ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲ್ಲೆ ಖಂಡಿಸಿ ವಿಧಾನಸೌಧಕ್ಕೆ ಹೊರಟ ರೈತರು

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Farmers in Channapattana protest against attack on farmers in Chamrajnagar
ಚನ್ನಪಟ್ಟಣ, ಡಿ. 23 : ಚಾಮರಾಜನಗರದಲ್ಲಿ ರೈತರ ಮೇಲೆ ನಡೆದ ಹಲ್ಲೆ ಖಂಡಿಸಿ ರೈತ ಸಂಘ ನಡೆಸುತ್ತಿರುವ ವಿಧಾನಸೌಧ ಚಲೋ ಜಾಥಾಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೂರಾರು ರೈತರ ಪಾದಯಾತ್ರೆ ಮೂಲಕ ರಾಮನಗರಕ್ಕೆ ಬುಧವಾರ ಆಗಮಿಸಿದರು.

ಕಾಲ್ನಡಿಗೆ ಮುಖಾಂತರ ಆಗಮಿಸಿದ ರೈತರನ್ನ ವಿವಿಧ ಜನಪರ ಸಂಘಟನೆಗಳು ಸ್ವಾಗತಿಸಿಕೊಂಡು ಬೆಂಬಲ ವ್ಯಕ್ತಪಡಿಸಿದರು. ಚಾಮರಾಜನಗರದಿಂದ ಕಾಲ್ನಡಿಗೆಯಲ್ಲಿ ಆಗಮಿಸಿರುವ 20ಕ್ಕೂ ಹೆಚ್ಚು ಮಂದಿ ರೈತ ಮಹಿಳೆಯರ ಕಾಲುಗಳಲ್ಲಿ ಬೊಬ್ಬೆ ಬಂದು ಗಾಯವಾಗಿದ್ದರೂ ಬ್ಯಾಂಡೇಜ್ ಕಟ್ಟಿಕೊಂಡು ಪಾದಯಾತ್ರೆಯಲ್ಲಿ ಆಗಮಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರು ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿಯ ಬಗ್ಗೆ ಆಕ್ರೋಶವ್ಯಕ್ತಪಡಿಸಿ ಬಿಜೆಪಿ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.

ಲಾಠಿ ಪ್ರಹಾರ ನಡೆಯುವುದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ಯಾವುದೇ ಕ್ರಮವನ್ನ ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ರೈತರನ್ನು ಬೇಷರತ್ ಬಿಡುಗಡೆ ಮಾಡುವುದಾಗಿ ಹೇಳಿ ಮಾತಿಗೆ ತಪ್ಪಿದ್ದಾರೆ. ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನ ಹಿಂತೆಗೆದುಕೊಳ್ಳುವ ಭರವಸೆಯನ್ನ ಅನುಷ್ಠಾನಗೊಳಿಸಿಲ್ಲ. 18ನೇ ದಿನಾಂಕದೊಳಗೆ ರೈತರ ಸಮಸ್ಯೆ ಬಗೆಹರಿಸುತ್ತೇವೆಂದು ಹೇಳಿದ ಮುಖ್ಯಮಂತ್ರಿ ಮುಗುಮ್ಮಾಗಿದ್ದಾರೆಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಹಿತಾಸಕ್ತಿಯನ್ನು ಕಡೆಗಣಿಸಿರುವ ಮುಖ್ಯಮಂತ್ರಿಗಳು ಕೇವಲ ಅಧಿಕಾರದ ಕುರ್ಚಿಗಾಗಿ ಕುಸ್ತಿ ನಡೆಸುತ್ತಿದ್ದಾರೆ. ನಾಡಿನ ಸಂಪತ್ತನ್ನ ಲೂಟಿ ಮಾಡುವ ಮತ್ತು ಮೂರನೇ ದರ್ಜೆಯ ವ್ಯಕ್ತಿಗಳನ್ನ ಕೂಡ ಮಂತ್ರಿಮಂಡಲದಲ್ಲಿ ಸ್ಥಾನ ನೀಡಿ ರಾಜಕಾರಣವನ್ನ ಹೊಲಸು ಮಾಡಿದ್ದಾರೆಂದು ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.

ರೈತರನ್ನ ಮರೆತಿರುವ ಮುಖ್ಯಮಂತ್ರಿಗಳಿಗೆ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು 20 ಸಾವಿರ ರೈತರೊಂದಿಗೆ ಇನ್ನೆರಡು ದಿನಗಳಲ್ಲಿ ಬೆಂಗಳೂರು ತಲುಪುತ್ತೇವೆ. ಅಷ್ಟರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರ ಸಮಸ್ಯೆ ಬಗೆಹರಿಸಿ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ರೈತಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಚಾಮರಾಜನಗರದಲ್ಲಿ ಲಾಠಿ ಚಾರ್ಜ್‌ಗೆ ಕಾರಣರಾದ ಅಧಿಕಾರಿಗಳನ್ನ ತಕ್ಷಣದಿಂದಲೇ ಅಮಾನತ್ತುಗೊಳಿಸಬೇಕು, ಕತ್ತಲಲ್ಲಿ ಮುಳುಗಿರುವ ರಾಜ್ಯಕ್ಕೆ ಸಮರ್ಪಕ ವಿದ್ಯುತ್ ನೀಡಿ ಬೆಳಕು ಹರಿಸಬೇಕು ಹಾಗು ಇನ್ನೆಂದು ರೈತರ ಮೇಲೆ ಲಾಠಿಚಾರ್ಜ್ ನಡೆಯದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಲು ವಿಧಾನಸೌಧ ಚಲೋ ನಡೆಸುತ್ತಿದ್ದೆ. ಈ ಜಾಥಾ ಬಿಜೆಪಿ ಸರ್ಕಾರಕ್ಕೆ ರಾಜ್ಯದ ರೈತರ ಪರವಾಗಿ ಎಚ್ಚರಿಕೆ ಘಂಟೆ ಮೊಳಗಿಸುತ್ತೇವೆಂದು ರೈತ ಮುಖಂಡ ವಿ.ಅಶೋಕ್ ಹೇಳಿದರು.

ರೈತರ ಸಮಸ್ಯೆಗಳನ್ನ ಕಿವಿಇಲ್ಲದ ಸರ್ಕಾರಕ್ಕೆ ತಿಳಿಸಲು ಶಾಂತಿಯುತ ಪ್ರತಿಭಟನೆ ನಡೆಸುವ ರೈತರ ಪ್ರತಿಭಟನೆಯನ್ನ ಹತ್ತಿಕ್ಕುವ ಕೆಲಸವನ್ನ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿದೆ. ಸಂವಿಧಾನದ ಅರಿವೇ ಇಲ್ಲದ ಮುಖ್ಯಮಂತ್ರಿ ಯಡಿಯೂರಪ್ಪನವರು ಕತ್ತಲಲ್ಲಿ ತೊಳಲಾಡುತ್ತಿರುವ ರಾಜ್ಯದ ಜನತೆಗೆ ಸಮರ್ಪಕ ವಿದ್ಯುತ್ ನೀಡಬೇಕೆಂದು ಆಗ್ರಹಿಸುವ ರೈತರಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ರೈತ ಮಹಿಳೆ ಅರಳಾಳು ಅನಸೂಯಮ್ಮ ಹೇಳಿದರು.

ಜಾಥಾದಲ್ಲಿ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಸಿ.ಪುಟ್ಟಸ್ವಾಮಿ, ಲಕ್ಷ್ಮಣ್‌ಸ್ವಾಮಿ, ರಾಮು, ಮಲ್ಲಯ್ಯ, ಬೈರಾಪಟ್ಟಣ ರಾಮಕೃಷ್ಣೇಗೌಡ, ಚಿಕ್ಕಣ್ಣ, ಸಿಂ.ಲಿಂ.ನಾಗರಾಜ್, ಬೈರೇಗೌಡ, ಶ್ರೀನಿವಾಸ್, ಕರವೇ ತಾ.ಅಧ್ಯಕ್ಷ ಸಾಗರ್ ಮತ್ತಿತರ ಮುಖಂಡರುಗಳು ಹಾಜರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X