ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಷ್ಣುವರ್ಧನ್ ಗೆ ಪದ್ಮ ಪ್ರಶಸ್ತಿ ನೀಡಬೇಕೇಕೆ ?

By *ಮೃತ್ಯುಂಜಯ ಕಲ್ಮಠ
|
Google Oneindia Kannada News

vishnuvardhan
ಕನ್ನಡ ಚಿತ್ರರಂಗದ ಅನರ್ಘ್ಯ ರತ್ನವೊಂದು ಹೊಸ ವರ್ಷದ ಮುನ್ನಾ ದಿನ ಕಳಚಿಬಿತ್ತು. ಕಳೆದ ಮೂರೂವರೆ ದಶಕಗಳಿಂದ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದ ಹಾಗೂ ಆ ಮೂಲಕ ಕನ್ನಡ ಚಿತ್ರಪ್ರೇಮಿಗಳಿಗೆ ಮನರಂಜನೆ ಒದಗಿಸಿದ್ದ ಮೈಸೂರಿನ ಸಂಪತ್ ಕುಮಾರ್ ಅಲಿಯಾಸ್ ಸಾಹಸಸಿಂಹ ವಿಷ್ಣುವರ್ಧನ ಕೇವಲ 59 ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿ, ಬಾರದ ಲೋಕಕ್ಕೆ ತೆರಳಿದ್ದು ಅರಗಿಸಿಕೊಳ್ಳಲಾಗದು ಕಹಿ ಸತ್ಯ.

ವರನಟ ಡಾ ರಾಜಕುಮಾರ್ ನಂತರ ಅವರ ಸ್ಥಾನ ತುಂಬಬಲ್ಲ ಅತ್ಯಂತ ಸಮರ್ಥ ನಟ ಎಂದರೆ ವಿಷ್ಣುವರ್ಧನ ಎನ್ನುವುದು ರಾಜ್ಯದ ಐದೂವರೆ ಕೋಟಿ ಕನ್ನಡಿಗರ ಭಾವನೆ. ರಾಜಕುಮಾರ್ ಕಾಲವಾಗಿ ಕೇವಲ ಮೂರೇ ಮೂರು ವರ್ಷಗಳಲ್ಲಿ ಇವರೂ ಕಾಲವಾಗಿದ್ದು ವಿಧಿಯ ಅಟ್ಟಹಾಸವೇ ಸರಿ, ಹುಟ್ಟು ಆಕಸ್ಮಿಕ ಸಾವು ಖಚಿತ ಎನ್ನುವುದು ವಿಧಿ ಲಿಖಿತ. ಹುಟ್ಟಿದ ಮನುಷ್ಯ ಸಾಯಲೇಬೇಕು. ಆದರೆ, ಒಂದೀಡಿ ರಾಜ್ಯದ ಜನತೆ ಪ್ರೀತಿಸುವ ಹಾಗೂ ನಾಲ್ಕು ಜನರಿಗೆ ಮಾದರಿಯಂತಿದ್ದ ಹಿರಿಯ ಕಲಾವಿದನನ್ನು ಅಕಾಲಿಕವಾಗಿ ಕಳೆದುಕೊಳ್ಳುವುದು ನೋವಿನ ಸಂಗತಿಯೇ, ಕಳೆದ ಗುರುವಾರ ಆದದ್ದು ಕೂಡಾ ಅದೇ. ಬೀದರ್ ನಿಂದ ಹಿಡಿದು ಕೋಲಾರ, ಚಾಮರಾಜನಗರದ ತನಕ ಎಲ್ಲರ ಬಾಯಲ್ಲೂ ಛೇ ಏನ್ರೀ ಇದು...ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾಯೋದಾ ? ಸಾಯುವಂತ ಕಾಯಿಲೆ ಏನಿತ್ತು ಅವರಿಗೆ ? ಹೃದಯಾಘಾತವೇ ? ಹೀಗೆ ಅವರ ಸಾವಿನ ಸುದ್ದಿ ಕೇಳಿ ಮರುಕಪಟ್ಟವರು ಕೋಟ್ಯಂತರ ಮಂದಿ.

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಬಣ್ಣದ ಜಗತ್ತಿಗೆ ಕಾಲಿಟ್ಟ ವಿಷ್ಣುವರ್ಧನ ವೃತ್ತಿ ಜೀವನದಲ್ಲಿ ತಿರುಗಿ ನೋಡುವ ಪ್ರಶ್ನೆಯ ಉದ್ಬವಿಸಲಿಲ್ಲ. ಅನೇಕ ಎಡರುತೊಡರುಗಳು ಎದುರಾದರೂ ಸಮರ್ಥವಾಗಿ ಎದುರಿಸಿ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆಯೂರಿದ್ದು ಇತಿಹಾಸ. ಯಾರಿಗೂ ಕಮ್ಮಿಯಿಲ್ಲದ ಅವರ ನಟನೆ ಅವರನ್ನು ವರ್ಷದಿಂದ ವರ್ಷಕ್ಕೆ ಮೇಲೆಕ್ಕೇರಿಸುತ್ತಾ ಹೋಯಿತು. ಆರಂಭದಲ್ಲಿ ವಿಷ್ಣುವರ್ಧನ್ ಅವರನ್ನು ವಿವಾದಗಳು ಸುತ್ತಿಕೊಂಡಿದ್ದು. ಅದರಿಂದ ಪಟ್ಟ ಪರಿಪಾಟಲು, ಅನುಭಸಿದ ಯಾತನೆ, ಆದ ಅವಮಾನಗಳಿಗೆ ಧೃತಿಗೆಡದೆ ಮುನ್ನುಗ್ಗಿದ್ದು ಅವರ ಛಲಕ್ಕೆ ಸಾಕ್ಷಿಯಾಗಿದೆ.

ಇದೆಲ್ಲಕ್ಕೂ ಪೀಠಿಕೆಯಂತೆ ಪುಟ್ಟಣ್ಣ ಕಣಗಾಲ್ ಅವರು ಸಂಪತ್ ಕುಮಾರ್ ಎಂಬ ಹುಡುಗನಿಗೆ ಅವಕಾಶ ಕೊಟ್ಟಾಗಿ ವಿಷ್ಣುವರ್ಧನ ಎಂದು ಹೆಸರು ಬದಲಾಯಿಸಿದರು. ಆಗ ಆವರಾಡಿದ್ದ ಮಾತುಗಳೆಂದರೆ, ಸಂಪತ್ ಕುಮಾರ್ ನನ್ನು ಕುಮಾರ್ ಎಂದು ಕರೆಯುತ್ತಿದ್ದ ಕಾಲವದು, ಪುಟ್ಟಣ್ಣ ಇವರನ್ನು ನಾಗರಹಾವು ಚಿತ್ರಕ್ಕೆ ಹಿರೋ ಮಾಡುವ ನಿರ್ಧಾರ ತೆಗೆದುಕೊಂಡಾಗ ಸೆಟ್ ನಲ್ಲಿದ್ದ ಯಾರೋ ಒಬ್ಬ ವಿಷ್ಣು ಎಂದು ಕೂಗಿದನಂತೆ, ಆಗ ತಿರುಗಿ ನೋಡಿದ ಪುಟ್ಟಣ್ಣ ನಂತರ ಸಂಪತ್ ಕುಮಾರ್ ಎಂದಿದ್ದ ಹೆಸರನ್ನು ವಿಷ್ಣುವರ್ಧನ ಎಂದು ಬದಲಾಯಿಸಿದರು. ಅಷ್ಟೇ ಅಲ್ಲ ರಾಜ ವಿಷ್ಣುವರ್ಧನ ಅಖಂಡ ಪರಾಕ್ರಮಿ, ಅವನಂತೆ ನೀನು ಕೂಡಾ ಕನ್ನಡ ಚಿತ್ರರಂಗದಲ್ಲಿ ಪರಾಕ್ರಮಿಯಾಗಿ ಮೆರೆಯುತ್ತಿಯಾ ಎಂದು ಆಶೀರ್ವದಿಸಿರಂತೆ. ಮುಂದಾದ್ದೆಲ್ಲವೂ ಇತಿಹಾಸ.

ಸರಿ ಸುಮಾರು 200 ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸುವುದು ಸಾಮಾನ್ಯ ಮಾತಲ್ಲ. ಕಳೆದ ಒಂದು ದಶಕಗಳಿಂದ ಅವರ ನಟಿಸಿದ ಚಿತ್ರಗಳಂತೂ ಸಮಾಜಕ್ಕೊಂದು ಮೆಸೇಜ್ ಕೊಡುವಂತ ಚಿತ್ರಗಳೆ. ಇಂತಹ ಅಪ್ರತಿಮ ಕಲಾವಿದನಿಗೆ ಸರಕಾರದಿಂದ ಸಂದಬೇಕಿದ್ದ ಅನೇಕ ಮಾನ ಸಮ್ಮಾನಗಳು ಸಿಗದಿರುವುದು ನೋವಿನ ಸಂಗತಿ. ಮೇರುನಟ ಎನಿಸಿದ್ದ ವಿಷ್ಣುವರ್ಧನ ಅವರಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಡೆಗಣಿಸಿದವು ಎನ್ನುವುದು ಸತ್ಯ. ಇದು ವಿಷ್ಣುವರ್ಧನ ಅವರನ್ನು ಕಡೆಗಣಿಸಿದಂತಲ್ಲ. ಕನ್ನಡ ಚಿತ್ರರಂಗವನ್ನು, ಕನ್ನಡ ಭಾಷೆಯನ್ನ ಕಡೆಗಣಿಸಿದಂತೆಯೇ ಎಂದರೂ ತಪ್ಪಾಗಲಾರದು.

ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ ಅನೇಕರಿಗೆ ಪದ್ಮ ಪ್ರಶಸ್ತಿಗಳು ಲಭಿಸಿವೆ. ಆದರೆ, ಕನ್ನಡ ಚಿತ್ರರಂಗಕ್ಕೆ ಮೂರೂವರೆಗಳ ದಶಕಗಳ ಕಾಲ ಸೇವೆ ಸಲ್ಲಿಸಿದ ವಿಷ್ಣುವರ್ಧನ್ ಅವರೂ ಪದ್ಮ ಪ್ರಶಸ್ತಿಗೆ ಅರ್ಹರಿದ್ದರು ಆದರೆ, ಆ ಗೌರವ ದೊರಕಲಿಲ್ಲ. ಶಾರೂಕ್ ಖಾನ್, ಅಮೀರ್ ಖಾನ್, ರಜಿನಿಕಾಂತ್, ಕಮಲಹಾಸನ್ ಇವರಿಗೆ ಸಿಕ್ಕಿದೆ. ಕರ್ನಾಟಕದಲ್ಲಿ ಕೋಟ್ಯಂತರ ಅಭಿಮಾನಗಳನ್ನು ಹೊಂದಿರುವ ವಿಷ್ಣುವರ್ಧನ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸದಿರುವುದು ವಿಪರ್ಯಾಸ ಸಂಗತಿ.

ಲಾಬಿ ನಡೆಸಿದ್ದರೆ ವಿಷ್ಣುವರ್ಧನ್ ಅವರಿಗೆ ಪದ್ಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಬಹುದಿತ್ತೇನೋ ? ಆದರೆ, ಸಾಹಸಸಿಂಹ ಮಾತ್ರ ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಜನರ ಅಭಿಮಾನವೇ ನನಗೆ ಪ್ರಶಸ್ತಿ ಎಂದು ಮಾದರಿಯಾಗಿ ಬದುಕಿದರು. ಮುಂದಾದರೂ ರಾಜ್ಯ ಸರಕಾರ ವಿಷ್ಣುವರ್ಧನ ಅವರಿಗೆ ಮರಣೋತ್ತರವಾಗಿಯಾದರೂ ಪದ್ಮ ಪ್ರಶಸ್ತಿ ನೀಡಲು ಕೇಂದ್ರಕ್ಕೆ ಮನವಿ ಮಾಡಿಕೊಳ್ಳಬೇಕು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿ ಚಿತ್ರರಂಗದ ಅಷ್ಟೂ ಸಂಘಗಳು ಸರಕಾರವನ್ನು ಒತ್ತಾಯಿಸಬೇಕಿದೆ. ಆದರ್ಶಪ್ರಾಯರಾಗಿದ್ದ ವಿಷ್ಣುವರ್ಧನ ಆತ್ಮಕ್ಕೆ ಶಾಂತಿ ಸಿಗಲಿ. ಮರುಹುಟ್ಟು ಎನ್ನುವುದಿದ್ದರೆ ಮತ್ತೊಮ್ಮೆ ಕರ್ನಾಟಕದಲ್ಲಿ ಹುಟ್ಟಿಬನ್ನಿ...

English summary
vishnuvardhan sahasa simha padma award
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X