ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸುರೆ ತಿಕ್ಕುವ ಹುಡುಗಿಯ ಕಥೆಗೆ ಕಣ್ಣೀರಾದ ಸಿಎಂ

By Staff
|
Google Oneindia Kannada News

BSY gives 25000 to Manjula
ಬೆಂಗಳೂರು, ಸೆ. 22 : ತಂದೆಯನ್ನು ಕಳೆದುಕೊಂಡು, ಕಸ ಗುಡಿಸುವ ತಾಯಿಯನ್ನು ಹಳ್ಳಿಯಲ್ಲಿ ಬಿಟ್ಟು ಬೆಂಗಳೂರಿನಲ್ಲಿ ದೊಡ್ಡಮ್ಮನೊಂದಿಗೆ ವಾಸಿಸುತ್ತಿರುವ ಮಂಜುಳಾ, ಕಸ-ಮುಸುರೆ ಮಾಡಿಕೊಂಡು ಎರಡು ವರ್ಷ ಕಾಲೇಜಿಗೆ ಹೋಗಿದ್ದಾಳೆ. ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾದಲ್ಲಿ 71% ಅಂಕ ಗಳಿಸಿದ್ದಾಳೆ. ಈಗ ಬಿ.ಎನ್.ಎಂ.ಐ.ಟಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ಸೆಮೆಸ್ಟರ್ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಕಸ-ಮುಸುರೆ-ಮನೆಗೆಲಸ ಮುಂದುವರೆಸಿದ್ದಾಳೆ. ಕೆಲಸ ಮಾಡುತ್ತಿರುವ ಮನೆಯಲ್ಲೇ ದೊರಕುವ ಊಟ, ತಿಂಡಿ, ಬಟ್ಟೆಯಲ್ಲೇ ಜೀವನ ಕಳೆಯುತ್ತಿದ್ದಾಳೆ. ಕೈಸಾಲ ಮಾಡಿ, ಬಸ್ ಪಾಸ್ ಖರೀದಿಸಿ, ಕಾಲೇಜ್ ಕಡೆ ಹೆಜ್ಜೆ ಹಾಕುತ್ತಾಳೆ. ಕಾಲೇಜು ಶುಲ್ಕಕ್ಕಾಗಿ, ಪುಸ್ತಕಗಳ ಖರೀದಿಗಾಗಿ ಒದ್ದಾಡುತ್ತಿದ್ದಾಳೆ.

ಇಂಥದೊಂದು ಕರುಣಾಜನಕ ಕಥೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಂಗಳವಾರ ನಸುಕಿನಲ್ಲೇ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಓದಿದಾಗ, ಮನಸು ತಡೆಯಲಾಗಲಿಲ್ಲ, ನೋಟ ಹೊರಳಿಸಿ ಇತರ ರಾಜಕೀಯ ಸುದ್ದಿಗಳ ಕಡೆಗೆ ಕಣ್ಣು ಹಾಯಿಸಲಿಲ್ಲ. ಆ ಬಾಲೆಯ ವ್ಯಥೆಯ ಕಥೆ ಅವರ ಹೃದಯನ್ನು ಕಲಕಿತ್ತು. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿಕೊಂಡು, ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುವ ವರದಿಗಳ ಕಡೆ ಆದ್ಯ ಗಮನ ನೀಡಲು ಸಲಹೆ ಮಾಡಿದರು. ಜನರ ಹಿತವನ್ನು ನೋಡಿಕೊಳ್ಳಲೆಂದೇ ನಾವಿರುವುದು ಎಂಬ ಕಿವಿಮಾತು ಹೇಳಿದರು.

ಅಷ್ಟರಲ್ಲಿ ಮುಖ್ಯಮಂತ್ರಿ ಸೂಚನೆಯಂತೆ, ಅವರ ಆಪ್ತ ಸಿಬ್ಬಂದಿ ವರ್ಗದವರು ಪತ್ರಿಕಾ ಕಚೇರಿ/ವರದಿಗಾರರಿಗೆ ದೂರವಾಣಿ ಕರೆ ಮಾಡಿ, ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಹುಡುಗಿ ಕೆಲಸ ಮಾಡುತ್ತಿದ್ದ ಮನೆಯ ವಿಳಾಸವನ್ನು ಪತ್ತೆ ಮಾಡಿ, ಆ ಮನೆಯವರನ್ನು ಕರೆಯಿಸಿಕೊಂಡಿದ್ದರು. ಪೋಷಕರಿಂದ ಎಲ್ಲಾ ವಿಷಯವನ್ನು ತಿಳಿದುಕೊಂಡ ಮುಖ್ಯಮಂತ್ರಿ, ಹುಡುಗಿಯ ಬುದ್ಧಿವಂತಿಕೆ-ಪ್ರತಿಭೆ-ಇಚ್ಛಾಶಕ್ತಿಗೆ ತಲೆದೂಗಿದರು.

ಬಾಲಕಿ ಮಂಜುಳಾ ವಿದ್ಯಾಭ್ಯಾಸ ಮುಂದುವರೆಸಲು ತಗಲುವ ಎಲ್ಲಾ ವೆಚ್ಚವನ್ನು ತಾವು ಸ್ವಂತವಾಗಿ ವಹಿಸಿಕೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಯವರು ನೀಡಿದರು. ಆ ಸ್ಥಳದಲ್ಲೇ ತಮ್ಮ ಕಡೆಯಿಂದ ರೂ. 25,000 ರು.ಗಳನ್ನು ನೀಡಿದರು. ಬಾಲಕಿಗೆ ಮೂರು ದಿನಗಳಲ್ಲಿ ಹತ್ತಿರದ ಸರ್ಕಾರಿ ವಿದ್ಯಾರ್ಥಿನಿ ನಿಲಯದಲ್ಲಿ ಸೀಟು ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಬಾಲಕಿ ಇಂಜಿನಿಯರಿಂಗ್ ಪದವಿ ಪಡೆಯುವವರೆಗೆ ಬೇಕಾದ ಎಲ್ಲಾ ಹಣಕಾಸಿನ ಅನುಕೂಲತೆಯನ್ನು ಖುದ್ದಾಗಿ ಭರಿಸುವುದಾಗಿ ಹೇಳಿದರು.

ಇತರ ಅರ್ಹ ಬಡವರೂ ಪ್ರಯತ್ನಿಸಬಹುದು

ಪ್ರತಿಭಾವಂತರೂ, ಕಡುಬಡವರೂ ಆಗಿದ್ದು, ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ತೊಂದರೆ ಎದುರಿಸುತ್ತಿರುವ ರಾಜ್ಯದ ಬಾಲಕ-ಬಾಲಕಿಯರು ಅಥವಾ ಅವರ ಪೋಷಕರು ಮುಖ್ಯಮಂತ್ರಿಯವರಿಗೆ ನೇರವಾಗಿ ಅರ್ಜಿ ಬರೆಯುವ ಮೂಲಕ ಆರ್ಥಿಕ ಸಹಾಯವನ್ನು ಕೋರಬಹುದು. ಅರ್ಹರು ವಿದ್ಯಾಭ್ಯಾಸ ಮುಂದುವರೆಸಲು ತಗಲುವ ವೆಚ್ಚವನ್ನು ಮುಖ್ಯಮಂತ್ರಿಯವರು ಸ್ವಂತ ಭರಿಸಲಿದ್ದಾರೆ; ಅಥವಾ ದಾನಿಗಳ ನೆರವು ದೊರಕುವ ವ್ಯವಸ್ಥೆಯನ್ನು ಮಾಡಲಿದ್ದಾರೆ. ಈ ಬಗ್ಗೆ ಶಿಫಾರಸು ಪತ್ರಗಳು ಬೇಕಿಲ್ಲ; ಮಧ್ಯವರ್ತಿಗಳೂ ಬೇಕಿಲ್ಲ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X