ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಮೈಸೂರು ಹೆದ್ದಾರಿ ಯಮಪುರಿಯ ರಹದಾರಿ

By * ಡಿ.ಟಿ. ತಿಲಕ್‌ರಾಜ್
|
Google Oneindia Kannada News

Common scene on Bengaluru-Mysuru express highway
ಚನ್ನಪಟ್ಟಣ, ಸೆ. 14 : ಬೆಂಗಳೂರು ಮೈಸೂರು ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಅದ್ಯಾವ ರಾಹುಕಾಲದಲ್ಲಿ ಬದಲಾಯಿತೋ ಏನೋ? ಚತುಷ್ಪಥ ಸಂಚಾರಕ್ಕೆ ಅವಕಾಶ ನೀಡಿದಾಗಿನಿಂದಲೂ ಈ ಹೆದ್ದಾರಿ ಮರಣಮೃದಂಗ ಬಾರಿಸುತ್ತಲೇ ಇದೆ. ಬೆಂಗಳೂರಿನಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ಈ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಇವುಗಳಿಗೆ ಹೆದ್ದಾರಿ ಪಕ್ಕದ ಗ್ರಾಮವಾಸಿಗಳು ಬಲಿಯಾಗುತ್ತಿರುವುದು ಮಾತ್ರ ದುರ್ದೈವದ ಸಂಗತಿಯಾಗಿದೆ.

ಸೂರ್ಯೋದಯಕ್ಕೂ ಮುನ್ನ ಪ್ರಾರಂಭವಾಗುವ ಈ ಮರಣಮೃದಂಗಕ್ಕೆ ಪ್ರತಿನಿತ್ಯ ಜನ-ಜಾನುವಾರುಗಳು, ಶ್ವಾನಗಳು ಬಲಿಯಾಗುತ್ತಿದ್ದು, ಈ ಮಾರ್ಗ ಸೀದಾ ಯಮಪುರಿಗೆ ಅವುಗಳನ್ನು ತಲುಪಿಸುತ್ತಿದೆ. ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವುನೋವುಗಳು ಸಂಭವಿಸುತ್ತಿದ್ದರೂ ಇವುಗಳನ್ನು ತಪ್ಪಿಸಲು ಸಂಬಂಧಿಸಿದ ಇಲಾಖೆ ಮಾತ್ರ ಯಾವ ಕ್ರಮ ಕೈಗೊಳ್ಳದಿರುವುದು ನಾಗರಿಕರನ್ನು ಚಿಂತೆಗೀಡುಮಾಡಿದೆ.

ಈ ಹೆದ್ದಾರಿಯು ಗ್ರಾಮಗಳ ಮಧ್ಯೆಯೇ ಹಾದುಹೋಗಿರುವುದರಿಂದ ಪಕ್ಕದಲ್ಲಿರುವ ಗ್ರಾಮವಾಸಿಗಳು ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ಈ ಹೆದ್ದಾರಿಯನ್ನು ದಾಟಬೇಕಾದ ಅನಿವಾರ್ಯತೆ ಇದ್ದು, ರಸ್ತೆ ದಾಟುವಾಗ ಸ್ವಲ್ಪ ಯಾಮಾರಿದರೂ ಬರುವ ಜವರಾಯನಿಗೆ ಆಹಾರವಾಗುವ ಪರಿಸ್ಥಿತಿ ಎದುರಾಗುತ್ತದೆ.

ಇನ್ನೊಂದು ದುರದೃಷ್ಟಕರ ಸಂಗತಿ ಎಂದರೆ, ಹೆದ್ದಾರಿಯ ಪಕ್ಕದಲ್ಲಿಯೇ ಶಾಲೆಗಳಿರುವುದು. ಒಂದು ಬದಿಯಲ್ಲಿ ಗ್ರಾಮದ ಮನೆಗಳಿದ್ದರೆ ರಸ್ತೆಯ ಇನ್ನೊಂದು ಬದಿಯಲ್ಲಿ ಶಾಲೆಗಳಿವೆ. ವಿದ್ಯಾರ್ಥಿಗಳು ಪ್ರತಿದಿನವೂ ಶಾಲೆಗೆ ಹೋಗಲು ಹರಸಾಹಸ ಪಡುವಂತಾಗಿದ್ದು, ಎಷ್ಟೋ ಬಾರಿ ರಸ್ತೆ ದಾಟುವಾಗ ವಿದ್ಯಾರ್ಥಿಗಳು ಅಪಘಾತಕ್ಕೀಡಾಗಿ ಅಂಗಾಂಗವನ್ನೋ ಪ್ರಾಣವನ್ನೋ ಕಳೆದುಕೊಂಡಿರುವ ಉದಾಹರಣೆಗಳು ಹೇರಳವಾಗಿವೆ.

ತಾಲೂಕಿನ ಕೆಂಗಲ್, ಹನುಮಂತನಗರ, ದೊಡ್ಡಮಳೂರು, ಬೈರಾಪಟ್ಟಣ, ಮುದಗೆರೆ ಬಳಿ ಗ್ರಾಮಗಳ ಮಧ್ಯೆಯೇ ಹೆದ್ದಾರಿ ಹಾದುಹೋಗಿರುವುದರಿಂದ ರಸ್ತೆ ದಾಟಲು ಪರ್ಯಾಯ ವ್ಯವಸ್ಥೆ ಇಲ್ಲದೆ ಪ್ರತಿನಿತ್ಯ ಅಪಘಾತಗಳ ಸರಮಾಲೆಯೇ ಸಂಭವಿಸುತ್ತಿದೆ. ಇನ್ನು ತಾಲೂಕಿನ ದೊಡ್ಡಮಳೂರು, ಬೈರಾಪಟ್ಟಣ ಬಳಿಯಂತೂ ಪ್ರತಿದಿನ ಅಪಘಾತಗಳು ಸಂಭವಿಸುತ್ತಿದ್ದು, ಈವರೆಗೆ ಅಪಘಾತದ ನಿಯಂತ್ರಣ ಸಾಧ್ಯವೇ ಆಗಿಲ್ಲ.

ಅಪಘಾತ ಸಂಭವಿಸಿದಾಗ ತಮ್ಮ ಜಾಣತನ ತೋರಿಸುವ ಸಂಬಂಧಪಟ್ಟವರು, ಬ್ಯಾರಿಕೇಡ್, ರಸ್ತೆಯುಬ್ಬು ನಿರ್ಮಿಸಿ ಸ್ಥಳೀಯರ ಮನವೊಲಿಸುವ ಯತ್ನ ನಡೆಸುತ್ತಾರಾದರೂ ಎರಡು ದಿನ ಕಳೆದ ನಂತರ ತಾವೇ ನಿರ್ಮಿಸಿದ ರಸ್ತೆಯುಬ್ಬು, ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಅಪಘಾತಗಳಿಗೆ ಮತ್ತೆ ಪರೋಕ್ಷವಾಗಿ ಅವಕಾಶ ಕಲ್ಪಿಸುತ್ತಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಅಪಘಾತಗಳಿಂದ ರೋಸಿಹೋಗಿರುವ ಹೆದ್ದಾರಿ ಬದಿಯ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆಯನ್ನೂ ನಡೆಸಿದ್ದರೂ ಈ ಪ್ರತಿಭಟನೆಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲದಂತಾಗಿದೆ. ರಸ್ತೆ ದಾಟುವ ಜಾಗದಲ್ಲಿ ರಸ್ತೆಯುಬ್ಬು ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದ್ದು, ಈ ರಸ್ತೆಯುಬ್ಬುಗಳು ಯಾವಾಗ ನಿರ್ಮಾಣವಾಗುತ್ತವೋ, ಯಾವಾಗ ಮಾಯವಾಗುತ್ತವೋ ಎಂಬುದೇ ತಿಳಿಯದಂತಾಗಿದೆ.

ಪ್ರತಿಭಟನೆ ನಡೆದಾಗ ಕಣ್ಣೊರೆಸಲು ಕ್ರಮ ಕೈಗೊಳ್ಳುವ ಇಲಾಖೆ, ನಂತರ ದಿನಗಳಲ್ಲಿ ಯಥಾಸ್ಥಿತಿ ಮುಂದುವರೆಸಿದೆ. ಮಂತ್ರಿ ಮಹೋದಯರ ಸುಗಮ ಸಂಚಾರ ನೆಪವಾಗಿಟ್ಟುಕೊಂಡು ತಾವೇ ನಿರ್ಮಿಸಿದ ರಸ್ತೆ ಉಬ್ಬುಗಳು ರಾತ್ರೋರಾತ್ರಿ ಮಾಯವಾಗುತ್ತಿವೆ. ಇನ್ನು ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿದ್ದು, ಗ್ರಾಮಗಳ ಹಾಗೂ ಶಾಲೆಗಳ ವ್ಯಾಪ್ತಿಯಲ್ಲಿ ವೇಗಮಿತಿ ಇಲ್ಲದೆ ಚಲಿಸುತ್ತವೆ. ಇದರಿಂದಾಗಿ ಹೆಚ್ಚು ಅಪಘಾತಗಳಿಗೆ ಅವಕಾಶವಿದ್ದು, ಅಪಘಾತ ಸಂಭವಿಸಿದರೆ ಪ್ರಾಣಹಾನಿ ಸಂಭವವೇ ಹೆಚ್ಚಾಗಿದೆ. ಇವುಗಳ ವೇಗಕ್ಕೆ ಪ್ರತಿನಿತ್ಯ ಜಾನುವಾರುಗಳು, ಶ್ವಾನಗಳು ಲೆಕ್ಕವಿಲ್ಲದಷ್ಟು ಬಲಿಯಾಗುತ್ತಿದ್ದು, ಇವುಗಳ ಮಾರಣಹೋಮಕ್ಕೆ ಕೊನೆಯೇ ಇಲ್ಲದಂತಾಗಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಅಪಘಾತಗಳನ್ನು ನಿಯಂತ್ರಿಸಲು ಗ್ರಾಮವ್ಯಾಪ್ತಿಗಳಲ್ಲಿ ಪಾದಚಾರಿ ಮೇಲ್ಸೇತುವೆಗಳ ಅವಶ್ಯಕತೆ ಇದ್ದು, ಇವುಗಳನ್ನು ನಿರ್ಮಿಸಲು ಸಂಬಂಧಪಟ್ಟ ಇಲಾಖೆಯನ್ನು ನಾಗರಿಕರು ಒತ್ತಾಯಿಸುತ್ತಲೇ ಇದ್ದಾರೆ. ಒಟ್ಟಾರೆ ಬೆಂಗಳೂರು-ಮೈಸೂರು ಹೆದ್ದಾರಿ ಎಂಬ ಯಮಪುರಿಯ ರಹದಾರಿಯಲ್ಲಾಗುತ್ತಿರುವ ಅಪಘಾತಗಳಿಗೆ ಯಾವಾಗ ಮುಕ್ತಿ ದೊರೆಯುವುದೋ ಕಾದುನೋಡಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X