ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು : ವರುಣನ ಆರ್ಭಟಕ್ಕೆ ಇಬ್ಬರು ಸಾವು

By Staff
|
Google Oneindia Kannada News

Rain havoc in Bangalore
ಬೆಂಗಳೂರು, ಸೆ. 18 : ಶುಕ್ರವಾರ ಮಧ್ಯಾಹ್ನ ಕೇವಲ ಒಂದುವರೆ ಗಂಟೆ ಸುರಿದ ವರ್ಷಧಾರೆಗೆ ಇಡೀ ಬೆಂಗಳೂರು ತತ್ತರಿಸಿಹೋಗಿದೆ. ನಗರದ ಅನೇಕ ಕಡೆಗಳಲ್ಲಿ ಮಳೆ ರಸ್ತೆ ಮೋರಿ ಒಂದು ಮಾಡಿದ್ದರಿಂದ ವಾಹನಗಳ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಯಿತು, ಜನಜೀವನವೇ ನಿಂತ ನೀರಂತಾಗಿತ್ತು.

ಕಳೆದೆರಡು ದಿನಗಳಿಂದ ರಾತ್ರಿ ಮಾತ್ರ ಸುರಿಯುತ್ತಿದ್ದ ಮಳೆ ಇಂದು ಮಧ್ಯಾಹ್ನವೇ ಸುರಿಯಲು ಪ್ರಾರಂಭಿಸಿತು. ಇದರ ಪರಿಣಾಮವಾಗಿ ವಿದ್ಯುತ್ ಸ್ಪರ್ಶದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ನಗರದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪಾದಚಾರಿಗಳು, ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದಾಗಿ ಯಮಯಾತನೆ ಅನುಭವಿಸುವಂತಾಯಿತು. ಹಿಂಗಾರು ಮಳೆ ಇನ್ನೂ ಎರಡು ಮೂರು ದಿನಗಳ ಕಾಲ ಹೀಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಮಧ್ಯಾನ್ಹ ಸುಮಾರು 1 ಗಂಟೆಗೆ ಆಗಮಿಸಿದ ವರ್ಷಧಾರೆ 2.30ರವರೆಗೆ ಸತತವಾಗಿ ಸುರಿಯಿತು. ಜೆಸಿ ನಗರದ ನಿವಾಸಿ ವ್ಯಾಪಾರಿಯಾಗಿರುವ ದಿನೇಶ್ ಕುಮಾರ್ ಅವರು ಕೆಲಸದ ಮೇಲೆ ಕಲಾಸಿಪಾಳ್ಯಕ್ಕೆ ಬಂದಿದ್ದರು. ಭಾರಿ ಮಳೆಯಿಂದ ಕಲಾಸಿಪಾಳ್ಯದ ಬಸ್ ನಿಲ್ದಾಣದ ಬಳಿ ಮರ ಉರುಳಿಬಿದ್ದಿತು. ಮರ ತಂತಿಯ ಮೇಲೆ ಬಿದ್ದಿದ್ದು, ಬಸ್ ಗಾಗಿ ಕಾಯುತ್ತಿದ್ದ ದಿನೇಶ್ ಕುಮಾರ್ ಅವರ ಮೇಲೆ ತಂತಿ ಬಿದ್ದು ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದರು.

ಇನ್ನೊಂದು ಘಟನೆಯಲ್ಲಿ ಮಡಿವಾಳದ ಲಕ್ಷ್ಮಣರಾವ್ ನಗರದಲ್ಲಿ ಗಾರೆ ಕೆಲಸಗಾರ ಆನಂದ ಮೆಸ್ತ್ರೀ ಎಂಬುವವರು ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿದ್ಯುತ್ ಲೈಟಿನ ಅಲಂಕಾರ ಮಾಡಲಾಗಿತ್ತು. ಆದರೆ, ವಿದ್ಯುತ್ ಅಲಂಕಾರವನ್ನು ಸಂಪೂರ್ಣವಾಗಿ ತೆಗೆದು ಹಾಕಿರಲಿಲ್ಲ. ಅಂಗಡಿಗೆ ತೆರಳುತ್ತಿದ್ದ ಆನಂದ್ ಮೇಸ್ತ್ರೀ ಆಕಸ್ಮಿಕವಾಗಿ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟಿದ್ದರಿಂದ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.

ಉಳಿದಂತೆ ಬಸವೇಶ್ವರ ನಗರದಲ್ಲಿ ಮರ ವ್ಯಕ್ತಿಯೊಬ್ಬನ ಮೇಲೆ ಉರುಳಿ ಬಿದ್ದಿದ್ದರಿಂದ ಆತ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಡಿವಾಳ ಸಿಲ್ಕ್ ಬೋರ್ಡ್ ಜಂಕ್ಷನ್, ಡಬಲ್ ರಸ್ತೆ, ಲಾಲ್ ಬಾಗ್ ರಸ್ತೆ, ಕಾರ್ಪೋರೇಷನ್ ವೃತ್ತ, ಈಜೀಪುರ, ಹೊಸೂರು ರಸ್ತೆ, ಮೈಸೂರು ರಸ್ತೆಯ ಅನೇಕ ಪ್ರದೇಶಗಳು, ಚಾಮರಾಜಪೇಟೆಯ ತಗ್ಗು ಪ್ರದೇಶಗಳು, ಗಾರೆ ಪಾಳ್ಯ, ಆನೆ ಪಾಳ್ಯ ಸೇರಿದಂತೆ ಅನೇಕ ಪ್ರದೇಶಗಳು ನೀರಿನಿಂದ ಜಲಾವೃತವಾಗಿವೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ನೀರು ಮನೆಯೊಳಗೆ ನುಗ್ಗಿ ಹಾವಳಿ ಎಬ್ಬಿಸಿದೆ.

ಆಪರೇಷನ್ ವಿಜಯ್ ಅಂತ್ಯ

ಕಳೆದೆರಡು ದಿನಗಳ ಹಿಂದೆ ಮೋರಿಯಲ್ಲಿ ಕೊಚ್ಚಿ ಹೋಗಿದ್ದ ವಿಜಯ್ ಹುಡುಕಾಟ ಕಾರ್ಯವನ್ನು ಬಿಬಿಎಂಪಿ ಸ್ಥಗಿತಗೊಳಿಸಿದೆ. ವಿಜಯ್ ಹುಡುಕಾಟಕ್ಕೆ ಬಿಬಿಎಂಪಿ ಸಾಕಷ್ಟು ಪ್ರಯತ್ನ ನಡೆಸಿತು. ನಗರದ ಮಡಿವಾಳ ಕೆರೆ ಸೇರಿದಂತೆ ಅನೇಕ ಕಡೆಗಳಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಜೊತೆಗೆ ಇಂದು ಬೆಂಗಳೂರಿನಲ್ಲಿ ಭಾರಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಆಪರೇಷನ್ ವಿಜಯ್ ಕಾರ್ಯಾಚರಣೆಯನ್ನು ಕೈಬಿಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಅಧಿಕಾರಿ ಶಿವಬಸಯ್ಯ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X