ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚನ್ನಪಟ್ಟಣದಲಿ ಕಲಬೆರಕೆ ಮದಿರೆಯ ಹೊಳೆ!

By * ತಿಲಕ್‌ರಾಜ್ ಡಿ.ಟಿ.
|
Google Oneindia Kannada News

Illegal liquor business in full flow in Channapattana
ಚನ್ನಪಟ್ಟಣ, ಸೆ. 30 : ಸರ್ಕಾರ ಸಾರಾಯಿ ನಿಷೇಧ ಮಾಡಿ ಯಾರಿಗೆ ಉಪಕಾರ ಮಾಡಿದೆಯೋ ಗೊತ್ತಿಲ್ಲ. ಆದರೆ ಬಾರ್, ವೈನ್‌ಸ್ಟೋರ್ ಮಾಲೀಕರಿಗೆ ಮಾತ್ರ ಡಬಲ್ ಧಮಾಕ ನೀಡಿ, ಅವರ ಖಜಾನೆಯನ್ನು ತುಂಬಿಸುವತ್ತ ಮಹತ್ವದ ಹೆಜ್ಜೆ ಹಾಕಿದೆ.

ಇದು ಅಸಲಿ ಸತ್ಯ. ಬಡಕುಟುಂಬಗಳು ಸಾರಾಯಿಯಿಂದ ಅನುಭವಿಸುತ್ತಿದ್ದ ಕಷ್ಟಗಳನ್ನು ಹೋಗಲಾಡಿಸಲು ಸರ್ಕಾರ ಸಾರಾಯಿ ನಿಷೇಧ ಜಾರಿಗೆ ತಂದಿರುವುದು ಸಂತೋಷದ ವಿಚಾರವಾದರೂ, ಪಾನಪ್ರಿಯರು ಈಗ ಸಾರಾಯಿ ಬಿಟ್ಟು ಬಾಟಲಿ ಮೊರೆಹೋಗಿರುವುದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿರುವುದು ದುರ್ದೈವದ ಸಂಗತಿಯಾಗಿದೆ. ಕಡಿಮೆ ಹಣಕ್ಕೆ ಸಿಗುತ್ತಿದ್ದ ಸಾರಾಯಿಯನ್ನು ಸರ್ಕಾರ ನಿಷೇಧ ಮಾಡಿದ್ದರಿಂದ ಅನ್ಯಮಾರ್ಗವಿಲ್ಲದೆ ಶ್ರೀಮಂತರ ಸ್ವತ್ತಾಗಿದ್ದ ದುಬಾರಿ ದರದ ವೈನ್ಸ್‌ಗಳ ಕಡೆಗೆ ವಾಲಿದ ಮದ್ಯವ್ಯಸನಿಗಳು, ದುಬಾರಿಯಾದರೂ ಅದನ್ನೇ ಬಳಸತೊಡಗಿದ್ದರಿಂದ ಮದ್ಯದಂಗಡಿ ಮಾಲೀಕರಿಗೆ ಮೇರೆಯೇ ಇಲ್ಲದಂತಾಗಿದೆ.

ಸಾರಾಯಿ ನಿಷೇಧವನ್ನೇ ಎನ್‌ಕ್ಯಾಷ್ ಮಾಡಿಕೊಂಡ ಬಾರ್/ವೈನ್ಸ್ ಮಾಲೀಕರು ತಮ್ಮ ತಮ್ಮಲ್ಲೇ ಒಡಂಬಡಿಕೆ ಮಾಡಿಕೊಂಡು ಗ್ರಾಹಕರನ್ನು ಸುಲಿಗೆ ಮಾಡತೊಡಗಿರುವುದು ಚನ್ನಪಟ್ಟಣ ಹಾಗೂ ಪಕ್ಕದ ರಾಮನಗರಗಳಲ್ಲಿ ಅವ್ಯಾಹತವಾಗಿ ನಡೆದಿದೆ. ಮದ್ಯದ ಬಾಟಲಿಗಳ ಮೇಲೆ ನಮೂದಾಗಿರುವ ಎಂಆರ್‌ಪಿ ದರಕ್ಕಿಂತ ಹೆಚ್ಚು ಬೆಲೆಗೆ ಮದ್ಯ ಮಾರಾಟವಾಗುತ್ತಿದ್ದು, ಈ ಕೃತ್ಯ ರಾಜಾರೋಷವಾಗಿಯೇ ನಡೆದಿದೆ. ಈ ಕೃತ್ಯದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಹ ಷಾಮೀಲಾಗಿದ್ದಾರೆ ಎಂದು ಮದ್ಯಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಪ್ರಶ್ನಿಸಿದರೆ ಬಾರ್ ಮಾಲೀಕರು ಉದ್ದಟತನ ಪ್ರದರ್ಶಿಸುವುದಲ್ಲದೆ, ಗೂಂಡಾಗಿರಿಯನ್ನೂ ಸಹ ಪ್ರದರ್ಶಿಸುತ್ತಾರೆ ಹಾಗೂ ಬೆದರಿಸುತ್ತಾರೆ ಎಂದಿರುವ ಗ್ರಾಹಕರು, ಯಾರಿಗೆ ಬೇಕಾದರೂ ದೂರು ನೀಡಿ, ನಾವು ಕೇರ್ ಮಾಡುವುದಿಲ್ಲ ಎಂದೂ ಸಹ ಅಹಂಕಾರದಿಂದ ಮಾತನಾಡುತ್ತಾರೆ ಎಂದಿದ್ದಾರೆ. ಅದೂ ಅಲ್ಲದೆ ಇಲಾಖೆಯ ಅಧಿಕಾರಿಗಳಿಗೆ ಮಾಸಿಕ ಇಂತಿಷ್ಟು ಲಂಚ ನೀಡಬೇಕು, ಪೊಲೀಸರಿಗೆ ಕಾಣಿಕೆ ಸಲ್ಲಿಸಬೇಕು ಅದಕ್ಕಾಗಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದೇವೆಂದು ಸಬೂಬು ಹೇಳುತ್ತಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಇದಲ್ಲದೆ ಚಿಲ್ಲರೆ ಮದ್ಯ ಮಾರಾಟ ಮಾಡುವಾಗ ಅಳತೆಯಲ್ಲಿ ಸಹ ಮೋಸ ಮಾಡುತ್ತಿದ್ದು, ಮದ್ಯವನ್ನು ಕಲಬೆರಕೆ ಮಾಡಿ ನೀಡುತ್ತಾರೆ ಹಾಗೂ ಕಡಿಮೆ ದರ್ಜೆಯ ಮದ್ಯವನ್ನು ಹೆಚ್ಚು ಬೆಲೆಯ ಮದ್ಯದ ಜೊತೆಗೆ ಸೇರಿಸಿ, ಚಿಲ್ಲರೆ ಮಾರಾಟ ಮಾಡಿ ವಂಚಿಸುತ್ತಿದ್ದಾರೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಂತೂ ಈ ದಂಧೆ ಅನಿಯಮಿತವಾಗಿ ನಡೆಯುತ್ತಿದ್ದು, ಕಲಬೆರಕೆ ಮದ್ಯವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿ ಈ ಕಲಬೆರಕೆ ಮದ್ಯವನ್ನು ನೀಡುತ್ತಿದ್ದು, ಇದನ್ನು ತಿಳಿಯದೆ ಗ್ರಾಮಾಂತರ ಪ್ರದೇಶಗಳ ಗ್ರಾಹಕರು ಅದನ್ನೇ ಬಳಸುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ. ಇತ್ತೀಚೆಗಷ್ಟೇ ಗುಜರಾತ್ ನಲ್ಲಿ ಕಲಬೆರಕೆ ಮದ್ಯ ಸೇವಿಸಿ ಅನೇಕರು ಸಾವಿಗೀಡಾಗಿದ್ದು ನಮಗೆ ಪಾಠವಾಗದಿರುವುದು ದುರ್ದೈವದ ಸಂಗತಿ.

ಕಣ್ಣೆದುರಿಗೇ ಈ ಹಗಲು ದರೋಡೆ ನಡೆಯುತ್ತಿದ್ದರೂ ಸಂಬಂಧಿಸಿದವರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದನ್ನು ನೋಡಿದರೆ ಇಲಾಖೆಯ ಅಧಿಕಾರಿಗಳು ಇದರಲ್ಲಿ ಷಾಮೀಲಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದಿರುವ ಗ್ರಾಹಕರು, ಪ್ರತಿ ತಿಂಗಳು ಹೀಗೆ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಲಕ್ಷಾಂತರ ರೂ. ಹಣ ಯಾರ ಜೇಬಿಗಿಳಿಯುತ್ತಿದೆ. ಈ ಅಕ್ರಮಗಳನ್ನು ತಡೆಯುವಂತೆ ಹಲವಾರು ಬಾರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಗಮನಹರಿಸುವಂತೆ ರಾಜ್ಯದ ಅಬಕಾರಿ ಸಚಿವರಿಗೂ ಕೂಡಾ ಪತ್ರಮುಖೇನ ದೂರು ನೀಡಿರುವ ಕೆಲವು ಗ್ರಾಹಕರು ಈ ಸುಲಿಗೆ ಕೂಡಲೇ ನಿಲ್ಲದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಚನ್ನಪಟ್ಟಣ ಹಾಗೂ ನೆರೆಯ ರಾಮನಗರಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಈ ವಂಚನೆಯಿಂದ ಗ್ರಾಹಕರು ಜಾಗೃತರಾಗಿದ್ದು, ಮುಂದಿನ ದಿನಗಳಲ್ಲಿ ಅವರು ಸಿಡಿದೇಳುವ ಮುನ್ನ ಈ ದಂಧೆಗೆ ಕಡಿವಾಣ ಹಾಕಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುಂದಾಗಬೇಕಾಗಿದೆ. ಹಾಡಹಗಲೇ ನಡೆಯುತ್ತಿರುವ ಈ ದರೋಡೆಗೆ ಮುಕ್ತಿ ಸಿಗುವುದೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X