೆ ಪರಿಸರ ಕಾಳಜಿಯ ಬಗ್ಗೆ ಸ್ಪೂರ್ತಿ ತುಂಬಿ ಮಾದರಿಯಾಗಿರುವ ಸಾಲುಮರದ ತಿಮ್ಮಕ್ಕನಿಗೆ ನಾಡೋಜ ಪ್ರಶಸ್ತಿ ಲಭಿಸಿರುವುದು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದೆ. ಪ್ರತಿಫಲಾಪೇಕ್ಷೆಯನ್ನ ಬಯಸಿ ಕಾರ್ಯನಿರ್ವಹಿಸುವ ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪತಿಯೊಂದಿಗೆ ಕೈಜೋಡಿಸಿ ಪರಿಸರಕ್ಕೆ ಕೊಡುಗೆಯನ್ನ ನೀಡಿರುವ ಸಾಲುಮರದ ತಿಮ್ಮಕ್ಕನವರ ಸಾಧನೆ ಅನನ್ಯವಾದುದು.

ನಾಡಪ್ರಭು ಕೆಂಪೇಗೌಡರ ನಾಡು ಮಾಗಡಿಯ ಪುಣ್ಯಭೂಮಿಯಲ್ಲಿ ಅನೇಕ ಸಾಧ್ವಿ ಶಿರೋಮಣಿಗಳಿದ್ದು ಇತಿಹಾಸದ ಪುಟಸೇರಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿ ಅಕ್ಷರದ ಅರಿವಿಲ್ಲದ ಸಾಲುಮರದ ತಿಮ್ಮಕ್ಕ ಬೆಳೆಸಿ ಪರಿಸರ ಕಾಳಜಿ ಬಗ್ಗೆ ಜನತೆಗೆ ಪಾಠ ಕಲಿಸಿದ್ದಾರೆ. ಬದುಕಿನ ಮುಸ್ಸಂಜೆಯಲ್ಲಿರುವ ಸಾಲುಮರದ ತಿಮ್ಮಕ್ಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಮನುಕುಲಕ್ಕೆ ಮಾದರಿಯೆನಿಸಿದ್ದಾರೆ.

ತಿಮ್ಮಕ್ಕ ತಮ್ಮ ಹುಟ್ಟೂರು ಹುಲಿಕಲ್‌ನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಕೆಲಸವನ್ನ ಮಾಡುವ ಅದಮ್ಯ ಆಸೆಯನ್ನಿಟ್ಟುಕೊಂಡಿದ್ದಾರೆ. ಇಷ್ಟೆಲ್ಲಾ ಪ್ರಖ್ಯಾತಿ ಹೊಂದಿರುವ ಸಾಲುಮರದ ತಿಮ್ಮಕ್ಕ ಹುಲಿಕಲ್‌ನ ತನ್ನ ಪುಟ್ಟ ಮನೆಯಲ್ಲಿ ಇಂದಿಗೂ ಏಕಾಂಗಿಯಾಗಿಯೇ ಬದುಕು ನಡೆಸುತ್ತಿದ್ದಾರೆ. ಮಧುಮೇಹವಿದ್ದರು ಮಿತಆಹಾರದೊಂದಿಗೆ ಉತ್ತಮ ಆರೋಗ್ಯ ಕಾಪಾಡಿಕೊಂಡಿರುವ ಸಾಲುಮರದ ತಿಮ್ಮಕ್ಕ ಯಾರನ್ನ ಅವಲಂಬಿಸದೇ ಸ್ವಾವಲಂಬಿಯಾಗಿಯೇ ಇಳಿವಯಸ್ಸಿನಲ್ಲೇ ದಿನದೂಡುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X