ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಯುಧ ಪೂಜೆಯೂ... ಯಡಿಯೂರಪ್ಪನವರ ಅಭಿವೃದ್ಧಿಯೂ

By * ಶಿ.ಜು. ಪಾಶ, ಶಿವಮೊಗ್ಗ
|
Google Oneindia Kannada News

BS Yeddyurappa
ಶಿವಮೊಗ್ಗ, ಸೆ. 18 : ದಸರಾ ಎಂದರೆ ಶಿವಮೊಗ್ಗದ ಜನ ಆತಂಕಪಡುವ ಪರಂಪರೆ ಆರಂಭವಾಗಿದೆ. ಕಳೆದ ದಸರಾ ಹಬ್ಬದಲ್ಲಿ ಬಿ.ಎಚ್. ರಸ್ತೆ ಅಗಲೀಕರಣದ ನೆಪದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿದ್ದ ದೊಡ್ಡದೊಡ್ಡ ಕಟ್ಟಡಗಳು ಉರುಳಿಬಿದ್ದಿದ್ದವು. ಬೆಳಿಗ್ಗೆ ಪೂಜೆ ಮಾಡಲೆಂದು ರಾತ್ರಿ ಸಿದ್ಧವಾಗಿ ಹೋಗಿದ್ದ ವರ್ತಕರೆಲ್ಲ ಬೆಳಿಗ್ಗೆ ತಮ್ಮ ನೆಲಸಮವಾಗಿದ್ದ ಅಂಗಡಿಗಳ ಪೂಜೆಗೆಂದು ತಂದಿದ್ದ ಹೂವು-ಹಣ್ಣನ್ನು, ಜೊತೆಗೆ ತಮ್ಮ ಕಣ್ಣೀರ ಕೋಡಿಯನ್ನು ಹರಿಸಿದ್ದರು. ಇದೀಗ ಮತ್ತೆ ದಸರಾ ಬಂದಿದೆ. ನೆಹರೂ ರಸ್ತೆ, ದುರ್ಗಿಗುಡಿ ವರ್ತಕರು, ವಾಸಿಸುತ್ತಿರುವ ನಾಗರೀಕರು ಎಲ್ಲದನ್ನೂ ಕಳೆದುಕೊಳ್ಳುವ ಭಯಕ್ಕೆ ಬಿದ್ದಿದ್ದಾರೆ. ಇದು ಪ್ರತೀ ವರ್ಷ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗದ ಜನತೆಗೆ ನೀಡುವ ಆಯುಧ ಪೂಜೆ ಗಿಫ್ಟಾ...!

ಬಿ.ಎಚ್. ರಸ್ತೆ ಅಗಲೀಕರಣದ ನೆಪದಲ್ಲಿ ಇಕ್ಕೆಲಗಳ ದೊಡ್ಡ ದೊಡ್ಡ ಕಟ್ಟಡಗಳನ್ನು ಒಡೆದು, ನೆಲಕ್ಕುರುಳಿಸಿದ ಜಿಲ್ಲಾಡಳಿತ ಈ ವರೆಗೂ ಬಿ.ಎಚ್. ರಸ್ತೆ ಸರಿಪಡಿಸಲು ಸಾಧ್ಯವಾಗಲಿಲ್ಲ. ಕಳೆದ ಒಂದು ವರ್ಷದಿಂದ ಈ ರಸ್ತೆಯಲ್ಲಿರುವ ವರ್ತಕರು ತಮ್ಮ ಹೊಟ್ಟೆಗೆ ತಣ್ಣೀರಿನ ಬಟ್ಟೆ ಅದುಮಿಟ್ಟುಕೊಂಡಿದ್ದಾರೆ. ಒಂದುಕಡೆ ವ್ಯಾಪಾರವಿಲ್ಲದ ಸ್ಥಿತಿ, ಇನ್ನೊಂದು ಕಡೆ ಗಗನಕ್ಕೇರುತ್ತಿರುವ ಆಹಾರ ಪದಾರ್ಥಗಳ ಬೆಲೆ. ಒಂದು ವರ್ಷ ಹೇಗೆ ಕಳೆದಿದ್ದಾರೆಂದು ಈ ಬಿ.ಎಚ್. ರಸ್ತೆಯ ಜನರಿಗೆ ಬಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಳಿದ ಉದಾಹರಣೆಯೇ ಇಲ್ಲ.

ಒಂದಿಷ್ಟು ದಿನ ಬಿ.ಎಚ್. ರಸ್ತೆಯ ವರ್ತಕರು ಹೋರಾಟ ಮಾಡಿದರು. ಈ ವರ್ತಕರ ಹೋರಾಟವನ್ನು ಗಂಭೀರವಾಗಿ ತೆಗೆದುಕೊಂಡ, ಇವರನ್ನು ಸಮಾಧಾನದಿಂದ ಮಾತನಾಡಿಸಿದ ಒಬ್ಬನೇ ಒಬ್ಬ ರಾಜಕಾರಣಿ ಇಲ್ಲ. ಬಿ.ಎಚ್. ರಸ್ತೆ ಒಡೆದು, ಆಯುಧಪೂಜೆಗೆ ಒಂದು ವರ್ಷ ತುಂಬುತ್ತದೆ. ಆದರೆ ಬಿ.ಎಚ್. ರಸ್ತೆಯಲ್ಲಿ ಇದ್ದ ವ್ಯವಹಾರ ಮಾತ್ರ ಈವರೆಗೆ ಹೆಣದ ಬಟ್ಟೆಯನ್ನೇ ಹೊದ್ದುಕೊಂಡಿದೆ.

ಮತ್ತೆ ಆಯುಧಪೂಜೆ-ಮತ್ತೆ ಅಗಲೀಕರಣ;

ಬಿ.ಎಚ್. ರಸ್ತೆಯ ಅಗಲೀಕರಣ ಮಾಡುವ ನೆಪದಲ್ಲಿ ಶಿವಮೊಗ್ಗದ ಅರ್ಥವ್ಯವಸ್ಥೆಯ ಬೆನ್ನುಮೂಳೆಯನ್ನೇ ಮುರಿದುಹಾಕಿದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಈಗ ಮತ್ತೆ ಆಯುಧ ಪೂಜೆಯ ದಿನವನ್ನು ನೆನಪುಮಾಡಿಕೊಂಡಂತಿದೆ. ನ್ಯಾಯಾಂಗದ ಮೊರೆ ಹೋಗಬೇಡಿ. ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ ಎಂದು ರಾಜ್ಯ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ದುರ್ಗಿಗುಡಿಯ ವರ್ತಕರಿಗೆ ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಕೊನೆ ಪಕ್ಷ ಸಾಂತ್ವನವಾದರೂ ಈ ಸಚಿವರು ನೀಡಬಹುದಿತ್ತು. ಆದರೆ ಹಾಗೆ ಆಗಲಿಲ್ಲ. ವರ್ತಕರು ದುರ್ಗಿಗುಡಿ ರಸ್ತೆ ವಿಸ್ತರಣೆ ಕುರಿತು ಈಗಾಗಲೇ ಆತಂಕಕ್ಕೆ ಬಿದ್ದಿದ್ದಾರೆ. ಎಲ್ಲದನ್ನೂ ಕಳೆದುಕೊಳ್ಳುವ ಕುರಿತು ಕ್ಷಣಗಳನ್ನು ಎಣಿಸುತ್ತಿದ್ದಾರೆ. ಇಷ್ಟರ ನಡುವೆ ನ್ಯಾಯಾಂಗದ ಮೊರೆ ಹೋಗುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ ಇದೆಲ್ಲಾ ಪ್ರಯತ್ನಗಳಿಂದ ರಸ್ತೆ ಅಗಲೀಕರಣ ನಿಲ್ಲಲು ಸಾಧ್ಯವಿಲ್ಲ.

ಬಿ.ಎಚ್. ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಪರಿಹಾರಕ್ಕೆ ಮೋಸವಾಗುವುದಿಲ್ಲ ಎಂದಿದ್ದ ಸರ್ಕಾರ ಈ ಕ್ಷಣದವರೆಗೂ ಆ ಸಮಸ್ಯೆಯಿಂದ ಹೊರಬಂದಿಲ್ಲ. ಪರಿಹಾರವೆಂಬ ಮರೀಚಿಕೆ ಬಿ.ಎಚ್. ರಸ್ತೆಯ ಸಂತ್ರಸ್ತರಿಗೆ ಈ ವರೆಗೂ ಕಾಡುತ್ತಲೇ ಇದೆ. ದುರ್ಗಿಗುಡಿ-ನೆಹರೂರಸ್ತೆ-ಜೈಲ್‌ರಸ್ತೆಯ ವರ್ತಕರು ಮೊದಲು ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ನಂತರದಲ್ಲಿ ಕಟ್ಟಡ ತೆರವುಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.

ಶನಿವಾರ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಜಿಲ್ಲಾಡಳಿತ, ಸಂತ್ರಸ್ತರಾಗಲಿರುವ ವರ್ತಕರು ಸಭೆ ಸೇರಲಿದ್ದಾರೆ. ಈ ಸಭೆ ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದು ಕಾದುನೋಡುವ ಅವಶ್ಯಕತೆಯೂ ಕಾಣುತ್ತಿಲ್ಲ. ಅಗಲೀಕರಣವಾಗುವುದು ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಯಡಿಯೂರಪ್ಪ ನಗುವುದು ಖಚಿತ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X