ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ ಗ್ರಾಹಕರಿಗೆ ಬಿಎಸ್ಎನ್ಎಲ್ ವಿಶೇಷ ಕೊಡುಗೆ

|
Google Oneindia Kannada News

Special offer from BSNL to Shimoga customers
ಶಿವಮೊಗ್ಗ, ಅ. 1 : ಭಾರತ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್.) 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ವೈವಿಧ್ಯಮಯ ಸೇವೆಗಳನ್ನು ನೀಡುತ್ತಿದೆಯೆಂದು ಶಿವಮೊಗ್ಗ ಟೆಲೆಕಾಂ ಜಿಲ್ಲೆಯ ಮಹಾ ಪ್ರಬಂಧಕ ರಾಧಾಕೃಷ್ಣನ್ ತಿಳಿಸಿದ್ದಾರೆ.

ಅವರು ಬುಧವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಇತ್ತೀಚಿನ ಸರ್ಕಾರದ ಆದೇಶದನ್ವಯ ಶಿವಮೊಗ್ಗ ತಾಲೂಕಿನ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ಅನುದಾನದಲ್ಲಿ ಅತಿ ಕಡಿಮೆ ದರದಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ಒದಗಿಸಲಾಗುವುದು ಎಂದ ಅವರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕಕೊಂಡಿ ನೀಡುವುದರೊಂದಿಗೆ ಹೆಚ್ಚಿನ ಗುಣಮಟ್ಟದ ಸೇವೆಯನ್ನು ನೀಡಲಾಗುವುದೆಂದು ಹೇಳಿದರು.

ಅಗತ್ಯವಿರುವ ಕಡೆ ಆಪ್ಟಿಕಲ್ ಫೈಬರ್ ವರ್ತುಲ ನಿರ್ಮಿಸಿ ಹೆಚ್ಚಿನ ರಕ್ಷಣೆಯನ್ನು ನೀಡುವಂತೆ ನಿಗಾವಹಿಸಲಾಗಿದೆ. ನಿಸ್ತಂತು ತಂತ್ರಜ್ಞಾನವನ್ನು ಬಳಸುವುದರ ಮೂಲಕ ಅಂತರ್ಜಾಲವನ್ನು ವೈರು ಅಥವಾ ಕೇಬಲ್ ವ್ಯವಸ್ಥೆಯಿಲ್ಲದ ಪ್ರದೇಶಗಳಿಗೂ ವಿಸ್ತರಿಸಿ, ಜಿಲ್ಲೆಯಲ್ಲಿ ಅಂತರಜಲ ಕ್ರಾಂತಿಯನ್ನು ವ್ಯವಸ್ಥಿತವಾಗಿ ಸ್ಥಾಪಿಸಲಾಗಿದೆ ಎಂದು ಅವರು ವಿವರಿಸಿದರು. ಶಿವಮೊಗ್ಗ ಜಿಲ್ಲೆಯ 140 ದೂರವಾಣಿ ವಿನಿಮಯ ಕೇಂದ್ರಗಳಲ್ಲಿಯೂ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲಾಗಿದೆ ಎಂದ ಅವರು ರಾಜ್ಯ ಸರ್ಕಾರದ ಅಗತ್ಯತೆಗಳು, ಅಂತಾರಾಷ್ಟ್ರೀಯ ಸೇವಾ ಬದ್ಧತೆಯನ್ನು ನಿರ್ವಹಿಸುವುದು ಮತ್ತು ಸರ್ಕಾರದ ಕಾರ್ಯನೀತಿಯ ಅಗತ್ಯತೆಗಳ ಅನುಸಾರ ತಮ್ಮ ಸಂಸ್ಥೆಯು 5000ಕ್ಕೂ ಹೆಚ್ಚು ಬ್ರಾಡ್ ಬ್ಯಾಂಡ್ ಸಂಪರ್ಕಗಳನ್ನು ನೀಡಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸ್ಥಿರ ಅಥವಾ ವಿಲ್ (ಡಬ್ಲು.ಎಲ್.ಎಲ್.) ದೂರವಾಣಿಗಳನ್ನು ಎಲ್ಲಾ ತಾಲೂಕುಗಳಲ್ಲಿ ನೀಡುವುದರೊಂದಿಗೆ ಹಿಂದಿನ ಬೇಡಿಕೆಗಳನ್ನು ಈಡೇರಿಸಿ, ಅರ್ಜಿ ಸಲ್ಲಿಸಿದೊಡನೆ ದೂರವಾಣಿ ಸಂಪರ್ಕಗಳನ್ನು ನೀಡುವ ವ್ಯವಸ್ಥೆಯು ಜಾರಿಯಲ್ಲಿದೆ. ಜಿಲ್ಲೆಯಲ್ಲಿ 95000ಕ್ಕೂ ಹೆಚ್ಚು ಅಂತಹ ಸಂಪರ್ಕಕಗಳು ಕಾರ್ಯನಿರ್ವಹಿಸುತ್ತಿವೆ. ಹಬ್ಬದ ಪ್ರಯುಕ್ತ ನೀಡಿರುವ ನಿಯಮಿತ ಅವಧಿಯ ವಿಶೇಷ ಕೊಡುಗೆಯೊಂದಿಗಿನ ಸ್ಥಿರ/ವಿಲ್ ದೂರವಾಣಿ ಯೋಜನೆಗಳ ವಿವರಗಳನ್ನು ಈಗಾಗಲೇ ಪ್ರಚುರಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೊಬೈಲ್ (ಜಿ.ಎಸ್.ಎಂ.ತಂತ್ರಜ್ಞಾನ) ಸೇವೆಯನ್ನು ಜಿಲ್ಲೆಯ 114 ಪ್ರದೇಶಗಳಿಗೆ ನೀಡಲಾಗಿದ್ದು, ಇನ್ನೂ ಅಂತಹ 70 ಪ್ರದೇಶಗಳಿಗೆ ವಿಸ್ತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಅವುಗಳನ್ನು ಈ ಆರ್ಥಿಕ ವರ್ಷದಲ್ಲಿ ಸ್ಥಾಪಿಸಲಾಗುವುದು ಎಂದ ಅವರು ಶಿವಮೊಗ್ಗದಲ್ಲಿ ನವೀನ ಮಾದರಿಯ ಹುವಾಯಿ ಸಂಸ್ಥೆಯಿಂದ ತಯಾರಿಸಿದ 8 ಲಕ್ಷ ಸಾಮರ್ಥ್ಯದ ಮೊಬೈಲ್ ಸ್ವಿಚ್ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಇನ್ನು ಕೆಲವೇ ತಿಂಗಳಲ್ಲಿ ಇದು ಸ್ಥಾಪಿತವಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. ಇದರೊಂದಿಗೆ ಹಾಲಿ ಮೊಬೈಲ್ ಸೇವೆಯ ಪ್ರಸರಣಾ ಸಾಮರ್ಥ್ಯದಲ್ಲಿ ಶೇ.40ರಷ್ಟು ವೃದ್ಧಿಯಾಗುವುದರೊಂದಿಗೆ ಬಿ.ಎಸ್.ಎನ್.ಎಲ್.ಮೊಬೈಲ್ ಜಾಲ ವಿಸ್ತರಣೆಯಲ್ಲಿ ಗಣನೀಯ ಸುಧಾರಣೆಯಾಗಲಿದೆ ಎಂದು ಹೇಳಿದರು.

ಬಿ.ಎಸ್.ಎನ್.ಎಲ್.ಸೇವೆ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಎಸ್.ದತ್ತಾತ್ರಿ, ಕಿರಿಯ ದೂರವಾಣಿ ಅಧಿಕಾರಿ (ಮಾರಾಟ)ಯವರನ್ನು ಖುದ್ದಾಗಿ ಅಥವಾ ಅವರ ಮೊಬೈಲ್ ಸಂಖ್ಯೆ-94490 15599 ಸಂಪರ್ಕಿಸುವಂತೆ ಅವರು ಕೋರಿದರು. ದತ್ತಾತ್ರಿ ಎಸ್.ಆರ್.ಎನ್.ಪೈ, ನಾರಾಯಣ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X