ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬಂಡಾಯದಲ್ಲಿ ಅನಂತಕುಮಾರ್ ಕೈವಾಡ?

|
Google Oneindia Kannada News

Did Ananthkumar mastermind BJP crisis?
ಬೆಂಗಳೂರು, ನ. 2 : ಕಳೆದ ವಾರದಿಂದ ನಡೆಯುತ್ತಿರುವ ಬಿಜೆಪಿಯಲ್ಲಿನ ಭಿನ್ನಮತಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಸದ ಅನಂತಕುಮಾರ್ ಅವರೇ ಸೂತ್ರದಾರ! ಇಂತಹ ಸುದ್ದಿಯೊಂದು ರಾಜ್ಯ ರಾಜಕೀಯ ವಲಯದಲ್ಲಿ ಇಂದು ದಟ್ಟವಾಗಿದೆ. ಯಡಿಯೂರಪ್ಪ, ಶೆಟ್ಟರ್, ಜನಾರ್ದನ ರೆಡ್ಡಿ ಅವರ ನಡುವೆ ನಡೆದಿರುವ ಸಮರಕ್ಕೆ ಅನಂತಕುಮಾರ್ ಅವರ ಮಾಸ್ಟರ್ ಮೈಂಡೇ ಕಾರಣ? ಇಬ್ಬರ ಜಗಳದಲ್ಲಿ ಮೂರನೇಯವನು ಆಯ್ದುಕೊಂಡ ಎಂಬಂತೆ ಅದೃಷ್ಟ ಖುಲಾಯಿಸಿದರೆ, ರಾಜ್ಯದ ಅಧಿಕಾರ ಚುಕ್ಕಾಣಿ ಏಕೆ ಹಿಡಿಯಬಾರದು ಎನ್ನುವುದು ಅನಂತಕುಮಾರ್ ಅವರ ಲೆಕ್ಕಾಚಾರ ಎನ್ನಲಾಗಿದೆ.

ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂಬ ಕೊರಗಿನಿಂದ ಜಗದೀಶ್ ಶೆಟ್ಟರ್ ರೆಡ್ಡಿಗಳ ಬೆಂಬಲಿಸಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಅನಂತಕುಮಾರ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿರುವವರು. ಆರ್ಎಸ್ಎಸ್ ಗರಡಿಯಲ್ಲಿ ಪಳಗಿರುವ ಅವರು ಬಿಜೆಪಿ ಹೈಕಮಾಂಡ್ ನ ಒಂದು ಭಾಗವೂ ಹೌದು. ಮಧ್ಯಪ್ರದೇಶದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಎಲ್ಲವೂ ಸರಿ. ಆದರೆ, ಮುಖ್ಯಮಂತ್ರಿ ಆಗಬೇಕು ಎಂಬುದು ಯಾವ ರಾಜಕಾರಣಿಗೆ ತಾನೇ ಇರುವುದಿಲ್ಲ? ಹೀಗಾಗಿ ಇಂತಹ ಅನುಮಾನಗಳಿಗೆ ರೆಕ್ಕೆಪುಕ್ಕೆ ಸೇರಿಕೊಂಡಿವೆ.

ಕಳೆದ ತಿಂಗಳ 24ರಂದು ಹುಬ್ಬಳ್ಳಿಗೆ ಗೌಪ್ಯವಾಗಿ ಭೇಟಿ ನೀಡಿದ ಅನಂತಕುಮಾರ್, ಶೆಟ್ಟರ್ ಹಾಗೂ ಅವರ ಬೆಂಬಲಿಗರು ಸೇರಿಕೊಂಡು ಸರಹೊತ್ತಿನತನಕ ಸಭೆ ನಡೆಸಿದ್ದಾರೆ. ಅಂದೇ ಯಡಿಯೂರಪ್ಪ ಅವರ ಬುಡಕ್ಕೆ ನೀರು ಬಿಡುವಂತಹ ಸ್ಕೇಚ್ ಹಾಕಲಾಗಿದೆ ಎನ್ನುವ ಸಂಗತಿ ಹೊರಬಿದ್ದಿದೆ. ಇದರಲ್ಲಿ ಒಂದು ವಿಷಯವನ್ನು ಗಮನಿಸುವುದಾದರೆ, ಅನಂತಕುಮಾರ್ ಮತ್ತು ಯಡಿಯೂರಪ್ಪ ಒಂದೇ ಪಕ್ಷದಲ್ಲಿದ್ದರೂ ಅವರ ನಡುವಿನ ಬಾಂಧವ್ಯ ಅಷ್ಟಕಷ್ಟೆ. ಜೊತೆಗೆ ಶೆಟ್ಟರ್ ಅವರನ್ನು ಸ್ಪೀಕರ್ ಹುದ್ದೆಯಲ್ಲಿಟ್ಟು ಮೂಲೆಗುಂಪು ಮಾಡಿರುವುದು ಅನಂತಕುಮಾರ್ ಅವರಿಗೂ ನೋವಿದೆ. ಕಾರಣವೇನೆಂದರೆ, ಶೆಟ್ಟರ್ ತಮ್ಮ ರಾಜಕೀಯದ ಆರಂಭದ ದಿನಗಳಿಂದಲೂ ಅನಂತಕುಮಾರ್ ಬಣದಲ್ಲಿ ಗುರುತಿಸಿಕೊಂಡವರು.

ಶೋಭಾ ಕರಂದ್ಲಾಜೆ ಅವರು ಸರಕಾರದಲ್ಲಿ ನಡೆಸುತ್ತಿರುವ ಪಾರುಪತ್ಯ ಅನಂತಕುಮಾರ್ ಅವರಿಗೂ ಬೇಸರ ತರಿಸಿದೆ. ರೆಡ್ಡಿಗಳಿಗೆ ಆಗಿರುವ ಅನ್ಯಾಯವನ್ನು ಮುಂದಿಟ್ಟುಕೊಂಡು ನಾಯಕತ್ವ ಬದಲಿಸಿ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಿದರಾಯಿತು ಎನ್ನುವುದು ಒಂದಡೆಯಾದರೆ, ಆಕಸ್ಮಾತಾಗಿ ಇಬ್ಬರು ಜಗಳದಲ್ಲಿ ಮೂರನೇಯವನಾದ ನನಗೆ ಸಿಎಂ ಪಟ್ಟ ಏಕೆ ದೊರೆಯಬಾರದು ಎನ್ನುವ ದೂರಾಲೋಚನಯಿಂದ ಅನಂತಕುಮಾರ್ ಅವರದಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ. ಇಷ್ಟೆಲ್ಲಾ ಸುದ್ದಿಗಳ ನಡುವೆಯೂ ನವದೆಹಲಿಯಲ್ಲಿ ಅನಂತಕುಮಾರ್ ಸಂಧಾನ ಕಾರ್ಯದಲ್ಲಿ ಫುಲ್ ಬಿಜಿಯಾಗಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X