ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದ್ರೋಳಿ ಮೆರವಣಿಗೆ ಬಂತು, ದಾರಿಬಿಡಿ

By Staff
|
Google Oneindia Kannada News

Kudroli Gokarnanath temple
ನಾಡಿನಾದ್ಯಂತ ಈಗ ನಾಡಹಬ್ಬ ದಸರಾ ಸಂಭ್ರಮ. ಎಲ್ಲಿ ನೋಡಿದರೂ ದುರ್ಗೆಯರ ಆರಾಧನೆ ಕಾಣಸಿಗುತ್ತದೆ. ಮೈಸೂರು ದಸರಾ ನೋಡಲೆಂದೇ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಡಲತಡಿಯ ಮಂಗಳೂರು ದಸರಾ ಕೂಡ ಜನಪ್ರಿಯತೆ ಗಳಿಸುತ್ತಿದ್ದು ಉತ್ಸವ ನೋಡಲು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

* ಚಿದಂಬರ ಬೈಕಂಪಾಡಿ, ಮಂಗಳೂರು

ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಶತಮಾನದ ಇತಿಹಾಸವಿದೆ. ಬ್ರಹ್ಮಶ್ರೀ ನಾರಾಯಣಗುರುಗಳು ಕೇರಳದಿಂದ ಕುದ್ರೋಳಿಗೆ ಬಂದು ಸ್ಥಳೀಯರ ಕೋರಿಕೆಯಂತೆ ಗೋಕರ್ಣನಾಥೇಶ್ವರ ಕ್ಷೇತ್ರ ಸ್ಥಾಪಿಸಿದರು. ತೀರಾ ಹಿಂದುಳಿದವರೇ ಅಧಿಕವಾಗಿದ್ದ ಪ್ರದೇಶ ಮತ್ತು ಆ ಕಾಲದಲ್ಲಿ ಹಿಂದುಳಿದವರಿಗೆ ಈಗಿನಂತೆ ದೇವಸ್ಥಾನಗಳಿಗೆ ಮುಕ್ತಪ್ರವೇಶ ಇರಲಿಲ್ಲ. ದೇವಸ್ಥಾನದ ಹೊರಗೆ ದೂರದಿಂದಲೇ ದೇವರಿಗೆ ಕೈಮುಗಿಯಬೇಕಾಗಿತ್ತು. ಮೇಲ್ವರ್ಗದವರು ದಾರಿಯಲ್ಲಿ ಬರುತ್ತಿದ್ದರೆ ಕೆಳಜಾತಿಯವರು ದಾರಿಯಿಂದ ಸರಿದು ನಿಲ್ಲಬೇಕಾಗಿತ್ತು. ಇಂಥ ಕಾಲಘಟ್ಟದಲ್ಲಿ ಹಿಂದುಳಿದವರ ಪಾಲಿಗೆ ದೇವರಂತ ಕಂಡುಬಂದವರು ನಾರಾಯಣಗುರುಗಳು. ಜಾತಿ ಮತದ ಗೋಡೆಗಳನ್ನು ಒಡದು ಹಾಕಿ ಹಿಂದುಳಿದವರಲ್ಲಿ ಸ್ವಾಭಿಮಾನದ ಬೀಜಬಿತ್ತಿದರು. ಇತರರಂತೆ ತಲೆಯೆತ್ತಿ ಬದುಕಲು ಪ್ರೇರಣೆ ಕೊಟ್ಟರು. ಇದಕ್ಕೆಲ್ಲ ಸ್ಪೂರ್ತಿಯ ನೆಲೆಯಾದದ್ದು ಕುದ್ರೋಳಿ ಕ್ಷೇತ್ರ.

ಹತ್ತೊಂಭತ್ತು ವರ್ಷಗಳ ಹಿಂದೆ ಕುದ್ರೋಳಿ ಕ್ಷೇತ್ರವನ್ನು ನವೀಕರಿಸಲು ಸಾರಥ್ಯವಹಿಸಿದವರು ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ. ಕರಸೇವೆ ಮೂಲಕ ಈ ಕ್ಷೇತ್ರದ ನವೀಕರಣಕ್ಕೆ ಚಾಲನೆ ನೀಡಿದ ಅವರು ಎಲ್ಲ ವರ್ಗದವರನ್ನು ಸೇರಿಸಿಕೊಂಡು ಅಲ್ಪ ಅವಧಿಯಲ್ಲಿ ಸುಂದರ ದೇವಸ್ಥಾನ ನಿರ್ಮಿಸುವಲ್ಲಿ ಶ್ರಮಿಸಿದರು. ಈ ದೇವಸ್ಥಾನ ಈಗ ಚೋಳಶಿಲ್ಪಕಲೆಯಿಂದ ಮೈದಳೆದಿದೆ. ದೇವಾಲದಲ್ಲಿ ಎತ್ತನೋಡಿದರೂ ಸುಂದರ ಕೆತ್ತನೆಗಳು-ವಿನ್ಯಾಸಗಳು ಗಮನಸೆಳೆಯುತ್ತವೆ. ಪ್ರಸ್ತುತ ಈ ದೇವಾಲಯದ ಶಿಲ್ಪಕಲೆಯ ವೈಭವವನ್ನು ನೋಡಲೆಂದೇ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಿಂದ ಗರಿಷ್ಠ ಸಂಖ್ಯೆಯಲ್ಲಿ ಜನರು ಬರುತ್ತಾರೆ.

ನವರಾತ್ರಿಯ ಸಂದರ್ಭದಲ್ಲಿ ಕುದ್ರೋಳಿಯಲ್ಲಿ ಶಾರದೆ ಮತ್ತು ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗುತ್ತದೆ. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ರಾತ್ರಿಹೊತ್ತು ಝಗಮಗಿಸುವ ವಿದ್ಯುತ್ ದೀಪಗಳ ಬೆಳಕಿನಲ್ಲಿ ಈ ಕ್ಷೇತ್ರವನ್ನು ನೋಡಲು ಸೊಗಸು. ನವದುರ್ಗೆಯರು ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಇಡೀ ಕ್ಷೇತ್ರದ ಪರಿಸರ ಅಮೃತಶಿಲೆಯಹಾಸು ಹೊಂದಿರುವುದರಿಂದ ಬಣ್ಣದ ಬೆಳಕಿನಲ್ಲಿ ನೋಡುಗರೂ ಮಿಂದೇಳುತ್ತಾರೆ.

ನವರಾತ್ರಿಯ ಕೊನೆಯಲ್ಲಿ ಶಾರದೆ, ನವದುರ್ಗೆಯರ ಅದ್ದೂರು ಮೆರವಣಿಗೆ ಮಂಗಳೂರಲ್ಲಿ ನಡೆಯುತ್ತದೆ. ಮುಸ್ಸಂಜೆ ಆರಂಭವಾಗುವ ದಸರಾ ಮೆರವಣಿಗೆ ರಾತ್ರಿಯೆಲ್ಲಾ ಮಂಗಳೂರು ನಗರದ ಪ್ರಮುಖಬೀದಿಗಳಲ್ಲಿ ಸಂಚರಿಸುತ್ತದೆ. ಲಕ್ಷಾಂತರ ಮಂದಿ ಈ ಅಭೂತಪೂರ್ವ ಮೆರವಣಿಗೆ ನೋಡುತ್ತಾರೆ. ಮೆರವಣಿಗೆ ಹಾದುಹೋಗಲಿರುವ ಬೀದಿಗಳಲ್ಲಿ ಮುಸ್ಸಂಜೆ ವೇಳೆಗೆ ಜನರು ಜಮಾಯಿಸಿ ನವದುರ್ಗೆಯರ ಮೆರವಣಿಗೆ ಕಾಣಲು ಕಾದಿರುತ್ತಾರೆ.

ಸುಮಾರು ಅರವತ್ತಕ್ಕೂ ಅಧಿಕ ಟ್ಯಾಬ್ಲೋಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. ಹುಲಿವೇಷ, ನಾಡಿನಾದ್ಯಂತದಿಂದ ಜಾನಪದ ತಂಡಗಳು ಕಂಸಾಳೆ, ಗೊರವರ ಕುಣಿತ, ಕರಡಿಮಜಲು, ಜಗ್ಗಲಗೆ ಮೇಳ, ಡೊಳ್ಳು ಕುಣಿತ, ಪೂಜಾಕುಣಿತ, ಕೀಲುಗೊಂಬೆ, ಮರಗಾಲು, ಜಡೆಕೋಲಾಟ ತಂಡ ಕೇರಳದ ಚೆಂಡೆ, ಸಾವಿರಕ್ಕೂ ಅಧಿಕ ಬಣ್ಣದ ಕೊಡೆಗಳು ಹೀಗೆ ಈ ಮೆರವಣಿಗೆಯಲ್ಲಿ ಹಲ್ಲು ಹಲವು ಮೇಳಗಳಿರುತ್ತವೆ. ರಾತ್ರಿಯೆಲ್ಲ ಜನರು ಮೆರವಣಿಗೆ ನೋಡಲು ಕಾಯಬೇಕಾಗಿರುವುದರಿಂದ ಹೊತ್ತು ಕಳೆಯಲು ಅಲ್ಲಲ್ಲಿ ಸಂಗೀತ ರಸಮಂಜರಿ ಆಯೋಜಿಸಲಾಗಿರುತ್ತದೆ. ರಾತ್ರಿಯೆಲ್ಲ ಮಂಗಳೂರು ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ಮತ್ತೆ ಕುದ್ರೋಳಿ ಕ್ಷೇತ್ರ ತಲಪುವ ವೇಳೆಗೆ ಬೆಳಗಾಗಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X