ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಬರ್ ಅಪರಾಧ ತಡೆಗೆ ಕಠಿಣ ಕ್ರಮ: ಆಚಾರ್ಯ

|
Google Oneindia Kannada News

Cyber criminals to be tried in Bangalore
ಬೆಂಗಳೂರು, ಅ.10: ಕರ್ನಾಟಕ ರಾಜ್ಯದಲ್ಲಿ ಸೈಬರ್ ಅಪರಾಧಗಳ ತಡೆಗೆ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಅವರು ತಿಳಿಸಿದರು.
ಅವರು ಶುಕ್ರವಾರ ನಗರದಲ್ಲಿ ಏರ್ಪಡಿಸಲಾಗಿದ್ದ ಬೆಂಗಳೂರು ಸೈಬರ್ ಸೆಕ್ಯುರಿಟಿ ಸಮಿಟ್ 2009ರ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸೈಬರ್ ಪೊಲೀಸ್ ಠಾಣೆ ಸ್ಥಾಪಿಸಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆ ನಮ್ಮದು. ಈ ಸೈಬರ್ ಠಾಣೆಯಲ್ಲಿ ಕಳೆದ ಏಳು ವರ್ಷಗಳಲ್ಲಿ ಸುಮಾರು 600 ಪ್ರಕರಣಗಳು ದಾಖಲಾಗಿದ್ದು, ಡಿಐಜಿ ನೇತೃತ್ವದ ತಂಡವು ಶೇ. 98 ರಷ್ಟು ಪ್ರಕರಣಗಳ ವಿಲೇವಾರಿ ಮಾಡಿದೆ.

ಸೈಬರ್ ಅಪರಾಧಗಳ ತನಿಖೆಗೆ ಪೊಲೀಸರಿಗೆ ತರಬೇತಿ ನೀಡುವ ಉದ್ದೇಶದಿಂದ ಸಿಓಡಿ ಮುಖ್ಯ ಕಛೇರಿಯಲ್ಲಿ ನಾಸ್‌ಕಾಮ್ ಸಹಯೋಗದೊಂದಿಗೆ ಸೈಬರ್ ಲ್ಯಾಬ್ ಸ್ಥಾಪಿಸಲಾಗಿದೆ. ಇಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗೆ ಫಿಶಿಂಗ್, ಸ್ಪಾಮ್, ಹ್ಯಾಕಿಂಗ್, ಪೈರಸಿ, ಇ-ಕಾಮರ್ಸ್ ಮುಂತಾದ ಸೈಬರ್ ಅಪರಾಧಗಳ ತನಿಖೆ ನಡೆಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ರಾಷ್ಟ್ರೀಯ ಕಾನೂನು ಶಾಲೆ ಹಾಗೂ ಸೈಬರ್ ಲಾ ಕಾಲೇಜುಗಳ ಸಹಕಾರದಿಂದ ಸೈಬರ್ ಅಪರಾಧಗಳ ಕುರಿತು ಕಾನೂನು ರೂಪಿಸಲಾಗುತ್ತಿದೆ. ಸೈಬರ್ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಸೈಬರ್ ರೆಗ್ಯುಲೇಷನ್ ಅಪೆಲೇಟ್ ಟ್ರಿಬ್ಯುನಲ್‌ನ ದಕ್ಷಿಣ ವಲಯ ಕಛೇರಿಯನ್ನು ಬೆಂಗಳೂರಿನಲ್ಲಿ ತೆರೆಯಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಸೈಬರ್ ರೆಗ್ಯುಲೇಶನ್ ಅಪಲೇಟ್ ಟ್ರಿಬ್ಯೂನಲ್ ಅಧ್ಯಕ್ಷಾಧಿಕಾರಿ ನ್ಯಾ:ಮೂ; ರಾಜೇಶ್ ಟಂಡನ್ ಅವರು ಮಾತನಾಡಿ, ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಿದರೆ ಸೈಬರ್ ರೆಗ್ಯುಲೇಷನ್ ಅಪಲೇಟ್ ಟ್ರಿಬ್ಯುನಲ್, ದಕ್ಷಿಣ ವಲಯ ಕಛೇರಿಯನ್ನು ತೆರೆಯಲಾಗುವುದು ಎಂದು ತಿಳಿಸಿದರು.

ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಸಿ. ಮನೋಳಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಅರವಿಂದ ಜನ್ನು, ಕಾನೂನು ಇಲಾಖೆ ಕಾರ್ಯದರ್ಶಿ ಸಿದ್ದಲಿಂಗೇಶ್ ಮೊದಲಾದವರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X