ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗದೇವರು ಹಳೆಮನೆ ರಂಗಾಯಣದ ನೂತನ ಸಾರಥಿ

By Staff
|
Google Oneindia Kannada News

Lingadevaru Halemane
ಬೆಂಗಳೂರು, ನ. 25 : ನಾಡಿನ ಹೆಸರಾಂತ ರಂಗಸಂಸ್ಥೆ ರಂಗಾಯಣದ ನಿರ್ದೇಶಕರಾಗಿ ಹಿರಿಯ ನಾಟಕಕಾರ, ಭಾಷಾತಜ್ಞ ಲಿಂಗದೇವರು ಹಳೆಮನೆ ನೇಮಕವಾಗಿದ್ದಾರೆ. ರಂಗಕರ್ಮಿ ಬಿ.ಜಯಶ್ರೀ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಹಳೆಮನೆ ಅವರನ್ನು ನೇಮಿಸಿ ಸರಕಾರ ಮಂಗಳವಾರ ಸಂಜೆ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೇಮಕಕ್ಕೆ ಅಂಕಿತ ಹಾಕಿದ್ದಾರೆ.

ನಿಕಟ ಸಂಬಂಧ ನಾಟಕಕಾರ, ರಂಗ ನಿರ್ದೇಶಕರೂ ಆಗಿರುವ ಹಳೆಮನೆ ಅವರಿಗೆ ಆರಂಭದ ದಿನಗಳಿಂದಲೂ ರಂಗಾಯಣದ ಜತೆ ನಿಕಟ ಸಂಪರ್ಕವಿದೆ. ಬಿ.ವಿ.ಕಾರಂತರು ಸ್ಥಳ ಪರಿಶೀಲನೆಗೆ ಬಂದಾಗಿನಿಂದ ಒಂದಿಲ್ಲ ಒಂದು ರೀತಿಯ ಸಂಬಂಧ ಹೊಂದಿದವರು. ರಂಗ ಸಮಾಜ'ದ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಭಾರತೀಯ ರಂಗ ಶಿಕ್ಷಣ ಕೇಂದ್ರದ ಗೌರವ ಪ್ರಾಂಶುಪಾಲರಾಗಿ,ಬಹುರೂಪಿ ನಾಟಕೋತ್ಸವ,ವಿಚಾರ ಸಂಕಿರಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಪ್ರಸನ್ನ ಅವರು ನಿರ್ದೇಶಕರಾಗಿ ಬರುವ ಮುಂಚೆ ಸರಕಾರ ಹಳೆಮನೆ ಅವರನ್ನೇ ನಿರ್ದೇಶಕರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ರಂಗ ಸಮಾಜದ ಸದಸ್ಯತ್ವಕ್ಕೆ ರಾಜೀನಾಮೆಯನ್ನೂ ನೀಡಿದ್ದರು. ಆದರೆ, ಮಾತೃ ಸಂಸ್ಥೆ ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್)ನಿಯೋಜನೆ ಮೇಲೆ ಕಳುಹಿಸಲು ನಿರಾಕರಿಸಿತ್ತು. ನಂತರ ಪ್ರಸನ್ನ ನಿರ್ದೇಶಕರಾಗಿ ಬಂದರು. ಕೆಲವು ತಿಂಗಳ ಹಿಂದೆ ಹಳೆಮನೆ ಸಿಐಐಎಲ್‌ನಿಂದ ನಿವೃತ್ತರಾಗಿದ್ದಾರೆ.

ಕಲಾವಿದರ ಕ್ಷೇಮದ ನೆಲೆಯಲ್ಲಿ ನಿರ್ವಹಣೆ ನನಗಿದು ಆಕಸ್ಮಿಕ. ನಿರ್ದೇಶಕರಾಗುವಂತೆ ಹಲವು ಕಡೆಯಿಂದ ಒತ್ತಡ ಇದ್ದದ್ದು ನಿಜ. ಆದರೆ, ಈ ಸರಕಾರ ನನ್ನನ್ನು ನೇಮಿಸುತ್ತದೆ ಎಂಬ ನಂಬಿಕೆ ಇರಲಿಲ್ಲ. ಆದರೂ ಸರಕಾರ ನನ್ನ ಮೇಲೆ ವಿಶ್ವಾಸ ಇಟ್ಟಿದೆ. ಅದಕ್ಕೆ ಪೂರಕವಾಗಿ ಸ್ಪಂದಿಸುತ್ತೇನೆ. ಕಲಾವಿದರ ಕ್ಷೇಮ ಬಹುಮುಖ್ಯ. ಅವರನ್ನು ಒಡೆದು ಸಂಸ್ಥೆಯನ್ನು ಕಟ್ಟುವುದು ಅಸಾಧ್ಯ. ಒಳಿತಿನ ಆಶಯದ ಮೇಲೆಯೇ ರಂಗಸಂಸ್ಥೆಯನ್ನು ಕಟ್ಟುತ್ತೇನೆ ರಂಗಾಯಣದ ನಿರ್ದೇಶಕ ಸ್ಥಾನಕ್ಕೆ ನೇಮಕವಾಗಿರುವ ಲಿಂಗದೇವರು ಹಳೆಮನೆ ಹೇಳಿದ್ದಾರೆ.

ಬೆಂಗಳೂರಿನ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್‌ನ ಛೇರ್ಮನ್ ಆಗಿ ನೇಮಕವಾಗಿದ್ದು, ಅಧಿಕಾರ ವಹಿಸಿಕೊಳ್ಳುವ ಸಿದ್ಧತೆಯಲ್ಲಿದ್ದೆ. ಈ ಮಧ್ಯೆ ರಾಜ್ಯ ಸರಕಾರ ರಂಗಾಯಣದ ಜವಾಬ್ದಾರಿ ವಹಿಸಿದೆ. ಈಗಿನ ಸಂದರ್ಭದಲ್ಲಿ ಎಲ್ಲಕ್ಕಿಂತ ರಂಗಾಯಣದ ಹಿತದೃಷ್ಟಿ ನನಗೆ ಮುಖ್ಯ ಎಂದರು. ಅಧಿಕಾರ ಸ್ವೀಕರಿಸಿದ ನಂತರ ಇತ್ತೀಚಿಗೆ ಸಂಸ್ಥೆಯಲ್ಲಿ ನಡೆದ ವಿದ್ಯಮಾನಗಳನ್ನು ಕೂಲಂಕಷವಾಗಿ ಪರಾಮರ್ಶಿಸಿ ನಂತರ ಮಾತನಾಡುತ್ತೇನೆ. ಸಂಸ್ಥೆ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುವುದು. ಎಲ್ಲಾ ಕಳಂಕಗಳನ್ನು ತೊಳೆದು ಹಿಂದಿನ ವೈಭವ ಮರುಕಳಿಸುವಂತೆ ಮಾಡುವುದು ಮೊದಲ ಕೆಲಸ ಎಂದು ಭರವಸೆ ನೀಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X