ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಕ್ಕಡದಲ್ಲಿ ನರಕ ಸೃಷ್ಟಿಸಿರುವ ಎಂಡೋಸಲ್ಫಾನ್

By Staff
|
Google Oneindia Kannada News

No word to explain this picture
ನಾನು ಖುದ್ದಾಗಿ ಕೊಕ್ಕಡದಲ್ಲಿ ಸುತ್ತಾಡಿ ಬಂದು ಅನುಭವ ದಾಖಲಿಸುತ್ತಿದ್ದೇನೆ. ಈ ಮೊದಲು ಮಂಗಳ' ವಾರಪತ್ರಿಕೆಯಲ್ಲಿ ಈ ಕುರಿತು ಲೇಖನ ಬರೆದಾಗ ನಾಡಿನಾದ್ಯಂತ ಜನರು ಮರುಗಿದರು, ಪ್ರತಿಕ್ರಿಯಿಸಿದರು. ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಕೊಕ್ಕಡದ ಜನರ ದಯಾನೀಯ ಸ್ಥಿತಿಯ ಲೇಖನ ಓದಿ ದೂರವಾಣಿ ಕರೆ ಮಾಡಿ ಮಾಹಿತಿ ಕೇಳಿಪಡೆದು ಸ್ಥಳ ವೀಕ್ಷಣೆ ಮಾಡುವ ಇಂಗಿತ ತೋರಿಸಿದ್ದರು.

* ಚಿದಂಬರ ಬೈಕಂಪಾಡಿ, ಮಂಗಳೂರು

ಕೊನೆಗೂ ವಿಧಾನಸಭೆಯೊಳಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಎಂಡೋಸಲ್ಫಾನ್ ಅಲ್ಲಿನ ಜನರ ಬದುಕುವ ಹಕ್ಕನ್ನು ಕಿತ್ತುಕೊಂಡಿರುವ ದಾರುಣ ಘಟನೆ ಪ್ರತಿಧ್ವನಿಸಿತು. ನಿಜಕ್ಕೂ ಮಾನವೀಯತೆ ಇರುವ ಯಾರೇ ಆದರೂ ಸರಿ ಕೊಕ್ಕಡದ ಜನರು ಅನುಭವಿಸುತ್ತಿರುವ ದಯಾನೀಯ ಸ್ಥಿತಿಯನ್ನು ಕಂಡು ಮಮ್ಮಲ ಮರುಗುತ್ತಾರೆ. ಆದರೆ ಸರಕಾರ ಮಾತ್ರ ಇವರ ಕುರಿತು ತಳೆದಿರುವ ಧೋರಣೆ ಅಮಾನವೀಯ ಅಂದರೂ ತಪ್ಪಲ್ಲ.

ಆಕಾಶದಲ್ಲಿ ಹೆಲಿಕಾಪ್ಟರ್ ಹಾರಾಡುತ್ತಿದ್ದರೆ ಅದನ್ನೇ ನೋಡುತ್ತಾ ಓಡುವ ಮಕ್ಕಳನ್ನು ಹಾಗೆಯೇ ನೆನಪಿಸಿಕೊಳ್ಳಿ. ಹೆಲಿಕಾಫ್ಟರ್ ಹಾರುತ್ತಾ ಹಾರುತ್ತಾ ಧುತ್ತನೆ ನೆಲಕ್ಕಿಳಿದರೆ ಕುತೂಹಲಿ ಮಕ್ಕಳಿಗೆ ಅದೆಷ್ಟು ಸಂತಸ ಆಗಲಿಕ್ಕಿಲ್ಲ? ಇದೇ ರೀತಿಯ ಸಂತಸವನ್ನು ಎರಡು ದಶಕಗಳ ಹಿಂದೆ ಕೊಕ್ಕಡದ ಮಕ್ಕಳು ಅನುಭವಿಸಿದ್ದರು. ಆದರೆ ಅದೇ ಹೆಲಿಕಾಪ್ಟರ್ ತಮ್ಮ ಬದುಕನ್ನು ನಿಧಾನವಾಗಿ ಕಿತ್ತುಕೊಳ್ಳುತ್ತದೆ ಎನ್ನುವ ಕಿಂಚಿತ್ ಕಲ್ಪನೆಯೂ ಅವರಿಗೆ ಇರಲಿಲ್ಲ. ಅಂದು ಹೆಲಿಕಾಪ್ಟರ್ ಕಂಡು ಆನಂದಿಸಿದ ಮಕ್ಕಳು ಇಂದು ಹೆಳವರಾಗಿದ್ದಾರೆ. ಪ್ರಾಣಿಗಳಿಗಿಂತಲೂ ಕೀಳಾಗಿ ತೆವಳಲಾಗದೆ, ನನ್ನ- ನಿಮ್ಮ ಹಾಗೆ ಕುಳಿತುಕೊಳ್ಳಲಾಗದೆ, ಮಲಗಲಾಗದೆ ಹಿಂಸೆ ಪಡುತ್ತಿದ್ದಾರೆ, ಭೂಲೋಕದಲ್ಲೇ ನರಕಯಾತನೆ ಅನುಭಸುತ್ತಿದ್ದಾರೆ. ಹೀಗೂ ಉಂಟೇ ಅಂತೀರಾ? ಹೌದು ಕೊಕ್ಕಡ ಎಂಬ ಪುಟ್ಟ ಹಳ್ಳಿಯನ್ನು ಒಂದು ಸುತ್ತು ಹಾಕಿದರೆ ಎಂಡೋಸಲ್ಫಾನ್ ಎಂಬ ವಿಷ ಉಂಟುಮಾಡಿರುವ ಆವಾಂತರದ ದಿವ್ಯ ದರ್ಶನವಾಗುತ್ತದೆ.

ಗೇರು ಗಿಡಗಳನ್ನು ಕಾಡುವ ಕೀಟ, ಸೊಳ್ಳೆಗಳಿಂದ ರಕ್ಷಿಸಲು ಎಂಡೋಸಲ್ಫಾನ್ ಸಿಂಪಡಣೆ ಮಾಡಲಾಗುತ್ತದೆ. ಸಾವಿರಾರು ಎಕ್ರೆ ಪ್ರದೇಶಗಳಲ್ಲಿ ಬೆಳೆದಿರುವ ಗೇರು ತೋಟಕ್ಕೆ ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್ ಸಿಂಪಡಿಸಲಾಗಿತ್ತು. ಕೀಟಗಳು-ಸೊಳ್ಳೆಗಳಿಂದ ಗೇರು ಗಿಡಗಳು ಪಾರಾದವು. ಆದರೆ ಕೊಕ್ಕಡದ ನೆಲ-ಜಲಮೂಲಗಳು ಎಂಡೋಸಲ್ಫಾನ್ ಹೀರಿದವು. ಮಳೆನೀರು ಬಾವಿಯಂಥ ಜಲಮೂಲಗಳನ್ನು ಸೇರಿಕೊಂಡಾಗ ಗೇರು ತೋಟಕ್ಕೆ ಸಿಂಪಡಿಸಿದ್ದ ಎಂಡೋಸಲ್ಫಾನ್ ಕೀಟನಾಶಕವೂ ನೀರಿನಲ್ಲಿ ಬೆರೆತುಹೋಯಿತು. ಪರಿಣಾಮವಾಗಿ ಕೊಕ್ಕಡದಲ್ಲಿ ಆಡಿಕೊಂಡಿದ್ದ ಮಕ್ಕಳು ರೋಗಕ್ಕೆ ತುತ್ತಾದರು. ಬಸುರಿ ಹೆಂಗಸರು ಹೆತ್ತಮಕ್ಕಳು ಅಂಗವಿಕಲರಾಗಿ ಜನ್ಮಪಡೆದರು. ಅದೆಷ್ಟೋ ಮಂದಿ ಬಂಜೆಯಾದರು, ಪುರುಷರು ಪುರುಷತ್ವವನ್ನೇ ಕಳೆದುಕೊಂಡರು. ಅನೇಕ ಮಂದಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡು ಕುರುಡರಾದರು, ಈಗಲೂ ಆಗುತ್ತಿದ್ದಾರೆ. ಅಂದ ಮೇಲೆ ಕೊಕ್ಕಡದಲ್ಲಿ ಎಂಡೋಸಲ್ಫಾನ್ ಮಾಡಿರುವ ಅನಾಹುತ ಅದೆಂಥದ್ದು ಎನ್ನುವ ಅರಿವಾಯಿತೇ?

ಇಲ್ಲಿನ ತಾಯಿಯಂದಿರು ತಾವು ಹೆತ್ತ ಅಂಗವಿಕಲ ಮಕ್ಕಳನ್ನು ಸಲಹುತ್ತಿರುವ ಬಗೆಯಂತೂ ವರ್ಣನಾತೀತ. ಹೆಳವ ಮಗು, ವಯಸ್ಸು ಇಪ್ಪತ್ತೈದು ವರ್ಷ. ಯುವಕನಾಗಿರಬೇಕಾದ ವಯಸ್ಸಿನಲ್ಲಿ ನಡೆಯಲಾಗದೆ ತೆವಳಲಾಗದೆ ಮಾಂಸದ ಮುದ್ದೆಯಂತೆ ಬಿದ್ದುಕೊಂಡಿರುವ ಈ ಜೀವಿ ಉಸಿರಾಡುತ್ತದೆ ಎನ್ನುವುದನ್ನು ಬಿಟ್ಟರೆ ಒಂದು...ಎರಡು ಸಹಿತ ಬಿದ್ದುಕೊಂಡಲ್ಲೇ ಮಾಡುತ್ತದೆ. ಊಹಿಸಿಕೊಳ್ಳಿ ಹೆತ್ತಬ್ಬೆ ಹೇಗೆ ಇದೆಲ್ಲವನ್ನೂ ಸಹಿಸಿಕೊಂಡು ಹೆತ್ತ ಕೂಸನ್ನು ಸಲಹಬೇಕು?

ತಾಯಿ ಕೂಲಿ ಕೆಲಸಕ್ಕೆ ಹೋದರೆ ಮನೆಯಲ್ಲಿ ಹೆಳವ ಮಗು ಬಿದ್ದುಕೊಂಡಿರುತ್ತದೆ. ಇನ್ನೂ ಕೆಲವು ಸಂದರ್ಭದಲ್ಲಿ ತಾಯಿ ಮನೆಕೆಲಸ ಮಾಡುವಾಗ ಮಗುವನ್ನು ಮಂಚದ ಕಾಲಿಗೆ ಹಗ್ಗದಿಂದ ಕಟ್ಟಲಾಗುತ್ತದೆ ದನಕರುಗಳನ್ನು ಗೂಟಕ್ಕೆ ಕಟ್ಟಿದ ಹಾಗೆ! ಕೊಕ್ಕಡದಲ್ಲಿ ಒಂದು ಸುತ್ತು ಹಾಕಿದರೆ ನಿಮ್ಮಕಣ್ಣಿಗೆ ಕಟ್ಟುವ ದೃಶ್ಯಗಳು ಇಂಥವೇ ಆಗಿವೆ.

ಪ್ರಸ್ತುತ ಸುಮಾರು ಇನ್ನೂರು ಮಂದಿ ಇಂಥ ದಯಾನೀಯ ಬದುಕು ಸಾಗಿಸುತ್ತಿದ್ದಾರೆ ಎನ್ನುವ ಅಂದಾಜು. ಕಳೆದ ಎರಡು ದಶಕದಲ್ಲಿ ಇಷ್ಟೇ ಸಂಖ್ಯೆಯ ಮಂದಿ ಎಂಡೋಸಲ್ಫಾನ್‌ಗೆ ಬಲಿಯಾಗಿದ್ದಾರೆ. ಕೊಕ್ಕಡದ ಸಮೀಪದವರೇ ಆದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾಜಿ ಸಚಿವೆಯಾದಮೇಲೆ ಕೊಕ್ಕಡಕ್ಕೆ ಬಂದು ಕಂಡ ಅನುಭವವನ್ನು ವಿಧಾನಸಭೆಯಲ್ಲಿ ಹಂಚಿಕೊಂಡಿದ್ದಾರೆ. ನಿಜಕ್ಕೂ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟ, ಪ್ರತಿಪಕ್ಷದ ನಾಯಕರು ಕೊಕ್ಕಡದಲ್ಲಿ ಗ್ರಾಮವಾಸ್ತವ್ಯ ಮಾಡಬೇಕು. ಒಂದು ದಿನವನ್ನು ಕೊಕ್ಕಡದಲ್ಲಿ ಕಳೆದರೆ ಎರಡು ದಶಕಗಳಿಂದ ಇಲ್ಲಿನ ಜನರು ಪಟ್ಟ ಯಾತನೆಗೆ ಪರಿಹಾರ ಸಿಗುತ್ತದೆ. ಕೇವಲ ಹಣಕೊಟ್ಟರೆ ಇಲ್ಲಿನ ಜನರು ಕಳೆದುಕೊಂಡಿರುವ ಬದುಕು ಪಡೆಯಲು ಸಾಧ್ಯವಿಲ್ಲ. ಇಲ್ಲಿ ಆಗಿರುವ ಅನಾಹುತಕ್ಕೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಆಗಬೇಕು.

ನಾಡಿನ ರಾಜಕಾರಣಿಗಳೇ ಒಮ್ಮೆ ಕೊಕ್ಕಡಕ್ಕೆ ಬನ್ನಿ, ಇಲ್ಲಿನ ಜನರ ಬದುಕನ್ನು ನಿಮ್ಮ ಕಣ್ಣುಗಳಿಂದಲೇ ಕಾಣಿರಿ. ಇಲ್ಲಿಗೆ ಸಮೀಪವೇ ಧರ್ಮಸ್ಥಳವಿದೆ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವಿದೆ. ಕೊಕ್ಕಡದಲ್ಲಿ ಗ್ರಾಮವಾಸ್ತವ್ಯ ಮಾಡಿ ಮರುದಿನ ತೀರ್ಥಕ್ಷೇತ್ರಗಳಿಗೆ ತೆರಳಬಹುದು. ಹೆಳವ ಮಕ್ಕಳಲ್ಲಿ ದೇವರುಗಳನ್ನು ಕಂಡು ನೀವೂ ನಿಮ್ಮನ್ನು ಸಂತೈಸಿಕೊಳ್ಳಿ ಎನ್ನುವುದು ನನ್ನ ಕೋರಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X