ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೆದಾಗಲೆಲ್ಲ ಹಿಂಬಾಲಿಸಬೇಕೆ : ದತ್ತ ಆಕ್ರೋಶ

|
Google Oneindia Kannada News

YSV Datta
ಬೆಂಗಳೂರು, ಅ. 19 : ಹೆಚ್ಚಿನ ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ದೆಹಲಿಗೆ ಇಂದು ಹೋಗುತ್ತಿರುವ ಸರ್ವಪಕ್ಷಗಳ ನಿಯೋಗದಲ್ಲಿ ಭಾಗವಹಿಸದಿರಲು ಜೆಡಿಎಸ್ ನಿರ್ಧರಿಸಿದೆ.

ಈ ವಿಷಯವನ್ನು ತಿಳಿಸಿರುವ ಜೆಡಿಎಸ್ ನಾಯಕ ವೈಎಸ್ ವಿ ದತ್ತ ಅವರು, ಪ್ರತಿಪಕ್ಷಗಳನ್ನು ಈ ನಿಟ್ಟಿನಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರಕ್ಕೆ ಸಲ್ಲಿಸುತ್ತಿರುವ ಮನವಿಯ ಪತ್ರದ ಪ್ರತಿಯನ್ನು ನೀಡುವ ಸೌಜನ್ಯತೆಯನ್ನು ಕೂಡ ಬಿಜೆಪಿ ತೋರಿಲ್ಲ ಎಂದರು.

ಅವರು ಕರೆದಾಗಲೆಲ್ಲ ಅವರನ್ನು ಹಿಂಬಾಲಿಸುವುದರಲ್ಲಿ ಅರ್ಥವಿಲ್ಲ. ಅದಲ್ಲದೆ, ಯಾವ ಕಾರಣಕ್ಕಾಗಿ ಮುಖ್ಯಮಂತ್ರಿಗಳು ನಿಯೋಗವನ್ನು ಕೊಂಡೊಯ್ಯುತ್ತಿದ್ದಾರೆ ಎಂಬುದನ್ನೇ ಬಿಜೆಪಿ ಸ್ಪಷ್ಟಪಡಿಸಿಲ್ಲ. ಕೇಂದ್ರ ನೀಡಿರುವ ನೆರೆ ಪರಿಹಾರ ನಿಧಿ ಸರಿಯಾಗಿ ವಿನಿಯೋಗಿಸಲಾಗಿದೆ ಎಂದು ತಿಳಿಸುವುದಕ್ಕಾ? ನೀಡಿರುವ ಹಣ ಸಾಕಾಗುತ್ತಿಲ್ಲವೆಂದಾ? ಇನ್ನೂ ಹೆಚ್ಚಿನ ನಿಧಿ ಬೇಕೆಂದು ಆಗ್ರಹಿಸಲಾ? ಎಂಬುದು ಸ್ಪಷ್ಟವಾಗಿಲ್ಲ ಎಂದು ದತ್ತ ನುಡಿದರು.

ಕೇಂದ್ರ ಈಗಾಗಲೇ ಸಾವಿರ ಕೋಟಿ ರು. ಅನುದಾನ ನೀಡುವ ವಾಗ್ದಾನ ನೀಡಿದೆ. ಹೀಗಿರುವಾಗ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯುವ ಔಚಿತ್ಯವೇ ಇಲ್ಲ. ಅವರು ನೀಡುವ ಪರಿಹಾರ ನಿಧಿಯನ್ನು ಬಿಜೆಪಿ ಸಂತ್ರಸ್ತರಿಗೆ ಸರಿಯಾಗಿ ಹಂಚಲಿ. ಮುಂದಿನ ಮಾತು ಆಮೇಲೆ ಎಂದು ಅವರು ಹೇಳಿದರು.

ಬಿಜೆಪಿ ನಿರಾಕರಣೆ : ದೆಹಲಿಗೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯುವ ಮೊದಲು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ದತ್ತ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಬಿಜೆಪಿ ನಾಯಕ ಅನಂತಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿಗಳ ನೇತೃತ್ವದ ನಿಯೋಗದಲ್ಲಿ, ಶೋಭಾ ಕರಂದ್ಲಾಜೆ, ವಿಎಸ್ ಆಚಾರ್ಯ, ಕರುಣಾಕರ ರೆಡ್ಡಿ, ಬಸವರಾಜ ಬೊಮ್ಮಾಯಿ ಭಾಗವಹಿಸುತ್ತಿದ್ದು, ಇಂದು ರಾತ್ರಿ ದೆಹಲಿಗೆ ತೆರಳಲಿದ್ದಾರೆ. ಮಂಗಳವಾರ ಸಂಜೆ ಐದು ಗಂಟೆಗೆ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನಕ್ಕೆ ಮನವಿಯನ್ನು ಸಲ್ಲಿಸಲಿದೆ.

ಇಂದು ಧಾರವಾಡ ಜಿಲ್ಲೆಯ ನರಗುಂದ ತಾಲೂಕಿನ ಕೊಂಡವಾಡದಲ್ಲಿ ಗ್ರಾಮ ಸ್ಥಳಾಂತರಕ್ಕೆ ಶಂಕುಸ್ಥಾಪನೆ ಸಲ್ಲಿಸಿದ ನಂತರ ಮಾತನಾಡಿದ ಯಡಿಯೂರಪ್ಪ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು 6 ಸಾವಿರ ಕೋಟಿ ರು. ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X