ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರ ಗೀತೆ ವಿರೋಧಿಸಿದರೆ ಗಡಿ ಪಾರು : ಉದ್ಧವ್

|
Google Oneindia Kannada News

Uddhav Thackeray
ಮುಂಬೈ, ನ. 6 : ರಾಷ್ಟ್ರಗೀತೆ ವಂದೇಮಾತರಂ ಮೇಲೆ ನಿಷೇಧ ಹೇರಿರುವ ಜಮಾತೆ ಉಲೇಮಾ ಸಂಘಟನೆಯ ನಿರ್ಣಯದ ವಿರುದ್ಧ ಗುಡುಗಿರುವ ಶಿವಸೇನೆ ಕಾರ್ಯಕಾರಿ ಅಧ್ಯಕ್ಷ ಉದ್ದವ್ ಠಾಕ್ರೆ, ದೇಶಗೀತೆಯನ್ನು ಹಾಡಲಿಚ್ಛಿಸದವರು ದೇಶವನ್ನು ಬಿಟ್ಟು ತೊಲಗಲಿ ಎಂದು ಎಚ್ಚರಿಸಿದ್ದಾರೆ.

ಭಾರತ ಮಾತೆಗೆ ವಂದನೆ ಸಲ್ಲಿಸದವರು ಇನ್ಯಾರಿಗೆ ಸಲ್ಲಿಸುತ್ತಾರೆ ? ವಂದೇ ಮಾತರಂ ಎನ್ನಲು ಇವರಿಗೇಕೆ ನಾಚಿಕೆ ? ಭಾರತ ಮಾತೆಗೆ ಗೌರವ ನೀಡದ ದೇಶ ದ್ರೋಹಿಗಳು ಈ ಜಾಗ ಬಿಟ್ಟು ಹೊರಡಿ ಎಂದು ಉದ್ಧವ್ ಕಿಡಿಕಾರಿದ್ದಾರೆ. ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಸಮ್ಮುಖದಲ್ಲೇ ಇಂಥ ಫತ್ವಾ ಹೊರಡಿಸಿರುವುದು ಆತಂಕಕಾರಿ. ರಾಷ್ಟ್ರ ವಿರೋಧಿ ಫತ್ವಾಗಳನ್ನು ಇದೇ ರೀತಿ ಹೊರಡಿಸುತ್ತಾ ಹೋದರೆ ದೇಶಕ್ಕೆ ಉಳಿಗಾಲವೇ ಇರುವುದಿಲ್ಲ. ಕೇಂದ್ರ ಸರಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಇಂಥ ಫತ್ವಾಗಳಿಂದ ಮತ್ತೆ ಹಿಂದೂ-ಮುಸಲ್ಮಾನರ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಹಾರಾಷ್ಟ್ರದ ಎಲ್ಲೆಡೆ ವಂದೇಮಾತರಂ ಫಲಕಗಳನ್ನು ಅಳವಡಿಸುವಂತೆ ಶಿವಸೇನೆ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಉದ್ಧವ್ ವಿವರಿಸಿದ್ದಾರೆ. ಕಳೆದ ಮಂಗಳವಾರ ದೇವ್‌ಬಂದ್‌ನಲ್ಲಿ ನಡೆದ ಸಮಾವೇಶದಲ್ಲಿ ಜಮಾತೆ ಉಲೇಮಾ ಸಂಘಟನೆ, ವಂದೇಮಾತರಂ ನಿಷೇಧಿಸಿ ನಿರ್ಣಯ ಹೊರಡಿಸಿತ್ತು. ಈ ಗೀತೆಯಲ್ಲಿನ ಕೆಲವು ಸಾಲುಗಳು ಇಸ್ಲಾಂ ವಿರೋಧಿ ಎಂದು ಸಂಘಟನೆ ಈ ತೀರ್ಮಾನ ಕೈಗೊಂಡಿದ್ದು, ಇದಕ್ಕೆ ದೇಶವ್ಯಾಪ್ತಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಫತ್ವಾ ತಪ್ಪು : ಖುರ್ಷಿದ್

ವಂದೇಮಾತರಂ ಕುರಿತು ಫತ್ವಾ ಹೊರಡಿಸಿರುವ ಮುಸ್ಲಿಂ ಸಂಘಟನೆಯ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್, ಕೆಲವು ಸಂಕುಚಿತ ಮನೋಭಾವದವರು ಸಮಸ್ಯೆ ಸೃಷ್ಟಿಸಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವಂದೇಮಾತರಂ ಕುರಿತು ಇದ್ದ ಕೆಲವು ಲೋಪದೋಷಗಳನ್ನು 50 ವರ್ಷಗಳ ಹಿಂದೆಯೇ ಸರಿಪಡಿಸಲಾಗಿದೆ.

ಅಲ್ಲದೇ ಅದನ್ನು ರಾಷ್ಟ್ರ ಗೀತೆ ಎಂದೂ ಬಿಂಬಿಸಲಾಗಿದೆ. ಈಗ ಐದು ದಶಕಗಳ ನಂತರ ಇದನ್ನು ಮತ್ತೆ ಕೆದಕುತ್ತಿರುವುದು ತೀರಾ ಬಾಲಿಶತನದ್ದು ಎಂದು ಖುರ್ಷಿದ್ ಹೈದರಾಬಾದ್‌ನಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ದೇಶದಲ್ಲಿ ಮತ್ತೊಂದು ಸಮಸ್ಯೆ ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಈ ಗೀತೆ ಎಂಥವರನ್ನೂ ಹುರಿದುಂಬಿಸುತ್ತಿದೆ. ಇದು ಒಂದು ಕೋಮಿನವರಿಗೆ ಮಾತ್ರ ಸೇರಿದ್ದಲ್ಲ ಎಂದು ಖುರ್ಷಿದ್ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X