ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲ್ಕೊಳ ಗೆಸ್ಟ್‌ಹೌಸ್‌ನಲ್ಲಿ ಮಾರಾಮಾರಿ

By * ಕೆ.ಆರ್.ಸೋಮನಾಥ್, ಶಿವಮೊಗ್ಗ
|
Google Oneindia Kannada News

ಶಿವಮೊಗ್ಗ, ನ. 27 : ಪಶು ವೈದ್ಯರೆಲ್ಲಾ ಸೇರಿ ತಿಂದು ಕುಡಿದು ಪಶುಗಳಂತಾಗಿ ಮಾರಾಮಾರಿ ಮಾಡಿಕೊಂಡ ಘಟನೆ ಆಲ್ಕೊಳದ ಫಾರೆಸ್ಟ್ ಗೆಸ್ಟ್‌ಹೌಸ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯ ಪೊಲೀಸರು 35 ಜನರ ಗುಂಪಿನಲ್ಲಿ 7 ಜನ ಪಶು ವೈದ್ಯರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದ್ಯದ ಅಮಲಿನಲ್ಲಿ ಪಶುಗಳೇ ಆಗಿ ಹೋಗಿದ್ದ ಈ ಪಶು ವೈದ್ಯಾಧಿಕಾರಿಗಳು ತಮ್ಮ ನಿಜವಾದ ಬಣ್ಣ ತೋರಿಸಿದ್ದು, ಆಲ್ಕೊಳದ ಗೆಸ್ಟ್‌ಹೌಸ್‌ನಲ್ಲಿ. ಈ ಗೆಸ್ಟ್‌ಹೌಸ್‌ನಲ್ಲಿ ಕುಡಿದು ತಿಂದು ಮದವೇರಿದಂತೆ ವರ್ತಿಸತೊಡಗಿದ ಪಶುವೈದ್ಯಾಧಿಕಾರಿಗಳು ಮಧ್ಯರಾತ್ರಿ ಜೋರು ಜೋರಾಗಿ ಕೂಗತೊಡಗಿದರು. ಕೂಗಾಟ ರೇಗಾಟಕ್ಕೆ ತಿರುಗಿತು. ಪ್ರಾಣಿಗಿಂತ ಕಡೆಯಾಗಿ ಅಲ್ಲಿದ್ದವರ ಮೇಲೆಯೇ ತಿರುಗಿ ಬಿದ್ದರು. ಕೈ ಕೈ ಮಿಲಾಯಿಸಿಕೊಂಡರು. ಕೈಗೆ ಸಿಕ್ಕಿದ್ದರಲ್ಲಿ ಓಡಾಡಿಸಿಕೊಂಡು ಹೊಡೆದರು. ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡರು. ಥೇಟು ಬೀದಿ ಬದಿಯ ರೌಡಿಗಳಂತೆ ದೊಂಬಿ ಎಬ್ಬಿಸಿದರು.

ಸುಮಾರು 35 ಜನರಿದ್ದ ಒಂದು ತಂಡ ಏಕಾಏಕೀ ಆಲ್ಕೊಳದ ಫಾರೆಸ್ಟ್ ಗೆಸ್ಟ್ ಹೌಸ್‌ನಲ್ಲಿ ಸೂರ್ಯ ಮುಳುಗಿದಂತೆ ಸೇರಿಕೊಳ್ಳತೊಡಗಿದರು. ಸುಮಾರು 8 ಗಂಟೆಯ ಹೊತ್ತಿಗೆ ಇವರ ಕುಡಿತ ಆರಂಭವಾಯಿತು. ಸಣ್ಣ ಮಟ್ಟದಲ್ಲಿ ಆರಂಭವಾದ ಜಗಳ ಪ್ರಾಣಿಗಳ ರೀತಿಯಲ್ಲಿ ಕಿತ್ತಾಡುವಂತೆ ಮಾಡಿತು. ಸಂಬಂಧಿಕರೊಬ್ಬರ ಮದುವೆಗೆಂದು ಸೇರಿಕೊಂಡಿದ್ದ ಈ ಪಶು ವೈದ್ಯಾಧಿಕಾರಿಗಳು ಕೊನೆಗೆ ಸಂತೋಷ ಕೂಟ ಏರ್ಪಡಿಸಿಕೊಂಡರು. ಫಾರೆಸ್ಟ್ ಗೆಸ್ಟ್‌ಹೌಸ್ ಉಸ್ತುವಾರಿ ವಹಿಸಿಕೊಂಡಿರುವ ಅರಣ್ಯ ಇಲಾಖೆಯ ಎಸಿಎಫ್ ಮೋಹನ್ ಕುಮಾರ್ ಬಳಿ ಹೋದ ಪಶು ವೈದ್ಯಕೀಯ ಇಲಾಖೆಯ ಪ್ರಮುಖರಾದ ಡಾ ಕಲ್ಲಪ್ಪ ಮತ್ತು ಪಶು ವೈದ್ಯಾಧಿಕಾರಿ ರಮೇಶ್ ಗುರಾಳ ನೇತೃತ್ವದ ತಂಡ, ಪಶು ವೈದ್ಯಾಧಿಕಾರಿಗಳ ಸಣ್ಣದೊಂದು ಸಭೆ ಹಮ್ಮಿಕೊಂಡಿದ್ದೇವೆ. ಈ ಸಭೆಯು ಅರ್ಧ ಗಂಟೆಯ ಮಟ್ಟಿಗೆ ಮಾತ್ರ ನಡೆಯಲಿದೆ. ಫಾರೆಸ್ಟ್ ಗೆಸ್ಟ್‌ಹೌಸ್‌ನ್ನು ನೀಡಿ ಸಹಕರಿಸಿ ಎಂದು ವಿನಂತಿಸಿಕೊಂಡರು.

ಈ ಹಿಂದೆ ವನ್ಯಜೀವಿ ಇಲಾಖೆಯ ವೈದ್ಯಾಧಿಕಾರಿಯಾಗಿದ್ದ ಡಾ ಕಲ್ಲಪ್ಪ ಮಾಡಿಕೊಂಡ ಮನವಿಗೆ ಎಸಿಎಫ್ ಮೋಹನ್ ಕುಮಾರ್ ತಲೆಬಾಗಿದ್ದು, ಅವರಿಂದ ಯಾವುದೇ ಮನವಿ ಪತ್ರವನ್ನು ಪಡೆಯದೆ ಉಚಿತವಾಗಿ ಆಲ್ಕೊಳ ಫಾರೆಸ್ಟ್ ಗೆಸ್ಟ್‌ಹೌಸ್‌ನ್ನು ನೀಡಿದರು. ಇದರಿಂದ ದಿಲ್‌ಖುಷ್ ಆದ ಡಾ ಕಲ್ಲಪ್ಪ, ರಮೇಶ್ ಗುರಾಳ್ ನೇತೃತ್ವದ ಪಶು ವೈದ್ಯಾಧಿಕಾರಿಗಳ ತಂಡ ಸಮಯ ದಾಟುತ್ತಿದ್ದಂತೆಯೇ ಗಜ ಗಾತ್ರ ಪಡೆದುಕೊಂಡಿತು. ಕೇವಲ 4 ಜನರಿಗೆ ಮಾತ್ರ ಅವಕಾಶ ನೀಡಬೇಕೆಂದು ಕೇಳಿದ್ದ ಡಾ ಕಲ್ಲಪ್ಪ ತಮ್ಮ ಜೊತೆ ಕನಿಷ್ಠ 35 ಜನರನ್ನು ಆಲ್ಕೊಳ ಫಾರೆಸ್ಟ್ ಗೆಸ್ಟ್‌ಹೌಸ್‌ನಲ್ಲಿ ಕಲೆಹಾಕಿಕೊಂಡರು. ಅಲ್ಲಿಂದ ಆರಂಭವಾಯಿತು ಪಶು ವೈದ್ಯಾಧಿಕಾರಿಗಳ ಹಂಗಾಮ. ಫಾರೆಸ್ಟ್ ಗೆಸ್ಟ್‌ಹೌಸ್‌ಗೆ ಬೆಲೆ ಬಾಳುವ ಮದ್ಯದ ಬಾಟಲುಗಳು ಬಂದವು. ನಾನ್ ವೆಜ್ ಊಟದ ವ್ಯವಸ್ಥೆ ಸಿದ್ಧವಾಗಿತ್ತು. ಮಾತುಕತೆ ನಡೆಯುತ್ತಲೇ ರಾತ್ರಿ 8 ರಿಂದ ಗುಂಡಿನ ಪಾರ್ಟಿ ಆರಂಭವಾಯಿತು. ಆನಂತರದಲ್ಲಿ ನಡೆದದ್ದೇ ಪಶು ವೈದ್ಯಾಧಿಕಾರಿಗಳ ಪರಸ್ಪರ ಕದನ.

ಹನಸವಾಡಿಯ ನಾಗರಾಜ್, ಎಪಿಎಂಸಿಯ ಬಸವರಾಜ್, ಪ್ರವೀಣ್‌ಕುಮಾರ್, ಹಾರ್‍ನಹಳ್ಳಿಯ ಸುನೀಲ್, ಹಸೂಡಿಯ ರವಿಕುಮಾರ್, ರಮೇಶ್ ಗುರಾಳ್, ಕಲ್ಲಪ್ಪ ಪರಸ್ಪರ ಕಲ್ಲು ತೂರುವ ಮಟ್ಟಕ್ಕೆ ಜಗಳ ಮಾಡಿಕೊಂಡರು. ಅಲ್ಲಿಯೇ ಇದ್ದ ಆಲ್ಕೊಳ ಫಾರೆಸ್ಟ್ ಗೆಸ್ಟ್‌ಹೌಸ್‌ನ ಮೇಟಿ ಗುತ್ಯಪ್ಪ ಎಂಬಾತನನ್ನು ಕರೆದು ಅವಾಚ್ಯವಾಗಿ ಬಯ್ಯತೊಡಗಿದರು. ಫಾರೆಸ್ಟರ್ ಪರಮೇಶ್ವರಪ್ಪರವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದರು. ಕೈಗಳಿಂದ ಈ ಇಬ್ಬರ ಮೇಲೆ ಹಲ್ಲೆ ಮಾಡಿದರು. ಇಡೀ ಗುಂಡಿನ ಪಾರ್ಟಿಯನ್ನು ದೊಂಬಿ ಎಬ್ಬಿಸಿದರು. ಫಾರೆಸ್ಟ್ ಗೆಸ್ಟ್‌ಹೌಸ್ ಹೊರಗಿನ ಜಾಗದಲ್ಲಿ ಓಡಾಡಿಸಿಕೊಂಡು, ಹುಚ್ಚರಂತೆ ಕೂಗಿಕೊಂಡು ಶಾಂತ ವಾತಾವರಣವನ್ನು ಯಾವುದೋ ಕಾಡುಪ್ರಾಣಿಗಳಂತೆ ಕೂಗುತ್ತಾ ಹಾಳುಗೆಡವಿದರು.

ರಾತ್ರಿ 12 ರವರೆಗೆ ಈ ರೀತಿ ದೊಂಬರಾಟ ನಡೆಯುತ್ತಲೇ ಇತ್ತು. ಅಂತಿಮವಾಗಿ ಇದು ವಿಪರೀತಕ್ಕೆ ತಲುಪಲಿದೆ ಎಂಬ ಅನುಮಾನದ ಮೇಲೆ ಫಾರೆಸ್ಟರ್ ಪರಮೇಶ್ವರಪ್ಪ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರು ಪಡೆದ ಪೊಲೀಸರು ದೊಡ್ಡಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸ್ಥಳಕ್ಕೆ ಬಂದಾಗ, ಆಗಲೂ ಸಹ ಪಶು ವೈದ್ಯಾಧಿಕಾರಿಗಳ ದೊಂಬರಾಟ ನಡೆದೇ ಇತ್ತು. ಪೊಲೀಸರ ಪ್ರವೇಶದಿಂದ ನಂತರದಲ್ಲಿ ವಾತಾವರಣ ಶಾಂತವಾಯಿತು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಡಿಎಫ್‌ಓ ವೆಂಕಟೇಶ್ವರನ್ ಸ್ಥಳಕ್ಕೆ ಬಂದಿದ್ದೂ ಆಯಿತು.

ಫಾರೆಸ್ಟರ್ ಪರಮೇಶ್ವರಪ್ಪ ನೀಡಿದ ದೂರಿನ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯ ಪೊಲೀಸರು ಕಲ್ಲಪ್ಪ, ರಮೇಶ್ ಗುರಾಳ್, ರವಿಕುಮಾರ್, ಸುನೀಲ್, ಪ್ರವೀಣ್‌ಕುಮಾರ್, ಬಸವರಾಜ್ ಮತ್ತು ನಾಗರಾಜ್ ಎಂಬ ಹೆಸರಿನ 7 ಜನ ಪಶು ವೈದ್ಯಾಧಿಕಾರಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇವರ ಮೇಲೆ 143, 324, 323, 504, 149 ಐಪಿಸಿ ಸೆಕ್ಷನ್‌ಗಳನ್ನು ಹಾಕಿದ್ದು, ದೊಂಬಿ, ಆಯುಧಗಳಿಂದ ಹಲ್ಲೆ, ಕೈಗಳಿಂದ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ದೊಂಬಿಗೆ ಪ್ರಯತ್ನದಂತಹ ಪ್ರಕರಣಗಳನ್ನು ಈ 7 ಜನರ ಮೇಲೆ ದಾಖಲಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X