ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಜ್ ಖಲೀಫಾದಲ್ಲಿ ಕನ್ನಡ ಡಿಂಡಿಮ

By Staff
|
Google Oneindia Kannada News

Dr. BR Shetty
ಬೆಂಗಳೂರು, ಜ. 7 : ಅಬುದಾಬಿಯಲ್ಲಿ ನೆಲೆಸಿರುವ ಮಂಗಳೂರು ಮೂಲದ ಕನ್ನಡಿಗ ಡಾ ಬಿ. ಆರ್ ಶೆಟ್ಟಿ ದುಬೈನಲ್ಲಿ ತಲೆಎತ್ತಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ 100ನೇ ಮಹಡಿಯ ಮಾಲೀಕರಾಗಿದ್ದಾರೆ. ಜೊತೆಗೆ 141 ನೇ ಮಹಡಿಯಯಲ್ಲಿ ಸ್ವಂತ ಕಚೇರಿ ತೆರೆದಿದ್ದಾರೆ. ಇದು ಕೇವಲ ಕನ್ನಡಿಗನೊಬ್ಬನ ಸಾಧನೆಯಲ್ಲ. ಕರ್ನಾಟಕ ಹೆಮ್ಮೆ ಪಡುವಂತ ಸಾಧನೆಯೂ ಹೌದು.

ಅಬುದಾಬಿಯಲ್ಲಿ ನೆಲೆಸಿರುವ ಶೆಟ್ಟಿ ನ್ಯೂ ಮೆಡಿಕಲ್ ಸೆಂಟರ್ ಸಮೂಹ ಅಸ್ಪತ್ರೆಗಳ ಸಂಸ್ಥಾಪಕರು. ಎಎಂಸಿ ಸಮೂಹದ ಮೂಲಕ ಪ್ರಸಿದ್ದಿ ಪಡೆದವರು. ವಿಶ್ವದ ಅತ್ಯಂತ ಪ್ರತಿಷ್ಠಿತ ಕಟ್ಟಡದಲ್ಲಿ ಎರಡು ಮಹಡಿಗಳನ್ನು ಖರೀದಿಸಿ ಕೋಟ್ಯಾಧಿಪತಿಯ ಹೊಸ ವಿಳಾಸವೀಗ 100, ಬುರ್ಜ್ ಖಲೀಫಾ. ಕಳೆದ ಸೋಮವಾರ ಬುರ್ಜ್ ಖಲೀಫಾ ಉದ್ಘಾಟನೆಗೊಂಡಿದೆ.

169 ಮಹಡಿಗಳನ್ನು ಹೊಂದಿದ ಬುರ್ಜ್ ಖಲೀಫಾ ಕಟ್ಟಡಕ್ಕೀಗ ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಬಿರುದು. ಎತ್ತರ 2717 ಅಡಿ. ಕಟ್ಟಲು ತೆಗೆದುಕೊಂಡ ಸಮಯ 5 ವರ್ಷ. 7500 ಕೋಟಿ ರುಪಾಯಿಗಳಷ್ಟು ಖರ್ಚು. 12 ಸಾವಿರ ಕೂಲಿ ಕಾರ್ಮಿಕರಿಂದ ಕೆಲಸ. ಕಟ್ಟಡದೊಳಗಿರುವ ಕಬ್ಬಿಣದ ಪ್ರಮಾಣ 31,400 ಟನ್. ತಳಪಾಯದ ವಿಸ್ತಾರ 17 ಫುಟ್ ಬಾಲ್ ಅಂಗಣಗಳಷ್ಟು. ತುತ್ತತುದಿಯಲ್ಲಿರುವುದು ಮಸೀದಿ. 144 ನೇ ಮಹಡಿಯಲ್ಲಿ ವಿಶ್ವದ ಎತ್ತರ ನೈಟ್ ಕ್ಲಬ್, 76ನೇ ಮಹಡಿಯಲ್ಲಿ ವಿಶ್ವದ ಎತ್ತರದ ಈಜು ಕೊಳ. 900 ಸ್ಟುಡಿಯೋಗಳು. 114 ಐಷಾರಾಮಿ ಅಪಾರ್ಟ್ ಮೆಂಟ್ ಗಳು. ದುಬಾರಿ ಹೋಟೆಲ್ ಗಳು. 3,000 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ ಈ ಬುರ್ಜ್ ಖಲೀಫಾದಲ್ಲಿದೆ.

ಬಿ.ಆರ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆ ಕಾಪು ಸಮೀಪದ ಬಾವಗತ್ ನವರು. 1972 ರಲ್ಲಿ ಕ್ಲಿನಿಕಲ್ ಫಾರ್ಮಸಿಯಲ್ಲಿ ಪದವಿ ಪಡೆದ ನಂತರ ಉದ್ಯೋಗ ಅರಸಿ ಅಬುದಾಬಿಗೆ ತೆರಳಿ ನ್ಯೂ ಮೆಡಿಕಲ್ ಸೆಂಟರ್ ಎಂಬ ಕ್ಲಿನಿಕ್ ಆರಂಭಿಸಿದ ಹಂತಹಂತವಾಗಿ ಶೆಟ್ಟಿ ಬೆಳೆಯುತ್ತಾ ಹೋದರು. ಇದೀಗ ಶೆಟ್ಟಿ ದುಬೈ ಸರಕಾರದ ವಿತ್ತ ಇಲಾಖೆಯ ಸಲಹಾ ಮಂಡಳಿಯ ಸದಸ್ಯ ಕೂಡ. 2009ರ ಪದ್ಮಶ್ರೀ, ಕರ್ನಾಟಕ ರಾಜ್ಯೋತ್ಸವ, ಮಂಗಳೂರು ವಿವಿ ಡಾಕ್ಟರೇಟ್ ಪುರಸ್ಕಾರ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಪತ್ನಿ ಚಂದ್ರಕುಮಾರಿ, ಒಬ್ಬ ಮಗ ಹಾಗೂ ಮೂವರು ಹೆಣ್ಣುಮಕ್ಕಳೊಂದಿಗೆ ಶೆಟ್ಟಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X