ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾವಾಣಿ ಪತ್ರಕರ್ತರಿಗೆ ಶುಭವಾರ್ತೆ

By Staff
|
Google Oneindia Kannada News

Retirement age for DH and PV journalists increased to 60
ಬೆಂಗಳೂರು, ಸೆ. 30 : ಮಹಾತ್ಮಾ ಗಾಂಧೀ ರಸ್ತೆಯಲ್ಲಿರುವ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಪ್ರಕಾಶನ ಸಂಸ್ಥೆಯ ದೈನಿಕ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಮತ್ತು ಸುಧಾ,ಮಯೂರ ನಿಯತಕಾಲಿಕೆಗಳ ಪತ್ರಕರ್ತರ ನಿವೃತ್ತಿ ವಯಸ್ಸನ್ನು 58 ರಿಂದ 60ಕ್ಕೆ ವಿಸ್ತರಿಸಬೇಕೆಂಬ ಆದೇಶ ಉಪ ಕಾರ್ಮಿಕ ಆಯುಕ್ತರ ಕಚೇರಿಯಿಂದ ಹೊರಬಿದ್ದಿದೆ. ನಿವೃತ್ತಿ ವಯಸ್ಸನ್ನು 60ಕ್ಕೆ ಏರಿಸಬೇಕೆಂದು ಕೋರಿ ಬೆಂಗಳೂರು ವೃತ್ತ ಪತ್ರಿಕಾ ನೌಕರರ ಸಂಘ ಕಾರ್ಮಿಕ ಆಯುಕ್ತರ ಮುಂದೆ ತಗಾದೆ ಅರ್ಜಿ ಸಲ್ಲಿಸಿತ್ತು.

ಇದೇ ವರ್ಷದ ಫೆಬ್ರವರಿ ಮಾಹೆಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸುದೀರ್ಘವಾಗಿ ನಡೆದು ಕಳೆದ ಶನಿವಾರ 26 ಸೆಪ್ಟೆಂಬರ್ ರಂದು ಕಾರ್ಯನಿರತ ಪತ್ರಕರ್ತರ ಪರವಾಗಿ ಆದೇಶ ಹೊರಬಿದ್ದಿದೆ. ಈ ಆದೇಶವನ್ನು ಪ್ರಿಂಟರ್ಸ್ ಮೈಸೂರು ಪ್ರಕಾಶನದ ಆಡಳಿತ ವರ್ಗ ಅಂಗೀಕರಿಸುವುದರ ಬಗೆಗೆ ಅಲ್ಲಿನ ನೌಕರ ವಲಯಗಳಲ್ಲಿ ಭಾರೀ ಕುತೂಹಲ ಮಡುಗಟ್ಟಿದೆ. ನಿವೃತ್ತಿ ವಯಸ್ಸಿನ ಏರಿಕೆಯ ಲಾಭವನ್ನು ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವ 349 ಪತ್ರಕರ್ತರು ಪಡೆಯಲಿದ್ದಾರೆ. ರಾಜಧಾನಿ ಸೇರಿದಂತೆ ರಾಷ್ಟ್ರದ ನಾನಾ ಭಾಗಗಳಲ್ಲಿ,ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ಕಚೇರಿಯಲ್ಲಿ ದುಡಿಯುತ್ತಿರುವ ನೌಕರ ವರ್ಗಕ್ಕೆ ಈ ಬೆಳವಣಿಗೆ ದಸರಾ ದೀಪಾವಳಿ ಶುಭ ವಾರ್ತೆ ಎನಿಸಿದೆ.

ವಿಶೇಷವಾಗಿ 58 ವರ್ಷದ ಗಡಿ ಸಮೀಪಿಸುತ್ತಿರುವ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಸುಧಾ ಮಯೂರ ಪತ್ರಕರ್ತರನ್ನು ಈ ಸುದ್ದಿ ಹಿಮ್ಮಡಿಯ ಮೇಲೆ ನಿಲ್ಲುವಂತೆ ಮಾಡಿದೆ. ನಿವೃತ್ತಿಯ ವಯಸ್ಸನ್ನು 58 ರಿಂದ ಮೇಲಕ್ಕೆತ್ತಬೇಕೆಂಬ ಬೇಡಿಕೆಯನ್ನು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಕರ್ತರು ಆಡಳಿತ ವರ್ಗದ ಮುಂದೆ ಇಟ್ಟಿದ್ದರು. ನೌಕರರ ಪರವಾಗಿ ವಾದಿಸಿದ ಬೆಂಗಳೂರು ವೃತ್ತ ಪತ್ರಿಕಾ ನೌಕರರ ಸಂಘಕ್ಕೆ (BNEU) ಉಪ ಕಾರ್ಮಿಕ ಆಯುಕ್ತರು ಹೊರಡಿಸಿರುವ ಆದೇಶ ಧನಾತ್ಮಕವಾಗಿದೆ.

ಬೆಂಗಳೂರಿನಿಂದ ಪ್ರಕಟವಾಗುವ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ನಿವೃತ್ತಿ ವಯೋಮಾನ 58 ಇದೆ. ಆದರೆ, ರಾಜ್ಯ ಸರಕಾರ, ಕೇಂದ್ರ ಸರಕಾರದ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 60ಕ್ಕೆ ಏರಿಸಿರುವಾಗ ಪತ್ರಕರ್ತರ ಸಮೂಹಕ್ಕೂ ಈ ಸವಲತ್ತು ದಕ್ಕಬೇಕೆನ್ನುವುದು ಬಿಎನ್ಇಯು ಕಾರ್ಮಿಕ ಮುಖಂಡರ ವಾದವಾಗಿದೆ. ಸದ್ಯಕ್ಕೆ 58ರ ಗಡಿ ದಾಟಿದ ಆಯ್ದ ನೌಕರರಿಗೆ ಒಂದೆರಡು ವರ್ಷ ನೌಕರಿ ವಿಸ್ತರಣೆ ಮಾಡುವ ಪರಿಪಾಠ ಪತ್ರಿಕಾ ಕಚೇರಿಗಳಲ್ಲಿ ಇದೆ. ಆದರೆ, ಸಂಸ್ಥೆಯಲ್ಲಿ ದುಡಿಯುವ ಸಮಸ್ತ ಪತ್ರಕರ್ತರಿಗೂ ಅನ್ವಯವಾಗುವ ನಿಟ್ಟಿನಲ್ಲಿ ನಿವೃತ್ತಿ ವಯಸ್ಸು ಮಿತಿ ಏರಿಕೆಯನ್ನು ಜಾರಿಗೆ ತರಬೇಕೆನ್ನುವುದು ಅನೇಕ ನೌಕರರ ಬೇಡಿಕೆ ಆಗಿದೆ. ಇತ್ತೀಚೆಗೆ ಪ್ರಜಾವಾಣಿಯಲ್ಲಿ ಹಿರಿಯರಾದ ಇ.ವಿ. ಸತ್ಯನಾರಾಯಣ ಮತ್ತು ಡಿ.ವಿ.ರಾಜಶೇಖರ ಅವರ ಸೇವೆಯನ್ನು ಒಂದು ವರ್ಷ ಕಾಲಕ್ಕೆ ವಿಸ್ತರಿಸಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಕಲಾವಿದರಿಗೆ, ಸಾಹಿತಿಗಳಿಗೆ, ರಾಜಕಾರಣಿಗಳಿಗೆ ಮತ್ತು ಪತ್ರಕರ್ತರಿಗೆ ನಿವೃತ್ತಿಯೆಂಬುದೇ ಇರುವುದಿಲ್ಲವಂತೆ. ಒಂದು ವ್ಯವಸ್ಥೆ ಅಥವಾ ಸಂಸ್ಥೆಯಿಂದ ನಿವೃತ್ತಿ ಪಡೆದುಕೊಂಡರೂ, ವೃತ್ತಿ ಮತ್ತು ವೃತ್ತಿಬಯಕೆಗಳನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಅವರಿಗೆ ತಡೆಗೋಡೆಗಳಿರುವುದಿಲ್ಲ. ಆದರೆ ಸಂಬಳಕ್ಕೆ, ಪಿಂಚಣಿಗೆ, ಗ್ರಾಚ್ಯೂಯಿಟಿ ಮುಂತಾದ ನಿವೃತ್ತಿ ಸೌಲಭ್ಯಗಳನ್ನು ಮಾತ್ರ ನೆಚ್ಚಿಕೊಂಡು ವೃತ್ತಿಪರರಾಗುವವರಿಗೆ ನಿವೃತ್ತಿಯ ವಯಸ್ಸು, ಹುಟ್ಟಿದ ದಿನಾಂಕ ಬಲುಮುಖ್ಯವಾಗುತ್ತದೆ. ಅನೇಕರಿಗೆ ಡೇಟ್ ಆಫ್ ಬರ್ತ್ ಆಧಾರಿತ ನೌಕರಿಯ ಕಡೆ ದಿನಾಂಕ ಅವರ ವೃತ್ತಿ ಉದ್ಯೋಗದ ಕೊನೆಯ ದಿನವೂ ಆಗುತ್ತದೆ. ಮೈಯಲ್ಲಿ ಕಸುವಿದ್ದವರು, ಮಿದುಳಲ್ಲಿ ಚುರುಕುತನ ಉಳಿಸಿಕೊಂಡವರು ಮತ್ತು ಬರೆದು ದುಡಿಯಲೇಬೇಕು, ದುಡಿದು ಕುಟುಂಬ ನಿರ್ವಹಣೆ ಮಾಡಲೇಬೇಕೆಂಬ ದರ್ದು ಇರುವವರಿಗೆ ವಯೋಮಾನ ಮಿತಿ ಅಡ್ಡಬರಬಾರದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X