ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಗ್ಗಂಟಾದ ಬಿಕ್ಕಟ್ಟು, ಭಿನ್ನರಲ್ಲಿ ಒಬ್ಬರಿಗೆ ಸ್ಥಾನ

By Staff
|
Google Oneindia Kannada News

Renukacharya
ಬೆಂಗಳೂರು, ಡಿ. 20 : ರಾಜ್ಯ ಬಿಜೆಪಿಯಲ್ಲಿ ಎರಡನೇ ಬಾರಿಗೆ ಉಂಟಾಗಿರುವ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಪಕ್ಷದ ಹಿರಿಯ ಮುಖಂಡರು, ಆರ್ಎಸ್ಎಸ್ ನಾಯಕರ ನೇತೃತ್ವದಲ್ಲಿ ಸಭೆಯ ಮೇಲೆ ಸಭೆ ನಡೆಯತೊಡಗಿವೆ. ರಾತ್ರಿ ವೇಳೆಗೆ ಎಲ್ಲ ಸಮಸ್ಯೆಗೂ ಮುಲಾಮು ಹಚ್ಚುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಬಹುದೆ ಎನ್ನುವುದನ್ನು ಕಾದು ನೋಡಬೇಕಿದೆ. ಸಿಎಂ ನಿವಾಸದಲ್ಲಿ ನಡೆದಿದ್ದ ಸಭೆಯಿಂದ ಬಂಡಾಯದ ಬಾವುಟ ಹಾರಿಸಿರುವ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ದಿಢೀರ್ ಹೊರನಡೆದಿದ್ದು, 5 ಗಂಟೆ ಹೊತ್ತಿಗೆ ಬಿಕ್ಕಟ್ಟು ಮತ್ತಷ್ಟು ಕಗ್ಗಂಟಾಗಿರುವ ವರ್ತಮಾನ ಬಂದಿದೆ.

ಸಿಎಂ ನಿವಾಸದ ಸಭೆಯಿಂದ ಹೊರಬಂದ ರೇಣುಕಾಚಾರ್ಯ, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಸರಿಯಾಗಿದೆ ಎಂದಷ್ಟೆ ಹೇಳಿದರು. ಮಂತ್ರಿ ಸ್ಥಾನ ಸಿಗುವುದು ದೇವರ ಇಚ್ಚೆ ಎಂದರು. ಭಿನ್ನರ ಗುಂಪು 4 ಮಂದಿಗೆ ಸಚಿವ ಸ್ಥಾನ ನೀಡಬೇಕು ಎಂಬ ಪಟ್ಟು ಹಿಡಿದಿದೆ ಎನ್ನಲಾಗಿದೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಭಿನ್ನರ ಪಾಳೆಯದಲ್ಲಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲು ರೆಡಿಯಾಗಿದ್ದಾರೆ. ಯಾರು ಸಚಿವರಾಗಬೇಕು ಎಂಬುದನ್ನು ಭಿನ್ನರ ಕಡೆಗೆ ಬಿಟ್ಟಿರುವುದು ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರಕಾರಕ್ಕೆ 124 ಶಾಸಕರ ಬೆಂಬಲವಿದೆ. ಆದರೆ, ಸಚಿವ ಸ್ಥಾನದ ಅಕಾಂಕ್ಷಿಗಳಾಗಿರುವ ಶಾಸಕ ರೇಣುಕಾಚಾರ್ಯ, ಎಸ್ ಕೆ ಬೆಳ್ಳುಬ್ಬಿ, ಗೋಪಾಲಕೃಷ್ಣ ಬೇಳೂರು ಸೇರಿದಂತೆ ಸುಮಾರು 15 ಮಂದಿ ಶಾಸಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ರೆಡ್ಡಿಗಳು ಯಡಿಯೂರಪ್ಪ ಅವರ ವಿರುದ್ಧ ಬಂಡೆದ್ದಾಗ ಅವರ ಬೆನ್ನಿಗೆ ನಿಂತವರು ಇದೇ ರೇಣುಕಾಚಾರ್ಯ ಮತ್ತವರ ಪಡೆ. ಆದರೆ, ರೆಡ್ಡಿಗಳು ತಮ್ಮ ಬೇಡಿಕೆಯನ್ನು ಈಡೇರಿಸಿಕೊಂಡು ಇವರನ್ನು ಕೈಬಿಟ್ಟಿರುವ ಅಸಮಾಧಾನ ಒಂದಡೆಯಾದರೆ, ಮುಖ್ಯಮಂತ್ರಿ ಯಡಿಯೂರಪ್ಪ ಸದ್ಯ ಸಂಪುಟ ಪುನರ್ ರಚನೆ ಇಲ್ಲ ಎಂದು ಮಾಧ್ಯಮಗಳ ಮೂಲಕ ಸಂದೇಶ ರವಾನೆ ಮಾಡಿರುವುದು ಬಂಡಾಯದ ಬಾವುಟ ಹಾರಿಸಲು ಕಾರಣವಾಗಿದೆ.

ಮೂಲ ಬಿಜೆಪಿಯವರಾದ ನಮ್ಮನ್ನು ಕಡೆಗಣಿಸಿ ಇತ್ತೀಚೆಗೆ ಬಿಜೆಪಿ ಸೇರಿಕೊಂಡವರಿಗೆ ಸಚಿವ ಸ್ಥಾನ ನೀಡಿರುವ ರೇಣುಕಾಚಾರ್ಯ ಹಾಗೂ ಮತ್ತವರ ಬೆಂಬಲಿಗರ ಆಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ರೆಸಾರ್ಟ್ ನಲ್ಲಿ ಸಭೆ ಆರಂಭಿಸಿದ ರೇಣುಕಾಚಾರ್ಯ ಬಿಜೆಪಿ 20 ಮಂದಿ ಅತೃಪ್ತ ಶಾಸಕರೊಂದಿಗೆ ಸಂಪರ್ಕ ಸಾಧಿಸಿ ಕಾಂಗ್ರೆಸ್-ಜೆಡಿಎಸ್ ಸರಕಾರ ರಚಿಸುವ ಯತ್ನದ ಸುಳಿವು ಹೊರಬಿದ್ದಿತ್ತು. ಆಗ ತಕ್ಷಣ ಕಾರ್ಯಾಚರಣೆ ಆರಂಭಿಸಿದ್ದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.

ನೂತನ ಸರಕಾರ ರಚನೆಯ ಕನಸು ಕಂಡ ಮಾಜಿ ಸಿಎಂ ನವದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಅಜಾದ್ ಅವರೊಂದಿಗೆ ಚೌಕಾಶಿ ಶುರು ಮಾಡಿಕೊಂಡರು. ಕಾಂಗ್ರೆಸ್-ಜೆಡಿಎಸ್ ಸರಕಾರಕ್ಕೆ ಸಿದ್ದರಾಮಯ್ಯ ಅಡ್ಡಗಾಲು ಆಗುವ ಸಾಧ್ಯತೆಯನ್ನು ಗಮನಿಸಿದ ದೇವೇಗೌಡರು, ಸಿದ್ಧರಾಮಯ್ಯ ಮುಖ್ಯಮಂತ್ರಿ ಆದರೆ ನಮ್ಮದೇನು ಅಭ್ಯಂತರವಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಗೆ ರವಾನಿಸಿದರು. ಆದರೆ, ಸೋನಿಯಾ ಗಾಂಧಿ ಮಾತ್ರ ಕ್ಯಾರೆ ಅನ್ನಲಿಲ್ಲ, ಸಿದ್ದು ಕೂಡಾ ಸರಕಾರ ಬೀಳಿಸಲ್ಲ, ಆದಾಗಲೇ ಬಿದ್ದರೆ ನಾವು ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸಿದರು.

ಇಂದು ಬೆಳಗ್ಗೆಯಿಂದಲೇ ಭಿನ್ನರು ಸಚಿವ ಶೆಟ್ಟರ್ ಅವರೊಂದಿಗೆ ಮಾತುಕತೆ ನಡೆಸಿದರು. ನಂತರ ಮಾತನಾಡಿದ ರೇಣುಕಾಚಾರ್ಯ, ನಾವು ಬಂಡಾಯ ಎದ್ದಿಲ್ಲ. ನಾವು ಕೂಡಾ ಬಿಜೆಪಿ ಶಾಸಕರು ಎಂದು ನುಣುಚಿಕೊಂಡರು. ಬಿಜೆಪಿ ಉಪಾಧ್ಯಕ್ಷ ಸಂಸದ ಸಿದ್ಧೇಶ್ ಕೂಡಾ ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ನಿಜ. ಅದನ್ನು ಇಂದು ಸಂಜೆ ವೇಳೆಗೆ ಬಗೆಹರಿಯಲಿದೆ ಎಂದು ಹೇಳಿದರು. ಭಿನ್ನರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ್ದು ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ನಡೆದ ಎರಡನೇ ಹೈಡ್ರಾಮ ರಾತ್ರಿಗೆ ಸುಖಾಂತ್ಯ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X