ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರ ಜಗಳದಲಿ ಮೂಗು ತೂರಿಸಿದ ಕರವೇ

By Staff
|
Google Oneindia Kannada News

ಶಿವಮೊಗ್ಗ, ಸೆ. 15 : ನಗರದ ಪಾರ್ಕ್ ಬಡಾವಣೆಯ ಮುಖ್ಯರಸ್ತೆಯಲ್ಲಿ ನೂತನವಾಗಿ ಆರಂಭವಾಗಿರುವ ವಾತ್ಸಲ್ಯ ಆಸ್ಪತ್ರೆ ಸಾಕಷ್ಟು ವಿವಾದದ ಕೇಂದ್ರ ಬಿಂದುವಾಗಿದ್ದು, ನಗರಸಭೆ ಸಿಬ್ಬಂದಿ ಆಕಸ್ಮಿಕವಾಗಿ ಈ ಆಸ್ಪತ್ರೆಯ ಎದುರು ಕಸ ಹಾಕಿದ ಕಾರಣಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಮತ್ತು ನಗರಸಭೆಯ ಅಧಿಕಾರಿಗಳು, ಸದಸ್ಯರ ನಡುವೆ ದೊಡ್ಡ ಜಗಳವೇ ನಡೆದ ಘಟನೆ ಮಂಗಳವಾರ ಅಪರಾಹ್ನ ನಡೆಯಿತು.

ನೂತನವಾಗಿ ಆರಂಭವಾಗಿರುವ ವಾತ್ಸಲ್ಯ ಆಸ್ಪತ್ರೆ ನಗರಸಭೆಯಿಂದ ಯಾವುದೇ ಪರವಾನಗಿಯನ್ನು ಪಡೆದಿಲ್ಲ. ರಸ್ತೆ ಅಗೆಯಲು ಮತ್ತಿತರೆ ಕಾಮಗಾರಿಗಳಿಗೂ ಸಹ ವಾತ್ಸಲ್ಯ ಆಸ್ಪತ್ರೆಯ ಆಡಳಿತ ಮಂಡಳಿ ಪರವಾನಗಿ ಪಡೆಯದೆ ಕೆಲಸ ನಿರ್ವಹಿಸುತ್ತಿತ್ತು. ಆಸ್ಪತ್ರೆಯ ತ್ಯಾಜ್ಯ ವಸ್ತುಗಳನ್ನು ನೇರವಾಗಿ ಚರಂಡಿಗೆ ಎಸೆಯಲಾಗುತ್ತಿತ್ತು. ಈ ಬಗ್ಗೆ ನಗರಸಭೆ ಸಿಬ್ಬಂದಿ ವಿಚಾರಿಸಲು ಹೋದಾಗ ಈ ಕದನ ನಡೆಯಿತು.

ಆಸ್ಪತ್ರೆ ಸಿಬ್ಬಂದಿಗಳ ವರ್ತನೆಯಿಂದ ಬೇಸತ್ತ ನಗರಸಭೆ ಸಿಬ್ಬಂದಿ ತ್ರಿಚಕ್ರ ವಾಹನದಲ್ಲಿ ಒಯ್ಯಬೇಕಿದ್ದ ತ್ಯಾಜ್ಯ ವಸ್ತುಗಳನ್ನು ವಾತ್ಸಲ್ಯ ಆಸ್ಪತ್ರೆಯ ಎದುರು ಚೆಲ್ಲಿದರು. ಈ ಕ್ಷಣದಲ್ಲಿ ನಗರಸಭೆ ಸಿಬ್ಬಂದಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪ್ರವೀಣ್ ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರಸಭೆಯ ಸಿಬ್ಬಂದಿಗಳ ಜೊತೆ ಮಾತಿಗಿಳಿದರು. ಜಗಳ ತಾರಕಕ್ಕೇರಿದಾಗ ನಗರಸಭೆಯ ಅಧ್ಯಕ್ಷ ಎನ್.ಜೆ.ರಾಜಶೇಖರ್, ಸದಸ್ಯ ಮರಿಯಪ್ಪ, ಆಯುಕ್ತ ಜಯಣ್ಣ ಸೇರಿದಂತೆ ಪೌರ ಕಾರ್ಮಿಕರು ವಾತ್ಸಲ್ಯ ಆಸ್ಪತ್ರೆ ಎದುರು ಬಂದರು.

ಮರಿಯಪ್ಪ ಮಾತಿನ ಸಂಧಾನದ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರು. ಆದರೆ, ಅವರ ವಿರುದ್ಧವೇ ಪ್ರವೀಣ್ ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಿರುಗಿಬಿದ್ದರು. ಅವಾಚ್ಯ ಶಬ್ದಗಳು ಕಿವಿ ಕೊರೆದವು. ಕಾರ್ಯಕರ್ತರು ಸ್ಥಳಕ್ಕಾಗಮಿಸಿದ ಆಯುಕ್ತ ಜಯಣ್ಣರನ್ನು ಎಳೆದಾಡುವಂತಾಯಿತು. ಈ ಸಂದರ್ಭದಲ್ಲಿ ಎಲ್ಲಾ ಮುಗಿದ ಮೇಲೆ ಕೋಟೆ ಠಾಣೆಯ ಪೊಲೀಸರು ಆಗಮಿಸಿದರು. ಅಷ್ಟರಲ್ಲಾಗಲೇ ಕದನ ಮತ್ತಷ್ಟು ಗಂಭೀರಗೊಂಡಿತ್ತು.

ಪ್ರಕರಣ ದಾಖಲಿಸಲು ಒತ್ತಾಯ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕಾರ್ಯಕರ್ತರು ವಿನಾ ಕಾರಣ, ಅತಿರೇಕದಿಂದ ನಗರಸಭೆಯ ಆಯುಕ್ತ ಜಯಣ್ಣ ಹಾಗೂ ಪೌರ ನೌಕರರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ, ವಿವಿಧ ದಲಿತ ಹಾಗೂ ಜನಪರ ಸಂಘಟನೆಗಳು ಒಗ್ಗೂಡಿ, ಕರವೇ ಕಾರ್ಯಕರ್ತರನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ, ಎಲ್ಲಾ ಸಂಘಟನೆಗಳು ಒಟ್ಟಾಗಿ, ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆಂದು ದಲಿತ ಮುಖಂಡ ಪಡುವಳ್ಳಿ ಹರ್ಷೇಂದ್ರ ಕುಮಾರ್ ಒತ್ತಾಯಿಸಿದರು.

ಅಲ್ಲದೇ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಜಿ.ಎಸ್.ತಿಪ್ಪೇಸ್ವಾಮಿ, ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಹೆಚ್.ಎನ್.ಪ್ರಭು, ಡಾ|.ಬಿ.ಆರ್.ಅಂಬೇಡ್ಕರ್ ದಲಿತ ಸಮಿತಿಯ ಅಧ್ಯಕ್ಷ ಕೆ.ಕುಮಾರ್, ಡಿವಿಎಸ್ ಕಾರ್ಯಾಧ್ಯಕ್ಷ ರಾಜು, ಬಾಬು ಜಗಜೀವನರಾಮ್ ಸಮಿತಿಯ ಅಧ್ಯಕ್ಷ ಡಿ.ಕೆ.ಮಂಜುನಾಥ್‌ರವರು ಕೋಟೆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವಸಂತ್‌ಕುಮಾರ್‌ರವರನ್ನು ಕರವೇ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X