ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ ಪಂಡಿತ ರಾಜನ್ ಬಾಲ ಇನ್ನಿಲ್ಲ

|
Google Oneindia Kannada News

Rajan Bala, image courtesy : Indiatimes
ಬೆಂಗಳೂರು, ಅ.. 9 : ಹೆಸರಾಂತ ಕ್ರಿಕೆಟ್ ಬರಹಗಾರ ಮತ್ತು ಕ್ರೀಡಾ ವರದಿಗಾರ ರಾಜನ್ ಬಾಲ ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನಹೊಂದಿದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಎರಡುವಾರದ ಹಿಂದೆ ಹೃದಯಾಘಾತಕ್ಕೆ ತುತ್ತಾಗಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಡಯಲಾಲಿಸ್ ಪಡೆಯುತ್ತಿದ್ದ ಅವರು ಕೋಮಾ ಸ್ಥಿತಿ ತಲುಪಿದ್ದರು. ಮತ್ತೆ ಚೇತರಿಸಿಕೊಳ್ಳಲು ಆಗಲೇ ಇಲ್ಲ.

ಅವರ ಮೂಲ ನಾಮಧೇಯ ನಟರಾಜನ್ ಬಾಲಸುಬ್ರಮಣ್ಯಂ ಎಂದಿತ್ತಾದರೂ ಸಹೋದ್ಯೋಗಿಗಳಿಗೆ ಮತ್ತು ಮಿತ್ರ ವರ್ಗಕ್ಕೆ ಅವರು ರಾಜನ್ ಬಾಲ ಎಂದೇ ಚಿರಪರಿಚಿತರಾಗಿದ್ದರು. ಅನೇಕ ವರ್ಷಗಳ ಕಾಲ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಕ್ರೀಡಾ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಹೆರಾಲ್ಡ್ ತೊರೆದ ನಂತರ ಭಾರತದ ಇತರ ನಾನಾ ಪತ್ರಿಕೆಗಳಲ್ಲಿ ದುಡಿಯುವುದರ ಜತೆಗೆ ಕ್ರಿಕೆಟ್ ಕುರಿತು ಗಂಭೀರ ಮತ್ತು ಮನೋಜ್ಞ ಲೇಖನಗಳನ್ನು ಬರೆಯುತ್ತಿದ್ದರು.

1983 ರಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಂಡಿತ್ತು. ಆಗ, ತಂಡದಲ್ಲಿ ವೇಗದೂತರದ್ದೇ ದರ್ಬಾರು. ಮೈಕೇಲ್ ಹೋಲ್ಡಿಂಗ್, ಬಿಗ್ ಬರ್ಡ್ ಜೋಯಲ್ ಗಾರ್ನರ್, ಮಾಲ್ಕಂ ಮಾರ್ಷಲ್ , ಆಂಡಿ ರಾಬರ್ಟ್, ಕರ್ಟ್ಲಿ ಆಂಬ್ರೋಸ್ ವೇಗಕ್ಕೆ ಭಾರತದ ದಾಂಡಿಗರು ತತ್ತರಿಸುತ್ತಿದ್ದರು. ಕಾನ್ ಪುರ್ ಟೆಸ್ಟ್ ನಲ್ಲಿ ಮಾರ್ಷಲ್ ಬೌಲಿಂಗ್ ದಾಳಿಗೆ ಭಾರತದ ವಿಕೆಟ್ಟುಗಳು ಪುತಪುತನೆ ಉದುರಿದವು.

10 ರನ್ ಆಗುವಷ್ಟರಲ್ಲಿ ನಾಲ್ವರು ಪ್ರಮುಖ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿದ್ದರು. ಭಾರತದ ಸ್ಥಿತಿ ಗಂಭೀರವಾಗಿತ್ತು. ಹೆರಾಲ್ಡ್ ಪತ್ರಿಕೆಗೆ ಆ ಪಂದ್ಯದ ನೇರ ವರದಿಯನ್ನು ಮಾಡಿದ ಬಾಲ, ಮಾರ್ಷಲ್ ಅವರ ಆಕ್ರಮಣಕಾರಿ ದಾಳಿಯನ್ನು ಬಣ್ಣಿಸಿದ್ದು ಹೀಗೆ : Marshall Law Declared in Kanpur. ಆ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ ಇನ್ನಿಂಗ್ಸ್ ಮತ್ತು 83 ರನ್ನುಗಳ ಅಂತರದಿಂದ ಗೆದ್ದುಕೊಂಡಿತು.

ಕ್ರಿಕೆಟ್ ಎಂದರೆ ಕೇವಲ ಬ್ಯಾಟ್ ಮತ್ತು ಬಾಲುಗಳ ನಡುವಿನ ಚೆಲ್ಲಾಟ ಮತ್ತು ಸ್ಕೋರು ಬೋರ್ಡಿನ ಓಲಾಟ ಎಂದು ಬಾಲ ಅವರು ಭಾವಿಸಿರಲಿಲ್ಲ. ಕ್ರಿಕೆಟ್ ಒಂದು ಜೀವನ ಶೈಲಿ, ಆಟಗಾರನ ಮಾನಸಿಕ ಸ್ಥ್ಯರ್ಯವನ್ನು ಒರೆಗೆ ಹಚ್ಚುವ ಮಹತ್ತರ ಘಳಿಗೆಗಳ ಸರಮಾಲೆ ಎಂದು ಅವರು ನಂಬಿದ್ದರು. ಶುಷ್ಕ ಕ್ರೀಡಾ ವರದಿಗಳನ್ನು ಬರೆದು ಕೈತೊಳೆದುಕೊಳ್ಳದ ಬಾಲ, ಸೊಗಸಾದ ಇಂಗ್ಲಿಷ್ ನಲ್ಲಿ ಪಂದ್ಯದ ಆಗುಹೋಗುಗಳನ್ನು ಬಿಂಬಿಸಿ ಎಂಜಿ ರಸ್ತೆಯಿಂದ ಸೀದಾ ಪ್ರೆಸ್ ಕ್ಲಬ್ಬಿಗೆ ಬಂದು ಐದಾರು ಬಾಟಲು ಬೀರುಗಳಲ್ಲಿ ಮಿದುಳು ತೊಳೆದುಕೊಳ್ಳುತ್ತಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X