ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಗಾ ನಾಲೆಗೆ ನೀರು : ಸಾರ್ವಜನಿಕರಿಗೆ ಎಚ್ಚರಿಕೆ

By Staff
|
Google Oneindia Kannada News

ಶಿವಮೊಗ್ಗ, ಸೆ.11 : ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ನಾಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಯಾವುದೇ ಜನ-ಜಾನುವಾರುಗಳು ನಾಲೆಗೆ ಇಳಿಯದಂತೆ ನೋಡಿಕೊಳ್ಳಲು ಹಾಗೂ ನಾಲೆಯಲ್ಲಿ ನೀರು ಹರಿಯಬಿಡುವಾಗ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕೆಂದು ತುಂಗಾ ಮೇಲ್ದಂಡೆ ಯೋಜನೆ ವಲಯದ ಮುಖ್ಯ ಇಂಜಿನಿಯರ್ ಆರ್.ರುದ್ರಯ್ಯ ತಿಳಿಸಿದ್ದಾರೆ.

ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲೆಯ ಕಾಮಗಾರಿಯು 272 ಕಿ.ಮೀಟರ್‌ನಷ್ಟಿದ್ದು, ಈಗ ಅದರಲ್ಲಿ 156 ಕಿ.ಮೀ.ನಷ್ಟು ನಾಲೆ ಕಾಮಗಾರಿಯು ಮುಗಿದಿದೆ. ಹೀಗಾಗಿ ಇಂದಿನಿಂದ 156 ಕಿ.ಮೀ.ನಷ್ಟು ನಾಲೆಯಲ್ಲಿ ನೀರು ಹರಿಸಲಾಗುವುದೆಂದರು.

ಈ ಯೋಜನೆಯಡಿ ಶಿವಮೊಗ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಅಡಿಯಲ್ಲಿ ಬರುವ 80,434 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯನ್ನು 1991ರಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದು ಪ್ರಾರಂಭಿಸಲಾಯಿತು. ಈ ಯೋಜನೆಯ ಅಂದಾಜು ವೆಚ್ಚ 1,052.33 ಕೋಟಿ ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿದ್ದು, ಇಲ್ಲಿಯವರೆಗೆ ಒಟ್ಟು 987ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಸುಮಾರು 22 ಸಾವಿರ ಹೆಕ್ಟೇರ್‌ನಷ್ಟು ನೀರಾವರಿ ಸಾಮರ್ಥ್ಯದ ಗುರಿಯನ್ನು ಹೊಂದಲಾಗಿದೆ. ಇದರಲ್ಲಿ ಶಿವಮೊಗ್ಗ ತಾಲ್ಲೂಕಿನಲ್ಲಿ 686 ಹೆಕ್ಟೇರ್, ಹೊನ್ನಾಳಿ ತಾಲ್ಲೂಕಿನ 5976 ಹೆಕ್ಟೇರ್, ಹರಿಹರ ತಾಲ್ಲೂಕಿನಲ್ಲಿ 593 ಹೆಕ್ಟೇರ್, ಹಿರೇಕೆರೂರು ತಾಲ್ಲೂಕಿನಲ್ಲಿ 8391 ಹೆಕ್ಟೇರ್ ಹಾಗೂ ರಾಣೆಬೆನ್ನೂರು ತಾಲ್ಲೂಕಿನ 6404 ಹೆಕ್ಟೇರ್ ಗಳಷ್ಟು ಕೃಷಿ ಭೂಮಿಗೆ ನೀರನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಜೊತೆಗೆ ನಾಲೆ ನಿರ್ಮಿಸುವ ಸಲುವಾಗಿ ಭೂಮಿ ಕಳೆದುಕೊಂಡ ಫಲಾನುಭವಿಗಳಿಗೆ 13.32 ಕೋಟಿ ರೂ. ಪರಿಹಾರ ಕೊಡಬೇಕಾಗಿದ್ದು, ಇಲ್ಲಿಯವರೆಗೆ ಸುಮಾರು 9.19 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಹಾಗೆಯೇ, 146 ಫಲಾನುಭವಿಗಳಿಗೆ 158 ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಮುಖ್ಯ ನಾಲೆಯಡಿಯಲ್ಲಿ ಬರುವ ಕೆಲವು ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಇಂಧನ ಸಚಿವರ ಆದೇಶದಂತೆ ಕಾಮಗಾರಿಗಳನ್ನು ಸಮಾರೋಪಾದಿಯಲ್ಲಿ ಕೈಗೊಂಡು ಪ್ರಾಯೋಗಿಕವಾಗಿ ಇಂದಿನಿಂದ ನೀರು ಹರಿಸಲಾಗುತ್ತದೆ. ಹೀಗಾಗಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಉಂಟಾಗಬಾರದು. ಹೀಗಾಗಿ ಜಾಗರೂಕತೆಯಿಂದ ಇರಲು ಮನವಿ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X