ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷ ಪೊಲೀಸ್ ಅಧಿಕಾರಿ ಹಾಸಟ್ಟಿಯವರಿಗೆ ನಮನ

|
Google Oneindia Kannada News

Martyrs Day observed on October 21
ದೇಶದಾದ್ಯಂತ ಅಕ್ಟೋಬರ್ 21 ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸುವ ದಿನ. ಈ ನೆನಪಿಗಾಗಿ ನನ್ನ ಸ್ಮೃತಿಪಟಲದಿಂದ ಅಳಿಸಿಹೋಗದ ಒಬ್ಬ ಪೊಲೀಸ್ ಅಧಿಕಾರಿಗೆ ನುಡಿನಮನ.

* ಚಿದಂಬರ ಬೈಕಂಪಾಡಿ, ಮಂಗಳೂರು

ಹೆಸರು ಕೆ.ಎನ್.ಹಾಸಟ್ಟಿ. ಮೂಲತ: ಧಾರವಾಡ ಜಿಲ್ಲೆಯವರು. ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ಸಬ್‌ಇನ್ಸ್‌ಪೆಕ್ಟರ್ ಆಗಿ ಬಂದಿದ್ದರು ಸುಮಾರು 1985-86ರ ಅವಧಿ (ಕ್ಷಮಿಸಿ ಇಸವಿಯಲ್ಲಿ ವ್ಯತ್ಯಾಸವಿದ್ದರೆ). ಆಗ ನಾನು ಮುಂಗಾರು' ದಿನಪತ್ರಿಕೆಯಲ್ಲಿ ಮುಖ್ಯವರದಿಗಾರನಾಗಿದ್ದೆ. ಈ ಕಾರಣದಿಂದಲೇ ಸಹಜವಾಗಿಯೇ ನಿತ್ಯವೂ ಸಂಜೆ ವೇಳೆಗೆ ಪೊಲೀಸ್ ಠಾಣೆಗಳಿಗೆ ಫೋನ್ ಮಾಡಿ ಆದಿನದ ಕ್ರೈಂ ಸುದ್ದಿಗಳ ಮಾಹಿತಿ ಪಡೆಯುವ ಜವಾಬ್ದಾರಿಯಿತ್ತು. ಆದ್ದರಿಂದ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಅಧಿಕಾರಿಯಿಂದ ಹಿಡಿದು ಕೆಳಹಂತದ ಸಿಬ್ಬಂದಿಯತನಕವೂ ಸ್ನೇಹಿತರು.

ಉರ್ವಾ ಪೊಲೀಸ್ ಠಾಣೆಗೆ ಫೋನ್ ಮಾಡಿದಾಗ ಆದಿನವಷ್ಟೇ ಹಾಸಟ್ಟಿ ಅವರು ಅಧಿಕಾರ ಸ್ವೀಕರಿಸಿದ್ದರು. ಸ್ವತ: ಅವರೇ ತಮ್ಮನ್ನು ಪರಿಚಯಿಸಿಕೊಂಡು ಮುಖತ: ಭೇಟಿಯಾಗೋಣ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು. ಹೀಗೆಯೇ ನಿತ್ಯವೂ ಫೋನ್ ಮಾಡುತ್ತಿದ್ದುದರಿಂದ ಆತ್ಮೀಯತೆ ಬೆಳೆದು ದಿನಕ್ಕೆ ಮೂರು ನಾಲ್ಕು ಸಲ ಅವರೇ ನನಗೆ ಫೋನ್ ಮಾಡುವ ಮಟ್ಟಕ್ಕೆ ಬೆಳೆಯಿತು. ಕಾರಣ ಅವರಿಗೆ ಇಲ್ಲಿನ ಸ್ಥಳೀಯ ತುಳು ಭಾಷೆ ಕಲಿಯಬೇಕಿತ್ತು. ಆದ್ದರಿಂದ ದಿನಕ್ಕೆ ಒಂದು ತುಳು ಶಬ್ದ ಹೇಳಿಕೊಡುತ್ತಿದ್ದೆ, ಅವರು ಅದನ್ನು ಮತ್ತೆ ಮತ್ತೆ ಹೇಳಿ ಕಲಿಯುತ್ತಿದ್ದರು. ಸುಮಾರು ಆರು ತಿಂಗಳಲ್ಲಿ ಬಹಳಷ್ಟು ತುಳು ಶಬ್ದ ಕಲಿತಿದ್ದರು ಮತ್ತು ಪ್ರತೀ ಬಾರಿ ಅವರಿಗೆ ಫೋನ್ ಮಾಡಿದಾಗಲೂ ತುಳುವಿನಲ್ಲೇ ಎಂಚ ಉಲ್ಲಾರ್' (ಹೇಗಿದ್ದೀರಿ) ಎಂದು ಕೇಳುತ್ತಿದ್ದರು.

ಖಡಕ್ ಅಧಿಕಾರಿ ಎನ್ನುವ ಪ್ರಸಿದ್ದಿ ಅವರಿಗಿತ್ತು. ಠಾಣೆಯ ಸಹೋದ್ಯೋಗಿಗಳೊಂದಿಗೂ ಅವರು ಆತ್ಮೀಯರಾಗಿದ್ದರು. ತೊಂದರೆಗೆ ಒಳಗಾದವರಪರ ಅವರಿರುತ್ತಿದ್ದರು. ಯಾರೇ ದೂರುಕೊಟ್ಟರೂ ಖುದ್ದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದರು. ಪ್ರಭಾವಗಳಿಗೆ ಮಣಿಯುತ್ತಿರಲಿಲ್ಲ. ಆಗ ಪಶ್ಚಿಮವಲಯದ ಡಿಐಜಿಯಾಗಿ ಎಲ್.ರೇವಣ್ಣ ಸಿದ್ದಯ್ಯ, ಎಸ್ಪಿಯಾಗಿ ಕಸ್ತೂರಿರಂಗನ್ ಇದ್ದರು. ಆದ್ದರಿಂದ ಕಾನೂನು ಸುವ್ಯವಸ್ಥೆಯಲ್ಲಿ ತುಸು ಏರುಪೇರಾದರೂ ಸಿಬ್ಬಂದಿಗಳ ಗ್ರಹಚಾರ ಬಿಡಿಸುತ್ತಿದ್ದರು ಇಬ್ಬರೂ ಅಧಿಕಾರಿಗಳು. ಎಂ.ಎ.ಅಪ್ಪಯ್ಯ, ಗಣಪತಿಯವರೂ ಆಗ ಇನ್ಸ್‌ಪೆಕ್ಟರ್‌ಗಳು.

ಹಾಸಟ್ಟಿಯವರು ಉರ್ವಾ ಠಾಣೆಗೆ ಬಂದಮೇಲೆ ರಸ್ತೆ ಪಕ್ಕದ ಮೋರಿಗಳ ಮೇಲೆ ಯುವಕರು ಹರಟೆ ಹೊಡೆಯುವುದು, ರಸ್ತೆಯಲ್ಲಿ ಹೋಗುವ ಹೆಣ್ಣುಮಕ್ಕಳನ್ನು ಚುಡಾಯಿಸುವುದು ಇತ್ಯಾದಿ ಘಟನೆಗಳಿಗೆ ಕಡಿವಾಣ ಹಾಕಿದ್ದರು. ಹಾಸಟ್ಟಿ ಬರುತ್ತಿದ್ದಾರೆನ್ನುವುದು ಅವರ ಬುಲೆಟ್ ಬೈಕ್ ಶಬ್ದದಿಂದಲೇ ಗೊತ್ತಾಗುತ್ತಿತ್ತಂತೆ. ಅವರನ್ನು ಫೋನ್ ಮೂಲಕವೇ ಸಂಪರ್ಕಿಸಿ ಮಾತನಾಡುತ್ತಿದ್ದುದನ್ನು ಬಿಟ್ಟರೆ ಮುಖತ: ಭೇಟಿ ಅಗಿರಲಿಲ್ಲ, ಆದರೂ ಆತ್ಮೀಯತೆಗೇನೂ ಕೊರತೆ ಇರಲಿಲ್ಲ.

ಒಂದು ದಿನ ಹಾಸಟ್ಟಿ ಅವರ ಪಾಲಿಗೆ ದುರ್ದಿನ. ಮಧ್ಯಾಹ್ನ ತಮ್ಮ ಠಾಣೆಯಿಂದ ಉರ್ವಾಸ್ಟೋರ್‌ನಲ್ಲಿದ್ದ ಕ್ವಾರ್ಟಸ್‌ಗೆ ಊಟಕ್ಕೆ ಬಂದು ವಿಶ್ರಾಂತಿ ಪಡೆದು ಮತ್ತೆ ಸಂಜೆ ವೇಳೆಗೆ ಠಾಣೆಗೆ ತೆರಳುತ್ತಿದ್ದರು. ಮೋರಿಯಲ್ಲಿ ಕುಳಿತು ಹರಟುತ್ತಿದ್ದ ಯುವಕರನ್ನು ಕದಲುವಂತೆ ಸೂಚಿಸಿದಾಗ ಆ ಯುವಕರು ಉಲ್ಟಾ ಮಾತಾಡಿದರಂತೆ. ಯುವಕರಾದ ಹಾಸಟ್ಟಿ ಬುಲೆಟ್ ನಿಲ್ಲಿಸಿ ಇಳಿದು ತಮ್ಮ ಸೊಂಟದ ಬೆಲ್ಟ್ ತೆಗೆಯುವಷ್ಟರಲ್ಲಿ ಯುವಕರಿಂದಲೇ ದಾಳಿಗೊಳಗಾದರು. ನೆತ್ತರ ಮಡುವಿನಲ್ಲಿ ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ತುಳು ಕಲಿಯಲು ಹಂಬಲಿಸುತ್ತಿದ್ದ ಹಾಸಟ್ಟಿಯವರ ಕನಸು ನನಸಾಗಲೇ ಇಲ್ಲ. ಅವರನ್ನು ಕಣ್ಣಲ್ಲಿ ಕಂಡದ್ದು ಅವರಿಗೆ ಅಂತಿಮ ನಮನ ಸಲ್ಲಿಸುವಾಗ ಹಾಯಾಗಿ ಮಲಗಿದ್ದಾಗ. ಆ ದೃಶ್ಯ ಈಗಲೂ ಕಣ್ಣಮುಂದಿದೆ.

ಇದಿಷ್ಟೇ ಅಂದುಕೊಳ್ಳಬೇಡಿ, ಹಾಸಟ್ಟಿ ಅವರು ಕುಟುಂಬಕ್ಕೆ ಏನನ್ನೂ ಕೂಡಿಟ್ಟಿರಲಿಲ್ಲ, ಪತಿ, ಇಬ್ಬರು ಪುಟ್ಟ ಗಂಡು ಮಕ್ಕಳು. ಬಡತನದ ಬೇಗೆಯಲ್ಲಿತ್ತು ಆ ಕುಟುಂಬ ಎನ್ನುವುದು ಅವರ ಅಗಲುವಿಕೆಯಿಂದ ಬಾಹ್ಯ ಜಗತ್ತಿನ ಅರಿವಿಗೆ ಬಂತು. ರೇವಣ್ಣ ಸಿದ್ದಯ್ಯ ಮತ್ತು ಕಸ್ತೂರಿರಂಗನ್ ಹಾಸಟ್ಟಿ ಕುಟುಂಬಕ್ಕೆ ನೆರವಾಗಲು ಜನತೆಯಲ್ಲಿ ಮನವಿ ಮಾಡಿಕೊಂಡರು. ಒಬ್ಬ ದಕ್ಷ ಅಧಿಕಾರಿಗೆ ಸಮಾಜ ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದಕ್ಕೆ ಹಾಸಟ್ಟಿ ಕುಟುಂಬಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ (ಆಗ ಉಡುಪಿ ಜಿಲ್ಲೆ ಆಗಿರಲಿಲ್ಲ) ಜನ ನೆರವಿನ ಹೊಳೆಯನ್ನೇ ಹರಿಸಿದ್ದರು. ಹಾಸಟ್ಟಿ ಅವರ ಹುಟ್ಟೂರಲ್ಲಿ ಪುಟ್ಟ ಮನೆ ಕಟ್ಟಿಸಿಕೊಟ್ಟು ದಾನಿಗಳು ಕೊಟ್ಟ ನೆರವಿನ ಮೊತ್ತವನ್ನು ಅವರ ಮನೆಗೇ ಹೋಗಿ ಕೊಟ್ಟು ಬರುವ ಕಾರ್ಯಕ್ರಮ ರೂಪಿಸಲಾಗಿತ್ತು. ಅಪ್ಪಯ್ಯ ಮತ್ತು ಗಣಪತಿಯವರು ಪತ್ರಕರ್ತರು ಮತ್ತು ಪೊಲೀಸ್ ಸಿಬ್ಬಂದಿಗಳ ಕುಟುಂಬದವರನ್ನು ಧಾರವಾಡಕ್ಕೆ ಕರೆದೊಯ್ಯುವ ಹೊಣೆ ಹೊತ್ತಿದ್ದರು. ರಾತ್ರಿಯೆಲ್ಲಾ ಡಿಲಕ್ಸ್ ಬಸ್ಸಿನಲ್ಲಿ ಪ್ರಯಾಣಿಸಿ ಹಾಸಟ್ಟಿಯವರ ಹುಟ್ಟೂರು ತಲುಪಿ ದು:ಖತಪ್ತ ಕುಟುಂಬಕ್ಕೆ ನೆರವು ಹಸ್ತಾಂತರಿಸಿದ ಆ ನೆನಪುಗಳು ಈಗಲೂ ಹಚ್ಚಹಸಿರು. ಈಗ ಹಾಸಟ್ಟಿಯವರ ಮಕ್ಕಳು ದೊಡ್ಡವರಾಗಿ ಉದ್ಯೋಗದಲ್ಲಿರಬಹುದು ಅಂದುಕೊಂಡಿದ್ದೇನೆ.

(ಓದುಗರ ಗಮನಕ್ಕೆ : ಕೆಎನ್ ಹಾಸಟ್ಟಿಯವರ ಛಾಯಾಚಿತ್ರ ದೊರಕದ ಕಾರಣ ಸಾಂಕೇತಿಕ ಚಿತ್ರ ಬಳಸಲಾಗಿದೆ - ಸಂಪಾದಕ.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X