ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ವಿರುದ್ಧ ಕಾನೂನು ಸಮರ: ದೇವೇಗೌಡ

By Staff
|
Google Oneindia Kannada News

H D Deve Gowda
ಬೆಂಗಳೂರು, ಸೆ.12: ಹೆಬ್ಬಗೋಡಿ ಚರ್ಚ್ ಮೇಲೆ ನಡೆದಿರುವ ದಾಳಿಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಇಂದು ಸರಕಾರಕ್ಕೆ ಆಗ್ರಹಿಸಿದರು. ಚರ್ಚ್ ದಾಳಿಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಿಲುವನ್ನು ಗೌಡರು ಸಮರ್ಥಿಸಿಕೊಂಡರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು. ಚರ್ಚ್ ದಾಳಿಯನ್ನು ಸಿಓಡಿ ತನಿಖೆಗೆ ಒಪ್ಪಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಈಗ ಸಿಓಡಿಯಲ್ಲಿ ದಕ್ಷ ಅಧಿಕಾರಿಗಳಿಲ್ಲ. ಆದ ಕಾರಣ ಚರ್ಚ್ ದಾಳಿಯನ್ನು ಸಿಬಿಐಗೆ ಒಪ್ಪಿಸುವುದು ಸೂಕ್ತ ಎಂದರು.

ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಶಿಕ್ಷಿಸಿ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ದೇವೇಗೌಡರು ವ್ಯಂಗವಾಡಿದರು. ಚರ್ಚ್ ದಾಳಿಗೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ನೀಡಿರುವ ಹೇಳಿಕೆ ಅವರ ವ್ಯಕ್ತಿತ್ವಕ್ಕೆ ಭೂಷಣವಲ್ಲ ಎಂದು ಟೀಕಿಸಿದರು.

ಬಿಜೆಪಿ ವಿರುದ್ಧ ಕಾನೂನು ಸಮರ
ಚಿಕ್ಕಮಗಳೂರಿನ ವಿವಾದಿತ ಬಾಬಾಬುಡನ್ ಗಿರಿ ಮತ್ತು ದತ್ತಪೀಠಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಬಿಜೆಪಿ ಸಚಿವರು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಬಿಜೆಪಿ ವಿರುದ್ಧ ತಾವು ಕಾನೂನು ಸಮರ ಸಾರುವುದಾಗಿ ಎಚ್ಚರಿಸಿದರು.

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಅವರು ಸೆಪ್ಟೆಂಬರ್ 8ರಂದು ವಿವಾದಿತ ಪ್ರದೇಶದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಿದ್ದಾರೆ. ಇದನ್ನು ತಾವು ಖಂಡಿಸುತ್ತೇವೆ. ಒಂದೆಡೆ ಮುಸ್ಲಿಮರ ಮೇಲೆ ದಾಳಿ, ಮತ್ತೊಂದೆಡೆ ಚರ್ಚ್ ಒಡೆಯುವುದು. ಕೋಮು ಸಾಮರಸ್ಯ ಎಲ್ಲಿದೆ? ಶಾಂತಿ, ನೆಮ್ಮದಿ ಇಲ್ಲದೆ ಸಹಬಾಳ್ವೆ ಸಾಧ್ಯವಿಲ್ಲ ಎಂದು ಗೌಡರು ಗುಡುಗಿದರು.

2006ರ ಹೈಕೋರ್ಟ್ ಆದೇಶವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಸರಕಾರಕ್ಕೆ ಹೆದರಿಕೊಂಡು, ಮಾನ ಮರ್ಯಾದೆ ಬಿಟ್ಟು ಅವರು ಕೆಲಸ ಮಾಡುವ ಬದಲು ಮನೆಗೆ ಹೋಗುವುದು ಉತ್ತಮ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯಪಾಲರು ಹೇಳಿರುವುದರಲ್ಲಿ ನೂರಕ್ಕೆ ನೂರರಷ್ಟು ಸತ್ಯಾಂಶವಿದೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X