ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ : ಅ 23ರೊಳಗೆ ಚುನಾವಣೆ ಪ್ರಕ್ರಿಯೆ

By Staff
|
Google Oneindia Kannada News

BBMP Election
ಬೆಂಗಳೂರು, ಸೆ. 17 : ಬಿಬಿಎಂಪಿ ಚುನಾವಣೆ ನಡೆಸಲು ಆಕ್ಟೋಬರ್ 23ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸುವಂತೆ ಚುನಾವಣಾ ಆಯೋಗ ಮತ್ತು ಸರಕಾರಕ್ಕೆ ಇಂದು ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ. ಇದರೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಂತಾಗಿದೆ.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿಡಿ ದಿನಕರನ್ ಹಾಗೂ ಸಭಾಹಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಬಿಬಿಎಂಪಿಗೆ ಅಕ್ಟೋಬರ್ 23ರೊಳಗೆ ಚುನಾವಣಾ ಪ್ರಕ್ರಿಯೆ ಪ್ರಕಟಿಸುವಂತೆ ನಿರ್ದೇಶನ ನೀಡಿದೆ. ಅ.23ರೊಳಗೆ ಚುನಾವಣಾ ಪ್ರಕ್ರಿಯೆ ಪ್ರಕಟಿಸುವಂತೆ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನವೆಂಬರ್ 2 ನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಬಿಬಿಎಂಪಿ ವಾರ್ಡ್ ವಿಂಗಡಣೆ, ಮೀಸಲಾತಿಯ ಅಧಿಸೂಚನೆಗಳನ್ನು ಸರಕಾರ ಮುಂದಿನ ಏಳು ದಿನಗಳಲ್ಲಿ ಹೊರಡಿಸುವಂತೆ ಸೂಚಿಸಿ, ಅಕ್ಟೋಬರ್ 9 ರೊಳಗೆ ಮೀಸಲಾತಿ ಅಂತಿಮ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಹಸ್ತಾಂತರಿಸುವಂತೆ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರಿಗೆ ಪೀಠ ಆದೇಶಿಸಿದೆ.

ಬಿಬಿಎಂಪಿಗೆ ಚುನಾವಣೆ ನಡೆಸಲು ಮತಯಂತ್ರ ಖರೀದಿ ಮತ್ತಿತರ ವ್ಯವಸ್ಥೆಗೆ ಸುಮಾರು 14 ಕೋಟಿ ರುಪಾಯಿ ವೆಚ್ಚ ತಗುಲಲಿದ್ದು, ಈ ಹಣವನ್ನು ಎರಡು ಹಂತಗಳಲ್ಲಿ ಸರಕಾರ ಪಾವತಿಸಬೇಕು. ಮೊದಲ ಕಂತಾಗಿ ಅಕ್ಟೋಬರ್ ಏಳರೊಳಗೆ ಆಯೋಗಕ್ಕೆ ಪಾವತಿಸುವಂತೆ ಪೀಠ ಸೂಚಿಸಿದೆ. ಅಕ್ಟೋಬರ್ 15ರೊಳಗೆ ಎರಡನೇ ಕಂತು ಆಯೋಗಕ್ಕೆ ಪಾವತಿಸಬೇಕು ಎಂದು ಪೀಠ ಹೇಳಿದೆ. ಕಳೆದ ಮೂರು ವರ್ಷಗಳಿಂದ ಬಿಬಿಎಂಪಿಗೆ ಚುನಾವಣೆ ನಡೆದಿಲ್ಲ. ಮಾಜಿ ಮೇಯರ್ ಪಿ ರಮೇಶ್ ಅವರು ಸರಕಾರದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X