ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2012ರ ಡಿಸೆಂಬರ್ 21ರಂದು ಕಲಿಗಾಲದ ಅಂತ್ಯ?

By Staff
|
Google Oneindia Kannada News

16th century prophet Nostradamus
ಇಸ್ವಿ 2012ರ ಡಿಸೆಂಬರ್ 21ರಂದು ಪ್ರಳಯ ಸಂಭವಿಸಲಿದೆ, ಕಲಿಯುಗದ ಅಂತ್ಯವಾಗಲಿದೆ ಎಂಬ ಸುದ್ದಿ ಜ್ಯೋತಿಷ್ಯ ನಂಬುವವರ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಕಲಿಗಾಲ, ಭವಿಷ್ಯ ಮಣ್ಣುಮಸಿ ನಂಬದವರಲ್ಲಿ ತಮಾಷೆ ಮತ್ತು ವಿಸ್ಮಯವನ್ನು ಹುಟ್ಟುಹಾಕಿದೆ. ಜಗತ್ತಿನ ಜ್ಯೋತಿಷಿಗಳೆಲ್ಲ ಗ್ರಹಗಳ ದಿಕ್ಕುದೆಸೆಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದಕ್ಕಾಗೇ ವೆಬ್ ಸೈಟುಗಳು ಹುಟ್ಟಿಕೊಂಡಿವೆ. ಸೈಟು ಕೊಳ್ಳುವವರು ಹಿಂದೆ ಮುಂದೆ ನೋಡುತ್ತಿದ್ದಾರೆ. ಇಂಟರ್ನೆಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಭವಿಷ್ಯವನ್ನು ನುಡಿದದ್ದು, ಮ್ಯಾಡ್ ಪೋಯೆಟ್, ಪ್ರಾಫೆಟ್ ಆಫ್ ಡೂಮ್ಸ್ ಎಂದೆಲ್ಲ ಕರೆಸಿಕೊಂಡಿದ್ದ ಖ್ಯಾತ ಭವಿಷ್ಯಕಾರ ನಾಸ್ಟ್ರಡಾಮಸ್. ಆತ ಹೇಳಿರುವ ಅನೇಕ ದುರಂತಗಳ ಭವಿಷ್ಯ ನಿಜವಾಗಿದೆ. ಈ ಭವಿಷ್ಯವೂ ನಿಜವಾಗಲಿದೆಯಾ? ಭವಿಷ್ಯವನ್ನು ಅತಿಯಾಗಿ ನಂಬುವ ರಾಮಚಂದ್ರೇ ಗೌಡರು ಏನು ಹೇಳುತ್ತಾರೆ? ಅಥವಾ ಉಲ್ಕೆಗಳ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿರುವ ನಮ್ಮ ವಿಜ್ಞಾನಿಗಳು ಇದನ್ನು ತಪ್ಪಿಸಲು ಶಕ್ಯರೇ? ಕಾಲವೇ ಉತ್ತರಿಸಲಿದೆ. ಅಲ್ಲಿಯವರೆಗೆ ಕಾದು ನೋಡೋಣ.

* ಶಿ.ಜು. ಪಾಶ, ಶಿವಮೊಗ್ಗ

ನಾವೀಗ 21ನೇ ಶತಮಾನದಲ್ಲಿದ್ದೇವೆ. ವೈಜ್ಞಾನಿಕವಾಗಿ ಭಾರೀ ಪವರ್ ಫುಲ್ ಪ್ರಪಂಚ ನಮ್ಮದು. ಮೊನ್ನೆ ಮೊನ್ನೆಯಷ್ಟೇ ಚಂದ್ರನಲ್ಲಿ ನೀರಿದೆ ಎಂಬುದನ್ನು ಕಂಡುಹಿಡಿದಿದ್ದೇವೆ. ಕಂಡುಹಿಡಿದಿದ್ದೆಲ್ಲ ಕ್ರಾಂತಿಯಾಗಿದೆ. ಈ ಕ್ರಾಂತಿಗಳಿಂದಲೇ ಜಗತ್ತು ಬೆಳೆದಿದೆ. ದೊಡ್ಡದೊಂದು ಫೋನ್ ಪೆಟ್ಟಿಗೆಯಿಂದ ಸ್ಲಿಮ್ ಸೆಲ್ ಗಳವರೆಗೆ ತಲುಪಿದ್ದೇವೆ. ದೊಡ್ಡ ರೇಡಿಯೋ ಪೆಟ್ಟಿಗೆಗಳು ಎಫ್.ಎಂ.ವರೆಗೆ ಬಂದು ನಿಂತಿವೆ. ಮನೆಯಷ್ಟು ದೊಡ್ಡ ಕ್ಯಾಮರಾ ಈಗ ಬದಲಾಗಿ ಪಾಕೆಟ್ ಕ್ಯಾಮ್ ಆಗಿಬಿಟ್ಟಿದೆ... ಜಗತ್ತು ಬದಲಾಗುತ್ತಲೇ ಇದೆ. ಕ್ರಾಂತಿಗಳು ದಿನನಿತ್ಯ ಸಂಭವಿಸುತ್ತಿವೆ.

ಜಗತ್ತು ಇಷ್ಟೆಲ್ಲಾ ಮುಂದುವರೆದಿರುವಾಗ, ನಾವೆಲ್ಲಾ ತೀರಾ ಮುಂದುವರೆದ 21ನೇ ಶತಮಾನದ ಜನ ಎಂದು ಹೇಳಿಕೊಳ್ಳುತ್ತಿರುವಾಗ, ಈ ನಾಸ್ಟ್ರಡಾಮಸ್ ಎಂಬ ಭವಿಷ್ಯಕಾರ ನಮಗೇಕೆ ಕಾಡುತ್ತಿದ್ದಾನೆ? ಅದೂ 16ನೇ ಶತಮಾನದಲ್ಲಿದ್ದ ಈ ವ್ಯಕ್ತಿ ಅದೇಕೆ ನಮ್ಮನ್ನು ಬಿಡದೇ ಭಯಕ್ಕೆ, ಆತಂಕಕ್ಕೆ ದೂಡುತ್ತಿದ್ದಾನೆ? ಇವನ ಪದ್ಯಗಳು ಅದೇಕಿಷ್ಟು ದುರಂತಗಳನ್ನು ಸೃಷ್ಟಿಸುತ್ತಿವೆ? ಇಡೀ ಜಗತ್ತು ನಾಸ್ಟ್ರಡಾಮಸ್‌ನ ಪದ್ಯಗಳ ಒಳಾರ್ಥ ಹುಡುಕುವುದರಲ್ಲೇ ಯಾಕೆ ತಲ್ಲೀನವಾಗಿದೆ? ಈತನ ಪದ್ಯಗಳಿಗೆ ಸತ್ಯ ಹೇಳುವ ತಾಕತ್ತು ನಿಜವಾಗಲೂ ಇದೆಯಾ? ಅಥವಾ ಇದೆಲ್ಲ ನಮ್ಮೆಲ್ಲ ಜನರ ಸೃಷ್ಟಿನಾ? ಇದೆಲ್ಲ ನಮ್ಮ ಕಲ್ಪನೆಯಾದರೆ ನಾಸ್ಟ್ರಡಾಮಸ್‌ನ ಭವಿಷ್ಯ ಸತ್ಯವೂ ಆಗಿದೆಯಲ್ಲ!

ಎರಡನೇ ಹೆನ್ರಿ ದೊರೆಯ ದುರಂತದ ಸಾವು, ಲಂಡನ್ ಹತ್ತಿ ಉರಿದ ಭಯಾನಕತೆ, ಅಮೇರಿಕಾದ ಮೇಲಿನ 9/11ರ ಭಯೋತ್ಪಾದಕ ದಾಳಿ, ಹಿಟ್ಲರ್‌ನಿಂದ ನಡೆದ ಎರಡನೇ ವಿಶ್ವಯುದ್ಧ, ಹಿರೋಶಿಮಾ-ನಾಗಸಕಿಯ ಮೇಲಿನ ಆಟಂಬಾಂಬ್ ದಾಳಿ, ಲೂಯೀಸ್ ಪಾಶ್ಚರನ ಕುರಿತ ಸತ್ಯ, ಪ್ರಿನ್ಸೆಸ್ ಡಯಾನಳ ಭಯಾನಕ ಅಪಘಾತದ ಸಾವು, ಫ್ರೆಂಚ್ ಕ್ರಾಂತಿ, ಭೂಕಂಪನಗಳು, ಸುನಾಮಿ, ಇಡೀ ಜಗತ್ತಿನ ವಿನಾಶದ ಬಗ್ಗೆಯೂ ನಾಸ್ಟ್ರಡಾಮಸ್ ಮಾತನಾಡಿದ್ದಾನೆ... ಇನ್ನು ಮುಂದಿನ ದಿನಗಳ ಭವಿಷ್ಯ ನುಡಿಯುತ್ತಾನೆ... ಅವನ ತಾಕತ್ತು ಇರುವುದೇ ಅವನು ನುಡಿದ ಭವಿಷ್ಯದಲ್ಲಿ!

16ನೇ ಶತಮಾನದಲ್ಲಿ ಬದುಕಿದ್ದ ಮನುಷ್ಯ ಹಿಂದಿನ, ಇಂದಿನ ಮತ್ತು ನಾಳೆಯ ಭವಿಷ್ಯ ನುಡಿದಿದ್ದಾನೆಂದರೆ ನಂಬುವುದಾದರೂ ಹೇಗೆ? ಇಂಥ ಅನುಮಾನವಿಟ್ಟುಕೊಂಡೇ ಜಗತ್ತು ಆತನ ಬಗ್ಗೆ, ಆತನ ಪದ್ಯಗಳ ಬಗ್ಗೆ ಕುತೂಹಲಕ್ಕೆ ಬಿತ್ತು. ಕುತೂಹಲಕ್ಕೆ ಬಿದ್ದವರು ಆತನ ಬಗ್ಗೆ ಅಧ್ಯಯನ ಆರಂಭಿಸಿದರು. ನಡೆದ ಅಧ್ಯಯನಗಳೆಲ್ಲ ನಾಸ್ಟ್ರಡಾಮಸ್‌ನನ್ನು ಅದ್ಭುತ ಮನುಷ್ಯನನ್ನಾಗಿ ಜಗತ್ತಿಗೆ ಪರಿಚಯಿಸಿದವು. ಆತನ ಪದ್ಯಗಳು ಜಗತ್ತಿನ ಜನರ ನಿದ್ದೆಗೆಡಿಸಿದವು. ದೊಡ್ಡ ದೊಡ್ಡ ದೇಶಗಳು ಈಗಲೂ ಕಣ್ಣುಮುಚ್ಚದೇ ನಾಸ್ಟ್ರಡಾಮಸ್‌ನ ಪದ್ಯಗಳನ್ನು ಓದುತ್ತಿವೆ. ಓದಿ ಭಯದ ಛಾಯೆಯಲ್ಲಿ ಬಿದ್ದಿವೆ. ಯಾವಾಗ? ಏನೋ? ಎಂಬ ಆತಂಕ ಇವರನ್ನು ಬಿಟ್ಟು ಅಲುಗಾಡುತ್ತಿಲ್ಲ!

ನಾಸ್ಟ್ರಡಾಮಸ್-ಓರ್ವ ಭಯ ಹುಟ್ಟಿಸುವ ಲೇಖಕ. Famous Centuriesನ ಲೇಖಕನಾಗಿರುವ ನಾಸ್ಟ್ರಡಾಮಸ್ ಹುಟ್ಟಿದ್ದು 1503ರಲ್ಲಿ. ಸ್ಪೈನ್ ಮೂಲದವನು. ಈತನ ವೃತ್ತಿ ಇದ್ದುದು ಡಾಕ್ಟರ್ ಆಗಿ. ಸ್ಪೈನಿನ ತುಂಬಾ ಮಹಾಮಾರಿ ಪ್ಲೇಗ್ ಬಾಯಿ ಬಿಟ್ಟು ನೂರಾರು ಜನರನ್ನು ನುಂಗಲು ತೊಡಗಿದಾಗ ಆ ಜನರನ್ನು ಪ್ಲೇಗ್‌ನಿಂದ ಕಾಪಾಡಲು ಓರ್ವ ವೈದ್ಯನಾಗಿ ಹೋರಾಡಿದ. ವೈದ್ಯಕೀಯ ವೃತ್ತಿಯಲ್ಲಿದ್ದಾಗಲೇ ತನ್ನ ಕುಟುಂಬವನ್ನು ಪ್ಲೇಗ್ ನುಂಗಿಬಿಟ್ಟಿತು. ಆಗ ಈ ವೃತ್ತಿಯನ್ನು ಪಕ್ಕಕ್ಕಿಟ್ಟು ಆಸಕ್ತಿ ಮೂಡಿಸಿಕೊಂಡಿದ್ದು ಜ್ಯೋತಿಷ್ಯದ ಕಡೆಗೆ. ಅದರಲ್ಲಿ ಪಾಂಡಿತ್ಯ ಗಳಿಸಿದ. ಈ ನಡುವೆ ನಾಸ್ಟ್ರಡಾಮಸ್ ಬಹಳ ತೀವ್ರವಾಗಿ ತೊಡಗಿಕೊಂಡಿದ್ದು ವಿಶೇಷವಾದ Pagon Methodನಲ್ಲಿ. ಇದೊಂದು ರೀತಿಯ ಆಚರಣೆ. ಈ ಮೆಥೆಡ್ಡನ್ನು ಬಹಿರಂಗವಾಗಿ ತೋರಿಸಿಕೊಳ್ಳವಂತಿರಲಿಲ್ಲ. ಕ್ಯಾಥೋಲಿಕ್ ಧರ್ಮಗುರುವಿಗಂತೂ ಈ ಮೆಥೆಡ್ಡನ್ನು ತೋರಿಸಿಬಿಟ್ಟಿದ್ದರೆ ಅದೊಂದು ಭಯಾನಕ ಘಟನೆಯೇ ಆಗಿರುತ್ತಿತ್ತು. ಹಾಗಾಗಿ, ನಾಸ್ಟ್ರಡಾಮಸ್ Pagon Methodನ್ನು ಗುಪ್ತವಾಗಿ, ಜಗತ್ತು ಮಲಗಿದಾಗ ಮಾಡುತ್ತಿದ್ದ. ಇಡೀ ಜಗತ್ತಿನ ಭವಿಷ್ಯವನ್ನು ಹೇಳುವ ಮುಂಚೆ ಸ್ವತಃ ನಾಸ್ಟ್ರಡಾಮಸ್ ತನ್ನ ಸಾವಿನ ಭವಿಷ್ಯ ಹೇಳಿಕೊಂಡಿದ್ದ. ಅದರ ಜೊತೆಗೆ ದಾಳಿಕೋರರಿಂದ ಫ್ರೆಂಚ್ ಕ್ರಾಂತಿ ಆಗುತ್ತೆ ಎಂದೂ ಹೇಳಿದ್ದ!

ನಾಸ್ಟ್ರಡಾಮಸ್ ಜಗತ್ತಿನ ಭವಿಷ್ಯ ಹೇಳಿದ್ದು ಪದ್ಯಗಳ ಮೂಲಕ. ಅದೂ ನಾಲ್ಕು ಸಾಲಿನ ಪದ್ಯಗಳು. ಈ ಪದ್ಯಗಳನ್ನು Quatrains ಎಂದು ಕರೆದ. ತನ್ನ ಜೀವಮಾನದಲ್ಲಿ ನಾಸ್ಟ್ರಡಾಮಸ್ ಬರೆದಿದ್ದು ಒಟ್ಟು 942 ಪದ್ಯಗಳನ್ನು. ಪ್ರತೀ ನೂರು ಪದ್ಯಗಳನ್ನು ಸೇರಿಸಿ ಒಂದು ಶತಮಾನದ ಭವಿಷ್ಯ ಎನ್ನುತ್ತಾನೆ. ಆದರೆ, ನಮಗೆ ದಕ್ಕಿರುವಂತೆ ಶತಮಾನವೊಂದಕ್ಕೆ ಕೇವಲ 46 ಪದ್ಯಗಳಿವೆ.

ನಾಸ್ಟ್ರಡಾಮಸ್ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದ. ಈ ಅಭಿಮಾನಿಗಳ ಪ್ರಕಾರ, ಫ್ರೆಂಚ್‌ಕ್ರಾಂತಿಯ ಭವಿಷ್ಯ ನುಡಿದಿದ್ದು ನಾಸ್ಟ್ರಡಾಮಸ್. ಹಿಟ್ಲರ್‌ನ ಜನನ, ಆತನ ಬದುಕು, ಶಕ್ತಿಯ ಕುರಿತು ಮೊದಲೇ ಜಗತ್ತಿಗೆ ತಿಳಿಸಿದವನು ನಾಸ್ಟ್ರಡಾಮಸ್. ಜಗತ್ತಿನ ಗಮನ ಸೆಳೆದಿದ್ದ ಜಾನ್.ಎಫ್.ಕೆನಡಿ ಕೊಲೆ ಪ್ರಕರಣವನ್ನು ಮೊದಲೇ ಬಹಿರಂಗ ಪಡಿಸಿದವನು ನಾಸ್ಟ್ರಡಾಮಸ್. 1666ರಲ್ಲಿ ಲಂಡನ್ ಹತ್ತಿ ಉರಿಯಲಿದೆ ಎಂದು ಲೋಕಕ್ಕೆ ಮೊದಲೇ ಡಂಗೂರ ಸಾರಿದ್ದು ನಾಸ್ಟ್ರಡಾಮಸ್. ನೆಪೋಲಿಯನ್ ಕಥೆ ಮೊದಲೇ ಬರೆದವನು ಇದೇ ನಾಸ್ಟ್ರಡಾಮಸ್!

ಜಗತ್ತಿನ ರಹಸ್ಯವನ್ನು ಶತಶತಮಾನದ ಕಾಲ ಭೇದಿಸುವ ಶಕ್ತಿ ಅವನಲ್ಲಿತ್ತಾ? ಮುಂದಾಗಲಿರುವುದನ್ನು ಈಗಲೇ ನುಡಿಯುವ, ವಿವರಿಸುವ ಶಕ್ತಿ ಅವನಲ್ಲಿತ್ತಾ? ನಾವು ಕಂಡಿರುವ ಬಾಹ್ಯಾಕಾಶದ ನೌಕೆಯ ವಿನಾಶ, ಪ್ರಿನ್ಸೆಸ್ ಡಯಾನಾ ಸಾವು, ಅಮೇರಿಕಾದ ಟ್ವಿನ್ ಟವರ್‌ಗಳ ನಾಶ... ಇದೆಲ್ಲವನ್ನು ನಾಸ್ಟ್ರಡಾಮಸ್ ಮೊದಲೇ ಬರೆದಿಟ್ಟಿದ್ದಾನೆ. ಬರೆದಿಟ್ಟಂತೆ ನಾಶ, ವಿನಾಶ, ಸಾವು ಸಂಭವಿಸಿವೆ. ಹಾಗಾಗಿ, ನಾಸ್ಟ್ರಡಾಮಸ್‌ಗೆ - The Prophet of Doom ಎಂದೂ ಕರೆಯಲಾಗುತ್ತಿತ್ತು.

ವೈದ್ಯಕೀಯ ವೃತ್ತಿಗೆ ರಾಜೀನಾಮೆ ನೀಡಿದ ಬಳಿಕ ನಾಸ್ಟ್ರಡಾಮಸ್ ಫ್ರಾನ್ಸ್‌ನ ಸಲೋನ್‌ನಲ್ಲಿದ್ದ ಮನಃಶಾಸ್ತ್ರದ ಸ್ಟೂಡಿಯೋವೊಂದಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿಂದಲೇ ನಾಸ್ಟ್ರಡಾಮಸ್ ಭವಿಷ್ಯ ಹೇಳುವ ಮತ್ತು ಎಚ್ಚರಿಸುವ ಕೆಲಸ ಆರಂಭಿಸುತ್ತಾನೆ. ಅತೀ ದೀರ್ಘ ಪತ್ರಗಳನ್ನು ಬರೆದು, ಅದರಲ್ಲಿ ಆಗಲಿರುವ ಅನಾಹುತಗಳನ್ನು ವಿವರಿಸಿ ರಾಷ್ಟ್ರದ ದೊಡ್ಡ ದೊಡ್ಡ ಮುಖಂಡರಿಗೆ ಎಚ್ಚರಿಸುತ್ತಿದ್ದ. ಇದನ್ನು ಅಭ್ಯಾಸವಾಗಿ ಮಾಡಿಕೊಂಡ. ಇವನು ಹೀಗೆ ಎಚ್ಚರಿಸುವುದಕ್ಕೂ ವ್ಯಾಟಿಕನ್ ಸಿಟಿಯಲ್ಲಿ ಭವಿಷ್ಯ ನುಡಿಯುವವರನ್ನು ದೆವ್ವಗಳೆಂದು ಕರೆಯುವುದಕ್ಕೂ ಒಂದೇ ಆಯಿತು. ಆದರೆ, ಇದರಿಂದ ಹಿಂಜರಿಯದ ನಾಸ್ಟ್ರಡಾಮಸ್ ತನ್ನ ಭವಿಷ್ಯವಾಣಿಯನ್ನು ಕೇವಲ ವಿವರಿಸದೇ ಅದರ ಸಣ್ಣಸಣ್ಣ ಎಳೆಯನ್ನೂ ಕಣ್ಣಿನ ಮುಂದಿಟ್ಟು ತೋರಿಸುತ್ತಿದ್ದ. ಇದನ್ನೆಲ್ಲ ನಾಸ್ಟ್ರಡಾಮಸ್ ಸಾಧಿಸಿದ್ದು ಈಜಿಫ್ಟ್ ಹಾಗೂ ಅಲೆಗ್ಸಾಂಡ್ರಿಯನ್ ಮ್ಯಾಜಿಕ್‌ನಿಂದ. ಹಾಗಾಗಿ, ಈತನನ್ನು ದೆವ್ವ ಎಂದು ಕರೆಯುವುದಿರಲಿ ಈತನ ತಂಟೆಗೂ ಹೋಗುತ್ತಿರಲಿಲ್ಲ. ಆದರೂ ಭಯ ಹೊಂದಿದ್ದ ನಾಸ್ಟ್ರಡಾಮಸ್ ತಾನು ಹೇಳಲಿರುವ ಭವಿಷ್ಯವನ್ನು ನೇರವಾಗಿ ಹೇಳುವುದನ್ನು ಕೈಬಿಟ್ಟ. ಭವಿಷ್ಯ ಹೇಳುವವರನ್ನು, ಮ್ಯಾಜಿಕ್ ಮಾಡುವವರನ್ನು ಸ್ಪೈನಿನ ಅಧಿಕಾರಶಾಹಿಗಳು ದೊಡ್ಡ ಅಪರಾಧಿಗಳೆಂದೇ ಪರಿಗಣಿಸಿ ಕೊಲ್ಲುತ್ತಿದ್ದರು. ಇದನ್ನೆಲ್ಲ ನೋಡಿದ್ದ ನಾಸ್ಟ್ರಡಾಮಸ್ ತತ್ತರಿಸಿದ್ದ. ಆದರೂ ಭವಿಷ್ಯ ಹೇಳಲೇಬೇಕೆಂಬ ತುಡಿತ ಆತನಲ್ಲಿ ಹೆಚ್ಚಾಗಿತ್ತು. ಆ ತೀವ್ರ ತುಡಿತವೇ ನಾಸ್ಟ್ರಡಾಮಸ್‌ಗೆ ಭವಿಷ್ಯ ಹೇಳುವ ಮತ್ತೊಂದು ದಾರಿಗೆ ಕೈಹಿಡಿದು ಕೊಂಡೊಯ್ದಿತ್ತು. ಆ ಹಾದಿಯಲ್ಲಿ ಹುಟ್ಟಿಕೊಂಡಿದ್ದು Quatrains ಎಂಬ ಪದ್ಯಗಳು.

ಪದ್ಯಗಳ ಮೂಲಕ ಭವಿಷ್ಯ ಹೇಳಲು ಹೊರಟ ನಾಸ್ಟ್ರಡಾಮಸ್ ಹಾದಿ ಸುಗಮವಾಗೇನೂ ಇರಲಿಲ್ಲ. ಪದ್ಯಗಳನ್ನೇನೋ ಬರೆದಾಯ್ತು. ಮುಂದೇನು? ಅದನ್ನೆಲ್ಲ ಪುಸ್ತಕವಾಗಿ ಪ್ರಕಟಿಸಬೇಕಿತ್ತು. ಆದರದು ಸುಲಭದ ಮಾತೇನಾಗಿರಲಿಲ್ಲ. ಪುಸ್ತಕ ಪ್ರಕಟಿಸುವುದೆಂದರೆ ಹಣವನ್ನು ನೀರಿನಂತೆ ಚೆಲ್ಲಬೇಕಿತ್ತು. ಕಷ್ಟದಿಂದಲೇ ಹಣ ಕೂಡಿಸಿಕೊಂಡ ನಾಸ್ಟ್ರಡಾಮಸ್ ಪುಸ್ತಕಗಳನ್ನು ಪ್ರಕಟಿಸಿದ. ಪದ್ಯಗಳನ್ನು ಬೇರ್ಪಡಿಸಿ, ಸೇರ್ಪಡಿಸಿ ಸೆಂಚೂರೀಸ್ ಪುಸ್ತಕಗಳು ಪ್ರಕಟವಾದವು. ಈ ಪದ್ಯಗಳಲ್ಲಿ ಟೈಮ್‌ಲೈನ್ ಇರಲಿಲ್ಲ. ಚದುರಿದ ಚಿತ್ರದ ತುಂಡುಗಳಂತೆ ಇದ್ದವು. ಆ ಕಾಲದಲ್ಲಿ ಭವಿಷ್ಯ ಹೇಳಲು ಹೊರಟ ನಾಸ್ಟ್ರಡಾಮಸ್ ಬೇಕಂತಲೇ ತನ್ನ ಪದ್ಯಗಳನ್ನು ಚದುರಿದ ಚಿತ್ರದ ತುಂಡುಗಳಂತೆ ರೂಪಿಸಿದ್ದು ಎನ್ನಲಾಗುತ್ತದೆ. ಇದು ನಾಸ್ಟ್ರಡಾಮಸ್‌ನ ಉಪಾಯವೂ ಇರಬಹುದು-ಕೊಲೆಯಿಂದ ತಪ್ಪಿಸಿಕೊಳ್ಳಲು! ಇಷ್ಟೆಲ್ಲಾ ಪದ್ಯ ಸಾಹಸ ಮಾಡಿದ ನಾಸ್ಟ್ರಡಾಮಸ್‌ಗೆ ಆತನ ಪದ್ಯಗಳನ್ನು ಓದಿ ಜನ ನೀಡಿದ ಬಿರುದು Mad Poet. ಜಗತ್ತಿನ ಜನರಿಗೆ ಆ ನಂತರವಷ್ಟೇ ಗೊತ್ತಾಗಿದ್ದು- ಆ ಪದ್ಯಗಳು ಶತಮಾನಗಳ ಘಟನಾವಳಿಗಳನ್ನು, ಮುಂದಿನ ಭವಿಷ್ಯವನ್ನು ಸೂಚಿಸುವ ದಿಕ್ಸೂಚಿಗಳು ಎಂದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X