ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರದಲ್ಲಿ ವಿಕೃತಕಾಮಿ ತಿಪ್ಪೇಶಿ ಬಂಧನ

By Staff
|
Google Oneindia Kannada News

Thippeshi, Harini
ರಾಮನಗರ, ಡಿ. 17 : ರಾಮನಗರ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಇತ್ತೀಚಿಗೆ ಅಪರಿಚಿತ ಶವಗಳು ಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇಂತಹದೇ ಒಂದು ಅಪರಿಚಿತ ಮಹಿಳೆಯ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿದ್ದ ಶವ ಮಾಯಗಾನಹಳ್ಳಿಯ ಬಳಿ ಇತ್ತೀಚೆಗೆ ಪತ್ತೆಯಾಗಿತ್ತು.

ಸುಟ್ಟುಕರಕಲಾಗಿದ್ದ ಮಹಿಳೆಯ ಶವದ ಕೈಭಾಗದ ಮೇಲಿದ್ದ ಒಂದೇ ಒಂದು ಹಚ್ಚೆಗುರುತು ಪ್ರಕರಣವನ್ನ ಪತ್ತೆಹಚ್ಚುವಲ್ಲಿ ಸಹಕಾರಿಯಾಗಿದೆ. ಹಣಕ್ಕಾಗಿ ವಿಕೃತ ಮನಸ್ಸಿನ ಚಿತ್ರದುರ್ಗದ ತಿಪ್ಪೇಶಿ ಕಾಮತೃಷೆ ತೀರಿಸಿಕೊಂಡು ನರ್ಸಿಂಗ್ ತರಬೇತಿ ಮುಗಿಸಿದ್ದ ಗೆಳತಿ ಹರಿಣಿಯ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ತಿಪ್ಪೇಶಿ ಮತ್ತು ಗೆಳತಿ ಇಬ್ಬರೂ ವಿವಾಹಿತರಾಗಿದ್ದರೂ ಇಬ್ಬರ ನಡುವೆ ಇದ್ದ ಅನೈತಿಕ ಸಂಬಂಧವೇ ಕೊಲೆಗೆ ಕಾರಣವೆಂದು ತಿಳಿದುಬಂದಿದೆ. ಕೊಲೆಗಾರ ತಿಪ್ಪೇಶಿಗೆ ಹೆಂಡತಿಯಿದ್ದರೂ ಬೇರೆ ಮಹಿಳೆಯರೊಂದಿಗೆ ಸಲುಗೆ ಬೆಳೆಸಿಕೊಂಡು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದ ಎಂಬುದು ತನಿಖೆಯ ಸಂದರ್ಭದಲ್ಲಿ ತಿಳಿದುಬಂದಿದೆ.

ಕೊಲೆಯಾಗಿರುವ ಹರಿಣಿ ತನ್ನ ಮಾವನೊಂದಿಗೆ ಕಳೆದ ನಾಲ್ಕುವರ್ಷದ ಹಿಂದೆ ವಿವಾಹವಾಗಿ ನರ್ಸಿಂಗ್ ಕೋರ್ಸ್ ಮಾಡಲು ಗೆಳತಿಯರೊಂದಿಗೆ ಬೆಂಗಳೂರಿನ ಕಾಲೇಜು ಸೇರಿದ್ದಳು. ನರ್ಸಿಂಗ್ ಕೊರ್ಸ್ ಮುಗಿಸಿ ಸುಂಕದಕಟ್ಟೆ ಕುಸುಮ ಕ್ಲಿನಿಕ್‌ನಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸ್ತ್ರೀಲೋಲ ತಿಪ್ಪೇಶಿಯೊಂದಿಗೆ ಸ್ನೇಹ ಸಂಪರ್ಕ ಬೆಳೆಸಿಕೊಂಡು ತೀರಾ ಹತ್ತಿರವಾಗಿದ್ದಾಳೆ.

ಕೊಲೆಯಾದ ಹರಿಣಿಯ ರೂಂನಲ್ಲಿದ್ದ ತಿಪ್ಪೇಶಿಯ ಸಂಬಂಧಿ ಶಿಲ್ಪಾಳ ಮೂಲಕ ಇವರಿಬ್ಬರ ಸ್ನೇಹ ಗಾಢವಾಗಿ ಬೆಳೆಯಲು ಸಾಧ್ಯವಾಗಿದೆ. ಇಬ್ಬರೂ ವಾರಾಂತ್ಯಗಳಲ್ಲಿ ಸುತ್ತಾಡುವುದನ್ನ ಅಭ್ಯಾಸಮಾಡಿಕೊಂಡಿದ್ದರು. ನಂತರ ತಿಪ್ಪೇಶಿಗೆ ಹಣದ ಅವಶ್ಯಕತೆ ಇದ್ದುದರಿಂದ ರಾಮನಗರ ಬಳಿಯ ಮಾಯಗಾನಹಳ್ಳಿ ಬಳಿ ಹರಿಣಿಯನ್ನ ಕರೆದೊಯ್ದು ವೇಲ್‌ನಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಗುರುತು ಸಿಗದ ರೀತಿಯಲ್ಲಿ ಪೆಟ್ರೋಲ್ ಸುರಿದು ಆಕೆಯ ದೇಹಕ್ಕೆ ಬೆಂಕಿಯಿಟ್ಟೆ ಎಂದು ಯಾವುದೇ ಅಳುಕಿಲ್ಲದೇ ತಿಪ್ಪೇಶಿ ಹೇಳುತ್ತಾನೆ.

ಬಟ್ಟೆ ಬದಲಿಸುವ ಹಾಗೆ ಗೆಳತಿಯರನ್ನ ಬದಲಿಸುವ ಈ ತಿಪ್ಪೇಶಿ ಇಬ್ಬರು ಮಹಿಳೆಯರೊಂದಿಗೆ ಇರುವಾಗ ಪೋಲೀಸರು ಬಂಧಿಸಿದ್ದಾರೆ. ತನ್ನ ಕೊಠಡಿಯಲ್ಲಿ ತನ್ನ ಹೆಂಡತಿಯ ಫೋಟೋವನ್ನಿಡದ ಈ ಭೂಪ ತನ್ನ ಗೆಳತಿಯರ ಫೋಟೋಗಳನ್ನು ಇಟ್ಟುಕೊಂಡಿದ್ದನೆಂದು ತಿಳಿದುಬಂದಿದೆ. ತನ್ನ ಕಾಮತೃಷೆಗಾಗಿ ಗೆಳತಿಯನ್ನು ಕೊಂದ ಈ ತಿಪ್ಪೇಶಿಯ ಬಂಧನ ವಿಷಯ ತಿಳಿಯುತ್ತಿದ್ದಂತೆ ಸಪ್ತಪದಿ ತುಳಿದ ಪತ್ನಿ ಈತನ ಕೀಚಕ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಲಿ ಎಂದು ಹೇಳಿದ್ದಾಳೆ.

ಅಪರಿಚಿತ ಶವವೆಂದು ಪರಿಗಣಿಸಿದ್ದ ರಾಮನಗರ ಪೋಲೀಸರಿಗೆ ಹರಿಣಿಯ ಕೈಮೇಲಿದ್ದ ಎಸ್.ವೈ. ಹಚ್ಚೆಗುರುತು ಪ್ರಕರಣವನ್ನ ಪತ್ತೆಹಚ್ಚಲು ಸಹಕಾರಿಯಾಯಿತು. ಸುಂಕದಕಟ್ಟೆ ಠಾಣೆಯಲ್ಲಿ ದಾಖಲಾಗಿದ್ದ ಮಿಸ್ಸಿಂಗ್ ಕೇಸ್‌ಗೂ ಈ ಪ್ರಕರಣಕ್ಕೂ ಸಾಮ್ಯತೆ ಇದ್ದುದರಿಂದ ಮುಚ್ಚಿಹೋಗಬೇಕಾಗಿದ್ದ ಪ್ರಕರಣ ಬಯಲಿಗೆ ಬಂದಂತಾಗಿದೆ. ರಾಮನಗರ ಗ್ರಾಮಾಂತರ ವೃತ್ತ ನಿರೀಕ್ಷಕ ಧರ್ಮೇಂದ್ರ, ಪಿ.ಎಸ್.ಐ ವಿನೋದ್ ಭಟ್ ನೇತೃತ್ವದಲ್ಲಿ ತನಿಖೆ ನಡೆಸಿ ಕಡಿಮೆ ಅವಧಿಯಲ್ಲೇ ಪ್ರಕರಣವನ್ನ ಬಯಲಿಗೆಳೆದಿದ್ದಾರೆ. ಪೋಲೀಸ್ ಸಿಬ್ಬಂದಿಗಳಾದ ಅನಂತಯ್ಯ, ನರಸಿಂಹಮೂರ್ತಿ, ಪ್ರಕಾಶ್ ಮತ್ತು ಪುರಂದರ್ ಕೊಲೆಗಡುಕನನ್ನ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X