ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಳ ವ್ಯಕ್ತಿತ್ವದ ರಾಜಕಾರಣಿ ಡಿಟಿ ಜಯಕುಮಾರ್

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

DT Jayakumar with his family
ಡಿ.ಟಿ.ಜಯಕುಮಾರ್‌ರವರು ಆರಂಭದಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಂತರ ದೇವರಾಜು ಅರಸುರವರ ಪ್ರಭಾವಕ್ಕೊಳಗಾಗಿ ರಾಜಕೀಯ ಪ್ರವೇಶ ಮಾಡಿ ಮೂರು ಬಾರಿ ಸಚಿವರಾಗಿ ಸೇವೆಸಲ್ಲಿಸಿದ್ದರು. ಡಿ.ಟಿ.ಜಯಕುಮಾರ್‌ರವರು ಅರಸು ಕಾಂಗ್ರೆಸ್, ರೆಡ್ಡಿ ಕಾಂಗ್ರೆಸ್, ಕ್ರಾಂತಿರಂಗ ಮತ್ತು ಜನತಾ ಪರಿವಾರದಲ್ಲಿ ರಾಜಕೀಯ ಹೆಜ್ಜೆಯಿಟ್ಟಿ ಯಶಸ್ಸು ಕಂಡವರು.

ಮೂಲತಃ ರಾಮನಗರ ಜಿಲ್ಲೆ ಚನ್ನಪಟ್ಟಣದ ದೇವರಹಳ್ಳಿ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ತಣ್ಣೀರಯ್ಯನವರ ತುಂಬು ಕುಟುಂದಲ್ಲಿ 8ನೇ ಮಗನಾಗಿ ಜನಿಸಿದವರು. ಡಿ.ಟಿ.ಜಯಕುಮಾರ್‌ರವರ ಸಹೋದರ ಡಿ.ಟಿ.ರಾಮು ಕೂಡ ಚನ್ನಪಟ್ಟಣದ ಶಾಸಕರಾಗಿದ್ದರು. ಚನ್ನಪಟ್ಟಣದಲ್ಲಿ ಜನಿಸಿ ನಂಜನಗೂಡಿನಲ್ಲಿ ತನ್ನ ಸರಳ ವ್ಯಕ್ತಿತ್ವದಿಂದ ಜನಮಾನಸದಲ್ಲಿ ನೆಲೆಯೂರಿ ರಾಜಕೀಯವಾಗಿ ಅಸ್ತಿತ್ವಕಂಡುಕೊಂಡು ರಾಜ್ಯರಾಜಕಾರಣದಲ್ಲಿ ಹಲವಾರು ಹುದ್ದೆಗಳನ್ನ ಅಲಂಕರಿಸಿದ್ದ ಡಿ.ಟಿ.ಜಯಕುಮಾರ್‌ರ ಸ್ವಗ್ರಾಮ ದೇವರಹಳ್ಳಿಯಲ್ಲಿ ಈಗ ನೀರವ ಮೌನ ಆವರಿಸಿದೆ.

ಟಿಜಿಜೆ ಜನಿಸಿದ್ದು ಜನವರಿ 21, 1949ರಲ್ಲಿ. ಪ್ರಾಥಮಿಕ ಶಿಕ್ಷಣವನ್ನ ಸ್ವಗ್ರಾಮದಲ್ಲೇ ಮುಗಿಸಿದ ಡಿ.ಟಿ.ಜೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಮುಗಿಸಿ 70ರ ದಶಕದಲ್ಲಿ ಮಂಡ್ಯ ಮತ್ತು ನಂಜನಗೂಡಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಪಿ.ಎಸ್.ಐ ಆಗಿ ಕಾರ್ಯನಿರ್ವಹಿಸಿದರು.

ಡಿ.ಟಿ.ಜಯಕುಮಾರ್‌ರವರ ಹಿರಿಯ ಸಹೋದರ ಡಿ.ಟಿ.ರಾಮು ಕೂಡ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿದ್ದರು. ಪಿ.ಎಸ್.ಐ ಆಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಹಿರಿಯ ಅಧಿಕಾರಿಯೊಂದಿಗಿನ ವೈಮನಸ್ಸಿನಿಂದ ದೇವರಾಜು ಅರಸುರವರ ಪ್ರಭಾವಕ್ಕೊಳಗಾಗಿ ರಾಜಕೀಯ ಪ್ರವೇಶ ಮಾಡಿದ ಡಿ.ಟಿ.ಜಯಕುಮಾರ್ ನಂಜನಗೂಡಿನಿಂದ ಶಾಸಕರಾಗಿ ಆಯ್ಕೆಯಾದರು. ನಂತರದ ದಿನಗಳಲ್ಲಿ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಡಿ.ಟಿ.ಜಯಕುಮಾರ್ ದೇವೇಗೌಡರ ಆಪ್ತವಲಯದಲ್ಲಿ ಒಬ್ಬರಾಗಿ ಜೆ.ಎಚ್.ಪಟೇಲ್, ಧರ್ಮ್‌ಸಿಂಗ್ ಮತ್ತು ಎಚ್.ಡಿ.ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಸರಳ ವಿವಾಹಕ್ಕೆ ಟಿಜಿಜೆ ಯಾವತ್ತೂ ಮನ್ನಣೆಯಿತ್ತವರು. ಸುಧಾ ದೇವಿಯವರನ್ನ ಕೂಡ ಸರಳವಾಗಿಯೇ ವಿವಾಹವಾಗಿದ್ದರು. ಚನ್ನಪಟ್ಟಣದಲ್ಲಿ ಜನಿಸಿ ನಂಜನಗೂಡಿನಂತಹ ಹಿಂದುಳಿದ ಪ್ರದೇಶದಲ್ಲಿ ರಾಜಕೀಯ ಅಸ್ತಿತ್ವಕಂಡುಕೊಂಡು ಉನ್ನತ ಮಟ್ಟಕ್ಕೇರಿದ್ದು ಡಿ.ಟಿ.ಜೆಯವರ ಸಾಧನೆಯಾಗಿದೆ. ಬಿಡದೇ ಕಾಡಿದ ಮಧುಮೇಹದಿಂದ ಸಾಕಷ್ಟು ಬಳಲಿದ್ದ ಡಿ.ಟಿ.ಜಯಕುಮಾರ್ ಪುತ್ರ ವಿಶಾಲ್.ಜೆ.ಗೌತಮ್ ಪತ್ನಿ ಸುಧಾದೇವಿಯವರನ್ನ ಬಿಟ್ಟು ಅಗಲಿದ್ದಾರೆ.

ಡಿ.ಟಿ.ಜಯಕುಮಾರ್ ತಮ್ಮ ಸ್ವಸಾಮರ್ಥ್ಯದಿಂದಲೇ ನಾಯಕತ್ವದ ಗುಣಗಳನ್ನ ಬೆಳೆಸಿಕೊಂಡಿದ್ದರು. ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ನಡೆದ ಒಂದು ಘಟನೆಯಿಂದ ಬೇಸತ್ತ ಡಿ.ಟಿ.ಜೆ ರಾಜಕೀಯ ನಂಜನಗೂಡಿನಿಂದಲೇ ಪ್ರವೇಶ ಮಾಡಿ ಹಲವಾರು ಹುದ್ದೆಗಳನ್ನ ಅಲಂಕರಿಸಿದವರು. ತಮ್ಮ ಬದುಕಿನ ಅಂತಿಮ ದಿನಗಳಲ್ಲಿ ಬಿಎಸ್‌ಪಿಯೊಂದಿಗೆ ಗುರುತಿಸಿಕೊಂಡು ಮತ್ತೆ ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಮತ್ತೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡರು ಸಕ್ರಿಯರಾಗಿರದೇ ತಟಸ್ಥವಾಗಿಯೇ ಉಳಿದಿದ್ದರು.

ಅವಳಿ ಜವಳಿ ಮಕ್ಕಳಾಗಿ ಜನಿಸಿದ್ದ ವಿಜಯ್‌ಕುಮಾರ್ ಮತ್ತು ಜಯಕುಮಾರ್ ಹಾಗೂ ಉಳಿದ 6 ಮಂದಿ ಸಹೋದರರು ಎಲ್ಲರೂ ಇಹಲೋಕ ತ್ಯಜಿಸಿದ್ದಾರೆ. ಅವಳಿ ಜವಳಿಯಾಗಿ ತಮ್ಮ ಒಡಹುಟ್ಟಿದ್ದ ವಿಜಯ್‌ಕುಮಾರ್ ಕಳೆದ ಮೂರು ತಿಂಗಳ ಹಿಂದೆಯಷ್ಟೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು ಈಗ ಅವರ ಹಿಂದೆಯೇ ಡಿ.ಟಿ.ಜೆ ಕೂಡ ಇಹಲೋಕತ್ಯಜಿಸಿದ್ದಾರೆ. ಜೊತೆಯಲ್ಲೇ ಜನಿಸಿ ಸಾವಲ್ಲೂ ಕೂಡ ಅಣ್ಣನನ್ನೇ ಡಿ.ಟಿ.ಜೆ ಹಿಂಬಾಲಿಸಿರುವುದು ಕಾಕತಾಳಿಯವಾಗಿದೆ.

ಸರಳ ವ್ಯಕ್ತಿತ್ವನ್ನ ರೂಢಿಸಿಕೊಂಡಿದ್ದ ಡಿ.ಟಿ.ಜಯಕುಮಾರ್ ಸಾವಿನ ನಂತರ ಮೈಸೂರಿನ ಜೆ.ಎಸ್.ಎಸ್. ವಿದ್ಯಾಲಯದ ಪ್ರಯೋಗಾಲಯಕ್ಕೆ ತಮ್ಮ ದೇಹವನ್ನ ದಾನ ಮಾಡುವ ಮೂಲಕ ಆದರ್ಶ ಮೆರೆದಿದ್ದಾರೆ. ಗಿಜಗಿಡುವ ನಗರ ಪ್ರದೇಶದಿಂದ ಹುಟ್ಟೂರಿಗೆ ಬಂದು ಡಿ.ಟಿ.ಜಯಕುಮಾರ್ ವಿಶ್ರಮಿಸುತ್ತಿದ್ದ ಚನ್ನಪಟ್ಟಣದ ದೇವರಹಳ್ಳಿಯ ತೊಟ್ಟಿಮುರದ ಕಂಬದ ಹಟ್ಟಿಯಲ್ಲಿ ಡಿ.ಟಿ.ಜೆಯ ನೆನಪುಗಳು ಮಾತ್ರ ಕಾಡುತ್ತಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X