ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಬಗ್ಗೆ ಗೌರವ : ರೆಡ್ಡಿ ಯುಟರ್ನ್

|
Google Oneindia Kannada News

Janardhan Reddy
ಬಳ್ಳಾರಿ, ಅ. 29 : ಕಳೆದ ಮೂರು ದಿನಗಳಿಂದ ಬಳ್ಳಾರಿ ಸಚಿವರಿಂದ ಆರಂಭವಾಗಿರುವ ಬಂಡಾಯ ಬಿಕ್ಕಟ್ಟು ಸ್ವಲ್ಪ ಮಟ್ಟಿಗೆ ತಣ್ಣಗಾಗುವ ಲಕ್ಷಣಗಳು ಕಂಡು ಬಂದಿವೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಲು ಹಿಂದೇಟು ಹಾಕಿರುವುದು ಒಂದೆಡೆಯಾದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆನ್ನಿಗೆ ಆರ್ಎಸ್ಎಸ್ ಮತ್ತು ಬಿಜೆಪಿ ಹೈಕಮಾಂಡ್ ನಿಂತಿರುವುದು ರೆಡ್ಡಿ ಪಾಳೆಯದಲ್ಲಿ ನಡುಕ ಹುಟ್ಟಿಸಿರುವುದಂತೂ ಸುಳ್ಳಲ್ಲ. ಈ ಎಲ್ಲದರ ಪರಿಣಾಮ ಎರಡು ದಿನಗಳಿಂದ ಬೆಂಕಿ ಚೆಂಡಾಗಿದ್ದ ಜನಾರ್ದನರೆಡ್ಡಿ ಇಂದು ಮೆತ್ತಗಾದವರಂತೆ ಕಂಡು ಬಂದರು.

ಬುಧವಾರ ಯಡಿಯೂರಪ್ಪ ಅವರನ್ನು ನೀಚ, ನರಿ, ಬುದ್ಧಿ ಇಲ್ಲದ ಸಿಎಂ ಹೀಗೆ ಮನಬಂದಂತೆ ವಾಗ್ದಾಳಿ ನಡೆಸಿದ್ದ ಜನಾರ್ದನರೆಡ್ಡಿ, ಇಂದು ಸಂಪೂರ್ಣ ಯು ಟರ್ನ್ ತೆಗೆದುಕೊಂಡಿದ್ದಾರೆ. ಇಂದು ಸಂಜೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಈ ಕ್ಷಣದವರೆಗೂ ಅಪಾರ ಗೌರವ ಹಾಗೂ ಸಂಪೂರ್ಣ ವಿಶ್ವಾಸವಿದೆ. ಆದರೆ, ಮುಖ್ಯಮಂತ್ರಿಗಳ ಸುತ್ತಮುತ್ತ ಇರುವ ಕೆಲ ಸಚಿವರು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ನೆರೆ ಸಂತ್ರಸ್ತರ ವಿಷಯಕ್ಕೆ ಸಂಬಂಧಿಸಿದಂತೆ ಮಂತ್ರಿ ಮಂಡಲದ ದುಷ್ಟ ಮಂತ್ರಿಗಳ ಮಾತು ಕೇಳಿದ ಸಿಎಂ ನಮಗೆ ಸಾಕಷ್ಟು ನೋವು ಆಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

'ವಿನಾಶಕಾಲೇ ವಿಪರೀತ ಬುದ್ಧಿ' ಎನ್ನುವ ಹಾಗೆ ಕೆಲ ಮಂತ್ರಿಗಳ ಮಾತು ಕೇಳಿ ಮುಖ್ಯಮಂತ್ರಿಗಳು ಕಂದಾಯ ಸಚಿವ ಕರುಣಾಕರರೆಡ್ಡಿ ಅವರನ್ನೇ ಮೂಲಗುಂಪಾಗಿಸಿದ್ದಾರೆ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದ ಜನಾರ್ದನರೆಡ್ಡಿ, ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡಲು ಗಣಿ ಮಾಲೀಕರು ಮುಂದೆ ಬಂದರೆ ಅದಕ್ಕೆ ಅಡ್ಡಗಾಲು ಹಾಕುವುದಾದರೂ ಏಕೆ ಎಂದರು. ಮುಖ್ಯಮಂತ್ರಿಗಳ ಈ ನಿರ್ಧಾರದಲ್ಲಿ ಯಡಿಯೂರಪ್ಪ ಸುತ್ತ ಇರುವ ಕೆಲ ದುಷ್ಟ ಮಂತ್ರಿಗಳ ಕೈವಾಡವಿದೆ. ಕರುಣಾಕರರೆಡ್ಡಿ ಅವರ ನೇತೃತ್ವದಲ್ಲಿ ಮನೆಗಳ ನಿರ್ಮಾಣ ಮಾಡಿದರೆ ರೆಡ್ಡಿಗಳು ರಾಜಕೀಯವಾಗಿ ಮತ್ತಷ್ಟು ಪ್ರಬಲರಾಗುತ್ತಾರೆ ಎಂದು ಸಿಎಂ ತಲೆಕೆಡಿಸಲಾಗಿದೆ ಎಂದು ಜನಾರ್ದನರೆಡ್ಡಿ ಕಿಡಿಕಾರಿದರು.

ನಾವು ಬಿಜೆಪಿಯಿಂದ ರಾಜಕೀಯ ಆರಂಭಿಸಿದವರು, ಇಲ್ಲಿಯೇ ನಮ್ಮ ರಾಜಕೀಯ ಜೀವನ ಅಂತ್ಯಗೊಳ್ಳಲಿದೆ. ಬೇರೆ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. ತನುಮನಧನದಿಂದ ಪಕ್ಷವನ್ನು ಕಟ್ಟಿದ್ದೇವೆ. ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ. ಸರಕಾರ ಪಾರದರ್ಶಕವಾಗಿ ಸುಸೂತ್ರವಾಗಿ ನಡೆಯಬೇಕು ಎಂಬುದು ನಮ್ಮ ಆಗ್ರಹ. ಉತ್ತಮ ನಾಯಕರ ಅವಶ್ಯಕತೆ ಇದೆ ಎಂದು ರೆಡ್ಡಿ ಹೇಳಿದರು.

ರೆಡ್ಡಿಗಳು ಬಂಡಾಯದಿಂದ ತಮ್ಮ ಒಂದು ಆಶಯ ಈಡೇರಿಸಿಕೊಂಡಿದ್ದಾರೆ. ತಮ್ಮ ನೇತೃತ್ವದಲ್ಲಿ ಗಣಿ ಮಾಲೀಕರು ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿ ಕೊಡುತ್ತಿರುವುದನ್ನು ರಾಜ್ಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ಸಾಧ್ಯವಾಗದಿದ್ದರೂ ಕೆಲ ಸಚಿವರು ಕೊಕ್, ಸಿಎಂ ಬಳಿ ಇರುವ ಅಧಿಕಾರಿಗಳ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X